ತತ್ವಚಂದ್ರಿಕಾ”

ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ರಚನೆ

(ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ “ತತ್ವಪ್ರದೀಪ”ಕ್ಕೊಂದು ವಿಸ್ತೃತ ಟೀಕೆ)  

ಮಹಾಭಾರತದ ಕರ್ತೃ ಶ್ರೀವೇದವ್ಯಾಸರೇ ಬ್ರಹ್ಮಸೂತ್ರಗಳನ್ನು ರಚಿಸಿದ ಭಗವಾನ್ ಬಾದರಾಯಣರೆಂಬುದು ಪ್ರಸಿದ್ಧಿ. ಈ ಬ್ರಹ್ಮಸೂತ್ರಗಳನ್ನು ವೇದಾಂತ ಸೂತ್ರಗಳೆಂದೂ ಕರೆಯುತ್ತಾರೆ. ಈ ಬ್ರಹ್ಮಸೂತ್ರಗಳಿಗೆ, ಆಚಾರ್ಯತ್ರಯರೂ ಭಾಷ್ಯಗಳನ್ನು ರಚಿಸಿದ್ದಾರೆ.

ಶ್ರೀ ಆನಂದತೀರ್ಥ ಭಗವತ್ಪಾದರು ರಚಿಸಿದ ಬ್ರಹ್ಮಸೂತ್ರಭಾಷ್ಯ ಪಂಡಿತರಿಗೂ ಕಬ್ಬಿಣದ ಕಡಲೆಯಂತೆ ಕಂಡಾಗ, ಅವರಿಂದಲೇ ಸೂತ್ರಗಳ ಪಾಠ ಕೇಳಿದಂತ, ಶ್ರೀಮದಾಚಾರ್ಯರ ಪ್ರೀತಿಯ ಶಿಷ್ಯರೂ ಆದಂತ “ಶ್ರೀತ್ರಿವಿಕ್ರಮಪಂಡಿತರು“, ಸಾಮಾನ್ಯ ಸಜ್ಜನರಿಗೂ ಅಚಾರ್ಯ ಮಧ್ವರ ಬ್ರಹ್ಮಸೂತ್ರಭಾಷ್ಯದ ವ್ಯಾಖ್ಯಾನಗಳು ಅರ್ಥವಾಗಲೆಂದು ಬಯಸಿ, ಅವರ ಅನುಗ್ರಹದಿಂದಲೇ ಸೂತ್ರಭಾಷ್ಯಕ್ಕೆ ಬೆಳಕು ಚೆಲ್ಲುವಂತೆ ರಚಿಸಿದ ಸುಂದರವಾದ, ವಿಸ್ತಾರವಾದ ಟೀಕೆ “ತತ್ವಪ್ರದೀಪ“.

ಸುಮಾರು ಏಳು ಶತಮಾನಗಳ ಹಿಂದೆ ರಚನೆಯಾದ ಅದ್ಭುತವಾದ ಈ “ತತ್ವಪ್ರದೀಪ” ವೆಂಬ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಕೃತಿಗೆ ಪ್ರಸ್ತುತ, ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರುತತ್ವಚಂದ್ರಿಕಾ” ಎಂಬ ವಿಸ್ತಾರವಾದ ಟೀಕೆಯನ್ನು ರಚಿಸಿದ್ದಾರೆ. ಇಂದಿನ ಕಾಲದ ಸಜ್ಜನರಿಗೂ, ಜ್ಞಾನ ತೃಷೆಯುಳ್ಳವರಿಗೂ ತಿಳಿಯಬೇಕೆಂಬ ಕಳಕಳಿಯಿಂದ “ತತ್ವಪ್ರದೀಪಕ್ಕೆ” ಮತ್ತಷ್ಟು ಬೆಳಕು ಚೆಲ್ಲಿದ ಕೃತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಈ “ತತ್ವಚಂದ್ರಿಕಾ“…

ಸದ್ಯ  ಬ್ರಹ್ಮಸೂತ್ರಭಾಷ್ಯದ, ಮೊದಲನೇ ಅಧ್ಯಾಯದ “ಮೊದಲಪಾದ“ದ ಟೀಕೆ ಪುಸ್ತಕರೂಪದಲ್ಲಿ ಈಗಷ್ಟೇ ಹೊರಬರುತ್ತಿದ್ದು ನಂತರದ ಭಾಗಗಳು ಆಯಾ ಕಾಲಘಟ್ಟದಲ್ಲಿ ಆಚಾರ್ಯರಿಂದ ಪ್ರಕಟಗೊಳ್ಳಲಿವೆ…

ಏಳು ಶತಮಾನಗಳ ಅಂತರದಲ್ಲಿ ಒಂದು ಅತ್ಯಂತ ಪ್ರಾಚೀನ ಗ್ರಂಥಕ್ಕೆ ವ್ಯಾಖ್ಯಾನರೂಪವಾದ ಟೀಕೆ ನಮ್ಮ ಕಾಲದಲ್ಲಿ ಹೊರಬರುತ್ತಿರುವುದು ಅತ್ಯಂತ ಆಶ್ಚರ್ಯಕರ ಹಾಗೂ ಸಂತಸದ ಸಂಗತಿಯಾಗಿದೆ….

ಶ್ರೀಬನ್ನಂಜೆ ಗೋವಿಂದಾಚಾರ್ಯರ ಈ “ತತ್ವಚಂದ್ರಿಕಾ” ಗ್ರಂಥವನ್ನು, ಇದೇ ತಿಂಗಳ, ಅಂದರೆ ಇಸವಿ ೨೦೧೬ ನವೆಂಬರ್ ೧೬ನೇ ತಾರೀಖಿನಂದು ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣರ ಸನ್ನಿಧಾನದಲ್ಲಿ, ಸಂಜೆ ೪:೩೦ರಿಂದ ೭:೩೦ರ ವರೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ವಿವಿಧ ಪಿಠಾಧಿಪತಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.  

ಆಸಕ್ತ ಅಧ್ಯಾತ್ಮ ಬಂಧುಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ…

ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ…ದಯವಿಟ್ಟು ಬನ್ನಿ, ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಿ….

ನಮಸ್ಕಾರ….

ಬನ್ನಂಜೆ ಶಿಷ್ಯವೃಂದ….

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು