ಆಚಾರ್ಯಶಂಕರರ ಪ್ರಸ್ತಾವನೆ

ಪ್ರಕೃತಿಗಿಂತಲು ಮಿಗಿಲು ನಾರಾಯಣ

ಪ್ರಕೃತಿಯಾ ಹೊಟ್ಟೆಯಲಿ ಜಗದ ಮೊಟ್ಟೆ

ಈರೇಳು ಲೋಕಗಳು ಮೊಟ್ಟೆಯೊಳಗೆ

ಏಳು ದ್ವೀಪಗಳೊಡನೆ ಭೂಮಿ ಕೂಡ

 

ಭಗವಾನ್ ನಾರಾಯಣ ಈ ಜಗತ್ತನ್ನು ಸೃಷ್ಟಿಸಿದ. ಅದರ ರಕ್ಷಣೆಗಾಗಿ ಮರೀಚಿ ಮುಂತಾದ ಪ್ರಜಾಪತಿಗಳನ್ನು ಮೊದಲು ಹುಟ್ಟಿಸಿ ಅವರಿಗೆ ಪ್ರವೃತ್ತಿಮಾರ್ಗದ ವೇದಧರ್ಮವನ್ನು ಉಪದೇಶಿಸಿದ. ಅನಂತರ ಸನಕ-ಸನಂದನ ಮುಂತಾದವರನ್ನು ಸೃಷ್ಟಿಸಿದ. ಅವರಿಗೆ ಜ್ಞಾನ-ವೆರಾಗ್ಯರೂಪವಾದ ನಿವೃತ್ತಿಧರ್ಮವನ್ನು ಬೋಧಿಸಿದ.

ಹೀಗೆ ವೈದಿಕಧರ್ಮಕ್ಕೆ ಎರಡು ಮುಖಗಳು: ಪ್ರವೃತ್ತಿಧರ್ಮ ಮತ್ತು ನಿವೃತ್ತಿ ಧರ್ಮ. ಎರಡೂ ಜಗತ್ತಿನ ಇರವಿಗೆ ಕಾರಣವಾದದ್ದು. ಸಮಸ್ತ ಜೀವಿಗಳ ಅಭ್ಯುದಯ ಮತ್ತು ಮೋಕ್ಷಗಳಿಗೆ ನೇರ ಕಾರಣವಾದದ್ದೆ ಧರ್ಮ. ಬ್ರಾಹ್ಮಣಾದಿ-ವರ್ಣ ಗಳು ಮತ್ತು ಬ್ರಹ್ಮಚರ್ಯಾದಿ-ಆಶ್ರಮಗಳು ಶ್ರೇಯಸ್ಸಿನ ಬಯಕೆಯಿಂದ ಅದನ್ನು ಅನುಷ್ಠಾನಕ್ಕೆ ತಂದವು.

ಬಹಳ ಕಾಲ ಹೀಗೆಯೆ ನಡೆಯಿತು. ಯುಗಯುಗಗಳು ಸಂದವು. ಮನುಷ್ಯನಿಗೆ ದುರಾಸೆ ಬೆಳೆಯಿತು. ಆಚರಣೆಯಲ್ಲಿ ವಿವೇಕ-ವಿಜ್ಞಾನಗಳು ಮಸಕಾದವು. ಪರಿಣಾಮವಾಗಿ ಅಧರ್ಮದ ಆಟೋಪದಿಂದ ಧರ್ಮ ಶಿಥಿಲವಾಯಿತು. ಅಧರ್ಮ ತಲೆಯೆತ್ತಿ ತಿರುಗಾಡತೊಡಗಿತು. ವಿಷ್ಣುರೂಪ ಹೊತ್ತ ಆದಿಕಾರಣನಾದ ನಾರಾ ಯಣ ಜಗತ್ತಿನ ಸುವ್ಯವಸ್ಥೆಯನ್ನು ಪಾಲಿಸಬಯಸಿದ. ಬಯಸಿ  ಭೂಮಿಯಲ್ಲಿ ವೇದವಾಙ್ಮಯದ ಮತ್ತು ಬ್ರಾಹ್ಮಣ್ಯದ ರಕ್ಷಣೆಗಾಗಿ ತಾನೆ ಅಂಶದಿಂದ ವಸುದೇವ- ದೇವಕಿಯರಲ್ಲಿ ಮಗನಾಗಿ, ಕಷ್ಣನಾಗಿ ಅವತರಿಸಿದ. 

ಬ್ರಾಹ್ಮಣ್ಯದ ರಕ್ಷಣೆಯೆಂದರೆ ವೇದಧರ್ಮದ ರಕ್ಷಣೆ. ಅದರಿಂದ ವರ್ಣಾಶ್ರಮ ಧರ್ಮದ ರಕ್ಷಣೆ.

ಅಂಥ ಭಗವಾನ್ ಶ್ರೀಕೃಷ್ಣ ಜ್ಞಾನ, ಈಶ್ವರಭಾವ, ಶಕ್ತಿ, ಬಲ, ವೀರ್ಯ, ತೇಜಸ್ಸು ಎಂಬ ಈ ಆರು ಗುಣಗಳಿಂದ ಸದಾ ಪರಿಪೂರ್ಣನಾದ ಹಿರಿಯ ತತ್ವ. ಸತ್ವ, ರಜಸ್ಸು, ತಮಸ್ಸು ಎಂಬ ತ್ರಿಗುಣಗಳ ಮಾನಿನಿಯಾದ ಮೂಲಪ್ರಕೃತಿಯನ್ನು, ತನ್ನ ವೈಷ್ಣವೀಮಾಯೆಯನ್ನು ತನ್ನ ಅಂಕೆಯಲ್ಲಿರಿಸಿದವನು. ಹುಟ್ಟು ಸಾವುಗಳಿರದವನು. ಎಲ್ಲ ಪ್ರಾಣಿಗಳಿಗೂ ಒಡೆಯ. ಪರಿಶುದ್ಧ ಜ್ಞಾನಮೂರ್ತಿ. ನಿತ್ಯಮುಕ್ತಸ್ವರೂಪ. ಆದರೂ ತನ್ನ ಮಾಯೆಯಿಂದ, ಲೋಕಾನುಗ್ರಹಕ್ಕಾಗಿ ದೇಹ ತೊಟ್ಟವನಂತೆ, ಹುಟ್ಟಿ ಬಂದವನಂತೆ ಕಾಣಿಸಿಕೊಳ್ಳುತ್ತಾನೆ.

ತನಗೇನೂ ಪ್ರಯೋಜನವಿಲ್ಲದಿದ್ದರೂ ಜೀವಜಾತವನ್ನು ಉದ್ಧರಿಸುವ ಬಯಕೆ ಯಿಂದ ವೈದಿಕವಾದ ಪ್ರವೃತ್ತಿ-ನಿವೃತ್ತಿಧರ್ಮಗಳನ್ನು ದುಃಖದ, ಮೋಹದ ಹೆಗ್ಗಡಲಲ್ಲಿ ಮುಳುಗಿದ ಅರ್ಜುನನಿಗೆ  ಉಪದೇಶಿಸಿದ; ಗುಣವಂತರಿಗೆ ಹೇಳಿದರೆ, ಅಂಥವರು ತಿಳಿದು ಅನುಷ್ಠಾನಕ್ಕೆ ತಂದರೆ ಅಂಥ ಧರ್ಮ ಲೋಕದಲ್ಲಿ ಬೇಗನೆ ಪ್ರಚುರಗೊಳ್ಳುತ್ತದೆ ಎನ್ನುವುದಕ್ಕಾಗಿ.

ಹೀಗೆ ಕೃಷ್ಣನಿಂದ ಉಪದಿಷ್ಟವಾದ ಧರ್ಮವನ್ನು ಸರ್ವಜ್ಞರಾದ ಭಗವಾನ್  ವೇದವ್ಯಾಸರು ಇದ್ದಕ್ಕಿದ್ದಂತೆ ಗೀತೆಯೆಂಬ ೭೦೦ ಪದ್ಯಗಳಲ್ಲಿ ಪೋಣಿಸಿದರು.

ಈ ಇಂಥ ಗೀತಾಶಾಸ್ತ್ರ  ಸಮಸ್ತ ವೇದಗಳ ಅರ್ಥದ ಸಾರಸಂಗ್ರಹ. ಸುಲಭದಲ್ಲಿ ಅರಗಿಸಿಕೊಳ್ಳಲಾಗದ್ದು. ಹಲವು ಮಂದಿ ಅದರ ಪದಗಳ, ವಾಕ್ಯಗಳ ಅರ್ಥ ವಿವರಣೆಗೆ ಪ್ರಯತ್ನಿಸಿದ್ದಾರೆ. ಆದರೂ ತೀರ ವಿರುದ್ಧಗಳಾದ  ಹಲವು ವಿವರಣೆ ಗಳಿಂದ ಲೌಕಿಕರು  ಗೊಂದಲಗೆಟ್ಟಿದ್ದಾರೆ. ಇದನ್ನು ಗಮನಿಸಿ ವಿವೇಚನೆಯಿಂದ ಈ ಗ್ರಂಥದ ನಿಜಾರ್ಥವನ್ನು ನಿರ್ಧರಿಸಲು ನಾನು ಸಂಕ್ಷಿಪ್ತವಾದ ವಿವರಣೆಯನ್ನು ನೀಡುತ್ತಿದ್ದೇನೆ.

ಅಂಥ ಈ ಗೀತಾಶಾಸ್ತ್ರದ ಪ್ರಯೋಜನ, ಸಂಕ್ಷೇಪವಾಗಿ ಈ ಸಂಸಾರಬಂಧನದ ಎಲ್ಲ ನಿಮಿತ್ತಗಳಿಂದ ಪೂರ್ತಿಯಾಗಿ ಪಾರಾಗಿ ಪರಮ-ಶ್ರೇಯಸ್ಸಾದ ಮುಕ್ತಿಯನ್ನು ಪಡೆಯುವುದು. ಅಂಥ ಮುಕ್ತಿ ಸರ್ವಕರ್ಮಸಂನ್ಯಾಸಪೂರ್ವಕವಾದ ಆತ್ಮಜ್ಞಾನ ನಿಷ್ಠೆಯೆಂಬ ಧರ್ಮದಿಂದ ಮಾತ್ರ ಸಾಧ್ಯ. ಈ ಗೀತಾಧರ್ಮವನ್ನು ಕುರಿತು ಭಗವಂತನೆ (ಅನುಗೀತೆಯಲ್ಲಿ) ಹೀಗೆ ಹೇಳಿದ್ದಾನೆ: ‘ಸ ಹಿ ಧರ್ಮಃ ಸುಪ- ರ್ಯಾಪ್ತೋ ಬ್ರಹ್ಮಣಃ ಪದವೇದನೇ’ (ಮುಕ್ತಿ ಗಳಿಸಲು ಗೀತೆ ಸಾರಿದ ಧರ್ಮದ ದಾರಿಯೊಂದೇ ಸಾಕು).

ಇನ್ನೂ ಒಂದು ಮಾತು ಅಲ್ಲಿ ಬಂದಿದೆ: ‘ನೈವ ಧರ್ಮೀ ನ ಚಾಧರ್ಮೀ ನಚೈವ ಹಿ ಶುಭಾಶುಭೀ  ಯಃ ಸ್ಯಾದೇಕಾಸನೇ ಲೀನಃ ತೂಷ್ಣೀಂ ಕಿಂಚಿದಚಿಂತಯನ್’, (ಧರ್ಮಾಧರ್ಮಗಳ, ಒಳಿತು-ಕೆಡುಕುಗಳ ಲೇಪವಿಲ್ಲದವನು, ಬೇರೇನನ್ನೂ ಬಗೆಯಲ್ಲಿ ತುಂಬದೆ ಸುಮ್ಮನೆ ಒಂದೆ ಆತ್ಮತತ್ವದಲ್ಲಿ ನೆಲೆಸಿ ಅಲ್ಲೆ ಮುಳುಗಿದ ವನು). ‘ಜ್ಞಾನಂ ಸನ್ನ್ಯಾಸಲಕ್ಷಣಮ್’ (ಸರ್ವಕರ್ಮತ್ಯಾಗದ ಫಲವೆ ನಿಜವಾದ ಜ್ಞಾನದ ದಾರಿ) ಎನ್ನುವುದು ಅಲ್ಲಿಯದೆ ಇನ್ನೊಂದು ಮಾತು.

ಇಲ್ಲು ಕೊನೆಯಲ್ಲಿ ಅರ್ಜುನನಿಗೆ ಹೇಳಿದ್ದು: ‘ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’. (ಎಲ್ಲ ಪ್ರವೃತ್ತಿಧರ್ಮಗಳನ್ನೂ ತೊರೆದು ನನ್ನೊಬ್ಬನಲ್ಲೆ ಶರಣಾಗು.)

ಅಭ್ಯುದಯಕ್ಕೆ ಕಾರಣವಾದ ಪ್ರವೃತ್ತಿಮಾರ್ಗದ ಧರ್ಮಾಚರಣೆ ವರ್ಣಾಶ್ರಮಗಳಿಗೆ ವಿಹಿತವಾಗಿದ್ದು ಅದು ಸ್ವರ್ಗಾದಿಪ್ರಾಪ್ತಿಗೆ ಮಾತ್ರವೆ ಕಾರಣವಾದರೂ ಭಗವದರ್ಪಣಭಾವದಿಂದ ಫಲಾಪೇಕ್ಷೆಯಿಲ್ಲದೆ  ಆಚರಿಸಿದಾಗ ಮನಃಶುದ್ಧಿಗೆ ಕಾರಣವಾಗುತ್ತದೆ. ಮನಸ್ಸು ಶುದ್ಧವಾದಾಗ ಜ್ಞಾನನಿಷ್ಠೆಯ ಯೋಗ್ಯತೆ ಪ್ರಾಪ್ತ ವಾಗುತ್ತದೆ. ಆ ಮೂಲಕ  ಕರ್ಮಾಚರಣೆ ಕೂಡ ಅಂತತಃ ಜ್ಞಾನಮಾರ್ಗಕ್ಕೆ ಕಾರಣವಾಗುತ್ತದೆ  ಮತ್ತು  ಮೋಕ್ಷಕ್ಕು ನೆರವಾಗುತ್ತದೆ. ಈ ಅಭಿಪ್ರಾಯವನ್ನೆ ಮನಸ್ಸಿನಲ್ಲಿಟ್ಟುಕೊಂಡು ಶ್ರೀಕೃಷ್ಣ ಮುಂದೆ ಹೇಳುತ್ತಾನೆ: ‘ಬ್ರಹ್ಮಣ್ಯಾಧಾಯ ಕರ್ಮಾಣಿ ಯತಚಿತ್ತಾ ಜಿತೇಂದ್ರಿಯಾಃ  ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ’.  (ಕರ್ಮಯೋಗಿಗಳು ಕೂಡ ಎಲ್ಲ ಕರ್ಮವನ್ನು  ಭಗವಂತನಲ್ಲಿ ಅರ್ಪಿಸುವ ಮೂಲಕ ಇಂದ್ರಿಯ-ಮನಸ್ಸುಗಳನ್ನು ನಿಗ್ರಹಿಸಿ, ಕರ್ಮಫಲದಲ್ಲಿ ಆಸೆಯನ್ನಿಡದೆ ಮನಃಶುದ್ಧಿಗಾಗಿ ಕರ್ಮವನ್ನಾಚರಿಸುತ್ತಾರೆ.)

ಹೀಗೆ ಮನುಷ್ಯನ ಶ್ರೇಯಸ್ಸಿಗೆ ಕಾರಣವಾದ ಎರಡು ಬಗೆಯ ಧರ್ಮವನ್ನು, ಜತೆಗೆ ಪರಮಾರ್ಥತತ್ವವಾದ ವಾಸುದೇವನೆಂಬ ಪರಬ್ರಹ್ಮನ ಸ್ವರೂಪವನ್ನು ವಿಶೇಷವಾಗಿ ಬೆಳಕಿಗೆ ತರುವ ಈ ಗೀತಾಶಾಸ್ತ್ರ  ವಿಶಿಷ್ಟವಾದ ವಿಷಯವನ್ನು ವಿಶಿಷ್ಟ ವಾದ ಪ್ರಯೋಜನಕ್ಕಾಗಿ ನಿರೂಪಿಸುವಂಥದು. ಅದರಿಂದಲೆ ಅದರ ಅರ್ಥವನ್ನು ತಿಳಿದಾಗ ಎಲ್ಲ ಪುರುಷಾರ್ಥಗಳೂ ಕರಗತವಾಗುತ್ತದೆ. ಅದಕ್ಕಾಗಿ ಅದರ ವಿವರಣೆ ಗಾಗಿ ನನ್ನ ಈ ಪ್ರಯತ್ನ.

                   *                  *                  *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು