ಆಚಾರ್ಯಮಧ್ವರ ಗೀತಾಭಾಷ್ಯದ ಅವತರಣಿಕೆ

ಯಾವ ದೋಷವು ಇರದ ಗುಣಪೂರ್ಣನಾದ

ನನ್ನ ದೇವಗೆ ಮಣಿದು ನಾರಾಯಣನಿಗೆ

‘ಅಃ’ಎಂಬ ಪೆಸರಿನಾ ಗುರುಗಳಿಗು ಮಣಿದು ಗೀ-

ತಾರ್ಥವನ್ನುಸುರುವೆನು ಒಂದಿನಿತು ಚೂರು ॥

 

ದ್ವಾಪರದ ಅಂತ್ಯದಲ್ಲಿ ಜನತೆಯಲ್ಲಿ ಧರ್ಮದ ಅರಿವು ಮರೆಯಾಗತೊಡಗಿತು. ಯಾವುದು ಧರ್ಮ, ಯಾವುದು ಅಧರ್ಮ, ಎಂದರಿಯದ ಮಂದಿಯ ಬಗೆಗೆ ಕರುಣೆ ತಾಳಿದ ಬ್ರಹ್ಮ, ರುದ್ರ, ಇಂದ್ರ ಮೊದಲಾದ ದೇವತೆಗಳು ಭಗವಂತನಲ್ಲಿ ಮೊರೆಯಿಟ್ಟರು. ದೇವತೆಗಳ ಮೊರೆಗೆ ಓಗೊಟ್ಟ ಭಗವಂತ ಜ್ಞಾನದ ದಾರಿ ತೋರಲು ‘ವ್ಯಾಸಮುನಿ’ಯಾಗಿ ಭೂಮಿಗಿಳಿದು ಬಂದ.

ಯಾವುದು ಹಿತ? ಯಾವುದು ಅಹಿತ? ಹಿತವನ್ನು ಸಾಧಿಸುವ ಬಗೆ ಏನು? ಅಹಿತವನ್ನು ನಿವಾರಿಸುವ ಬಗೆ ಏನು? ಒಂದನ್ನೂ ಅರಿಯದ ಜನ ಸಂಸಾರದಲ್ಲಿ ಸಂಕಟಕ್ಕೊಳಗಾದರು. ವೇದವೂ ಅರ್ಥವಾಗದೆ ಕಗ್ಗಂಟಾಯಿತು.

ಹೆಣ್ಮಕ್ಕಳು ಮತ್ತು ‘ಶೂದ್ರಸ್ವಭಾವ’ದ ಜನ ವೇದಕ್ಕೆ ಅನಧಿಕಾರಿಗಳಾಗಿ ಜ್ಞಾನದ ದಾರಿಯಲ್ಲಿ ಸಾಗದೆ ಉಳಿದರು.

ಭಗವಂತನ ಹೃದಯ ಮತ್ತೆ ಕರುಣೆಯಿಂದ ಮಿಡಿಯಿತು. ಎಲ್ಲ ಜನಕ್ಕೂ ಧರ್ಮದ ತಿರುಳು ತಿಳಿಯಬೇಕು; ಮೋಕ್ಷದ ದಾರಿ ತೆರೆಯಬೇಕು ಎಂದು ಭಗವಂತ ಸಮಸ್ತ ವೆದಿಕವಾಙ್ಮಯದ ಸಾರವನ್ನು ವಿವರಿಸಿ ತಿಳಿಹೇಳುವ ‘ಮಹಾಭಾರತ’ವೆಂಬ ಬಹದ್‌ಗ್ರಂಥವನ್ನು ರಚಿಸಿದನು.

ವೇದದಲ್ಲೂ  ಹೇಳದ, ಭಗವಂತನ ಅಲೌಕಿಕಜ್ಞಾನಕ್ಕೆ ಮಾತ್ರ ಗೋಚರವಾದ ಅನೇಕ ಅಪೂರ್ವ ಸಂಗತಿಗಳೂ ಇದರಲ್ಲಿ ಅಡಗಿವೆ. ಅದರಲ್ಲಿ ಕೇವಲ ಕೆಲವು ಅರ್ಥಳಷ್ಟೆ ಸಮಸ್ತಜೀವಜಾತಕ್ಕೆ ಎಟುಕುವಂಥವು. ಕೆಲವು ಯಾರಿಗೂ ಎಟುಕದಂಥವು. ಆಳಕ್ಕೆ ಇಳಿದಾಗ ಇಡಿಯ ಭಾರತ ಕೇವಲ ಭಗವಂತನ ಮಹಿಮೆಯ ಗುಣಗಾನ. ಕಾಣದ ಅರ್ಥದ ಕಡಲೇ ಇಲ್ಲಿ ಹುದುಗಿದೆ. 

ನಾರಾಯಣಾಷ್ಟಾಕ್ಷರಕಲ್ಪ ಎಂಬ ಗ್ರಂಥದಲ್ಲಿ ಈ ಸಂಗತಿಯೆಲ್ಲ ಬಂದಿದೆ

‘ಜಗದ ಒಡೆಯರಾದ ಬ್ರಹ್ಮ-ರುದ್ರ  ಮುಂತಾದವರು, ವೇದದ ಅರ್ಥ ತಿಳಿಯದೆ ಸಂಸಾರದಲ್ಲಿ ಕಂಗಾಲಾದ ಜನರನ್ನು, ವೇದಾಧ್ಯಯನದ ಅಧಿಕಾರವಿಲ್ಲದ ಹೆಣ್ಣುಮಕ್ಕಳು ಮುಂತಾದವರನ್ನು ಕಂಡು ಪುರುಷೋತ್ತಮನಾದ ನಾರಾಯಣನನ್ನು ಪ್ರಾರ್ಥಿಸಿಕೊಂಡರು. ಅವರ ಪ್ರಾರ್ಥನೆಗೆ ಒಲಿದ ಭಗವಂತ ವ್ಯಾಸನಾಗಿ ಅವತರಿಸಿದ. ಹೀಗೆ ವ್ಯಾಸರೂಪದಿಂದ ಮತ್ತು ಇತರ ಅವತಾರರೂಪಗಳಿಂದ ಕೂಡ ವೇದದ ಎಲ್ಲ ಅರ್ಥಗಳನ್ನು ಒಳಗೊಂಡ, ವೇದಗಳಲ್ಲೂ ಹೇಳದ ಭಗವಂತನ ಅಪ್ರಾಕೃತಪ್ರಜ್ಞೆಗೆ ಮಾತ್ರ ಗೋಚರವಾಗುವ ಅಪೂರ್ವಾರ್ಥಗಳನ್ನು ಒಳಗೊಂಡ, ಅದರಿಂದಲೆ ವೇದಕ್ಕಿಂತಲೂ ಮಿಗಿಲೆನ್ನಿಸಿದ ಐದನೆಯ ವೇದವನ್ನು ರಚಿಸಿದ. ಭಾರತ, ಪಂಚರಾತ್ರ, ಮೂಲರಾಮಾಯಣ ಮತ್ತು ಭಗವತ್ಪರವಾದ ಭಾಗವತವೆ ಮುಂತಾದ ಪುರಾಣಗಳು, ಈ ಎಲ್ಲ ಶಾಸ್ತ್ರಕೃತಿಗಳು ಸಮಷ್ಟಿಯಾಗಿ ‘‘ಐದನೆಯ ವೇದಗಳು’’ ಎಂದು ಪ್ರಸಿದ್ಧವಾಗಿವೆ.’

‘ಪೂರ್ತಿಯಾಗಿ ಭಾರತದ ಅರ್ಥವನ್ನು ಚತುರ್ಮುಖನೂ ತಿಳಿದಿಲ್ಲ. ಅಷ್ಟೋ ಇಷ್ಟೋ ಎಲ್ಲರೂ ತಿಳಿದಾರು. ಅಂಥ ಭಾರತ ಅನೇಕ ಅರ್ಥಗಳ ಸೆಲೆ ಎಂದು ಬಲ್ಲವರು ಹೇಳುತ್ತಾರೆ’- ಇದು ಉಪನಾರದೀಯದ ಹೇಳಿಕೆ.

‘ಬ್ರಹ್ಮಾದಿಗಳಿಂದ ಪ್ರಾರ್ಥಿತನಾದ ನಾರಾಯಣ ಭಾರತವನ್ನು ರಚಿಸಿದ. ಅದರ ಒಂದೊಂದು ಮಾತಿಗೂ ಹತ್ತು ಅರ್ಥಗಳಿವೆ. ಅದನ್ನು ಎಲ್ಲರೂ ತಿಳಿಯುವುದು ಸಾಧ್ಯವಿಲ್ಲ’- ಇದು ನಾರದೀಯದಲ್ಲಿ ಬಂದ ಮಾತು.

ಸ್ಕಾಂದ ಹೀಗೆ ಹೇಳುತ್ತದೆ-

‘ಭಗವಂತ ಭಾರತವನ್ನು ರಚಿಸಿದ. ಹಿರಿದಾದ ಐದನೆಯ ವೇದ. ಇಡಿಯ ಭಾರತಕ್ಕೆ ಕನಿಷ್ಠ ಹತ್ತು ಬಗೆಯ ವಿವರಣೆಗಳಿವೆ. ಅಂತತಃ ಇದು ಕೇವಲ ವಿಷ್ಣು-ಪಾರಮ್ಯವನ್ನು ಸಾರುವಂಥದು. ಎಲ್ಲೆಡೆಯೂ ಮೇಲುನೋಟಕ್ಕೆ ಕಾಣದ ಗೂಡಾರ್ಥಗಳೆ ತುಂಬಿವೆ. ಅದಕ್ಕೆಂದೆ ಇದು ವೇದಗಳಿಗೂ ಮಿಗಿಲಾದ ವೇದ.’

ಮಹಾಭಾರತದಲ್ಲಿ ಅಲ್ಲಲ್ಲಿ ಬರುವ ಮಾತುಗಳನ್ನು ಗಮನಿಸಿದರೂ ಈ ಸಂಗತಿ ಸ್ಫುಟವಾಗುತ್ತದೆ-

೧. ‘ನಾಕು ವೇದಗಳನ್ನು ತಿಳಿದಿರಬಹುದು; ವೇದಾಂಗಗಳನ್ನು, ಉಪನಿಷತ್ತುಗಳನ್ನು ತಿಳಿದಿರಬಹುದು. ಆದರೆ ಪುರಾಣಗ್ರಂಥಗಳನ್ನು ಅರಿಯದಿದ್ದವನು ನಿಜವನ್ನು ತಿಳಿಯಲಾರ.’

೨. ‘ಇತಿಹಾಸ ಮತ್ತು ಪುರಾಣಗಳ ನೆರವಿನಿಂದ ವೇದದ ಅರ್ಥವನ್ನು ನಿರ್ಧರಿಸ ಬೇಕು. ಅರೆಪಂಡಿತರ ಕೈಯಲ್ಲಿ ಸಿಕ್ಕಿಕೊಂಡ ವೇದ ‘ಈತ ನನ್ನನ್ನು ಹೊಲೆಗೆಡಿಸು ತ್ತಾನೆ’ ಎಂದು ಗಾಬರಿಗೊಳ್ಳುತ್ತದೆ.’

೩. ‘ಕೆಲವರ ಅಭಿಪ್ರಾಯದಂತೆ ಭಾರತ ಆಸ್ತೀಕಾದಿ: (ಆಸ್ತಿಕರಾದ ಪಾಂಡವ ರನ್ನು ಕುರಿತು ಬರೆದ ಐತಿಹಾಸಿಕ ಗ್ರಂಥ.) ಇನ್ನು ಕೆಲವರ ಪ್ರಕಾರ ಮನ್ವಾದಿ. (ಪಂಚ ಪಾಂಡವರು, ದ್ರೌಪದಿ ಮತ್ತು ಕೃಷ್ಣ- ಇವರು ಪ್ರತಿನಿಧಿಸುವ ವೌಲ್ಯಗಳನ್ನು ಬಿತ್ತರಿಸುವ ಅಧ್ಯಾತ್ಮ ಗ್ರಂಥ: ಯುಧಿಷ್ಠಿರ=ಧರ್ಮ; ಭೀಮ=ಭಕ್ತಿ, ಜ್ಞಾನ, ವೆರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ; ಅರ್ಜುನ=ಶ್ರವಣ, ಮನನ, ಧ್ಯಾನ; ನಕುಲ-ಸಹದೇವ=ಶೀಲ-ವಿನಯ; ದ್ರೌಪದಿ=ವೇದವಿದ್ಯೆ; ಕಷ್ಣ=ವೇದವೇದ್ಯ.) ಇನ್ನು ಕೆಲವರು ಇಡಿಯ ಭಾರತವೂ ಭಗವಂತನ ಗುಣಗಳ ಬಿತ್ತರ ಎನ್ನುತ್ತಾರೆ.’

೪. ‘ಬ್ರಹ್ಮಾದಿ ದೇವತೆಗಳು ಮತ್ತು ಎಲ್ಲ ಋಷಿಗಳು ಸೇರಿ, ವ್ಯಾಸಮುನಿಯ ಆಣತಿಯಂತೆ, ಹಿಂದೊಮ್ಮೆ ಭಾರತವನ್ನು, ಎಲ್ಲ ವೇದಗಳನ್ನು ತಕ್ಕಡಿಯಲ್ಲಿಟ್ಟು ತೂಗಿದರು. ಆಗ ಭಾರತದ ತಟ್ಟೆಯೆ ಭಾರವಾಯಿತು.’

೫. ‘ಮಹಾಭಾರತ ಮಹತ್ತಾದ ಕೃತಿ; ಅರ್ಥಭಾರದಿಂದ ತುಂಬಿದ ಕೃತಿ; ಅದಕ್ಕೆಂದೆ ಅದು ‘ಮಹಾಭಾರತ’. ಈ ನಾಮದ ನಿರ್ವಚನವನ್ನು ತಿಳಿದವನೂ ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ.’

೬. ‘ಇಲ್ಲಿ ಏನಿದಿಯೋ ಅದನ್ನಷ್ಟೆ ಇತರ ಗ್ರಂಥಗಳಲ್ಲೂ ಕಾಣಬಹುದು. ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ.’

೭. (‘ಮಹಾಭಾರತವೆಂಬ ಕಲ್ಪವಕ್ಷಕ್ಕೆ) ವಿರಾಟಪರ್ವ ಮತ್ತು ಉದ್ಯೋಗಪರ್ವಗಳು ಸಾರಭೂತವಾದ ತಿರುಳು.’

ಋಷಿಗಳ ಅತ್ಯುನ್ನತ-ಅಧ್ಯಯನಪರಂಪರೆಯ ಸಂಪ್ರದಾಯದಿಂದಲೂ ಇದರ ಹಿರಿಮೆ ತಿಳಿಯುತ್ತದೆ.

‘ಭಗವಾನ್ ನಾರಾಯಣನಲ್ಲದೆ ಇನ್ನಾರು ಮಹಾಭಾರತವನ್ನು ರಚಿಸುವುದು ಸಾಧ್ಯ?’-ಇಂಥ ಮಾತು ಬೇರೆ ಪುರಾಣದಲ್ಲು ಬಂದಿದೆ. ಈ ಮಾತು ಮಹಾ ಭಾರತದ ಹಿರಿಮೆಯನ್ನಲ್ಲದೆ ಇನ್ನೇನನ್ನು ಹೇಳುವುದು ಸಾಧ್ಯ?

ನಾರದರಂಥ ಮಹರ್ಷಿಗಳು ಕೂಡ ಈ ಗ್ರಂಥವನ್ನು ಅಧ್ಯಯನ ಮಾಡಿದ, ಅಧ್ಯಾಪನ ಮಾಡಿದ ಉಲ್ಲೇಖಗಳು ಕೂಡ ಈ ಗ್ರಂಥದ ಹಿರಿಮೆಗೆ ಸಾಕ್ಷಿ.

ಇಲ್ಲವಾದರೆ ಭಾರತದ ನಾಮದ ನಿರ್ವಚನವನ್ನು ತಿಳಿದ ಮಾತ್ರಕ್ಕೆ ಎಲ್ಲ ಪಾಪಗಳು ದೂರವಾಗುವುದೆಂದರೇನು? ಇದು ಬರಿಯ ಹೊಗಳಿಕೆಯ ಮಾತಲ್ಲ. ಜ್ಞಾನಿ ಗಳೆಲ್ಲ ಒಪ್ಪಿದ ಮಾತು.

ಭಾರತದಲ್ಲಿ ಅಂಥ ಹಿರಿಮೆ ಇರದಿದ್ದರೆ ನಾರಾಯಣನಲ್ಲದೆ ಇತರರು ಅದನ್ನು ರಚಿಸುವುದು ಏಕೆ ಸಾಧ್ಯವಿಲ್ಲ? ಇದು ಗ್ರಂಥಾಂತರದಲ್ಲಿ ಬಂದ ಮಾತಾದ್ದರಿಂದ- ಸುಳ್ಳೇ ಹೊಗಳಿಕೆಯ ಮಾತು ಎನ್ನುವಂತಿಲ್ಲ. ಇದು ಗ್ರಂಥದ ಸ್ತುತಿಯಲ್ಲ; ಗ್ರಂಥಕಾರರ ಸ್ತುತಿ ಎನ್ನುವಂತಿಲ್ಲ. ಇತರ ಪುರಾಣಾದಿಗಳನ್ನು ರಚಿಸಿದವರೂ ಇವರೆ ಆದರೂ ಅವುಗಳಿಗೇಕೆ ಇಂಥ ಸ್ತುತಿಯಿಲ್ಲ?

ಅಂಥ ಹಿರಿಮೆಯ ಮಹಾಭಾರತದ ನಡುವೆ ಬಂದ ವಾಸುದೇವ-ಅರ್ಜುನರ ಮಾತುಕತೆಯೇ ಭಗವದ್‌ಗೀತೆ. ಭಾರತದ ಸಮಸ್ತ ಅರ್ಥಗಳ ಸಾರಸಂಗ್ರಹ. ಮಹಾಭಾರತವೆಂಬ ಪಾರಿಜಾತಕುಸುಮದ ಮಕರಂದರಸ.

ಮಹಾಪುರಾಣ ‘ಕೌರ್ಮ’ದಲ್ಲಿ ಈ ಮಾತು ಬಂದಿದೆ-

‘ಶಾಸ್ತ್ರಗಳಲ್ಲೆಲ್ಲ ಭಾರತ ಮಿಗಿಲಾದುದು. ಭಾರತದಲ್ಲೂ ಭಗವದ್‌ಗೀತೆ ಮತ್ತು ವಿಷ್ಣುವಿನ ಸಹಸ್ರನಾಮ ಮಿಗಿಲಾದಂಥವು. ಈ ಎರಡನ್ನೂ ತಿಳಿಯಬೇಕು; ತಿಳಿದು ಪಠಿಸಬೇಕು.’

‘ಭಗವಂತನ ಸ್ವರೂಪವನ್ನರಿಯಲು ಗೀತೆ ಸಾರಿದ ಧರ್ಮ ಸಮಗ್ರವಾಗಿದೆ’ (ಅನುಗೀತೆ) ಮುಂತಾದ ವಚನಗಳು ಕೂಡ.

           *                  *                  *

ಇದು ಆಚಾರ್ಯಮಧ್ವರ ಭಾಷ್ಯದ ಪ್ರಸ್ತಾವನೆ. ಮೊದಲ ಇಬ್ಬರು ಭಾಷ್ಯಕಾರರೂ ಗೀತೆಗೆ ಹಿನ್ನೆಲೆಯಾಗಿ ಕೃಷ್ಣಾವತಾರವನ್ನು ಉಲ್ಲೇಖಿಸಿದ್ದರೆ ಆಚಾರ್ಯಮಧ್ವರು ವ್ಯಾಸಾವತಾರವನ್ನು ಉಲ್ಲೇಖಿಸಿದ್ದಾರೆ.

ಇದೊಂದು ಅರ್ಥಪೂರ್ಣವಾದ ಬದಲಾವಣೆ. ಕೃಷ್ಣ ಅರ್ಜುನನಿಗೆ ಉಪದೇಶಿಸಿದ ಅಧ್ಯಾತ್ಮವನ್ನು ಗ್ರಂಥರೂಪದಲ್ಲಿ ನಮಗೆ ಕೊಟ್ಟವರು ವ್ಯಾಸಮುನಿ.

ಹೌದು ಗೀತೆ ಕಷ್ಣನ ರಚನೆಯಲ್ಲ; ವ್ಯಾಸರ ರಚನೆ.

ಗ್ರಂಥಾರಂಭದಲ್ಲಿ ಗ್ರಂಥಕಾರರ ಹಿನ್ನೆಲೆಯ ಚಿಂತನೆ ಮುಖ್ಯವಾಗುತ್ತದೆ.

ಕೃಷ್ಣ ಅರ್ಜುನನಿಗೆ ಕೊಟ್ಟ. ವ್ಯಾಸರು ನಮಗೆ ಕೊಟ್ಟರು.

ನಾವು ನಮಗೆ ಕೊಟ್ಟವರ ಬಗೆಗೆ ತಿಳಿಯಬೇಕಲ್ಲವೇ?

ಇದು ವ್ಯಾಸರ ಕೊಡುಗೆ; ಇದು ವ್ಯಾಸರ ಮಹಾಭಾರತದ ಭಾಗ. ಅದಕ್ಕೆಂದೆ ಇದಕ್ಕೆ ಜಗನ್ಮಾನ್ಯತೆ.

ಅದಕ್ಕೆಂದೆ ಆಚಾರ್ಯಮಧ್ವರು ವ್ಯಾಸಪೀಠಿಕೆಯ ದಾರಿ ತೋರಿದರು.

ಭಾಷ್ಯದ ಪೀಠಿಕೆಯಾಯಿತು. ಗೀತೆಯ ಮೇಲಣ ತನ್ನ ಎರಡನೆಯ ಕೃತಿಯಾದ ಗೀತಾತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯಮಧ್ವರು ಗೀತೆಯ ಗ್ರಂಥದ ಹಿರಿಮೆಯ ಬಗೆಗೆ ವಿಸ್ತಾರವಾದ ಪ್ರಸ್ತಾವನೆಯನ್ನು ನಿರೂಪಿಸಿದ್ದಾರೆ. ಅದರ ಬಿತ್ತರವನ್ನು ಇನ್ನು ಗಮನಿಸೋಣ.

_____________________________________________

೧.  ‘ಬ್ರಹ್ಮಾಪಿ ತನ್ನ ಜಾನಾತಿ’ ಎಂದು ಮೂಲವಚನ . ‘ಬ್ರುಹಸ್ಪತಿಯೂ ತಿಳಿದಿಲ್ಲ’ ಎನ್ನುವುದು ಸಾಂಪ್ರದಾಯಿಕ ಅರ್ಥ .

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು