ಆಚಾರ್ಯರಾಮಾನುಜರ ಪ್ರಸ್ತಾವನೆ

ಆಚಾರ್ಯಶಂಕರರ ಗೀತಾಪ್ರಸ್ತಾವನೆಯನ್ನು ಸಂಗ್ರಹಿಸಿ ಗ್ರಹಿಸಿದ್ದಾಯಿತು. ಆಚಾರ್ಯರಾಮಾನುಜರ ಭಾವುಕತೆಯ ಪ್ರಸ್ತಾವನೆಯನ್ನು ಈಗ ಪರಿಶೀಲಿ ಸೋಣ.

ಯಾರ ಅಡಿದಾವರೆಯ ನೆನೆದು

ಎಲ್ಲ ಕಳೆ-ಕೊಳೆಗಳನು ತೊಡೆದು

ಆದೆನೋ ನಾನೊಂದು ವಸ್ತು

ಅಂಥ ಯಾಮುನಮುನಿಗೆ ಮಣಿವೆ ॥

 

ಲಕ್ಷ್ಮಿಯ ನಲ್ಲ ಎಲ್ಲ ದೋಷಗಳನೊಲ್ಲದ ಶುಭಗುಣಗಳ ಏಕಮಾತ್ರ ತಾಣ; ತನ್ನಿಂದ ಭಿನ್ನವಾದ ಎಲ್ಲ ವಸ್ತುಗಳಿಗಿಂತ ವಿಲಕ್ಷಣವಾದ ಜ್ಞಾನಾನಂದಗಳೆ ಮೈವೆತ್ತ ಮೂರ್ತಿ; ಸಹಜವಾದ, ಕೊನೆಯೆ ಇರದ ಮಿಗಿಲಾದ ಜ್ಞಾನ-ಬಲ-ಐಶ್ವರ್ಯ- ವೀರ್ಯ-ಶಕ್ತಿ-ತೇಜಸ್ಸು ಮುಂತಾದ ಎಣಿಕೆಯಿರದ ಸದ್ಗುಣಗಳ ಗಣಗಳ ಹೆಗ್ಗಡಲು; ತನಗೆ ಮೆಚ್ಚಾದ, ಒಪ್ಪವಾದ, ಎಲ್ಲೆಡೆಯು ಒಂದೆ ಬಗೆಯಾದ, ಚಿಂತನೆಗೆಟುಕದ ದಿವ್ಯಾದ್ಭುತಗಳಾದ, ನಾಶವಿರದ, ದೋಷವಿರದ, ಮೀರಿಸುವ ಮಿಗಿಲಿರದ, ಉಜ್ವಲತೆ-ಸೌಗಂಧ್ಯ-ಸೌಂದರ್ಯ-ಸೌಕುಮಾರ್ಯ-ಲಾವಣ್ಯ- ಯೌವನ ಮುಂತಾದ ಅನಂತಗುಣಗಳ ಕಡವರವಾದ ದಿವ್ಯಮೂರ್ತಿ.

ತನಗೆ ತಕ್ಕುದಾದ ಬಗೆಬಗೆಯ ವಿಚಿತ್ರವಾದ, ಎಣೆಯಿರದ ಅಚ್ಚರಿಯ, ನಾಶ ವಿರದ, ದೋಷವಿರದ, ಎಣಿಕೆಗೆ ಸಿಗದ ದಿವ್ಯ-ಭೂಷಣಗಳನ್ನು ತೊಟ್ಟವನು; ತನಗೆ ಒಪ್ಪುವ, ಎಣಿಸಲಾಗದ, ಊಹೆಗೆಟುಕದ ಶಕ್ತಿಯ, ನಾಶವಿರದ, ದೋಷ ವಿರದ, ಮೀರಿಸುವ ಮಿಗಿಲಿರದ, ಮಂಗಳಮಯವಾದ ದಿವ್ಯಾಯುಧಗಳನ್ನು  ಧರಿಸಿದವನು; ತನಗೆ ಮೆಚ್ಚಾದ, ಒಪ್ಪವಾದ, ನಾಶವಿರದ, ದೋಷವಿರದ, ತಾನೇ ತಾನಾದ, ಚೆಲುವು-ಗುಣಗಳ ಗರಿಮೆ-ಒಡೆತನ-ಶೀಲವಂತಿಕೆ ಮುಂತಾದ ಕೊನೆಯಿರದ, ಮಿಗಿಲಾದ, ಎಣಿಕೆಗೆಟುಕದ ಮಂಗಲಗುಣಗಳ ರಾಶಿಯೆ ಆದ ಶ್ರೀದೇವಿಯ ನಲ್ಲನವನು; ತನ್ನ ಸಂಕಲ್ಪಕ್ಕೆ ತಕ್ಕಂತೆ ರೂಪುಗೊಂಡ ಸ್ವರೂಪ- ಇರವು-ನಡೆಯ ಪ್ರಭೇದಗಳು ಈ ಎಲ್ಲದರಲ್ಲು ತನ್ನ ಪಡಿಯಚ್ಚಿನಂತಿರುವುದರಲ್ಲೆ ಒಲವು ಹೊತ್ತವರಾದ ಮತ್ತು ನಾಶವಿರದ, ದೋಷವಿರದ, ಮಿಗಿಲಿರದ ಜ್ಞಾನ- ಕ್ರಿಯೆ-ಒಡೆತನ ಮುಂತಾದ ಗುಣಗಳ ಗುಂಪಿಗಾಸರೆಯಾದ ಅಸಂಖ್ಯಸೂರಿಗಳು ಎಡೆಬಿಡದೆ ಕೊಂಡಾಡುವ ಎರಡು ಅಡಿಗಳವನು; ಮಾತು-ಮನಗಳು ಅಳೆಯದ ಸ್ವರೂಪ-ಸ್ವಭಾವಗಳವನು; ತನಗೆ ತಕ್ಕುದಾದ ಬಗೆಬಗೆಯವೈಚಿತ್ರ್ಯದ ಅನಂತ ಭೋಗದ್ರವ್ಯಗಳು-ಭೋಗದ ಸಲಕರಣೆಗಳು ಮತ್ತು ಭೋಗಗಳ ನೆಲೆಯಾದ, ತುಂಬಿತುಳುಕುವ ಅನಂತ ವಿಸ್ಮಯಗಳ, ಅನಂತ ಐಸಿರಿಯ, ತುದಿ-ಮೊದಲಿರದ, ನಾಶವಿರದ, ದೋಷವಿರದ, ಆಂಶಿಕವಾಗಿ ಕೂಡ ಅಳಿಯದ, ಪರಮಾಕಾಶದಲ್ಲಿ ನೆಲೆಸಿದವನು; ಬಗೆಬಗೆಯ ಅಚ್ಚರಿಯ ಅನಂತ ಭೋಗವಸ್ತುಗಳು ಮತ್ತು ಭೋಗಿಸುವ ಮಂದಿ ತುಂಬಿರುವ ಇಡಿಯ ವಿಶ್ವಕ್ಕೆ ಹುಟ್ಟು-ಏಳಿಗೆ-ಸಾವುಗಳನೀವ ಆಟಗಾರ.

ಪರಬ್ರಹ್ಮನಿವನು ಪುರುಷೋತ್ತಮ ನಾರಾಯಣ. ಚತುರ್ಮುಖನಿಂದ ತೊಡಗಿ ಸ್ಥಾವರದ ತನಕ ಎಲ್ಲ ಜಗತ್ತನ್ನು ನಿರ್ಮಿಸಿ ತನ್ನ ನಿಜರೂಪದಿಂದ ನೆಲೆ ನಿಂತವನು; ಬ್ರಹ್ಮಾದಿ-ದೇವತೆಗಳ, ಮನುಜರ ಧ್ಯಾನ-ಆರಾಧನೆಗಳಿಗೆ ನಿಲುಕದವನು; ಮೇರೆವರಿದ ಕರುಣೆ-ಸೌಶೀಲ್ಯ-ವಾತ್ಸಲ್ಯ-ಔದಾರ್ಯಗಳ ಹೆಗ್ಗಡಲು; ತನ್ನದೇ ರೂಪವನ್ನು ಆಯಾ ಇರವಿಗೆ ತಕ್ಕಂತೆ ನೇರ್ಪುಗೊಳಿಸಿ, ತನ್ನ ಸಹಜಸ್ವಭಾವವನ್ನು ತೊರೆಯದೆಯೆ ಆಯಾ ಲೋಕಗಳಲ್ಲಿ ಅವತರಿಸಿ-ಅವತರಿಸಿ ಆಯಾ ಭಕ್ತರಿಂದ ಪೂಜೆ ಕೊಳುವವನು; ಪೂಜೆ ಕೊಂಡು ಅವರವರ ಇಷ್ಟಕ್ಕೆ ತಕ್ಕಂತೆ ಧರ್ಮ- ಅರ್ಥ-ಕಾಮ-ಮೋಕ್ಷಗಳೆಂಬ ಫಲವನ್ನೀಯುವವನು; ಹೀಗೆ ಫಲವನ್ನೀಯುತ್ತ ಭೂಮಿಯ ಹೊರೆಯನ್ನಿಳಿಸುವ ಹೆಳೆಯಿಂದ ನಮ್ಮಂಥವರಿಗೆ ಕೂಡ (ಸಂಸಾರದ ದುಃಖ ಹೋಗಲಾಡಿಸಲೆಂದು) ಆಸರೆಯಾಗಲೆಂದು ಇಳಿದು ಬಂದು ಭೂಮಿ ಯಲ್ಲಿ ಇರುವ ಎಲ್ಲ ಮನುಜರ ಕಣ್ಣುಗಳಿಗು ಕಾಣಿಸಿಕೊಂಡವನು; ದೊಡ್ಡವರ, ಸಣ್ಣವರ, ಹೀಗೆ ಎಲ್ಲ ಜನರ ಮನಸು-ಕಣ್ಣುಗಳಿಗೆ ಬೆರಗನ್ನಿತ್ತ ದಿವ್ಯಲೀಲೆಗಳನ್ನೆಸಗಿದವನು; ಪೂತನೆ, ಶಕಟಾಸುರ, ಜೋಡು ಮತ್ತಿಯ ಮರಗಳು, ಅರಿಷ್ಟ, ಪ್ರಲಂಬ, ಧೇನುಕ, ಕಾಳಿಯ, ಕೇಶಿ, ಕುವಲಯಾಪೀಡ, ಚಾಣೂರ, ಮುಷ್ಟಿಕ, ಕೋಸಲ, ಕಂಸ ಮುಂತಾದವರ ಸೊಕ್ಕು ಮುರಿದವನು; ಮುರಿದು ಕೊನೆಯಿರದ ಕರುಣೆ, ಪ್ರೀತಿ ಮತ್ತು ಒಲುಮೆ ಸೂಸುವ ನೋಟ-ಮಾತುಗಳ ಅಮೃತರಸ ದಿಂದ ಜಗವನ್ನು ತಣಿಸಿದವನು; ಮಿಗಿಲಿರದ ಚೆಲುವು, ಒಳ್ಳೆಯ ಶೀಲವಂತಿಕೆ ಮುಂತಾದ ಗುಣಗಳ ರಾಶಿಯನ್ನೆ ಆವಿಷ್ಕರಿಸಿ ಅಕ್ರೂರ-ಮಾಲಾಕಾರ ಮೊದಲಾದವರನ್ನು ಪರಮಭಕ್ತರನ್ನಾಗಿಸಿದವನು; ಪಾಂಡವರ ಹೋರಾಟಕ್ಕೆ ಬೆಂಬಲ ನೀಡುವ ನೆಪದಿಂದ ಪರಮ-ಪುರುರ್ಷಾರ್ಥವಾದ ಮೋಕ್ಷಕ್ಕೆ ಸಾಧನವೆಂದು ವೇದಾಂತಗಳು ಬಣ್ಣಿಸಿದ ತನ್ನ ಭಕ್ತಿಯೋಗವನ್ನು ಜ್ಞಾನ-ಕರ್ಮಯೋಗಗಳ ಜತೆಗೆ ಬೆಳಕಿಗೆ ತಂದವನು.

ಪಾಂಡವರಿಗೂ ಕೌರವರಿಗೂ ಯುದ್ಧ ಪ್ರಾರಂಭವಾಗಿದೆ. ಪಾರ್ಥ ರಥಿಕನಾದ. ಎಲ್ಲ ಜಗತ್ತು ಕಣ್ಣಿಟ್ಟು ಕಾಣುವಂತೆ ಕೃಷ್ಣ ತಾನು ಸಾರಥಿಯಾಗಿ ನಿಂತ. ಒಡೆಯರಿಗೂ ಒಡೆಯನಾದ ಭಗವಾನ್ ಪುರುಷೋತ್ತಮನ ಲೀಲೆಯಿದು. ಜಗತ್ತಿನ ಉಪಕಾರಕ್ಕಾಗಿ ಮಾನವನಾಗಿ ಕಾಣಿಸಿಕೊಂಡು ಅವನಾಡಿದ ನಾಟಕ ವಿದು. ಇದು ಭಗವಂತನ ಭಕ್ತಪರಾಧೀನತೆಗೆ ಒಂದು ಸಾಕ್ಷಿ.

 ಧೃತರಾಷ್ಟ್ರನಿಗು ಅರ್ಜುನನ ಹಿರಿಮೆ ತಿಳಿಯದ ಸಂಗತಿಯಲ್ಲ. ಆದರೂ ಅವನು ಮಕ್ಕಳ ಮೋಹದಿಂದ ಹೊರಗಿನಂತೆ ಒಳಗೂ ಪೂರ್ಣ ಕುರುಡನಾಗಿಬಿಟ್ಟಿದ್ದ. ತನ್ನ ಮಗ ದುರ್ಯೋಧನನ ವಿಜಯದ ಸುದ್ದಿಯನ್ನು ಕೇಳುವ ಹುಚ್ಚು ಆಸೆಯಿಂದ ಸಂಜಯನ ಬಳಿ ಕೇಳಿದ.

ಇದಿಷ್ಟು ಮಾತುಗಳು ಗೀತೆಯ ಪ್ರಸ್ತಾವನೆಯಾಗಿ ರಾಮಾನುಜರ ಭಾಷ್ಯದಲ್ಲಿ ಬಂದಂಥವು. ಅವರ ಕೃಷ್ಣಭಕ್ತಿ ಮತ್ತು ಅನನ್ಯಶರಣಾಗತಿಭಾವ ಇಲ್ಲಿ ನಿಚ್ಚಳವಾಗಿ ಮೂಡಿಬಂದಿದೆ. ಆಚಾರ್ಯಮಧ್ವರ ಪ್ರಸ್ತಾವನೆ ಮುಂದೆ ನೋಡೋಣ.

_____________________________________________

೧. ಆಚಾರ್ಯರು ‘ಯಾಮುನೇಯಂ ನಮಾಮಿ’ ಎಂದಿದ್ದಾರೆ . ಇದು ಗುರು ಯಾಮುನಾಚಾರ್ಯರ ನಮನದಂತೆ ಯಮುನೆಯ ಜಲದಲ್ಲಿ ವಿಹರಿಸಿದ ಶ್ರೀಹರಿಯ ನಮನವೂ ಆಗಬಹುದು .

೨. ಈ ಪಟ್ಟಿಯಲ್ಲಿ ಪ್ರಲಂಬ ಮತ್ತು ಮುಷ್ಟಿಕ ಇವರಿಬ್ಬರನ್ನು ಕೊಂದವನು ಬಲರಾಮ . ಆದರೆ ಬಲರಾಮನೂ ಭಗವದಂಶನೇ ಅದ್ದರಿಂದ ಅವನನ್ನು ಕೃಷ್ಣನೆ ಕೊಂದನೆಂದು ಆಚಾರ್ಯರು ಉಲ್ಲೇಖಿಸಿದ್ದಾರೆ . ಇಲ್ಲಿ ಬಂದ ಇನ್ನೊಬ್ಬ ಜಟ್ಟಿಯ ಹೆಸರು ಕೋಸಲ . ರಾಮಾನುಜರ ಭಾಷ್ಯದಲ್ಲಿ ತೋಸಲ ಎಂದು ಮುದ್ರಿತವಾಗಿದೆ . ‘ಕೋಸಲ’ ಎನ್ನುವುದು ಪ್ರಾಚೀನ ಶುದ್ಧ ರೂಪ .

 

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು