ಶ್ಲೋಕ – ೧ : ಧೃತರಾಷ್ಟ್ರನ ಮನೋವಿಜ್ಞಾನ

ಕೌರವ-ಪಾಂಡವರ ಯುದ್ಧ ಪ್ರಾರಂಭವಾಗಿದೆ. ಹಲವು ದಿನಗಳ ಯುದ್ಧವೂ ನಡೆದುಹೋಗಿದೆ. ಕುರುಕ್ಷೇತ್ರದಲ್ಲಿ ನಡೆದ ಯುದ್ಧ ಹಸ್ತಿನಪುರದಲ್ಲಿ ಕುಳಿತ ಧೃತರಾಷ್ಟ್ರನಿಗೆ ಹೇಗೆ ತಿಳಿಯಬೇಕು? ಅವನು ತನ್ನ ಮಕ್ಕಳ ಭವಿಷ್ಯವನ್ನು ತಿಳಿಯಲು ಕಾತರನಾಗಿ ಕಾದು ಕುಳಿತಿದ್ದಾನೆ. ಆಗ ಯುದ್ಧರಂಗದತ್ತಣಿಂದ ಸಂಜಯ ಮರಳಿ ಬಂದ. ಧೃತರಾಷ್ಟ್ರನಿಗೆ ತನ್ನ ಮಕ್ಕಳ ದುರಂತದ ಕಥೆಯನ್ನು ತಿಳಿಸಲೆಂದೆ ವೇದವ್ಯಾಸರಿಂದ ನಿಯುಕ್ತನಾದ ವ್ಯಕ್ತಿ ಸಂಜಯ. ಅದಕ್ಕಾಗಿ ಅವನು ಯುದ್ಧರಂಗಕ್ಕೆ ತೆರಳಿ ಕಂಡು-ಕೇಳಿ ಬರಬೇಕಾಗಿಯೂ ಇಲ್ಲ. ಅವನಿಗೆ ಅದಕ್ಕಾಗಿಯೆ ವೇದ ವ್ಯಾಸರಿಂದ ದೂರಶ್ರವಣ ಮತ್ತು ದೂರದರ್ಶನದ ಶಕ್ತಿ ಪ್ರಾಪ್ತವಾಗಿತ್ತು. ಅವನು ಹಸ್ತಿನಪುರದ ರಾಜಭವನದಲ್ಲಿ ಧೃತರಾಷ್ಟ್ರನ ಬಳಿಯಲ್ಲಿ  ಕುಳಿತೇ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಒಂದೊಂದು ಸಂಗತಿಯನ್ನೂ ಒಳಗಣ್ಣಿನಿಂದ ಕಾಣಬಲ್ಲವನಾಗಿದ್ದ; ಕೇಳಬಲ್ಲವನಾಗಿದ್ದ. ಇದು ಧತರಾಷ್ಟ್ರನಿಗೂ ಗೊತ್ತು.

ಅದಕ್ಕೆಂದೆ ಅವನು ಸಂಜಯ ಬಂದ ಸುದ್ದಿ ತಿಳಿದಾಗ ಈ ಬಾಲ್ಯಸ್ನೇಹಿತನನ್ನು ಬಳಿ ಕರೆದು ತನ್ನ ಕುತೂಹಲವನ್ನು ತೋಡಿಕೊಂಡ.

ಧತರಾಷ್ಟ್ರ ಉವಾಚ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ
ಮಾಮಕಾಃ ಪಾಂಡವಾಶ್ಚೆವ ಕಿಮಕುರ್ವತ ಸಂಜಯ     ॥ ೧ ॥

 

[ಧೃತರಾಷ್ಟ್ರ ಕೇಳಿದನು: ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಬಂದು ಕಲೆತವರು
ಹೋರಬಯಸಿದವರು, ನನ್ನ ಮಕ್ಕಳು ಮತ್ತು ಪಾಂಡವರು ಏನು ಮಾಡಿದರು ಸಂಜಯ
?]

ಕುರುಕ್ಷೇತ್ರ ಈ ವಂಶದ ಹಿರಿಯನಾದ ಕುರುರಾಜ ನಿರ್ಮಿಸಿದ ತಾಣ. ಅವನಿಂದಲೆ ಈ ವಂಶಕ್ಕೆ ಕುರುವಂಶ ಎಂದು ಹೆಸರಾಯಿತು.

ಕುರುವಿಗಿಂತಲೂ ಮೊದಲು ಅದು ಪುಣ್ಯಕ್ಷೇತ್ರವಾಗಿತ್ತು-ಪರಶುರಾಮನ ಕಾಲ ದಿಂದಲೂ. ಅದರ ಸುತ್ತಲು ಅವನು ನಿರ್ಮಿಸಿದ ಐದು ಕೆರೆಗಳಿಂದಾಗಿ ಅದು ಯುಗಾಂತರದಿಂದಲು ಧರ್ಮಕ್ಷೇತ್ರ ಎಂದು ಖ್ಯಾತವಾಗಿತ್ತು. ಆ ಕೆರೆಗಳು ಪುಣ್ಯ ತೀರ್ಥವಾಗಿದ್ದವು. ಅದಕೆಂದೆ ಕುರುಕ್ಷೇತ್ರದ ಪುರಾತನವಾದ ಹೆಸರು ಸಮಂತ ಪಂಚಕ. ಕುರುರಾಜ ಅದನ್ನು ಊರ್ಜಿತಗೊಳಿಸಿದ ಮೇಲೆ ಅದು ಕುರುಕ್ಷೇತ್ರ ವಾಯಿತು.

ಸಂಜಯನನ್ನು ಪ್ರಶ್ನಿಸುವಾಗ ಧೃತರಾಷ್ಟ್ರನ ಬಗೆಯಲ್ಲಿ ಈ ಎರಡು ಐತಿಹಾಸಿಕ ಅಂಶಗಳು ತಾಕಲಾಟ ನಡೆಸಿದವು.

ಇದು ಪರಶುರಾಮನಿರ್ಮಿತವಾದ ಧರ್ಮಕ್ಷೇತ್ರ. ನನ್ನ ಮಕ್ಕಳೋ ಅಧರ್ಮದ ಬೆನ್ನು ಕಟ್ಟಿ ಛಲದಿಂದ ಕದನಕ್ಕಿಳಿದವರು. ಅವರ ಅಧರ್ಮಕ್ಕೆ ಈ ಧರ್ಮಕ್ಷೇತ್ರದಲ್ಲಿ ಗೆಲುವಾದೀತೆ?

ಒಡನೆಯೆ ಅವನ ಒಳಬಗೆಯ ಇನ್ನೊಂದು ಮುಖ ಅವನನ್ನು ಸಂತೈಸುತ್ತದೆ. ನೆನಪಿಡು, ಇದು ಕುರುಕ್ಷೇತ್ರ ಕೂಡ ಹೌದು. ಕುರುವಂಶದ ನಿಜವಾದ ಉತ್ತರಾಧಿಕಾರಿಗಳು ನಿನ್ನ ಮಕ್ಕಳು. ಅದಕೆಂದೆ ಅವರನ್ನು ಮಾತ್ರವೆ ಜನ ಕೌರವರು ಎಂದು ಕರೆಯುತ್ತಾರೆ. ಪಾಂಡವರು ಕುರುವಂಶದ ಮಕ್ಕಳೇ ಆದರೂ ಅವರು ‘ಕೌರವ’ ರಲ್ಲ. ಅವರದು ಕುರುವಂಶದ ರೇತಸ್ಸಲ್ಲ. ಅವರು ಮೂಲತಃ ಪಾಂಡುಪುತ್ರರಲ್ಲ; ದೇವಪುತ್ರರು. ಅದರಿಂದ ಕುರುಕ್ಷೇತ್ರ ಕೌರವರ ಕ್ಷೇತ್ರ. ಅಲ್ಲಿ ಕೌರವರಿಗೆ ಜಯ ಸಿಗಬೇಕು. [ನಿಜವಾಗಿ ನೋಡಿದರೆ ಧೃತರಾಷ್ಟ್ರನದೂ ಕೂಡ ಕುರುವಂಶದ ತಳಿ್ಯಲ್ಲ. ಅವನು ವೇದವ್ಯಾಸರಿಂದ ಜನಿಸಿದವನೆ. ಆದರೆ ಅವನನ್ನು, ಅವನ ಮಕ್ಕ ಳನ್ನು ಕೌರವವಂಶದವರೆಂದು ಸಮಾಜ ಅಂಗೀಕರಿಸಿಬಿಟ್ಟಿದೆ. ಆದ್ದರಿಂದ ಅದರ ಬಗ್ಗೆ ಅವನು ತಲೆಕೆಡಿಸಿಕೊಳ್ಳಬೇಕಾದ ಕಾರಣವಿಲ್ಲ.]

ಅವನಿಗೆ ಏನಾದರೂ ತನ್ನ ಮಕ್ಕಳೆ ಗೆಲ್ಲಬೇಕು ಎಂಬ ಆಸೆ ಇತ್ತು. ಮಕ್ಕಳ ಮೋಹ ದಿಂದ ಅವನು ಒಳಗೂ ಕುರುಡನಾಗಿದ್ದ. ಇದು ಮುಂದಿನ ಮಾತಿನಿಂದ ಸ್ಪಷ್ಟ: ಮಾಮಕಾಃ ಪಾಂಡವಾಶ್ಚೆವ– ನನ್ನವರು ಮತ್ತು ಪಾಂಡವರು.

ಕೌರವರನ್ನು ನನ್ನ ಮಕ್ಕಳು, ನನ್ನವರು ಎನ್ನುವ ಅವನ ಮಾತಿನಲ್ಲಿ ಪಕ್ಷಪಾತ ಢಾಳಾಗಿ ಹೊಡೆಯುತ್ತದೆ. ಅವನಿಗೆ ತನ್ನ ಖಾಸಾ ತಮ್ಮನ ಮಕ್ಕಳಾದ ಪಾಂಡವರು ತನ್ನವರಾಗಿ ಕಾಣಲೇ ಇಲ್ಲ. ತೀರ ಪರಕೀಯರಾಗಿ ಕಂಡರು. ನಿಜವಾಗಿಯಾದರೆ ‘ಹೋರಾಟಕ್ಕಿಳಿದ ನಮ್ಮ ಹುಡುಗರು ಏನು ಮಾಡಿಕೊಂಡರು?’ ಎಂದಷ್ಟೇ ಕೇಳಬೇಕಿತ್ತು. ‘ನಮ್ಮ ಹುಡುಗರು ಮತ್ತು ಪಾಂಡವರು’ ಎನ್ನುವ ಮಾತು ಅವನ ಮುಚ್ಚಿಡಲಾಗದ ಸ್ವಾರ್ಥದ ಅಭಿವ್ಯಕ್ತಿಯಾಗಿ ಬಂತು. ಅದಕೆಂದೆ ‘ಮಾಮಕಾಃ ಕಿಮಕುರ್ವತ’ ಎನ್ನುವ ಬದಲು ‘ಮಾಮಕಾಃ ಪಾಂಡವಾಶ್ಚೆ ವ ಕಿಮಕುರ್ವತ’ ಎಂದ! ಧೃತರಾಷ್ಟ್ರನ ಪುತ್ರಮೋಹಕ್ಕೆ ಮದ್ದೇ ಇಲ್ಲ.

ಅದರ ಜತೆಗೆ ‘ಪಾಂಡವಾ ಏವ’ ಪಾಂಡವರು ಮಾತ್ರವೆ; ಅವರ ಕಡೆಗೆ ಹೆಚ್ಚಿನ ವೀರರು ಯಾರೂ ಇಲ್ಲ; ಕೇವಲ ಅನುಬಂಧಿಗಳು ಮಾತ್ರ ಸೇರಿಕೊಂಡಿದ್ದಾರೆ ಎನ್ನುವ ಕುರುಡು ಆತ್ಮಸಮರ್ಥನೆ.

ಎಂಥ ಕೌರವರು? ಎಂಥ ಪಾಂಡವರು? ‘ಸಮವೇತಾಃ ಯುಯುತ್ಸವಃ’. ಎರಡೂ ಕಡೆಯವರು ಒಂದು ಕಡೆ ಕಲೆತಿದ್ದಾರೆ: ಸಮವೇತಾಃ.

ಯುದ್ಧದ ಜಿದ್ದಿನಿಂದ ಹೋರಾಟಕ್ಕೆ ಇಳಿದಿದ್ದಾರೆ: ಯುಯುತ್ಸವಃ.

ಪರಿಣಾಮ ಏನಾಯಿತು: ಕಿಮಕುರ್ವತ. ಇಬ್ಬರಲ್ಲಿ ಯಾರು ಏನು ಮಾಡಿದರು? ಯಾರು ಯಾರನ್ನು ಕೊಂದರು? ಯಾರು ಗೆದ್ದರು? ಯಾರು ಸೋತರು? ಎಲ್ಲವನ್ನೂ ವಿವರವಾಗಿ ಹೇಳು.

ಪ್ರಶ್ನೆಯ ಹಿನ್ನೆಲೆ

 

ಧೃತರಾಷ್ಟ್ರನ ಪ್ರಶ್ನೆಯ ಜೊತೆಗೆ ಭಗವದ್‌ಗೀತೆಯ ಪ್ರಾರಂಭ. ‘ಕಿಮಕುರ್ವತ ಸಂಜಯ’-‘ಯುದ್ಧಕ್ಕೆ ಸಿದ್ಧರಾಗಿ ಮುಖಾಮುಖಿಯಾಗಿ ನಿಂತ ಪಾಂಡವರು ಮತ್ತು ನನ್ನ ಮಕ್ಕಳು ಏನು ಮಾಡಿದರು’ ಎನ್ನುವ ಧೃತರಾಷ್ಟ್ರನ ಪ್ರಶ್ನೆಯ ಭಾವ ಸ್ಫುಟವಾಗಬೇಕಾಗಿದ್ದರೆ, ಭಗವದ್‌ಗೀತೆಯ ಮೊದಲಿನ ಭಾರತದ ಭಾಗವನ್ನು ನಾವು ಪರಿಶೀಲಿಸಬೇಕು.

ಭಗವದ್‌ಗೀತೆ ಭಾರತದ ಭೀಷ್ಮಪರ್ವದಲ್ಲಿ ಬಂದಿದೆ. ಗೀತೆಗಿಂತ ಮೊದಲು ಇಪ್ಪತ್ತನಾಕು ಅಧ್ಯಾಯಗಳು ಸಂದು ಇಪ್ಪತ್ತೈದರಿಂದ ನಲವತ್ತೆರಡನೆಯ ಅಧ್ಯಾ ಯದ ತನಕ ಭಗವದ್‌ಗೀತೆಯ ಭಾಗ.

ಮೊದಲಿನ ಈ ಇಪ್ಪತ್ತನಾಕು ಅಧ್ಯಾಯಗಳಲ್ಲಿ ಏನು ಬಂದಿದೆ ಎನ್ನುವುದನ್ನು ಗಮನಿಸಿದರೆ ಧೃತರಾಷ್ತ್ರನ ಈ ಪ್ರಶ್ನೆಯ ಹಿನ್ನೆಲೆ ನಮಗೆ ಸ್ಫುಟವಾಗುತ್ತದೆ.

ಭೀಷ್ಮಪರ್ವದ ಪ್ರಾರಂಭದಲ್ಲಿ ಬಂದ ವಿಷಯ ಇಷ್ಟು. ಎರಡು ಕಡೆಯವರೂ ಸೇನೆಯನ್ನು ಸಂಗ್ರಹಿಸಿದ್ದಾರೆ. ಒಂದು ಕಡೆ ಹನ್ನೊಂದು ಅಕ್ಷೋಹಿಣಿ; ಇನ್ನೊಂದು ಕಡೆ ಏಳು ಅಕ್ಷೋಹಿಣಿ. ಆಗ ವೇದವ್ಯಾಸರು ಧೃತರಾಷ್ಟ್ರನ ಬಳಿ ಬಂದು ಅವನನ್ನು ಎಚ್ಚರಿಸುತ್ತಾರೆ-‘ಘೋರವಾದ ಯುದ್ಧ ನಡೆಯಲಿದೆ. ಅದರ ಪರಿಣಾಮವಾಗಿ ಸರ್ವನಾಶ. ನಿನ್ನ ಮಕ್ಕಳಿಗಾಗಿ ನಡೆಯುವ ಈ ಸರ್ವನಾಶವನ್ನು ನಿನಗೆ ಕಾಣ ಬೇಕೆಂದಿದ್ದರೆ ನಾನು ನಿನಗೆ ಕಣ್ಣು ಕೊಡಬಲ್ಲೆ. ನಿನ್ನ ಅಚಾತುರ್ಯದ ಫಲವನ್ನು ನೀನೆ ಕಣ್ಣಾರೆ ನೋಡು.’

ಧೃತರಾಷ್ಟ್ರ ಕಾಣಬಯಸಲಿಲ್ಲ. ಆದರೆ ಕೇಳಬಯಸಿದ. ವೇದವ್ಯಾಸರು ಧೃತರಾಷ್ಟ್ರನ ಬದಲು ಸಂಜಯನಿಗೆ ದಿವ್ಯ ದೃಷ್ಟಿಯನ್ನಿತ್ತರು. ಪರಿಣಾಮವಾಗಿ ಅವನಿಗೆ ದೂರದರ್ಶನ ಮತ್ತು ದೂರಶ್ರವಣಶಕ್ತಿ ಸಿದ್ಧಿಸಿತು. ಅವನು ದಿವ್ಯ ದೃಷ್ಟಿಯಲ್ಲಿ ಕಂಡದ್ದನ್ನು ಧೃತರಾಷ್ಟ್ರನಿಗೆ ವಿವರಿಸಿದ.

ವೇದವ್ಯಾಸರು ಮತ್ತೆ ಧೃತರಾಷ್ಟ್ರನನ್ನು ಎಚ್ಚರಿಸಿದ್ದರು: ‘ಈ ಯುದ್ಧವನ್ನು ಆಗಗೊಡದಂತೆ ತಡೆಯುವುದು ರಾಜನಾಗಿ ನಿನ್ನ ಕರ್ತವ್ಯ. ಮಕ್ಕಳಿಗೆ ತಿಳಿಹೇಳು. ಜನಾಂಗ ಹತ್ಯಗೆ ತಡೆಹಾಕು.’

ಕುರುಡನಾದ ಧೃತರಾಷ್ಟ್ರ ಈ ಉಪದೇಶಕ್ಕೆ ಕಿವುಡನೂ ಆದ. ಅವನ ಸ್ವಾರ್ಥ ಮತ್ತು ಪುತ್ರಮೋಹ ಎಲ್ಲವನ್ನು ಮೀರಿನಿಂತಿತು! ಆದದ್ದಾಗಲಿ ನಾನು ಮಕ್ಕಳನ್ನು ತಡೆಯಲಾರೆ- ಎಂದುಬಿಟ್ಟ.

ವ್ಯಾಸರು ತಪೋವನಕ್ಕೆ ತೆರಳಿದರು.  ಸಂಜಯ ಭೂಮಂಡಲದ ವಿಸ್ತಾರವನ್ನೆಲ್ಲಾ ತಿಳಿಸಿ ಯಾವ ಕಡೆಯಿಂದ ಎಷ್ಟು ಸೇನೆ ಯುದ್ಧಕ್ಕಾಗಿ ಕುರುಕ್ಷೇತ್ರದಲ್ಲಿ ನೆರೆದಿದೆ ಎನ್ನುವ ವಿವರವನ್ನು ಧೃತರಾಷ್ಟ್ರನಿಗೆ ವರ್ಣಿಸಿದನು. ಯುದ್ಧ ಪ್ರಾರಂಭವಾದಾಗ ಕುತೂಹಲದಿಂದ ತಾನೂ ಕುರುಕ್ಷೇತ್ರಕ್ಕೆ ನಡೆದನು.

ಇತ್ತ ಧೃತರಾಷ್ಟ್ರನು ಹಸ್ತಿನಪುರದಲ್ಲಿ ಯುದ್ಧದ ಸುದ್ದಿಗಾಗಿ ಮೈಯೆಲ್ಲ ಕಿವಿಯಾಗಿ ಕಾದು ಕುಳಿತ. ಯುದ್ಧ ಪ್ರಾರಂಭವಾಗಿ ಹತ್ತು ದಿನಗಳ ತನಕವೂ ಸಂಜಯ ಮರಳಲಿಲ್ಲ. ಹತ್ತನೇ ದಿವಸ ಭೀಷ್ಮಪಾತವಾಯಿತು. ಕೌರವರ ಮೊದಲ ಸೇನಾಪತಿ, ಕುರುಕುಲದ ಪಿತಾಮಹ, ಭೀಷ್ಮಾಚಾರ್ಯರು ಹೀಗೆ ಕಣೆಮಂಚದಲ್ಲಿ ಮಲಗಿದ್ದನ್ನು ಕಂಡ ಸಂಜಯ ಹಸ್ತಿನಪುರಕ್ಕೆ ಮರಳಿದ; ದುರಂತದ ಸುದ್ದಿಯನ್ನು ಮುಟ್ಟಿಸಿದ. ಆಗ ಸಂಗತಿಯನ್ನು ವಿವರವಾಗಿ ತಿಳಿಯ ಬಯಸಿದ- ಧೃತರಾಷ್ಟ್ರ ಉವಾಚ=ಧತರಾಷ್ಟ್ರನು ನುಡಿದನು

ಸಂಜಯ=ಓ ಸಂಜಯನೆ, ಧರ್ಮಕ್ಷೇತ್ರೇ=ಧರ್ಮದ ತಾಣವಾದ, ಕುರುಕ್ಷೇತ್ರೇ= ಕುರುಗಳ ನಾಡಿನಲ್ಲಿ, ಯುಯುತ್ಸವಃ= ಹೋರಾಡಬಯಸಿ, ಸಮವೇತಾಃ=ನೆರೆದ, ಮಾಮಕಾಃ=ನನ್ನವರು, =ಮತ್ತು, ಪಾಂಡವಾಃ+ಏವ=ಬರಿದೆ ಪಾಂಡವರು, ಕಿಮ್+ಅಕುರ್ವತ=ಏನು ಮಾಡಿದರು ?

*        *        *

_____________________________________________

೧. ‘ಹಸ್ತಿನಪುರ’ ಎನ್ನುವುದು ಪ್ರಾಚೀನರೂಪ . ‘ಹಸ್ತಿನಾಪುರ’ ಎನ್ನುವುದು ಅರ್ವಾಚೀನರೂಪ

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು