ಹೃದಯವೆಂಬ – ಕುರುಕ್ಷೇತ್ರ

ಶ್ರೀಕೃಷ್ಣ ಅರ್ಜುನನಿಗೆ ೫೦೦೦ ವರ್ಷಗಳ ಹಿಂದೆ ಗೀತೋಪದೇಶ ಮಾಡಿದ. ಈ ಮಾತೇನೋ ನಿಜ. ಆದರೆ ಗೀತೆ ಸಾವಿರಾರು ವರ್ಷಗಳ ಹಿಂದಿನ ಐತಿಹಾಸಿಕ ಘಟನೆಯಾಗಿ ಮಾತ್ರವೆ ನಮಗೆ ಗ್ರಾಹ್ಯವಲ್ಲ. ಅದು ೫೦೦೦ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಕೌರವ-ಪಾಂಡವರ ಯುದ್ಧದಲ್ಲಿ ನಡೆದ ಘಟನೆಯಷ್ಟೆ ಅಲ್ಲ. ಅದು ನಮ್ಮದೇ ಇತಿಹಾಸ.

ಕುರುಕ್ಷೇತ್ರ ಎಲ್ಲೋ ಉತ್ತರ ಭಾರತದಲ್ಲಿರುವ ಒಂದು ಭೂಭಾಗವಲ್ಲ. ನಮ್ಮೆಲ್ಲರ ಹದಯ-ಕ್ಷೇತ್ರವೆ ಕುರುಕ್ಷೇತ್ರ. ನಮ್ಮ ಕರ್ಮಕ್ಷೇತ್ರವಾದ ನಮ್ಮ ಬದುಕೇ ಕುರುಕ್ಷೇತ್ರ.

ನಮ್ಮಳಗೆಯೆ ಮಹಾಭಾರತದ ಯುದ್ಧ ನಡೆಯುತ್ತಿದೆ. ನಮ್ಮಳಗೆಯೆ ಕೌರವ ರಿದ್ದಾರೆ; ಪಾಂಡವರಿದ್ದಾರೆ! ಹದಿನೆಂಟು ಅಕ್ಷೋಹಿಣಿ ಸೇನೆಗಳಿವೆ.

ನಮ್ಮೊಳಗಿನ ದುರ್ಯೋಧನ ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸು ಎನ್ನುತ್ತಿರು ತ್ತಾನೆ. ನಮ್ಮೊಳಗಿನ ದುಃಶಾಸನ ಪರಸ್ತ್ರೀಯರ ಮೇಲೆ ಕೈಮಾಡಲು ಹಾತೊರೆಯು ತ್ತಿರುತ್ತಾನೆ. ನಮ್ಮೊಗಿನ ವಿಕರ್ಣ ಸಜ್ಜನಿಕೆಯ ಮುಖವಾಡದ ಮಾತುಗಳನ್ನಾಡುತ್ತ ನಮ್ಮೊಳಗಿನ ಹುಳುಕನ್ನು ಮುಚ್ಚಿಡಲು ಪ್ರಯತ್ನಿಸುತ್ತಾನೆ. ಸಾವಿರಸಾವಿರ ದುಷ್ಟವೃತ್ತಿಗಳು ಇದನ್ನು ಆಗಗೊಡಲು ನಮ್ಮಳಗೆ ಶಸ್ತ್ರ ಹಿಡಿದು ಸಜ್ಜಾಗಿ ನಿಂತಿವೆ.

ಇಂಥವರ ನಡುವೆಯೂ ನಮ್ಮೊಳಗಿನ ಧರ್ಮರಾಜ ‘ಛೇ, ಹೀಗೆಲ್ಲ ಮಾಡಬೇಡ’ ಎನ್ನುತ್ತಿರುತ್ತಾನೆ. ಭೀಮಾರ್ಜುನರು ‘ಇದರ ವಿರುದ್ಧ ಹೋರಾಡು’ ಎನ್ನುತ್ತಿರು ತ್ತಾರೆ. ನಕುಲ ‘ಶೀಲ ಕಳೆದುಕೊಂಡು ಕೆಟ್ಟ ಬಾಳು ಬದುಕಬೇಡ’ ಎಂದು ಎಚ್ಚರಿಸು ತ್ತಿರುತ್ತಾನೆ. ಸಹದೇವ ‘ದುರಹಂಕಾರಿಯಾಗಿ ದಾರಿ ತಪ್ಪಬೇಡ’ ಎಂದು ಬೆನ್ನು ತಟ್ಟುತ್ತಾನೆ. ಸಜ್ಜನಿಕೆಯ ಪುಟ್ಟ ಸೇನೆ ಇವರ  ಪರವಾಗಿ ನಮ್ಮೊಳಗೆ ಕಾದಾಟಕ್ಕೆ ಸಿದ್ಧವಾಗಿದೆ.

ನಮ್ಮ ಬದುಕಿನಲ್ಲೇ ನಡೆಯುವ ಈ ಧರ್ಮಾಧರ್ಮಗಳ, ಸಜ್ಜನಿಕೆ-ದೌರ್ಜನ್ಯಗಳ, ಒಳಿತು-ಕೆಡುಕುಗಳ, ನೀತಿ-ಅನೀತಿಗಳ, ಮಾನವೀಯತೆ-ದಾನವೀಯತೆಗಳ ನಡುವಣ ಈ ನಿರಂತರ ಯುದ್ಧದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕೌರವರು ಗೆಲ್ಲುತ್ತಾರೆ. ನಾವು ಕೌರವರು ಹೇಳಿದಂತೆಯೇ ನಡೆದುಕೊಂಡುಬಿಡುತ್ತೇವೆ. ಪಾಂಡವರು ತೆಪ್ಪಗೆ ಸೋತು ಕಾಡುಪಾಲಾಗುತ್ತಾರೆ.

ಇಂಥ ಸಂದರ್ಭದಲ್ಲಿ ಗೀತೆ ನಮ್ಮನ್ನು ಎಚ್ಚರಿಸುತ್ತದೆ: ‘ನಿನ್ನೊಳಗೆ ನಡೆಯುವ ಯುದ್ಧದಲ್ಲಿ ಕೌರವರು ಗೆಲ್ಲುವಂತೆ ಮಾಡಿಕೊಂಡು ನಿನ್ನ ಬಾಳನ್ನು ಹಾಳು ಮಾಡಿ ಕೊಳ್ಳಬೇಡ. ಕೌರವರು ಗೆಲ್ಲುವುದು ಎಂದರೆ ನೀನು ಸೋಲುವುದು ಎಂದೇ ಅರ್ಥ. ಪಾಂಡವರು ಗೆಲ್ಲುವುದು ಎಂದರೆ ನೀನು ಗೆಲ್ಲುವುದು ಎಂದರ್ಥ. ಅದರಿಂದ ಎಲ್ಲ ಸಂದರ್ಭದಲ್ಲೂ ಪಾಂಡವರು ಗೆಲ್ಲುವಂತೆ ನೋಡಿಕೋ. ನೀನು ಕೌರವನಾಗಬೇಡ, ಅರ್ಜುನನಾಗು. ನಿನಗೆ ಭೀಮನ ಬೆಂಬಲವಿರಲಿ; ಧರ್ಮದ ನೆರವಿರಲಿ, ನಿನ್ನ ಬದುಕಿನ ಸಾರಥ್ಯವನ್ನು ಶ್ರೀಕೃಷ್ಣನಿಗೆ  ಒಪ್ಪಿಸು’.

ಮನುಷ್ಯನ ಮಾನಸಿಕ ಸಮಸ್ಯೆಗಳಿಗೆಲ್ಲ ಸಾರ್ವಕಾಲಿಕವಾಗಿ ಉತ್ತರ ನೀಡುವ ಗ್ರಂಥ ಭಗವದ್‌ಗೀತೆ. ಅದರಿಂದಲೆ ಅದು ಯಾವುದೋ ಕಾಲಕ್ಕೆ, ಯಾವುದೋ ಒಂದು ವರ್ಗದ ಜನಕ್ಕೆ ಮಾತ್ರ ಸೀಮಿತವಾದ ಗ್ರಂಥವಲ್ಲ. ಒಂದು ಧರ್ಮದ ಜನಕ್ಕೆ ಮಾತ್ರವೇ ಗ್ರಾಹ್ಯವಾದ ಧಾರ್ಮಿಕ ಗ್ರಂಥವಲ್ಲ. ಕಾಲ-ದೇಶಗಳ ಸೀಮೆಯನ್ನು ದಾಟಿ ನಿಲ್ಲಬಲ್ಲ ಮಹಾನ್ ಗ್ರಂಥ.

ಗೀತೆ ಬರಿಯ ಅಧ್ಯಾತ್ಮ ಗ್ರಂಥವಲ್ಲ. ಜಗತ್ತಿನ ಮೊತ್ತಮೊದಲ ಮನಃಶಾಸ್ತ್ರೀಯ ಗ್ರಂಥವೂ ಹೌದು. ಯಾವ ಮನಃಶಾಸ್ತ್ರದ ಸಮಸ್ಯೆಗೂ ಗೀತೆ ಉತ್ತರಿಸದೆ ಬಿಡುವುದಿಲ್ಲ. ಆದರೆ ದಡ್ಡರಿಗೆ ಯಾವ ಮದ್ದೂ ಉಪಯೋಗವಿಲ್ಲ. ಸಾಯಹೊರಟವನಿಗೆ ಮದ್ದು ಅಸಹ್ಯವಾಗುತ್ತದೆ. ಅವನು ಮದ್ದನ್ನೆ ದ್ವೇಷಿಸುತ್ತಾನೆ; ಅಂತತಃ ತನ್ನ ಬದುಕನ್ನೆ ದ್ವೇಷಿಸುತ್ತಾನೆ.

ಇಂಥ ಒಂದು ಅದ್ಭುತವಾದ ಗ್ರಂಥ ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ ಅನ್ನೋದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿರಬೇಕು. ‘ಗೀತೆಯ ದೇಶದಿಂದ ಬಂದವರು’ ಎಂದು ವಿದೇಶಿಯರು ನಮ್ಮನ್ನು ಗೌರವದಿಂದ ಕಾಣುವುದನ್ನು ನಾನು ಕಂಡು ದಂಗಾಗಿದ್ದೇನೆ. ಆದರೆ ನಮ್ಮ ಜನ  ಇಷ್ಟು ದೊಡ್ಡ ಸಂಪತ್ತು ನಮ್ಮ ಬಳಿಯೇ ಇದ್ದೂ ಜ್ಞಾನದಾರಿದ್ರರಾಗಿ ಬದುಕುತ್ತಿದ್ದಾರೆ. ದಡ್ಡತನಕ್ಕೆ ಮದ್ದೇ ಇಲ್ಲ. ತಮಗೆ ಏನೂ ಗೊತ್ತಿಲ್ಲ  ಎನ್ನುವುದೂ ಗೊತ್ತಿಲ್ಲದೆ ಇದ್ದವರನ್ನು ಯಾರು ಕಾಪಾಡಬೇಕು!

ಇಂಥ ಭಗವದ್‌ಗೀತೆ ರಚನೆಯಾದ ಹಿನ್ನೆಲೆಯೂ ಒಂದು ವಿಚಿತ್ರ. ಕುರುಕ್ಷೇತ್ರದ ಸುತ್ತ-ಮುತ್ತ ಆಚೆ ಹನ್ನೊಂದು, ಈಚೆ ಏಳು ಅಕ್ಷೋಹಿಣಿ ಸೇನೆಗಳು ಯುದ್ಧಕ್ಕೆ ಸಿದ್ಧವಾಗಿ ಎದುರು-ಬದುರು ನಿಂತಿವೆ. ಎರಡೂ ಕಡೆ ಯುದ್ಧದ ಕಹಳೆ ಮೊಳಗಿ ಯಾಗಿದೆ. ಅಂಥಲ್ಲಿ ಅರ್ಜುನನಿಗೆ ಸಂಶಯ ಬಂತು. ‘ಈ ಯುದ್ಧದಲ್ಲಿ ತೊಡಗುವುದು ಎಷ್ಟರ ಮಟ್ಟಿಗೆ ಸರಿ?’ ಈ ಮಾನಸಿಕ ಸಮಸ್ಯೆಗೆ ಉತ್ತರ ರೂಪವಾಗಿ, ಮುಖ್ಯತಃ ಕೃಷ್ಣಾರ್ಜುನ ಸಂವಾದರೂಪವಾಗಿ, ಗೀತೆ ೭೦೦ ಶ್ಲೋಕಗಳಲ್ಲಿ ಹರಿದು ಬಂತು.

ಕೆಲವರಿಗೆ ಇನ್ನೂ ಸಂಶಯ: ೧೮ ಅಕ್ಷೋಹಿಣಿಗಳ ಭಾರಿ ಸೇನೆ ಕುರುಕ್ಷೇತ್ರದಂಥ ಪುಟ್ಟ ಜಾಗದಲ್ಲಿ ಜಮಾಯಿಸುವುದೆಂದರೇನು? ಯುದ್ಧ ಶುರುವಾದಾಗ ಇದ್ದಕ್ಕಿದ್ದಂತೆ ಅರ್ಜುನನಿಗೆ ಸಂಶಯ ಬರುವುದೆಂದರೇನು? ಯುದ್ಧ ನಡೆಯು ತ್ತಿದ್ದಾಗ ಕಷ್ಣ ತಾಸುಗಟ್ಟಲೆ ಉಪದೇಶ ಮಾಡುವುದೆಂದರೇನು? ಅಷ್ಟು ಹೊತ್ತು ಎದುರುಗಡೆಯ ಸೈನಿಕರು ಕೈಕಟ್ಟಿ ನಿಂತರೇನು?

ನಾವು ಹಿಂದೆ ನೋಡಿದ ಮನಃಶಾಸ್ತ್ರೀಯ ವಿವರಣೆಯಲ್ಲಿ ಇದಕ್ಕೆಲ್ಲ ಉತ್ತರ ನೀಡ ಬೇಕಾಗಿಲ್ಲ. ಮಾನಸಿಕವಾಗಿ ಇಂಥ ತುಮುಲಗಳಲ್ಲಿಯೆ ಪರಿಹಾರದ ಆವಶ್ಯಕತೆ ಇರುವುದು. ನೆಮ್ಮದಿಯಾಗಿ ಬದುಕುವವನಿಗೆ ಸೈಕೋತೆರಪಿ ಯಾಕೆ ಬೇಕು?

ಆದರೆ ಇದಕ್ಕೊಂದು ಐತಿಹಾಸಿಕ ಮುಖವೂ ಉಂಟು. ಭಾರತವನ್ನು ಪ್ರಾಚೀನರು ಪುರಾಣವೆಂದು ಕರೆದಿಲ್ಲ. ಇತಿಹಾಸವೆಂದೆ ಕರೆದಿದ್ದಾರೆ. ಐತಿಹಾಸಿಕವಾಗಿಯೂ ಇದರ ಹಿನ್ನೆಲೆಯನ್ನು ಅರಿಯುವುದು ಅವಶ್ಯವಾಗಿದೆ.

೧೮ ಅಕ್ಷೋಹಿಣೀಸೇನೆ ನಿಂತ ಶಿಬಿರಸನ್ನಿವೇಶವನ್ನು ಮಹಾಭಾರತ ಸ್ಪಷ್ಟವಾಗಿ ವರ್ಣಿಸಿದೆ. ಇದಕ್ಕು ಮೊದಲು ಅಕ್ಷೋಹಿಣಿ ಎಂದರೆ ಎಷ್ಟು ಸೇನೆ ಎನ್ನುವುದನ್ನು ತಿಳಿಯೋಣ.

ಸೇನೆಗೆ ನಾಕು ಅಂಗಗಳು: ಆನೆ, ರಥ, ಕುದುರೆ, ಮತ್ತು ಕಾಲಾಳುಗಳು. ಅದಕ್ಕೆಂದೆ ಚತುರಂಗ ಸೇನೆ ಎನ್ನುವುದು. ಕ್ರಮವಾಗಿ ಸೇನಾಂಗಗಳ ವಿಭಾಗವನ್ನು ಪ್ರಾಚೀ ನರು ಹೀಗೆ ಮಾಡಿದ್ದಾರೆ-

 
ಆನೆ
ರಥ
ಕುದುರೆ
ಕಾಲಾಳುಗಳು
೧ ಪತ್ತಿ
೨. ಸೇನಾಮುಖ
೧೫
೩. ಗುಲ್ಮ
೨೭
೪೫
೪. ಗಣ
೨೭
೨೭
೮೧
೧೩೫
೫. ವಾಹಿನೀ
೮೧
೮೧
೨೪೩
೪೦೫
೬. ಪೃತನಾ
೨೪೩
೨೪೩
೭೨೯
೧೨೧೫
೭. ಚಮೂ
೭೨೯
೭೨೯
೨೧೮೭
೩೬೪೫
೮. ಅನೀಕಿನೀ
೨೧೮೭
೨೧೮೭
೬೫೬೧
೧೦೯೩೫
೯. ಅಕ್ಷೋಹಿಣೀ                  
೨೧೮೭೦
೨೧೮೭೦
೬೫೬೧೦
೧೦೯೩೫೦

ಈ ಪ್ರಮಾಣದಂತೆ ೧೮ ಅಕ್ಷೋಹಿಣಿಯಲ್ಲಿ ಒಟ್ಟು ಸೇನಾಪ್ರಮಾಣ-

ಆನೆಗಳು:      (೨೧೮೭೦x೧೮)=     ೩,೯೩,೬೬೦

ರಥಗಳು:      (೨೧೮೭೦x೧೮)=     ೩,೯೩,೬೬೦

ಕುದುರೆಗಳು:   (೬೫೬೧೦x೧೮)=  ೧೧,೮೦,೯೧೮

ಕಾಲಾಳುಗಳು: (೧೦೯೩೫೦x೧೮)= ೧೯,೬೮.೩೦೦

ಆನೆ, ಕುದುರೆ, ರಥಗಳಲ್ಲಿದ್ದವರೂ ಸೇರಿ ಸುಮಾರು ೬೦ ಲಕ್ಷ ಮಂದಿ ೧೮ ದಿನದ ಈ ಮಹಾಯುದ್ಧದಲ್ಲಿ ಭಾಗವಹಿಸಿದ್ದಾರೆ. ಇಷ್ಟು ಮಂದಿಯ ಯೋಗ-ಕ್ಷೇಮ ನೋಡುವ ಪರಿವಾರದವರು, ಅಡಿಗೆಮಂದಿ, ಕೆಲಸದಾಳುಗಳು ಮತ್ತು ವೆದ್ಯರು ಅಗಾಧವಾದ ಜನಸ್ತೋಮ. ಜತೆಗೆ ಸುಮಾರು ೧೨ ಲಕ್ಷ ಕುದುರೆಗಳು ಬಿಡಿಯಾಗಿ ಮತ್ತು ರಥಕ್ಕೆ ಕಟ್ಟಿದ ಕುದುರೆಗಳು ಸುಮಾರು ೪ ಲಕ್ಷ. ಮತ್ತೆ ಸುಮಾರು ೪ ಲಕ್ಷ ರಥಗಳು ಮತ್ತು ಅಷ್ಟೆ ಆನೆಗಳು.

ಇದರ ಸೇನಾಶಿಬಿರ ಎಷ್ಟು ವಿಸ್ತಾರವಾಗಿರಬೇಡ! ಮಹಾಭಾರತ ಇದನ್ನು ವಿವರ ವಾಗಿಯೆ ವರ್ಣಿಸುತ್ತದೆ. ಹಲವಾರು ಮೆಲುಗಳ ವಿಸ್ತಾರದಲ್ಲಿ ಈ ಸೇನೆಯ ಶಿಬಿರಗಳು ಹರಡಿಕೊಂಡಿದ್ದವು. ಕುರುಕ್ಷೇತ್ರದಲ್ಲಷ್ಟೆ ಅಲ್ಲ. ಈ ಮಾತನ್ನು ಭಾರತ ಸ್ಪಷ್ಟವಾಗಿ ಹೇಳುತ್ತದೆ. ಕುರುಕ್ಷೇತ್ರ ಯುದ್ಧದ ಕೇಂದ್ರಸ್ಥಾನ. ಎರಡು ಸೇನೆಗಳು ಎದುರು-ಬದುರಾಗಿ ಯುದ್ಧ ಪ್ರಾರಂಭಿಸಿದ ತಾಣ. ಎದುರಿನ ಸೇನೆ ನಾಶ ವಾದಂತೆ ಹಿಂದಿನ ಸೇನೆಗಳು ಮುಂದೆ ಬಂದವು. ಹೀಗೆ ೧೮ ದಿನಗಳಲ್ಲಿ ಎಲ್ಲಾ ಸೇನೆಯೂ ನಾಶವಾಯಿತು. ಯುದ್ಧರಂಗದ ಪ್ರತ್ಯಕ್ಷದರ್ಶಿಗಳು ವಿವರಿಸುವಂತೆ ಮಹಾಭಾರತ ಇದನ್ನು ಕಣ್ಕಟ್ಟುವಂತೆ ವಾಸ್ತವವಾಗಿ ಚಿತ್ರಿಸುತ್ತದೆ. ಜಿಜ್ಞಾಸೆ ಇದ್ದವರು ಆ ಭಾಗವನ್ನು ಪರಿಶೀಲಿಸಬೇಕು.

ಮುಂದಿನ ಜಿಜ್ಞಾಸೆ ಇಂಥ ಗೊಂದಲದಲ್ಲಿ ತಾಸುಗಟ್ಟಲೆ ಉಪದೇಶ ನೀಡುವುದು ಸಾಧ್ಯವೇ ಎನ್ನುವುದು. ಗೀತೆಯ ಬಗ್ಗೆ ಏನೂ ಅರಿಯದ ಮಂದಿ ಮಾತ್ರವೆ ಮಾಡಬಹುದಾದ ಪ್ರಶ್ನೆ ಇದು.

ಕಷ್ಣಾರ್ಜುನರ ಸಂವಾದ ತಾಸುಗಟ್ಟಲೆ ನಡದೇ ಇಲ್ಲ. ಅರ್ಜುನನ ಸಂದೇಹಗಳಿಗೆ ಕಷ್ಣ ಉತ್ತರ ಕೊಟ್ಟ. ಅರ್ಜುನನಿಗೆ ತಪ್ತಿಯಾಯಿತು. ಇತರರು ಏನು ಎಂತು ಎಂದು ಯೋಚಿಸುವ ಮುನ್ನ ಯುದ್ಧ ಪ್ರಾರಂಭವಾಗಿಹೋಯಿತು.

ಈ ಸಂವಾದ ಕೆಲವು ನಿಮಿಷಗಳ ಕಾಲ ನಡೆದಿತ್ತೊ ಇಲ್ಲವೋ. ಕಷ್ಣ ಅರ್ಜುನನಿಗೆ ಚುಟುಕಾಗಿ ಹೇಳಿದ. ಆ ಮಾತುಗಳನ್ನು ಮುಂದಿನ ಜನಾಂಗಕ್ಕೂ ಅರ್ಥವಾಗುವಂತೆ ವೇದವ್ಯಾಸರು ವಿಸ್ತಾರವಾಗಿ ದಾಖಲಿಸಿದರು.

ಬುದ್ಧಿವಂತನಾದ ಅರ್ಜುನನಿಗೆ ಕಷ್ಣನ ಕೆಲವೇ ಮಾತುಗಳು ಸಾಕಾಯಿತು. ಸಾಮಾನ್ಯ ಜನಕ್ಕೂ ಅರ್ಥವಾಗಲಿ ಎಂದು ವ್ಯಾಸರು ಅದನ್ನು ವಿಸ್ತಾರವಾಗಿ ಬಿಡಿಸಿಬಿಡಿಸಿ ಹೇಳಿದರು. ಹೀಗೆ ಗೀತೆ ೭೦೦ ಶ್ಲೋಕಗಳಲ್ಲಿ ಬೆಳೆದು ನಿಂತಿತು.

ಆದರೂ ಜನರಿಗೆ ಅರ್ಥವಾಗಲಿಲ್ಲ. ಅದಕ್ಕೆಂದೆ ಮುಂದಿನ ಆಚಾರ್ಯಪುರುಷರು ಸಾವಿರಸಾವಿರ ಪುಟಗಳಲ್ಲಿ ಅದನ್ನು ಮತ್ತೆ ವಿಸ್ತರಿಸಿದರು.

ಸದ್ಯ ನಮ್ಮ ಉದ್ದೇಶ ಆ ಆಚಾರ್ಯಪುರುಷರ ವ್ಯಾಖ್ಯಾನದಲ್ಲಿ ಮೂಡಿಬಂದ ಅಭಿಪ್ರಾಯವನ್ನು ಸಂಗ್ರಹಿಸುವುದೇ ಆಗಿದೆ.

ಗೀತೆಯ ಅನೇಕ ಭಾಷ್ಯಗಳಲ್ಲಿ ಮತತ್ರಯಾಚಾರ್ಯರ ಭಾಷ್ಯಗಳೆ ವೌಲಿಕವಾಗಿ ಹೆಚ್ಚು ಪ್ರಸಿದ್ಧವಾಗಿವೆ. ಉಳಿದ ನೂರಾರು ಟೀಕೆಗಳು ಈ ಮೂರರ ಹೆಜ್ಜೆ ಜಾಡಿನಲ್ಲೆ ನಡೆದಂಥವು.

ಕಾಲಕ್ರಮದಲ್ಲಿ ಮೊದಲನೆಯದು ಆಚಾರ್ಯಶಂಕರರ ಭಾಷ್ಯ. ಎರಡನೆಯದು ಆಚಾರ್ಯರಾಮಾನುಜರ ಭಾಷ್ಯ. ಮೂರನೆಯದು ಆಚಾರ್ಯಮಧ್ವರ ಭಾಷ್ಯ.

ಈ ಮೂರು ಭಾಷ್ಯಗಳ ಬೆಳಕಿನಲ್ಲಿ ಗೀತೆ ನಮಗೆ ಯಾವ ಸಂದೇಶ ನೀಡುತ್ತದೆ ಎನ್ನುವುದನ್ನು ಮುಂದೆ ನೋಡೋಣ. ಮೊದಲು ಶಂಕರರ ಭಾಷ್ಯ.

_____________________________________________

೧.  ಪಾಣಿನೀಯರು ‘ಅಕ್ಷೌಹಿಣೀ’ ಎಂಬ ರೂಪವನ್ನು ಸಮರ್ಥಿಸುತ್ತಾರೆ . ಪಾಣಿನಿ ಎನೂ ಹೇಳದಿದ್ದರೂ ವಾರ್ತ್ತಿಕಕಾರ ಕಾತ್ಯಾಯನ ಹೇಳಿದ ಎನ್ನುವ ಕಾರಣಕ್ಕಾಗಿ : ‘ಅಕ್ಷಾದೂಹಿನ್ಯಾಂ ವೃದ್ಧಿರ್ವಕ್ತವ್ಯಾ’  ( ಅ.ಸೂ .೬.೧.೮೯ ). ಆದರೆ ಪ್ರಾಚೀನಗ್ರಂಥಗಳಲ್ಲಿ ಪುರಾಣಗಳಲ್ಲಿ ‘ಅಕ್ಷೋಹಿಣೀ’ ಎಂಬ ರೂಪವೇ ಸರ್ವತ್ರ ಬಳಕೆಯಲ್ಲಿದೆ.

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು