ಸಂಸ್ಕತ-ಸಾಹಿತ್ಯದಲ್ಲಿ ಗೀತೆಗಳು ಹಲವಾರಿವೆ: ಗೋಪೀಗೀತೆ-ಭ್ರಮರಗೀತೆ ಇತ್ಯಾದಿ. ಆದರೆ ಇವಾವುವೂ ಭಗವದ್ಗೀತೆಗಳಲ್ಲ. ಬರಿಯ ಗೀತೆ ಎಂದಾಗ ನಮಗೆ ನೆನಪಾಗುವುದು ಭಗವದ್ಗೀತೆಯೊಂದೆ.

ಭಗವಂತನೆ ಉಪದೇಶಿಸಿದ ಇನ್ನೊಂದು ಗೀತೆ ಭಾಗವತದಲ್ಲಿದೆ. ಅದನ್ನು ಉದ್ಧವ ಗೀತೆ ಎಂದು ಕರೆಯುತ್ತಾರೆ. ಆ ಗೀತೆಯನ್ನು ಉಪದೇಶಿಸಿದ್ದೂ ಭಗವಂತನೆ; ಪ್ರಸಿದ್ಧವಾದ, ಮಹಾಭಾರತದ ಗೀತೆಯನ್ನು ಉಪದೇಶಿಸಿದ್ದ ಭಗವಂತನೆ. ಒಂದು ಉದ್ಧವನಿಗೆ ಉಪದೇಶಿಸಿದ್ದು; ಇನ್ನೊಂದು ಅರ್ಜುನನಿಗೆ.

ಭಗವಂತ ಉದ್ಧವನಿಗೆ ಉಪದೇಶಿಸಿದ ಗೀತೆ ಭಗವದ್ಗೀತೆಯಲ್ಲ; ಉದ್ಧವಗೀತೆ. ಆದರೆ ಭಗವಂತ ಅರ್ಜುನನಿಗೆ ಉಪದೇಶಿಸಿದ ಗೀತೆ ಅರ್ಜುನಗೀತೆಯಲ್ಲ; ಭಗವದ್ಗೀತೆ.

ಉದ್ಧವಗೀತೆ ಕೇಳಿದವನ ಹೆಸರಿನಲ್ಲಿ ಪ್ರಸಿದ್ಧವಾದರೆ, ಭಗವದ್ಗೀತೆ ಹೇಳಿದವನ ಹೆಸರಿನಿಂದಲೆ ಖ್ಯಾತವಾಯಿತು. ಉದ್ಧವಗೀತೆಯನ್ನು ಭಗವಂತನೆ ಹೇಳಿದ್ದರೂ ಉದ್ಧವನಿಗಾಗಿ ಹೇಳಿದ ಗೀತೆ-ಅದರಿಂದ ಉದ್ಧವಗೀತೆ.

ಭಗವದ್ಗೀತೆ ಅರ್ಜುನನಿಗಾಗಿ ಮಾತ್ರವೆ ಹೇಳಿದ್ದಲ್ಲ. ಭಗವಂತ ತನಗಾಗಿಯೆ ಅದನ್ನು ಹೇಳಿದ. ಭಗವಂತನಿಗೆ ಅದನ್ನು ಹೇಳಬೇಕಾಗಿತ್ತು. ತನ್ನ ಈ ಉದ್ದೇಶಕ್ಕಾಗಿ ಅವನು ಅರ್ಜುನನನ್ನು ಮಾಧ್ಯಮವಾಗಿ ಬಳಸಿಕೊಂಡ ಅಷ್ಟೆ. ಅದರಿಂದ ಇದು ಭಗವಂತನೆ ಬಯಸಿ ಹೇಳಿದ ಗೀತೆ; ಭಗವಂತನಿಗೆ ಅತಿ ಪ್ರಿಯವಾದ ಗೀತೆ. ಭಗವಂತನಿಗಾಗಿ, ಭಗವಂತನಿಂದ ರೂಪುಗೊಂಡ ಗೀತೆ. ಭಗವಂತನನ್ನು ಕುರಿತ ಗೀತೆ. ಭಗವಾನ್ ವ್ಯಾಸರಿಂದ ನಿಬದ್ಧವಾದ ಗೀತೆ. ಅದರಿಂದ ಇದು ಪೂರ್ಣ ಅರ್ಥದಲ್ಲಿ ಭಗವದ್ಗೀತೆ. ಎಲ್ಲ ಪುರಾಣಗಳೂ ಭಗವತ್ಪರವಾದರೂ ಭಾಗವತ ವಿಶೇಷತಃ ಆ ಹೆಸರಿಗೆ ಪಾತ್ರವಾದಂತೆ.

ಜಗತ್ತಿನಲ್ಲೆ ಅದ್ವಿತೀಯವಾದ ತತ್ವಗ್ರಂಥ. ಗಾತ್ರದಲ್ಲಿ ತುಂಬ ಕಿರಿದು; ಬರಿಯ ೭೦೦ ಶ್ಲೋಕಗಳು. ಆದರೆ ಗುಣದಲ್ಲಿ ಹಿರಿದಕಿಂತಲೂ ಹಿರಿದು. ತತ್ವಶಾಸ್ತ್ರದಲ್ಲಿ ಇದಕ್ಕೆ ಎಣೆಯಾಗಬಲ್ಲ ಇನ್ನೊಂದು ಗ್ರಂಥ ಈತನಕ ನಿರ್ಮಾಣವಾಗಿಲ್ಲ; ಇನ್ನು ನಿರ್ಮಾಣ ವಾಗುವ ಸಂಭವವಿಲ್ಲ.

ಇಡಿಯ ವೈದಿಕ-ಸಾಹಿತ್ಯದ ಸಾರ ಮಹಾಭಾರತ. ಈ ದೇಶದ ತತ್ವಶಾಸ್ತ್ರ ಗ್ರಂಥ ಗಳಲ್ಲೆ ಸರ್ವೋಕ್ತೃ ಷ್ಟವಾದ ಗ್ರಂಥ. ‘ಅತ್ಯರಿಚ್ಯತ ಭಾರತಮ್’. ಗಾತ್ರದಲ್ಲಾಗಲಿ ಗುಣದಲ್ಲಾಗಲಿ, ಇದಕ್ಕೆ ಸರಿಸಾಟಿಯಾದ ಗ್ರಂಥ ಜಗತ್ತಿನ ಇತಿಹಾಸದಲ್ಲಿ ಇನ್ನೊಂದು ರಚನೆಯಾಗಲಿಲ್ಲ: ‘ಮಹತ್ತ್ವಾದ್ ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ’.

ಇದು ಬರಿಯ ಭರತವಂಶದ ಕಥೆಯಲ್ಲ. ಅರ್ಥದ ಭಾರದಿಂದ ತುಂಬಿದ ಮೇರು ಕೃತಿ. ಅದರ ಅರ್ಥಭಾರಕ್ಕಾಗಿಯೇ ಅದು ಭಾರತ. ಅದರ ಬೃಹದ್‌ಗಾತ್ರಕ್ಕಾ ಗಿಯೇ, ಮಹಾರ್ಥ-ಪ್ರತಿಪಾದನೆಯಿಂದಾಗಿಯೇ ಅದು ‘ಮಹಾಭಾರತ ’.

ಜ್ಞಾನದ ದಾರಿಯಲ್ಲಿ ಸಾಗುವವನಿಗೆ ತಿಳಿಯಬೇಕಾದ್ದು ಏನೆಲ್ಲ ಇದೆಯೊ ಅದೆಲ್ಲ ಇಲ್ಲಿದೆ. ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ: ‘ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್’.

ಇಂಥ ಮಹಾಭಾರತದ ಸಾರವೆ ಭಗವದ್ಗೀತೆ. ಇದು ಮಹಾಭಾರತವೆಂಬ ಪಾರಿಜಾತದ ಮಧುರಸ ಎನ್ನುತ್ತಾರೆ ಆಚಾರ್ಯಮಧ್ವರು: ‘ಮಹಾಭಾರತ-ಪಾರಿಜಾತ-ಮಧುಭೂತಾಂ ಗೀತಾಮ್…

ಮಹಾಭಾರತ ಶಾಸ್ತ್ರಗಳ ಶಾಸ್ತ್ರ; ಕಾವ್ಯಗಳ ಕಾವ್ಯ. ವಿಶ್ವದಲ್ಲೆ ಸಾಟಿಯಿಲ್ಲದ ಮೇರು ಕೃತಿ.

ಪ್ರಾಚೀನ ಪುರಾಣವಚನಗಳು ಗೀತೆಯ ಹಿರಿಮೆಯನ್ನು ತುಂಬ ಕಳಕಳಿಯಿಂದ ಉಗ್ಗಡಿಸಿವೆ

ಭಾರತಂ ಸರ್ವಶಾಸ್ತ್ರೇಷು ಭಾರತೇ ಗೀತಿಕಾ ವರಾ
ವಿಷ್ಣೋಃ ಸಹಸ್ರನಾಮಾಪಿ ಜ್ಞೇಯಂ ಪಾಠ್ಯಂ ಚ ತದ್‌ದ್ವಯಮ್ ॥

[ಎಲ್ಲ ಶಾಸ್ತ್ರಗಳ ಸಾರ ಭಾರತ. ಭಾರತದ ಸಾರ ಗೀತೆ ಮತ್ತು ವಿಷ್ಣುಸಹಸ್ರನಾಮ. ಇವೆರಡನ್ನು ತಿಳಿಯಲು ಪ್ರಯತ್ನಿಸಬೇಕು; ತಿಳಿದು ಪಠಿಸಬೇಕು.]

ಶಾಸ್ತ್ರೇಷು ಭಾರತಂ ಸಾರಸ್ತತ್ರ ನಾಮಸಹಸ್ರಕಮ್
ವೆಷ್ಣವಂ ಕಷ್ಣಗೀತಾ ಚ ತಜ್‌ಜ್ಞಾನಾನ್ಮುಚ್ಯತೇಂಜಸಾ ॥

[ಸರ್ವಶಾಸ್ತ್ರಗಳ ಸಾರವಾದ ಭಾರತದ ಸಾರ-ವಿಷ್ಣುಸಹಸ್ರನಾಮ ಮತ್ತು ಕಷ್ಣನ ಗೀತೆ. ಅದನ್ನು ತಿಳಿದವನಿಗೆ ಮೋಕ್ಷದ ದಾರಿ ತೆರೆದಿದೆ.]

ತ್ರಯೋರ್ಥಾಃ ಸರ್ವವೇದೇಷು ದಶಾರ್ಥಾಃ ಸರ್ವಭಾರತೇ
ವಿಷ್ಣೋಃ ಸಹಸ್ರನಾಮಾಪಿ ನಿರಂತರಶತಾರ್ಥಕಮ್ ॥

[ವೇದಗಳಿಗೆ ಮೂರು ಬಗೆಯ ಅರ್ಥ. ಭಾರತಕ್ಕೆ ಹತ್ತು ಬಗೆಯ ಅರ್ಥಗಳು. ವಿಷ್ಣುಸಹಸ್ರನಾಮದ ಒಂದೊಂದು ನಾಮಕ್ಕೆ ಎಡೆಬಿಡದೆ ನೂರು ಬಗೆಯ ಅರ್ಥಗಳು.]

ಏವಮಧ್ಯಾತ್ಮನಿಷ್ಠಂ ಹಿ ಸರ್ವಂ ಭಾರತಮುಚ್ಯತೇ

[ಭಾರತವೆಂದರೆ ಕುರುವಂಶದ ರಾಜರ ಅಂತಃಕಲಹದ ದುರಂತವನ್ನು ಚಿತ್ರಿಸುವುದಕ್ಕಾಗಿ ರಚನೆಗೊಂಡ ಬರಿಯ ಐತಿಹಾಸಿಕ ಗ್ರಂಥವಲ್ಲ. ಇಡಿ ಭಾರತವೂ ಅಧ್ಯಾತ್ಮದ ಅಂತರಂಗದ ಅರ್ಥವನ್ನು ಒಳಗೊಂಡು ನಿರ್ಮಾಣವಾಗಿದೆ.]

ಮಹಾಭಾರತದಲ್ಲಿ ಇನ್ನೊಂದು ಗೀತೆಯಿದೆ: ಅನುಗೀತೆ.

ಅದು ಈ ಗೀತೆಯದೆ ಅನುಬಂಧ. ಈ ಗೀತೆಯದೆ ಪರಿಶಿಷ್ಟ. ಯುದ್ಧದ ಗೊಂದಲದ ನಡುವೆ ಕೇಳಿದ ಸಂಗತಿಯನ್ನೆ ಮತ್ತೊಮ್ಮೆ ಹಾಯಾಗಿ ಕಷ್ಣನಿಂದ ಕೇಳಿದ ಬಗೆ. ಹಾಗಾಗಿ ಅದು ಭಗವಂತನೆ ಅರ್ಜುನನಿಗಾಗಿ ಹೇಳಿದ ಗೀತೆಯಾದರೂ ಭಗವದ್‌ಗೀತೆ ಅಲ್ಲ. ಬರಿಯ ಅನುಗೀತೆ.

ಹೀಗೆ ಪ್ರಾಚೀನರು ಮಹಾಭಾರತವನ್ನು ಮತ್ತು ೧೮ ಪರ್ವಗಳ ಮಹಾಭಾರತದ ಸಾರಭೂತವಾದ ೧೮ ಅಧ್ಯಾಯಗಳ ಭಗವದ್ಗೀತೆಯನ್ನು ಅಧ್ಯಾತ್ಮಸಾಹಿತ್ಯದ ಉತ್ತುಂಗ ಶಿಖರದಲ್ಲಿಟ್ಟು ಗೌರವಿಸಿದ್ದಾರೆ. ಭಗವದ್ಗೀತೆಯ ಪ್ರಾಮಾಣಿಕ ಅಧ್ಯಯನದಿಂದ ಈ ಮಾತಿನ ಯಥಾರ್ಥತೆ ಅರಿವಾಗದಿರದು.

ಅಧ್ಯಾತ್ಮದ ದಾರಿಯಲ್ಲಿ ನಮ್ಮ ಮುಂದೆ ೧೮ ವೌಲ್ಯಗಳನ್ನಿಟ್ಟು ದಾರಿ ತೋರುವ ಈ ಗ್ರಂಥ ತನ್ನ ಸಂಖ್ಯೆಯ ಮೂಲಕವೆ ಮೊದಲು ನಮ್ಮನ್ನು ಮುನ್ನಡೆಸುತ್ತದೆ. ಈ ೧೮ರ ವಿವರಣೆಯೆ ೧೮ ಪರ್ವಗಳಲ್ಲಿ  ಹರವಿ ನಿಂತ ಒಂದು ಲಕ್ಷ ಶ್ಲೋಕಗಳ ಮಹಾ ಭಾರತ; ೧೮ ಅಧ್ಯಾಯಗಳಲ್ಲಿ ಹರವಿ ನಿಂತ ೭೦೦ ಶ್ಲೋಕಗಳ ಭಗವದ್ಗೀತೆ.

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಪರಮ್ ॥

[ಉಪನಿಷತ್ತುಗಳೆ ಗೋವುಗಳು. ಭಗವಾನ್ ಶ್ರೀಕಷ್ಣನೇ ಹಾಲು ಕರೆಯುವ ಗೋವಳ. ಅರ್ಜುನನೆ ಕರು. ಸಜ್ಜನರೆಲ್ಲ ಈ ಹಾಲಿನ ಪಾಲುದಾರರು. ಕೃಷ್ಣ ಕರೆದ ಸವಿ ಹಾಲೇ ಭಗವದ್ಗೀತೆ.]

ಈ ಗೀತಾಮೃತವನ್ನು ಸವಿಯಲು ಯಥಾಶಕ್ತಿ, ಯಥಾವಕಾಶ ನಾವೂ ಪ್ರಯತ್ನಿಸೋಣ.

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು