ಹದಿನೆಂಟರ ನಂಟು

ಎಲ್ಲ ಅಧ್ಯಾತ್ಮಸಾರದ ಭಾರವನ್ನು ಹೊತ್ತ ಮಹಾಭಾರತದ ಸಾರ ಗೀತೆ ಹೇಗೆ?

ಈ ಮಾತು ಅರ್ಥವಾಗಬೇಕಾದರೆ ಭಾರತದ ‘ಮುಕ್ಕಣ್ಣದರ್ಶನ’ವನ್ನು ಮೊದಲು ಪಡೆಯಬೇಕು.

ಮಹಾಭಾರತ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ: ಐತಿಹಾಸಿಕವಾಗಿ, ಮನಃ ಶಾಸ್ತ್ರೀಯವಾಗಿ ಮತ್ತು ಭಗವತ್‌ಪರವಾಗಿ.

ಈ ಮಾತಿನ ಸುಳಿವನ್ನು ಭಾರತವೇ ನೀಡುತ್ತದೆ

ಮನ್ವಾದಿ ಕೇಚಿದ್ ಬ್ರುವತೇ ಹ್ಯಾಸ್ತೀಕಾದಿ ತಥಾ ಪರೇ
ತಥೋಪರಿಚರಾದ್ಯನ್ಯೇ ಭಾರತಂ ಪರಿಚಕ್ಷತೇ ॥

[ಭಾರತ ಮನನೀಯವಾದ ಜೀವನವೌಲ್ಯವನ್ನು ಹೇಳುವ ಮನಃಶಾಸ್ತ್ರೀಯ (ಮನ್ವಾದಿ) ಗ್ರಂಥ ಎಂದು ಕೆಲವರು ಹೇಳುತ್ತಾರೆ. ಆಸ್ತಿಕರಾದ ಪಾಂಡವರ ಇತಿ ಹಾಸವಿದು (ಆಸ್ತೀಕಾದಿ) ಎಂದು ಕೆಲವರು. ಎಲ್ಲಕ್ಕೂ ಮೇಲಿರುವ ಭಗವಂತನ ಗುಣಗಾನವಿದು (ಉಪರಿಚರಾದಿ) ಎಂದು ಮತ್ತೆ ಕೆಲವರು.]

ಅವರವರ ಅರಿವಿಗೆ ಎಟುಕುವಷ್ಟು ಅವರವರ ಪಾಲಿನ ಭಾರತ. ಎಲ್ಲರೂ ಸರಿ. ಎಲ್ಲವೂ ಭಾರತದ ಅರ್ಥವೆ. ಭಾರತ ಬರಿಯ ಕುರುಪಾಂಡವರ ಇತಿಹಾಸವಲ್ಲ. ಅಧ್ಯಾತ್ಮದ ಇತಿಹಾಸ ಕೂಡ ಅಲ್ಲವೆ?

ಹೊರಗಣ್ಣಿಗೆ ಪಾಂಡವರ ಇತಿಹಾಸ. ಒಳಗಣ್ಣಿಗೆ ಮನುಕುಲದ ಮನೋರಂಗದ ಇತಿಹಾಸ. ತಿಳಿಗಣ್ಣಿಗೆ ಭಗವಂತನ ಗುಣಗಾಥೆಯ ಇತಿಹಾಸ.

ಮೊದಲ ನೋಟಕ್ಕೆ ಇತಿಹಾಸ: Historical interpretation of Mahabharata. ಅದರಾಚೆಗೆ ಮನಃಶಾಸ್ತ್ರ: Psychological interpretation. ಮೂಲತಃ Spiritual intepretation

ಮನಃಶಾಸ್ತ್ರೀಯವಾಗಿ ಭಾರತದ ಸಾರವನ್ನು ಸಾರುವ ಗ್ರಂಥ ಭಗವದ್‌ಗೀತೆ. ನಾದವೆಲ್ಲ ಭಗವನ್ಮಯವಾಗುವ ತತ್ವಶಾಸ್ತ್ರದ ಕೊನೆಯ ಮಜಲಿಗೆ ನಮ್ಮನ್ನೊಯ್ಯುವ ಗ್ರಂಥ ವಿಷ್ಣುಸಹಸ್ರನಾಮ. ಈ ನೆಲೆಯಲ್ಲಿ ಮಹಾಭಾರತದ ೩೨ ಲಕ್ಷ ಅಕ್ಷರಗಳೂ ಭಗವಂತನ ೩೨ ಲಕ್ಷ ನಾಮಗಳು ಹೊರತು ಇನ್ನೇನೂ ಇಲ್ಲ.

ಸದ್ಯಕ್ಕೆ ನಮಗೆ ಪ್ರಸ್ತುತವಾಗಿರುವುದು ಇತಿಹಾಸದಲ್ಲಡಗಿರುವ ಅಧ್ಯಾತ್ಮದ, ಜೀವನ ವೌಲ್ಯದ ಸಂದೇಶ. ಮಹಾಭಾರತದ ‘ಮನ್ವಾದಿ’, ಮನಃಶಾಸ್ತ್ರೀಯ ಅರ್ಥದ ಮುಖ. ಭಗವದ್‌ಗೀತೆ ಇದಕ್ಕೆಂದೆ ಮೀಸಲು.

ಇದು ಮನಃಶಾಸ್ತ್ರವೂ ಹೌದು, ಸಂಖ್ಯಾಶಾಸ್ತ್ರವೂ ಹೌದು. ನ್ಯೂಮರಾಲಜಿಯ ಮೂಲಕ ಫಿಲಾಸಫಿಯತ್ತ ಪಯಣ.

ಮಹಾಭಾರತದ ಸಂಖ್ಯೆ ಏಳು ಮತ್ತು ಹದಿನೆಂಟು. ಏಳು ಪಾತ್ರಗಳ ಮೂಲಕ ೧೮ ವೌಲ್ಯಗಳ ವಿಶ್ಲೇಷಣೆ.

ಯಾವ ಏಳು? ಏನು ಹದಿನೆಂಟು?

ಪಂಚ ಪಾಂಡವರು, ದ್ರೌಪದಿ, ಮತ್ತು ಕಷ್ಣ- ಇವು ಏಳು ಪಾತ್ರಗಳು.

ಈ ಪಾತ್ರಗಳು ಪ್ರತಿನಿಧಿಸುವ ವೌಲ್ಯಗಳು ಹದಿನೆಂಟು-

ಧರ್ಮರಾಜ
ಧರ್ಮ
(೧)
 
 
 
 
 
 
ಭೀಮ
ಭಕ್ತಿ
(೨)
ಜ್ಞಾನ
(೩)
ವೈರಾಗ್ಯ
(೪)
ಪ್ರಜ್ಞಾ
(೫)
ಮೇಧಾ
(೬)
ದೃತಿ
(೭)
ಸ್ಥಿತಿ
(೮)
ಯೋಗ
(೯)
ಪ್ರಾಣ
(೧೦)
ಬಲ
(೧೧)
ಅರ್ಜುನ
ಶ್ರವಣ
(೧೨)
ಮನನ
(೧೩)
ನಿದಿಧ್ಯಾಸನ
(೧೪)
ನಕುಲ
ಶೀಲ
(೧೫)
ಸಹದೇವ
ವಿನಯ
(೧೬)
ದ್ರೌಪದಿ
ವೇದವಿದ್ಯೆ
(೧೭)
ಕಷ್ಣ
ವೇದವೇದ್ಯ
(೧೮)

ಧರ್ಮದ ಪಂಚಾಂಗದ ಮೇಲೆ ಭಕ್ತಿ, ಜ್ಞಾನ ಮುಂತಾದ ಹತ್ತು ಗುಣಗಳನ್ನು ಮೈಗೂಡಿಸಿಕೊಂಡು ಶಾಸ್ತ್ರಾರ್ಥದ ಶ್ರವಣ, ಮನನ, ನಿದಿಧ್ಯಾಸನ ನಡೆಯ ಬೇಕು: ಶ್ರೋತವ್ಯೋ ಮಂತವ್ಯೋ ನಿದಿಧ್ಯಾಸಿತವ್ಯಃ.

ಶಾಸ್ತ್ರಜ್ಞಾನದ ಜತೆಗೆ ಶೀಲ-ವಿನಯಗಳು ನಿತ್ಯ ಸಂಗಾತಿಗಳಾಗಿರಬೇಕು. ಈ ಹದಿನಾರು ವೌಲ್ಯಗಳ ನೆರವಿನಿಂದ ಹದಿನೇಳನೆಯ ವೇದವಿದ್ಯೆಯನ್ನು ಒಲಿಸಿಕೊಂಡು ಹದಿನೆಂಟನೆಯ ವೇದವೇದ್ಯನನ್ನು ಪಡೆಯುವುದೇ ಒಟ್ಟು ಅಧ್ಯಾತ್ಮದ ಇತಿಹಾಸದ ಸಾರಾಂಶ. ಇದೇ  ಭಾರತದ  ಮನೋವೆಜ್ಞಾನಿಕ ಅರ್ಥ. ಇದೇ ಭಗವದ್‌ಗೀತೆಯ ಅರ್ಥ.

ಅದಕ್ಕೆಂದೆ ಮಹಾಭಾರತದಲ್ಲಿ ಹದಿನೆಂಟು ಪರ್ವಗಳು. ಭಗವದ್‌ಗೀತೆಯಲ್ಲಿ  ಹದಿನೆಂಟು ಅಧ್ಯಾಯಗಳು. ಇದೊಂದು ಅಧ್ಯಾತ್ಮದ ಸಂಖ್ಯೆ. ಇದೇ ಗೀತೆಯ ಸಾಂಖ್ಯದ ಗುಟ್ಟು. ಇದೇ ಹದಿನೆಂಟರ ಗುಟ್ಟು.

ಇದು ಒಂದು ಬಗೆಯ ಹದಿನೆಂಟರ ಗಂಟು. ಇದನ್ನು ಇನ್ನೊಂದು ಬಗೆಯಿಂದಲೂ ಗೀತೆ ವಿ ಶ್ಲೇಷಿಸುತ್ತದೆ.

ಹದಿನೈದು ಜಡ ಬೇಲಿಗಳಿಂದ ಸುತ್ತುವರಿದವನು ಹದಿನಾರನೆಯ ಜೀವ. ಹದಿನೇಳನೆಯದು ಪ್ರಕತಿ. ಹದಿನೆಂಟನೆಯವನು ಪುರುಷೋತ್ತಮ.

ಇದನ್ನೆ ಗೀತೆ ಕ್ಷರಪುರುಷ, ಅಕ್ಷರಪುರುಷ ಮತ್ತು ಉತ್ತಮಪುರುಷ ಎಂಬ ತ್ರಿಪುಟಿ ಯಲ್ಲಿ ನಿರೂಪಿಸುತ್ತದೆ.

ಕ್ಷರವಾಗುವ, ನಾಶವಾಗುವ 15 ಜಡ ಬೇಲಿಗಳಿಂದ ಆವೃತವಾದ ಜೀವಜಾತ ಕ್ಷರಪುರುಷ.

ಜೀವಜಾತವನ್ನು ಸಂಸಾರದ ಬೇಲಿಯಲ್ಲಿ ಬಿಗಿದ ಮೂಲಪ್ರಕತಿ ಅಕ್ಷರಪುರುಷ.

ಬೇಲಿಯಿಂದ ಬಿಡುಗಡೆಗೊಳಿಸುವ, ಮೋಕ್ಷಪ್ರದನಾದ ಭಗವಂತ ಉತ್ತಮ ಪುರುಷ; ಪುರುಷೋತ್ತಮ.

ಯಾವುದು ಈ ಜಡ ಬೇಲಿ? ಉಪನಿಷತ್ತು ಇದನ್ನು ವಿವರಿಸುತ್ತದೆ-

ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋ ನ್ನಮನ್ನಾದ್ ವೀರ್ಯಂ ತಪೋ  ಮಂತ್ರಾಃ  ಕರ್ಮ  ಲೋಕಾ  ಲೋಕೇಷು ನಾಮ ಚ

೧. ಶ್ರದ್ಧೆ, ೨. ಆಕಾಶ, ೩. ಗಾಳಿ, ೪. ಬೆಂಕಿ, ೫. ನೀರು, ೬. ನೆಲ, ೭. ಹತ್ತು ಇಂದ್ರಿಯಗಳು, ೮. ಮನಸ್ಸು, ೯. ಅನ್ನ, ೧೦. ವೀರ್ಯ, ೧೧. ಆಲೋಚನೆ, ೧೨. ಮಾತು, ೧೩. ಕೃತಿ, ೧೪. ಸ್ಥಿರ-ಚರ ಸೊತ್ತು ಮತ್ತು ೧೫. ಹೆಸರು. ಇವು ಹದಿ ನೈ ದು ಬೇಲಿಗಳು. ಈ ಬೇಲಿಯ ಬಿಗಿತವೇ ಸಂಸಾರ.

ಇವು ನಾಶವಾಗುವಂಥವು. ಅದರಿಂದ ಕ್ಷರಗಳು

ಈ ಬೇಲಿಯಿಂದ ಪಾರಾಗುವ ಕಥೆಯೇ ಅಧ್ಯಾತ್ಮದ ಇತಿಹಾಸ. ಇದೇ ಭಗವದ್ ಗೀತೆಯ ಸಂದೇಶ.

೧೫ ಜಡಬೇಲಿಗಳಿಂದ, ನಾಮ-ರೂಪಾತ್ಮಕವಾದ ಪ್ರಪಂಚದಿಂದ ಆವೃತನಾದ ಜೀವ, ಅದರ ಆಚೆಗೆ ಬಂಧಕಶಕ್ತಿಯಾದ ಪ್ರಕೃತಿ ಮತ್ತು ಮೋಚಕಶಕ್ತಿಯಾದ ಭಗವಂತ-ಈ ತ್ರಿಪುಟಿಯಲ್ಲಿ ಇಡಿಯ ಅಧ್ಯಾತ್ಮ ಅಡಗಿದೆ.

ಈ ಅಧಾತ್ಮದ ಅಂತರಂಗದ ಸಂದೇಶವನ್ನೆ  ೭೦೦ ಶ್ಲೋಕಗಳಲ್ಲಿ  ಭಗವದ್‌ಗೀತೆ ನಮ್ಮ ಮುಂದೆ ತೆರೆದಿಟ್ಟಿದೆ.

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು