ಈ ಜ್ಞಾನಮಲಿನ ಕಲಿಯುಗದಲ್ಲಿ ಯಾವ ವೇದಭಾಗಕ್ಕಾದರೂ ಸರಿಯಾದ ಅರ್ಥ ಹೇಳಬಲ್ಲ ಸಮರ್ಥ ವ್ಯಕ್ತಿ ಯಾರೊಬ್ಬರಾದರೂ ನಮಗೆ ಕಾಣ ಸಿಗುತ್ತಾರೆಂದಾದರೆ ಅದು ಡಾ|| ಬನ್ನಂಜೆ ಗೋವಿಂದಾಚಾರ್ಯರು ಮಾತ್ರ.

ಡಾ|| ಬನ್ನಂಜೆ ಗೋವಿಂದಾಚಾರ್ಯರು ಅಂತಾರಾಷ್ಟ್ರೀಯವಾಗಿ ಒಬ್ಬ ತತ್ವಜ್ಞಾನಿ, ತತ್ವಸಂಶೋಧಕ ಮತ್ತು ವೇದವಿದ್ವಾಂಸ ಎಂದೆಲ್ಲ ಪ್ರಸಿದ್ಧರಾಗಿದ್ದಾರೆ; ವಿಶೇಷವಾಗಿ ಆಚಾರ್ಯಮಧ್ವರ ’ತತ್ವವಾದ’ದ ಹಿರಿಯ ವಿದ್ವಾಂಸ ಎಂದು.

ತತ್ವವಾದಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಂಡು ಅದರ ಪ್ರಚಾರದಲ್ಲಿ ತೊಡಗಿದ್ದರೂ, ಭಾರತದ ಇತರ ಸಿದ್ಧಾಂತಗಳ ಆಳವಾದ ಅಧ್ಯಯನ ಇವರಿಗಿದೆ. ಮುಕ್ತಮನಸ್ಕರಾಗಿ ಈ ಎಲ್ಲ ಸಿದ್ಧಾಂತಗಳ ತೌಲನಾತ್ಮಕ ಅಧ್ಯಯನ ಮಾಡಿದ್ದರಿಂದಾಗಿಯೇ ಇವರು ಮಧ್ವಸಿದ್ಧಾಂತವನ್ನು ಗಟ್ಟಿಯಾಗಿ ಹಿಡಿಯುವಂತಾಯಿತು. ಅದಕ್ಕೇ ಅವರು ಆಗಾಗ್ಗೆ ಹೇಳುವುದುಂಟು…”I’m more Maadhva than the most Maadhvas” ಎಂದು.

ಡಾ|| ಬನ್ನಂಜೆ ಗೋವಿಂದಾಚಾರ್ಯರು ಬಹಳ ಮಂದಿ ಅಧ್ಯಾತ್ಮ ಸಾಧಕರಿಗೆ, ಭಾರತೀಯ ತತ್ವಶಾಸ್ತ್ರಗಳ, ಸಂಸ್ಕೃತಿಯ ಅಧ್ಯಯನದಲ್ಲಿ ತೊಡಗಿದವವರಿಗೆ ದಾರಿ ದೀಪವಾಗಿದ್ದಾರೆ. ಬರಿಯ ಅಧ್ಯಾತ್ಮಕ್ಷೇತ್ರದಲ್ಲಷ್ಟೆ ಅಲ್ಲ ಸಂಸ್ಕೃತ ಮತ್ತು ಕನ್ನಡ ಸಾಹಿತಿಕ ಕ್ಷೇತ್ರಕ್ಕೂ ಇವರ ಕೊಡುಗೆ ಅನನ್ಯವಾದ್ದು. ಇವರಿಗೆ ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳಲ್ಲೂ ಪ್ರಭುತ್ವವಿದೆ.

ಆಚಾರ್ಯಮಧ್ವರು ನಮಗೆ ಕೊಟ್ಟು ಹೋದ ಜ್ಞಾನ ಮತ್ತು ಕೃತಿಗಳು ಕಳೆದ ೬೫೦ ವರ್ಷಗಳಲ್ಲಿ ಕೆಟ್ಟ ವ್ಯಾಖ್ಯಾನಗಳಿಂದ, ಅವಿತ್ಪನ್ನರಿಂದ ಕಲುಷಿತವಾಗಿದೆ. ಅದನ್ನು ಸಂಪೂರ್ಣವಾಗಿ ತೊಳೆದು ಶುದ್ಧವಾದದ್ದನ್ನು ಕೊಡುವುದೆ ಅವರ ಬದುಕಿನ ಮೂಲ ಉದ್ದೇಶವಾಗಿದೆ.

ಅಂಥ ಡಾ|| ಬನ್ನಂಜೆ ಗೋವಿಂದಾಚಾರ್ಯರ ಬದುಕು ಮತು ಬರೆಹಗಳ ಪರಿಚಯಕ್ಕೋಸ್ಕರ ಈ ವೆಬ್ ಸೈಟ್ ಮೀಸಲಾಗಿದೆ. ಇದು ಬರಿಯ ಪ್ರಾರಂಭ ಮಾತ್ರ. ತುಂಬ ಕನಸುಗಳನ್ನು ಹೊತ್ತು ಮುನ್ನಡೆಯುತ್ತಿದ್ದೇವೆ. ಆಸಕ್ತರಿಗೆ ಕ್ರಮೇಣ ಅವರ ಎಲ್ಲ ಕೃತಿಗಳನ್ನು ಈ ಮುಖಾಂತರ ಪರಿಚಯಿಸುವ ಪ್ರಯತ್ನದಲ್ಲಿದ್ದೇವೆ. ಕಾದು ವೀಕ್ಷಿಸಿ!

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು