ಆಚಾರ್ಯಮಧ್ವರ ಗೀತಾತಾತ್ಪರ್ಯನಿರ್ಣಯದ ಅವತರಣಿಕೆ

ಎಲ್ಲ ಗುಣಗಳ ಮೊತ್ತಕೆ ದೋಷಗಳೆ ಇರದವನಿಗೆ

ನಾರಾಯಣಗೆ ನಮಿಸುತ ನುಡಿವೆ ಗೀತೆಯ ಇಂಗಿತ ॥

 

ಬ್ರಹ್ಮಾಂಡಪುರಾಣ ಹೇಳುತ್ತದೆ-

‘ಎಲ್ಲ ಶಾಸ್ತ್ರಗಳ ಸಾರ ಭಾರತ. ಅದರಲ್ಲು ಸಾರ ವಿಷ್ಣುವಿನ ಸಾವಿರ ನಾಮಗಳು ಮತ್ತು ಕಷ್ಣನ ಗೀತೆ. ಅವುಗಳ ಅರಿವಿನಿಂದ ಒಡನೆ ಭವದಿಂದ ಬಿಡುಗಡೆ.

‘ಭಾರತಕ್ಕೆ ಸಾಟಿಯಾದ ಶಾಸ್ತ್ರವೇ ಇಲ್ಲ ಎಂದ ಮೇಲೆ ಇವುಗಳಿಗೆ ಸಾಟಿಯಾದ ಶಾಸ್ತ್ರ ಎಲ್ಲಿಂದ ತರಬೇಕು!

‘ಬ್ರಹ್ಮ ಮೊದಲಾದ ದೇವತೆಗಳು, ಋಷಿಗಳು ಸೇರಿ ವ್ಯಾಸರ ಆಣತಿಯಂತೆ ಹಿಂದೊಮ್ಮೆ ಭಾರತವನ್ನೂ ಸಮಸ್ತ ವೇದಗಳನ್ನೂ ತಕ್ಕಡಿಯಲ್ಲಿಟ್ಟು ತೂಗಿದರು. ಆಗ ಭಾರತದ ತಟ್ಟೆಯೆ ಭಾರದಿಂದ ಜಗ್ಗಿತು.

‘ಇದು ಗಾತ್ರದಲ್ಲು ಅರ್ಥದಲ್ಲು ಮಹತ್ತಾದ ಕತಿ; ಭಾರವತ್ತಾದ ಕತಿ. ಅದ ಕೆಂದೆ ಮಹಾಭಾರತ ಎಂದು ಹೆಸರಾಯಿತು. ಇದರ ಈ ನಿರ್ವಚನವನ್ನು ತಿಳಿದ ವನು ಎಲ್ಲ ಪಾಪಗಳಿಂದ ಬಿಡುಗಡೆಗೊಳ್ಳುತ್ತಾನೆ.

‘ಬ್ರಹ್ಮ, ರುದ್ರ, ಇಂದ್ರ ಮೊದಲಾದ ದೇವತೆಗಳಿಂದ ಪ್ರಾರ್ಥಿತನಾದ ನಾರಾಯ ಣನೆ ಸ್ವತಃ ವ್ಯಾಸನಾಗಿ ಅವತರಿಸಿ ಕೇವಲ ಪರತತ್ವದ ನಿರ್ಣಯಕ್ಕೆ ಮೀಸಲಾದ ‘ಮಹಾಭಾರತ’ವೆಂಬ ಐದನೆಯ ವೇದವನ್ನ್ನು ರಚಿಸಿದನು.’

ಅರ್ಜುನ ನೇರ ಇಂದ್ರನ ಅವತಾರ. ಜ್ಞಾನಮಾರ್ಗದ ಅಧಿಕಾರಿಗಳಲ್ಲಿ ಹಿರಿಯ ಚೇತನ. ತನಗೆ ಅತ್ಯಂತ ಪ್ರೀತಿಪಾತ್ರ. ಅಂಥವನಿಗೂ ಬಂಧುಸ್ನೇಹದ ಮುಸುಕು ಕವಿಯಿತು. ಭಗವಂತನನ್ನು ದ್ವೇಷಿಸುವವರನ್ನು ಮತ್ತು ಅವರ ಬೆಂಬಲಿಗರನ್ನು ಮುಗಿಸುವುದು ವಿಶೇಷತಃ ಕ್ಷತ್ರಿಯರಿಗೆ ಪರಮಧರ್ಮ. ಆದರೆ ಬಾಂಧವ್ಯದ ಬಂಧದಿಂದ ಅರ್ಜುನ ಅದನ್ನು ಅಧರ್ಮವೆಂದು ಬಗೆದು ಇನ್ನೇನು ಅದನ್ನು ತೊರೆದುಬಿಡಬೇಕು; ಅಷ್ಟರಲ್ಲಿ ಭಗವಾನ್ ನಾರಾಯಯಣ ಅವನಿಗೆ ಧರ್ಮದ ಮರ್ಮವನ್ನು ಬೋಧಿಸುತ್ತಾನೆ: ತಮ್ಮ ಸ್ವಭಾವಕ್ಕೆ ವಿಹಿತವಾದ ವತ್ತಿಯಿಂದ, ಭಕ್ತಿಯಿಂದ ಭಗವಂತನನ್ನು ಆರಾಧಿಸುವುದೆ ಹಿರಿಯ ಧರ್ಮ. ಇದಕ್ಕೆ ವಿರುದ್ಧ ವಾದದ್ದೆಲ್ಲ ಅಧರ್ಮ. ಏಕೆಂದರೆ ಎಲ್ಲವೂ ಭಗವಂತನ ಅಧೀನ-ಇದು ಭಗವಂತನ ಸಂದೇಶದ ಸಾರ.

ಈ ಎಲ್ಲ ಸಂಗತಿ ಇಲ್ಲಿನ  ಶ್ಲೋಕಗಳಿಂದಲೆ ಸ್ಫುಟವಾಗುತ್ತದೆ. ಯುದ್ಧ ಅರ್ಜುನನ ಸ್ವಧರ್ಮ ಎನ್ನುವುದರ ಬಗೆಗೆ

‘ಧರ್ಮಸಮ್ಮತವಾದ ಈ ಯುದ್ಧವನ್ನು ನೀನು ಮಾಡುವುದಿಲ್ಲವಾದರೆ ನಿನ್ನ ಸಹಜಧರ್ಮವನ್ನೂ ಕೀರ್ತಿಯನ್ನೂ ತೊರೆದು ಪಾಪಕಟ್ಟಿಕೊಳ್ಳುವೆ,’ (2.33) ಇತ್ಯಾದಿ.

ಸ್ವಧರ್ಮಕ್ಕೆ ಅನುಗುಣವಾಗಿ ಭಗವದಾರಾಧನೆಯೆ ಮುಖ್ಯ ಕರ್ತವ್ಯ, ಉಳಿದದ್ದೆಲ್ಲ ತ್ಯಾಜ್ಯ ಎನ್ನುವುದರ ಬಗೆಗೆ-

‘ಜೀವಜಾತಗಳ ಎಲ್ಲ ಪ್ರವತ್ತಿಯೂ ಭಗವಂತನಿಂದ ನಿಯಂತ್ರಿತ. ಅವನು ಎಲ್ಲೆಡೆಯೂ ತುಂಬಿದ್ದಾನೆ. ಸ್ವವಿಹಿತಕರ್ಮಾಚರಣೆಯಿಂದ ಅವನನ್ನು ಆರಾಧಿಸಿ ಮನುಷ್ಯ ಸಿದ್ಧಿಯನ್ನು ಪಡೆಯಬಲ್ಲ.’ (18.46)

‘ನಮ್ಮ ಸ್ವಭಾವಕ್ಕೆ ಒಗ್ಗದ ಧರ್ಮವನ್ನು  ಮೆಗೂಡಿಸಿಕೊಳ್ಳುವುದಕ್ಕಿಂತ ನಮಗೆ ಸಹಜವಾದ ಧರ್ಮವನ್ನು, ಅದರಲ್ಲಿ ಕೊರತೆಗಳಿದ್ದರೂ, ಆಚರಿಸುವುದು ಮೇಲು. ಸ್ವಧರ್ಮದಲ್ಲಿ ಸತ್ತರೂ ಮೇಲು. ಪರಧರ್ಮ ಭಯದ ಬೀಡು.’            (18.47)

‘ಗುಟ್ಟುಗಳಿಗೂ ಗುಟ್ಟಾದ, ಮಹತ್ತರವಾದ ನನ್ನ ಮಾತನ್ನು ಇನ್ನಷ್ಟು ಕೇಳು. ನೀನು ನನಗೆ ತುಂಬ ಪ್ರಿಯನಾದವ. ಅದಕೆಂದೆ ನಿನಗೆ ಈ ಹಿತದ ನುಡಿಗಳನ್ನು ಹೇಳುತ್ತಿದ್ದೇನೆ. ನನ್ನಲ್ಲೆ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನೆ ಆರಾಧಿಸು. ನನಗೆಯೆ ನಿನ್ನ ದೇಹ ಮಣಿಯಲಿ. ಅಂದರೆ ನೀನು ನನ್ನನ್ನೆ ಸೇರುವೆ. ನೀನು ನನ್ನ ಪ್ರಿಯ. ಅದಕ್ಕೆಂದೆ ಆಣೆಯಿಟ್ಟು ಹೇಳುತ್ತೇನೆ. ಇದು ನಿಜ. ಎಲ್ಲ ಧರ್ಮಗಳನ್ನೂ  ನನಗೆ ಅರ್ಪಿಸಿ ನನ್ನೊಬ್ಬನನ್ನೆ ಶರಣಾಗು. ನಾನು ನಿನ್ನನ್ನು ಪಾಪದ ಎಲ್ಲ ಬಂಧನಗಳಿಂದ ಬಿಡುಗಡೆಗೊಳಿಸುತ್ತೇನೆ. ದುಃಖಿಸದಿರು,’ (18.64-66) ಇತ್ಯಾದಿ.

ವಿಷ್ಣುಭಕ್ತಿಯೆ ಎಲ್ಲ ಸಾಧನಗಳಲ್ಲಿ ಮಿಗಿಲಾದದ್ದು; ಭಕ್ತಿಯಿಂದಲೆ ಪರೋಕ್ಷಜ್ಞಾನ; ಭಕ್ತಿಯಿಂದಲೆ ಅಪರೋಕ್ಷಜ್ಞಾನ; ಜ್ಞಾನಿಗೆ ಮೋಕ್ಷ ಕೂಡ ಭಕ್ತಿಯಿಂದಲೆ ಎನ್ನುವು ದರ ಬಗೆಗೆ-

‘ವೇದಗಳಿಂದ, ತಪಸ್ಸಿನಿಂದ, ದಾನಧರ್ಮಗಳಿಂದ, ಯಜ್ಞಯಾಗಗಳಿಂದ ಕೂಡ ನನ್ನನ್ನು ನೀನು ಕಂಡ ಬಗೆಯಲ್ಲಿ ಕಾಣುವುದು ಸಾಧ್ಯವಿಲ್ಲ. ನನ್ನನ್ನು ಹೀಗೆ ಕಾಣುವುದು ಅನನ್ಯವಾದ ಭಕ್ತಿಯಿಂದ ಮಾತ್ರವೇ ಸಾಧ್ಯ. ಓ ಪರಂತಪನೆ, ನನ್ನನ್ನು ಅರಿವುದು, ತದ್ವತ್ತಾಗಿ ಕಾಣುವುದು, ಸೇರುವುದು ಕೂಡ,’ (11.53-54) ಇತ್ಯಾದಿ.

ಭಕ್ತನಾದವನೂ ಕೂಡ ಭಗವತ್‌ಕರ್ಮದಲ್ಲಿ ತೊಡಗಬೇಕು ಮತ್ತು ನಿಷಿದ್ಧ ಕರ್ಮಗಳನ್ನು ಬಿಡಬೇಕು ಎನ್ನುವುದರ ಬಗೆಗೆ

‘ನನ್ನ ಆರಾಧನಾರೂಪವಾಗಿ ಕರ್ಮಗಳನ್ನು ಮಾಡಬೇಕು. ನಾನೆ ಎಲ್ಲಕ್ಕಿಂತ ಹಿರಿಯ ತತ್ವ ಎಂದು ತಿಳಿದು ನನ್ನಲ್ಲಿ ಭಕ್ತಿ ಮಾಡಬೇಕು. ವಿಷಯದ ಸಂಗ, ಫಲದ ಸಂಗ ತೊರೆಯಬೇಕು. ಸಮಸ್ತಪ್ರಾಣಿಗಳಲ್ಲಿ ದ್ವೇಷ ತೊರೆಯಬೇಕು. ಅರ್ಜುನ, ಅಂಥವನು ನನ್ನನ್ನು ಸೇರುತ್ತಾನೆ,’(55) ಇತ್ಯಾದಿ.

ಜ್ಞಾನಿಯೂ ಭಗವತ್‌ಕರ್ಮ ಮಾಡಬೇಕು ಎನ್ನುವುದರ ಬಗೆಗೆ-

‘ಹಿಂದಿನವರೆಲ್ಲ ಕರ್ಮದ ದಾರಿಯಲ್ಲಿ ಸಾಗಿದರು. ಅದಕ್ಕಿಂತ ಹಿಂದೆಯೂ ಕರ್ಮದ ಪರಂಪರೆ ಇತ್ತು. ಅದರಿಂದ ನೀನು ಕರ್ಮವನ್ನೆ ಆಚರಿಸು,’ (4.15) ಇತ್ಯಾದಿ.

ಅರ್ಜುನ ಉತ್ತಮಾಧಿಕಾರಿ ಮತ್ತು ಅಪರೋಕ್ಷಜ್ಞಾನಿ ಎನ್ನುವ ಬಗೆಗೆ-

‘ಸುಲಭದಲ್ಲಿ  ಕಾಣಲಾಗದ ನನ್ನ ರೂಪವನ್ನು ನೀನು ಕಂಡೆ. ದೇವತೆಗಳೂ  ಈ ರೂಪವನ್ನು ಕಾಣಲೆಂದು ಅನುಗಾಲ ದಾರಿ ಕಾಯುತ್ತಿರುತ್ತಾರೆ.’ (11.52)

‘ನೀನು ನನಗೆ ಅತ್ಯಂತ ಪ್ರಿಯನಾಗಿದ್ದೀಯಾ. ಅದಕ್ಕಾಗಿ ನಿನಗೆ ಹಿತವನ್ನರುಹು ತಿರುವೆನು.’ (18.64)

‘ದೆವೀಸಂಪತ್ತು ಮೋಕ್ಷದ ಕಡೆಗೆ ಒಯ್ಯುತ್ತದೆ. ಆಸುರೀಸಂಪತ್ತು ತಮಸ್ಸಿನ ಕಡೆಗೆ ಒಯ್ಯುತ್ತದೆ. ಆದರೆ ಅರ್ಜುನ, ಕೊರಗಬೇಡ. ನೀನು ದೆವೀಸಂಪತ್ತನ್ನು ಹೊತ್ತು ಬಂದವನು.’ (16.5)

‘ಅರ್ಜುನ, ದೆವೀಸಂಪತ್ತನ್ನು ಪಡೆದು ಬಂದ ಮಹಾತ್ಮರು, ನಾನು ಎಲ್ಲ ಜಗತ್ತಿನ ಮೂಲ, ನನ್ನ ಮಹಿಮೆಗೆ ಚ್ಯುತಿ ಇಲ್ಲ ಎಂದರಿತು ಅನನ್ಯಭಾವದಿಂದ ನನ್ನನ್ನೆೆ ಭಜಿಸುತ್ತಾರೆ.’ (9.13)

‘ಅರ್ಜುನನಿಗೆ ಈಶ್ವರೀಯಶಕ್ತಿಯ ಹಿರಿದಾದ ರೂಪವನ್ನು ತೋರಿಸಿದನು,’ (11.9) ಇತ್ಯಾದಿ.

ಭಗವಂತ ಎಲ್ಲಕ್ಕಿಂತ ವಿಭಿನ್ನ, ಎಲ್ಲವೂ ಭಗವಂತನ ಅಧೀನ, ಅವನು ಯಾರ

ಅಧೀನವೂ ಅಲ್ಲ, ಅವನು ಸರ್ವೋತ್ತಮ, ಸರ್ವಗುಣಪೂರ್ಣ, ಎಲ್ಲ ಶಾಸ್ತ್ರಗಳೂ ಅವನೊಬ್ಬನನ್ನೆ ಪ್ರತಿಪಾದಿಸುತ್ತವೆ ಮತ್ತು ಅವನ ಅರಿವಿನಿಂದಲೆ ಮೋಕ್ಷ ಮುಂತಾದುವುಗಳ ಬಗೆಗೆ-

‘ದೇವತೆಗಳಾಗಲಿ, ಮಹರ್ಷಿಗಳಾಗಲಿ ಯಾರೂ ನನ್ನ ಮಹಿಮೆಯನ್ನು ಅರಿತವ ರಿಲ್ಲ. ದೇವತೆಗಳನ್ನೂ ಋಷಿಗಳನ್ನೂ ಸಷ್ಟಿಸಿದ ಮೂಲಪುರುಷ ನಾನಲ್ಲವೆ?’ (10.1-2)

‘ನನಗೆ ಹುಟ್ಟಿಲ್ಲ. ನನ್ನ ಹುಟ್ಟಿಸಿದವನಿಲ್ಲ, ಎಲ್ಲ ಜೀವಿಗಳ ಒಡೆಯ ನಾನೊಬ್ಬನೆ. ಹೀಗೆ ತಿಳಿದವನು ಮನುಜರಲ್ಲಿ ಮೋಹ ತೊರೆದವನಾಗಿ ಎಲ್ಲ ಪಾಪಗಳಿಂದ ಬಿಡುಗಡೆಗೊಳ್ಳುತ್ತಾನೆ.’ (10.3)

‘ತಿಳಿವು, ಕಾರ್ಯಾಕಾರ್ಯವಿವೇಕ, ಮೋಹಗೊಳ್ಳದಿರುವಿಕೆ, ಕ್ಷಮೆ, ಸತ್ಯ, ಇಂದ್ರಿಯನಿಗ್ರಹ, ಭಗವನ್ನಿಷ್ಠೆ (ಇಂಥ ಎಲ್ಲ ಭಾವಗಳು ನನ್ನ ಕೊಡುಗೆ,)’ (10.4)

‘ಪುರಾತನರಾದ ಏಳು ಮಹರ್ಷಿಗಳು (ಮುಂತಾದವರೆಲ್ಲ ನನ್ನಿಂದ ಸಷ್ಟಿಯಾದ ವರು).’ (10.6)

‘ನನ್ನ ಈ ಮಹಿಮೆಯನ್ನೂ ಸಾಮರ್ಥ್ಯವನ್ನೂ ತಿಳಿದವನು (ಯೋಗಸಿದ್ಧಿಯನ್ನು ಪಡೆಯುತ್ತಾನೆ).’ (10.7)

‘ಎಲ್ಲವನ್ನೂ ಸಷ್ಟಿಸಿದವನು ನಾನು. ಎಲ್ಲ ಪ್ರವತ್ತಿಗೂ ನಾನೆ ಮೂಲ. ಭಕ್ತರಾದ ಜ್ಞಾನಿಗಳು ಹೀಗೆ ತಿಳಿದು ನನ್ನನ್ನು ಆರಾಧಿಸುತ್ತಾರೆ.’ (10.8)

‘ಅಂಥವರ ಮೇಲೆ ಕರುಣೆಯಿಂದ ನಾನು ಅವರ ಅಜ್ಞಾನದ ಕತ್ತಲನ್ನು ಕಳೆಯುತ್ತೇನೆ.’ (10.11)

‘ಅಂಥವರನ್ನು ನಾನು ಹುಟ್ಟು-ಸಾವಿನ ಸಂಸಾರದ ಕಡಲಿನಿಂದ ಪಾರುಮಾಡು ತ್ತೇನೆ.’ (12.7)

‘ಎಲ್ಲ  ಯಜ್ಞಗಳನ್ನೂ  ತಪಸ್ಸುಗಳನ್ನೂ  ಸ್ವೀಕರಿಸುವವನು ನಾನು. ಎಲ್ಲ ಲೋಕದ ಹಿರಿಯ ಒಡೆಯ ನಾನು. ಎಲ್ಲ ಜೀವಿಗಳ ಅಂತರಂಗದ ಗೆಳೆಯ ನಾನು. ಹೀಗೆ ನನ್ನನ್ನು ತಿಳಿದವನು ಮೋಕ್ಷವನ್ನು ಪಡೆಯುತ್ತಾನೆ.’ (5.29)

‘ನನ್ನ ಮಹಿಮೆಯ ತಿಳಿವನ್ನೂ ಅದರ ವಿಶೇಷ ವಿವರಗಳನ್ನೂ ನಿನಗೆ ಸಮಗ್ರವಾಗಿ ತಿಳಿಹೇಳುತ್ತೇನೆ. ಇದಿಷ್ಟನ್ನು ತಿಳಿದರೆ ಮತ್ತೆ ತಿಳಿಯುವಂಥದು ಏನೂ ಇರುವು ದಿಲ್ಲ.’ (7.2)

‘ಎಲ್ಲ ಜಗತ್ತನ್ನು ಸಷ್ಟಿಸುವವನು ನಾನು. ಸಂಹರಿಸುವವನು ನಾನು. ಓ ಧನಂಜಯ, ನನಗಿಂತ ಹಿರಿದಾದ ಇನ್ನೊಂದು ತತ್ವ ಇಲ್ಲ. ನೂಲಿನಲ್ಲಿ ಮಣಿಗಳು ಹೆಣೆದುಕೊಂಡಂತೆ ಇಡಿಯ ವಿಶ್ವ ನನ್ನಲ್ಲಿ ಹೆಣೆದುಕೊಂಡಿದೆ.’ (7.6-7)

‘ನಿನಗೆ ಪರತತ್ವದ ಬಗೆಗೆ ಅಸೂಯೆಯಿಲ್ಲ. ಅದಕೆಂದೆ ನಿನಗೆ ಈ ಪರಮರಹಸ್ಯ ವನ್ನು, ಅಧ್ಯಾತ್ಮದ ಅರಿವು-ವಿಜ್ಞಾನ ಎಲ್ಲವನ್ನೂ ಹೇಳುತಿದ್ದೇನೆ. ಇದರ ಅರಿವಿ ನಿಂದ ನೀನು ಎಲ್ಲ ಅಶುಭಗಳಿಂದ ಮುಕ್ತನಾಗುವೆ.’ (9.1)

‘ಇದು ವಿದ್ಯೆಗಳಲ್ಲಿ ಹಿರಿಯ ವಿದ್ಯೆ. ಗುಹ್ಯಗಳಲ್ಲಿ ಪರಮ ಗುಹ್ಯ.’ (9.2.)

‘ನಾನು ಅವ್ಯಕ್ತನಾಗಿ ಜಗತ್ತನ್ನೆಲ್ಲ ವ್ಯಾಪಿಸಿದ್ದೇನೆ. ಎಲ್ಲ ಜೀವಿಗಳೂ ನನ್ನನ್ನು ಆಧರಿಸಿ ಕೊಂಡಿವೆ. ನಾನು ಅವುಗಳ ಆಸರೆಯಲ್ಲಿಲ್ಲ.’ (9.4)

‘ನಾನು ಎಲ್ಲ ಭೂತಗಳನ್ನು ಧರಿಸಿದ್ದೇನೆ; ಅವುಗಳನ್ನು ಆಧರಿಸಿ ನಾನು ನಿಂತಿಲ್ಲ.’ (9.5)

‘ನಿನಗೆ ಕೃಷ್ಣನಿಗೆಶ್ರಿ ಎಣೆಯಾದವನೆ ಇಲ್ಲ. ಮಿಗಿಲಾದವನ ಮಾತು ಎಲ್ಲಿ?’ (11.43)

‘ತಿಳಿವಿನಲ್ಲಿ ಮಿಗಿಲಾದ ತಿಳಿವನ್ನು ನಿನಗೆ ಇನ್ನಷ್ಟು ವಿವರಿಸುತ್ತೇನೆ.’(14.1)

‘ಶ್ರೀತತ್ವ ನನ್ನ ಪತ್ನಿ. ನಾನು ಆಕೆಯಲ್ಲಿ ವಿಶ್ವದ ಗರ್ಭವನ್ನು ಇರಿಸುತ್ತೇನೆ. ಅದರಿಂದ, ಓ ಅರ್ಜುನ, ಸಮಸ್ತ ಜೀವಜಾತಗಳ ಸಷ್ಟಿಯಾಗುತ್ತದೆ.’ (14.3)

‘ಅಳಿವಿಲ್ಲದ, ವಿಕಾರವಿಲ್ಲದ ಶ್ರೀತತ್ವಕ್ಕು ನಾನು ಆಸರೆ. ಶಾಶ್ವತವಾದ ಧರ್ಮಕ್ಕು, ಅದರಿಂದ ದೊರಕುವ ಏಕಾಂತ ಸುಖಕ್ಕು ನಾನೆ ನೆಲೆ.’(14.27)

‘ವಿಶ್ವದಲ್ಲಿ  ಪುರುಷರು ಎರಡು ಬಗೆ: ಕ್ಷರ ಮತ್ತು ಅಕ್ಷರ ಎಂದು. ಜೀವಜಾತವೆಲ್ಲ ಕ್ಷರಪುರುಷ. ನಿರ್ವಿಕಾರವಾದ ಶ್ರೀತತ್ವವೆ ಅಕ್ಷರಪುರುಷ. ಇವರಿಗಿಂತ ಬೇರೆ ಯಾದ ಉತ್ತಮಪುರುಷನೆ ಪರಮಾತ್ಮ. ಅವನೆ ಮೂರು ಲೋಕದ ಒಳಗು ತುಂಬಿ ಎಲ್ಲವನ್ನು ಧರಿಸಿದ, ಅಳಿವಿರದ ಪರಮೇಶ್ವರ.’ (15. 16-17)

‘ನಾನು ಕ್ಷರ-ಪುರುಷನನ್ನೂ ಅಕ್ಷರ-ಪುರುಷಳನ್ನೂ ಮೀರಿ ನಿಂತಿರುವುದರಿಂದಲೆ ಲೋಕದಲ್ಲು ವೇದದಲ್ಲು ‘ಪುರುಷೋತ್ತಮ’ನೆಂದು ಖ್ಯಾತನಾಗಿದ್ದೇನೆ. ಮೋಹಾ ತೀತನಾಗಿ ನನ್ನನ್ನು ಪುರುಷೋತ್ತಮನೆಂದು ತಿಳಿದವನು  ಎಲ್ಲವನ್ನೂ ತಿಳಿದವನು. ಅರ್ಜುನ, ಅವನು ಎಲ್ಲ ರೀತಿಯಿಂದಲೂ ನನ್ನನ್ನೆ ಭಜಿಸುತ್ತಾನೆ. ಇದು ಅತ್ಯಂತ ರಹಸ್ಯವಾದ ಉಪದೇಶ. ಓ ಪಾಪದೂರನಾದ ಭಾರತನೆ, ಇದನ್ನು ನಿನಗೆ ತಿಳಿಯಪಡಿಸಿದ್ದೇನೆ. ಇದನ್ನು ತಿಳಿದವನು ಭಗವಂತನನ್ನು  ತಿಳಿದವನು; ಧನ್ಯತೆ ಯನ್ನು ಪಡೆದವನು.’ (15. 18-2ಂ)

‘ಓ ಪಾರ್ಥ, ನನಗೆ ಮೂರು ಲೋಕಗಳಲ್ಲಿ ಮಾಡಿ ಸಾಧಿಸಬೇಕಾದ್ದು ಏನೂ ಇಲ್ಲ. ನನ್ನಲ್ಲಿ ಇಲ್ಲದ್ದು, ಸಾಧಿಸಿ ಪಡೆಯಬೇಕಾದ್ದೂ ಇಲ್ಲ,’ (3.22) ಇತ್ಯಾದಿ.

ಶ್ರುತಿವಚನಗಳೂ ಇದನ್ನೆ ಸಮರ್ಥಿಸುತ್ತವೆ: ‘ಓ ವಿಷ್ಣುವೆ, ವಿದ್ವಾಂಸರು ನಿನ್ನನ್ನು ಸ್ತುತಿಗಳಿಂದ ಪ್ರಾರ್ಥಿಸುತ್ತಾರೆ. ಕರ್ಮಯೋಗಿಗಳು ನಿನ್ನನ್ನೆ ಯಜ್ಞಗಳಿಂದ ಆರಾಧಿಸುತ್ತಾರೆ.’

‘ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನು ಕೂಡ ನಿರ್ವಿಚಾರವಾಗಿ ಕರ್ಮವನ್ನು ಮಾಡುತ್ತಿರಬೇಕು. ಅದರಿಂದ ಅವನು ತನಗೆ ನಿಯತವಾದ ಆನಂದದ ಉತ್ಕರ್ಷ ವನ್ನು ಪಡೆಯುತ್ತಾನೆ.’

‘ಭಕ್ತಿಗೆ ಒಲಿದ ಭಗವಂತ ಶುದ್ಧವಾದ ಜ್ಞಾನವನ್ನು ಕರುಣಿಸುತ್ತಾನೆ. ಜತೆಗೆ ಇನ್ನಷ್ಟು ಭಕ್ತಿಯನ್ನು ಕೂಡ. ಜ್ಞಾನ-ಭಕ್ತಿಗಳಿಂದ ಒಲಿದು ಕಾಣಿಸಿಕೊಳ್ಳುತ್ತಾನೆ. ದರ್ಶನ ದಿಂದ ಭಕ್ತಿ ಇನ್ನಷ್ಟು ಉತ್ಕಟವಾಗುತ್ತದೆ. ಇಂಥ ಅಪರೋಕ್ಷ ಮತ್ತು ಉತ್ಕಟಭಕ್ತಿಯ ಫಲವಾಗಿ ಮೋಕ್ಷವನ್ನು ಕರುಣಿಸುತ್ತಾನೆ. ಮುಕ್ತಿಯಲ್ಲು   ಜೀವನು   ಭಗವಂತನ

ಅಧೀನನಾಗಿಯೆ ಇರುತ್ತಾನೆ. ಮುಕ್ತಿಯಲ್ಲು ಭಕ್ತಿಯಿಂದ ಮೆಮರೆಯುತ್ತಾನೆ. ಮುಕ್ತಿಯ ಭಕ್ತಿ ಆನಂದರೂಪವಾದ ಫಲವೇ  ಹೊರತು ಅದೊಂದು  ಸಾಧನೆ ಯಲ್ಲ.’

‘ಭಗವಂತ ರಮಾ, ಬ್ರಹ್ಮ, ರುದ್ರಾದಿಗಳಿಗಿಂತಲು ಉತ್ತಮನಾಗಿದ್ದಾನೆ. ಸ್ವತಂತ್ರ ನಾಗಿದ್ದಾನೆ. ಉಳಿದದ್ದೆಲ್ಲವೂ ಅವನ ಅಧೀನವಾಗಿದೆ. ಅವನು ಎಲ್ಲ ಗುಣಗಳ ನೆಲೆ. ಅವನಲ್ಲಿ ಯಾವ ದೋಷಗಳೂ ಇಲ್ಲ- ಹೀಗೆ ತಿಳಿದು ಎಲ್ಲಕ್ಕಿಂತ ಮಿಗಿಲಾಗಿ ವಿಷ್ಣುವನ್ನು ಪ್ರೀತಿಸುವುದು ನಿಜವಾದ ಭಕ್ತಿ. ಇದುವೆ ಮೋಕ್ಷಸಾಧನಗಳಲ್ಲೆಲ್ಲ  ಹಿರಿಯ ಸಾಧನ. ಭಕ್ತಿಯಿಂದಲೆ ಮೋಕ್ಷ ಹೊರತು ಇನ್ನೇತರಿಂದಲೂ ಸಾಧ್ಯವಿಲ್ಲ. ಅಪರೋಕ್ಷ ಮುಂತಾದುದೆಲ್ಲ ಭಕ್ತಿಯ ಉತ್ಕಟತೆಗೆ ಸಾಧನ ಅಷ್ಟೆ.’

‘ಮನುಷ್ಯರು ಮೋಕ್ಷಾಧಿಕಾರಿಗಳಲ್ಲಿ ಅಧಮರು. ಋಷಿಗಳು ಮಧ್ಯಮರು. ದೇವತೆಗಳು ಉತ್ತಮಾಧಿಕಾರಿಗಳು. ಪ್ರಾಣದೇವನೊಬ್ಬನೆ ಅಧಿಕಾರಿಗಳಲ್ಲಿ ಉತ್ತ ಮೋತ್ತಮ.’

‘ಭಗವಂತನ ಸಾಕ್ಷಾತ್ಕಾರ ಪಡೆಯದವರು ದೇವಪದವಿಯನ್ನು ಪಡೆಯಲಾರರು. ಆದರೂ ಒಮ್ಮಮ್ಮೆ ಅಂಥವರ ಅರಿವು ಮಸುಕಾಗುವುದುಂಟು. ಆಗ ಉತ್ತಮ ರಿಂದ ಕೇಳುತ್ತಾರೆ. ಇದು ಕೆಲವೊಮ್ಮೆ ಕೇವಲ ಲೀಲಾವಿನೋದವೂ ಆಗಿರ ಬಹುದು. ಕೇಳಿಕೇಳಿ ಬಹಳ ಬಾರಿ ಮಥನ ಮಾಡುವುದರಿಂದ ಅರಿವು  ಮತ್ತೆಂದೂ ಮರೆಯಾಗದು. ದೇವತೆಗಳು ಕ್ಷತ್ರಿಯರ ವಂಶದಲ್ಲಿ ಪಾಂಡವರಾಗಿ ಜನಿಸಿದಾಗ ಹೀಗಾಯಿತು. ವ್ಯಾಸಮುನಿಯಿಂದ ಪದೇಪದೇ ಅನುಶಿಷ್ಟರಾದ ಅವರ ಅರಿವು ಎಂದೂ ಮರಯಲಾಗದೆ ಸ್ಥಿರವಾಗಿ ಉಳಿಯಿತು.’

‘ಬಯಕೆಗಳ ಮಳೆಗರೆವ, ಇಚ್ಛಾರೂಪನಾದ  ವಿಷ್ಣುದೇವನನ್ನು ಹವಿಸ್ಸಿತ್ತು ಆರಾಧಿಸಿದ ಫಲವಾಗಿ ಬಂಧಕನಾದ ರುದ್ರದೇವ ರುದ್ರಪದವಿಯ ಹಿರಿಮೆಯನ್ನು ಪಡೆದ. ಓ ಅಶ್ವಿಗಳೇ, ಅನ್ನದಿಂದ ಸಮದ್ಧವಾದ ನಿಮ್ಮ ಇರುವಿಕೆಯೂ ಅವನ ಅನು ಗ್ರಹದ ಫಲವೆ ಅಲ್ಲವೆ?’

‘ಆದಿಯಲ್ಲಿ ನಾರಾಯಣನೊಬ್ಬನೆ ಇದ್ದ. ಬ್ರಹ್ಮನಿರಲಿಲ್ಲ, ಶಂಕರನಿರಲಿಲ್ಲ. ಅವನು ವೌನವಾಗಿ ಚಿಂತಿಸಿದ. ಅದರ ಫಲವಾಗಿ ಈ ಬ್ರಹ್ಮ, ವಾಯು, ರುದ್ರ, ಇಂದ್ರ, ಯಮ, ವರುಣ, ಅಗ್ನಿ ಇವರೆಲ್ಲ ಹುಟ್ಟಿದರು.’

‘ನಾರಾಯಣನೊಬ್ಬನೆ ಇದ್ದ. ಇರಲಿಲ್ಲ ಬ್ರಹ್ಮ, ಇರಲಿಲ್ಲ ಈಶಾನ.’

‘ಈ ಸಷಿಯ ಪೂರ್ವದಲ್ಲಿ ವಾಸುದೇವನೊಬ್ಬನೆ ಇದ್ದ. ಬ್ರಹ್ಮನಿರಲಿಲ್ಲ, ಶಂಕರನೂ ಇರಲಿಲ್ಲ.’

‘ವಿಷ್ಣು ಯಾರನ್ನು ಬಯಸಿದರೆ ಅವರನ್ನು ಬ್ರಹ್ಮ ಪದವಿಗೇರಿಸಬಲ್ಲ. ಶಿವ ಪದವಿ ಗೇರಿಸಬಲ್ಲ. ಇಂದ್ರ, ಸ್ಕಂದ, ಸೂರ್ಯ, ಯಮ ಎಲ್ಲರ ಪದವಿಯೂ ಅವನ ಕೊಡುಗೆ. ಅವನನ್ನು ಮಾಡುವವನೆಲ್ಲು ಇಲ್ಲ.’

‘ದೇವದೇವನಾದ ವಿಷ್ಣುವಿನ ಪಾರಮ್ಯದಲ್ಲೆ ಎಲ್ಲ ವೇದಗಳಿಗು ಮಹಾತಾತ್ಪರ್ಯ. ಬೇರೆಲ್ಲು ಅವುಗಳಿಗೆ ಭರವೇ ಇಲ್ಲ. ಇದು ನಿಜ. ಅಮುಖ್ಯವಾದ ಅರ್ಥದಲ್ಲಿ ಮಾತ್ರವೆ ಅವು ಇತರದೇವತೆಗಳನ್ನು ಉಲ್ಲೇಖಿಸುತ್ತವೆ. ಅದರಿಂದ ನಾರಾಯಣ  ನಿಂದಲೆ ಪುರುಷಾರ್ಥ.’

‘ನೀನು ಯಾವ ಮಿತಿಗೂ ಒಳಪಡದವನು. ನಿನ್ನ ರೂಪ ವಿಶ್ವವನ್ನೆಲ್ಲ ತುಂಬಿದೆ. ನಿನ್ನ ಮಹಿಮೆಯ ಎತ್ತರವನ್ನು ಯಾರೂ ಏರಲಾರರು.’

‘ಭಗವಾನ್ ನಾರಾಯಣನ ಗುಣಗಳ ಮಹಿಮೆಗೆ ಕೊನೆಯಿಲ್ಲ. ಅವನಲ್ಲಿ ದೋಷದ ಲೇಶವೂ ಇಲ್ಲ. ಅವನಿಗೆ ಸಮನಾದವನಾಗಲಿ, ಉತ್ತಮನಾದ ವನಾಗಲಿ ಇನ್ನೊಬ್ಬನಿಲ್ಲ. ಹಿಂದೆ ಇರಲಿಲ್ಲ. ಮುಂದೆ ಬರಲಾರ. ಇನ್ನಾವುದೇ ವಿಶ್ವಶಕ್ತಿಯೂ ಈ ನಿಯತಿಯನ್ನು ಬದಲಿಸಲಾರದು,’ ಇತ್ಯಾದಿ.

‘ಆತ್ಮಾನಂದವನ್ನು ಅನುಭವಿಸುವವನಿಗೆ ಕರ್ಮವಿಲ್ಲ,’ (3.17) ಎಂದು ಗೀತೆ ಹೇಳುತ್ತದೆ. ಆದರೆ ಅದು ಮುಕ್ತರಿಗೆ ಸಂಬಂಧಪಟ್ಟದ್ದು. ಸ್ಕಾಂದದ ಈ ವಚನ ಅದನ್ನು ಸಮರ್ಥಿಸುತ್ತದೆ-

‘ಆತ್ಮಾನಂದದಲ್ಲಿ ಮುಳುಗಿದ ಮುಕ್ತನಿಗೆ ಮಾತ್ರವೆ ಕರ್ಮದ ಕಟ್ಟು ಇಲ್ಲ. ಅದರಿಂದ ನೀನು ಕರ್ಮವನ್ನು ಮಾಡಲೇ ಬೇಕು ಎಂದು ಶ್ರೀಕಷ್ಣ ಮುಗುಳು ನಗುತ್ತ ಅರ್ಜುನನನ್ನು ಎಚ್ಚರಿಸಿದ.’

‘ಜ್ಞಾನಿಗಳಿಗೆ ಜ್ಞಾನಯೋಗದಿಂದಲೆ ಸಿದ್ಧಿ,’ (3.3) ಮುಂತಾದ ಮಾತು ಕೂಡ ಧ್ಯಾನದಲ್ಲಿ  ಬಾಹ್ಯಕರ್ಮಗಳ ಸಂಕೋಚ ತಪ್ಪಲ್ಲ ಎನ್ನುವ ಅರ್ಥದಲ್ಲಿ ಬಂದದ್ದು-

‘ಯಾವೊಬ್ಬನೂ ಒಂದು ಕ್ಷಣವೂ ಕರ್ಮವಿಲ್ಲದೆ ನಿಷ್ಕ್ರಿಯನಾಗಿ ಇರಲಾರ.’                                                                    (3.5)      ‘ನೀನು ಕರ್ಮ ಮಾಡಲಾರೆ ಎಂದರೆ ನಿಷ್ಕ್ರಿಯತೆಯಿಂದ ಈ ಬದುಕು, ಈ ದೇಹ ಧಾರಣೆ ಕೂಡ ಸಾಧ್ಯವಾಗದು.’(3.8)

‘ಓ ಪಾರ್ಥ, ಕರ್ಮದಲ್ಲೆ ಅತಿಯಾದ ಆಸಕ್ತಿ ಮತ್ತು ಫಲಕಾಮನೆಗಳನ್ನು ತೊರೆದು ಈ ಎಲ್ಲ ಕರ್ಮಗಳನ್ನು ಮಾಡುತ್ತಿರಬೇಕು ಎನ್ನುವುದೆ ನನ್ನ ನಿಶ್ಚಿತವಾದ ಅಭಿ ಪ್ರಾಯ.’ (18.6)

‘ಜ್ಞಾನಿಯಾದವನು ಕೂಡ ವಿಹಿತಕರ್ಮಗಳನ್ನು ಸದಾ ಮಾಡುತ್ತಿರಬೇಕು. ಆದರೆ ಸದಾ ಫಲದ ಬಯಕೆ ತೊರೆದವನಾಗಬೇಕು.’

‘ಎಲ್ಲ ಕರ್ಮಗಳನ್ನು ತೊರೆವುದು ಎಲ್ಲೂ ಯಾರಿಗೂ ಸಾಧ್ಯವಿಲ್ಲ.  ಯತಿಗಳನ್ನು ಕೂಡ ‘ತ್ಯಾಗಿಗಳು’ ಎನ್ನುವುದು ಬಾಹ್ಯಕರ್ಮಗಳ ಸಂಕೋಚದಿಂದಾಗಿಯೆ,’ ಇತ್ಯಾದಿ.

‘ತತ್ವವನ್ನು ಕಂಡ ತಿಳಿದವರು ನಿನಗೆ ತಿಳಿವು ನೀಡುತ್ತಾರೆ,’ ಮುಂತಾದ ಮಾತು ಕೂಡ ಬಂದ ಅರಿವು ಮರೆಯಾಗದಂತೆ ತಡೆಯುವುದಕ್ಕಾಗಿ.

*        *        *

ಇವಿಷ್ಟು ಆಚಾರ್ಯಮಧ್ವರ ಗೀತಾತಾತ್ಪರ್ಯದ ಪ್ರಸ್ತಾವನೆಯ ಬಿತ್ತರ. ಇಡಿಯ ಗೀತೆಯ ಸಾರಸಂಗ್ರಹ. ಸರ್ವಶಾಸ್ತ್ರಗಳ ಸಾರೋದ್ಧಾರ.

ಮೂರು ಮಂದಿ ಪ್ರಮುಖ ಭಾಷ್ಯಕಾರರು ಗೀತೆಯ ಪ್ರಸ್ತಾವನೆಯಾಗಿ ಏನನ್ನು ಹೇಳಿದ್ದಾರೆ ಎನ್ನುವುದನ್ನು ಅವರ ಮಾತುಗಳಿಂದಲೆ ಕಂಡಂತಾಯಿತು. ಶಂಕರರು ಮತ್ತು ರಾಮಾನುಜರು ಕಷ್ಣಾವತಾರದ ಹಿನ್ನೆಲೆಯಲ್ಲಿ ಗೀತೆಗೆ ಅವತರಣಿಕೆ ರಚಿಸಿದ್ದರೆ ಮಧ್ವರು ವ್ಯಾಸಾವತಾರದ ಪ್ರಸ್ತಾವನೆಯೊಂದಿಗೆ ಅವತರಣಿಕೆ ರಚಿಸಿ ದ್ದಾರೆ. ಈ ಒಂದು ಮುಖ್ಯ ಅಂಶವನ್ನು ಬಿಟ್ಟರೆ ಉಳಿದ ಅಂಶದಲ್ಲಿ ಸಾಮಾನ್ಯತಃ ಮೂವರೂ ಏಕರೂಪವಾದ ಅಭಿಪ್ರಾಯವನ್ನೆ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮವಾದ ಅಭಿಪ್ರಾಯಭೇದಗಳು ಮೂರು ಅವತರಣಿಕೆಯನ್ನು ಜತೆಯಾಗಿ ಪರಿಶೀಲಿಸಿದರೆ ಸ್ಪಷ್ಟವಾಗಬಹುದು.

ಈ ಮೂರು ಭಾಷ್ಯಕಾರರ ಪೀಠಿಕೆಯ ಮನನದ ಹಿನ್ನೆಲೆಯಲ್ಲಿ ನಾವು ಗೀತೆಯ ಪ್ರಥಮಾಧ್ಯಾಯಕ್ಕೆ ಪ್ರವೇಶಿಸೋಣ.

ವಾಸ್ತವವಾಗಿ ಪ್ರಥಮಾಧ್ಯಾಯಕ್ಕೆ ಯಾವ ಭಾಷ್ಯಕಾರರೂ ಭಾಷ್ಯ ಬರೆದಿಲ್ಲ. ರಾಮಾನುಜರು ಅಲ್ಲಲ್ಲಿ ಸಂಕ್ಷಿಪ್ತ-ವಿವರಣೆ ನೀಡಿದ್ದಾರೆ-ಅಷ್ಟೆ. ಗೀತೆಯಲ್ಲಿ ಇದು ಮಹತ್ವದ ಭಾಗವಲ್ಲ ಎಂದು ಅದರ ಅರ್ಥವಲ್ಲ. ಅವರು ಗೀತೆಯಲ್ಲಿ ಶ್ರೀಕಷ್ಣನ ಉಪದೇಶದ ಭಾಗಕ್ಕೇ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅದಕ್ಕೆ ಪೀಠಿಕೆ ಯಾಗಿ ಮೊದಲನೆಯ ಅಧ್ಯಾಯ ಬಂದಿದೆ. ಇದು ಪಂಚಾಂಗ. ಮುಂದಿನದು ಮಹಡಿ.

ಮೊದಲ ಅಧ್ಯಾಯದ ಅರ್ಥ ವಿವರಣೆಯಲ್ಲಿ  ಮತತ್ರಯದಲ್ಲಿ  ಹೆಚ್ಚಿನ ವ್ಯತ್ಯಾಸ ವೇನೂ ಇರದ್ದರಿಂದ ಅದರ ಸಾಮಾನ್ಯ ಅರ್ಥವನ್ನು ಕೆಳಗೆ ಕೊಡಲಾಗಿದೆ. ಅಭಿಪ್ರಾಯ ಭೇದವಿದ್ದರೆ ಮಾತ್ರವೆ ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು