ಡಾ. | ಬನ್ನಂಜೆ : ಬದುಕು 

“ಹುಟ್ಟು ಋಷಿಯಲ್ಲದವನ ಕಬ್ಬ ಹಬ್ಬವೇ ಜಗಕೆ ?” :-

ಬನ್ನಂಜೆಯವರ ಮಾತು ಮುತ್ತಿನ ಹಾರದಂತೆ . ಸ್ಪಷ್ಟ, ಸ್ವಚ್ಛ, ನಿಖರ ಮತ್ತು ಪ್ರಖರ . ಬನ್ನಂಜೆಯವರ ಬರೆಹವೂ ಅಂತೆಯೇ. ಹೆಚ್ಚೂ ಆಗದು, ಕಡಿಮೆಯೂ ಬೀಳದು . ಒಪ್ಪ ಓರಣ, ಜೊತೆಗೆ ಸ್ವಾದಿಷ್ಠ ಹೂರಣ. ಮತ್ತೆ ಮತ್ತೆ ಓದಿಸುವ ಸೊಗಡು ಅವರ ಬರೆಹಗಳಲ್ಲಿದೆ. ಅವರ ಮಾತು-ಬರೆಹ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಸಿರಿತನವನ್ನು ಹೆಚ್ಚಿಸಿತು. ಬನ್ನಂಜೆ ಎಂಬ ಪದ ಹಲವು ಮೊದಲುಗಳ ಹರಿಕಾರ. ಹಲವು ವಿಷಯಗಳ ಸಾಕಾರ .

“ಬನ್ನಂಜೆ” ಸಂಸ್ಕೃತ – ಸಂಸ್ಕೃತಿ-ಸಂಸ್ಕಾರ ಪರಂಪರೆಗಳ ಕೊಂಡಿ. ಹಳೆಯದರಲ್ಲೆ  ಹೊಸವನ್ನು ಹೊಸೆದ ಕನ್ನಡದ ಕನ್ನಡಿಯ ಕಿಂಡಿ. ಗಣಿತ ಮನಶ್ಶಾಸ್ತ್ರಗಳೆಂಬ  ಗಾಲಿಗಳ ಹೊತ್ತ ವೇದಾಂತದ ಬಂಡಿ. ಭಾವ-ತರ್ಕಗಳಿಂದ  ಹದವಾಗಿ ತೂಗುವ ತತ್ವಗಳ ಮಂಡಿಗೆಯ ಮಂಡಿ. ಸತ್ಯ – ನಿರ್ಭಯತೆ – ನಿಷ್ಠೆಗಳ ದಾರಿಯಲ್ಲೇ ಸಾಗಿ, ಗಿಮಿಕ್ಕುಗಳಿಲ್ಲದೆಯೆ ಜಗದ ಮೂಲೆ ಮೂಲೆಯ ಸಾತ್ವಿಕವಲಯವನ್ನು ಸೆಳೆದುಕೊಂಡವರಾಗಿ, ಔಪನಿಷದ ಕಬ್ಬಿಗರಾಗಿ, ಗುಣಗಳ ಕಂಡೊಡನೆ ಬೆಣ್ಣೆಯಂತೆ ಕರಗಿ, ಸಮಸ್ಯೆಗಳೆಂಬ ಮೇವನ್ನು ಮಧ್ವರಿಗೇ ಒಪ್ಪಿಸಿ, ಉತ್ತರವೆಂಬ ಹಾಲುಗರೆದ ಭಗವದ್ ‘ರಾಗಿ’.

 “ಅತ್ಯಶಕ್ಯೇತು ನಿದ್ರಾದೌ ಪುನರೇವ ಸಮಭ್ಯಸೇತ್” 

ನಿದ್ದೆಗಾಗಿ ಕಾಲವನ್ನು ಮೀಸಲಿಡದೆ, ಹಗಲೆನ್ನದೆ ಇರುಳೆನ್ನದೆ ಓದಿ,  ದಣಿದಾಗಲೇ ನಿದ್ದೆಗೆ  ಜಾರಿದವರಾಗಿ, ಲೋಕಚಿಂತೆಗಳಲ್ಲಿ ಮುಳುಗಿದವರ ನಡುವೆ ಮಲಗಿ, ಲೋಕಾತೀತನ ಚಿಂತನೆಯಲ್ಲಿ ಎಚ್ಚರಿದ್ದು ಎಬ್ಬಿಸುವ ಬೈರಾಗಿ.  ಕಿರೀಟ – ತುರಾಯಿಗಳ ಕತ್ತಲೆಗೆ ಬೆನ್ನು ಹಾಕಿ, ಬಂದದ್ದನ್ನು ಬಂದಂತೆ ಪ್ರೀತಿಸುವ ವಿರಾಗಿ. ನೊಂದವರ ಗೊಂದಲಗಳ ನೋವುಗಳ ನೀಗುವ ಯೋಗಿ . ನಡೆದಾಡುವ ವಿಶ್ವಕೋಶವಾಗಿ , ವಿಶ್ವವಿದ್ಯಾಲಯಗಳೂ ನಾಚುವಷ್ಟು ಕೊಡುಗೆಗಳ ನೀಡಿದವರಾಗಿ, ಕರೆದಲ್ಲಿಗೆ ಓಡಾಡಿ ತಲೆಯ ಹಸಿವ ಹಿಂಗಿಸುವ ಜೋಳಿಗೆ ಇಲ್ಲದ ಜೋಗಿ .

“ಬನ್ನಂಜೆ ಬಾಲ್ಯ” ;

ಬನ್ನಗಳಿಗೆ ಅಂಜದ ಬೆಳದಿಂಗಳು ಉದಿಸಿದ್ದು ೧೯೩೬ ಆಗಸ್ಟ್ ೩ ರಂದು. ದಿನವೂ ಉಡುಪಿ ಕೃಷ್ಣನ ನೋಟಕ್ಕಾಗಿ ಮೈಸೂರು ಆಸ್ಥಾನದ “ರಾಜಗುರು” ಎಂಬ ಗೌರವವನ್ನು  ಒಲ್ಲದ ಪಡುಮುನ್ನೂರು ನಾರಾಯಣಾಚಾರ್ಯರು  ಇವರ ತಂದೆ. ಇವರಿಂದ ನ್ಯಾಯ ವೇದಾಂತ ಅಲಂಕಾರಗಳ ರುಚಿಕಟ್ಟಾದ ಪಾಠವನ್ನು ಕೇಳಿದವರೇ ಭಾಗ್ಯಶಾಲಿಗಳು. ಮದುವೆಯಾದ ಬಳಿಕ ಓದಿಗಾಗಿ ಎಲ್ಲೋ ಕಳೆದುಹೋದ ಮದುಮಗನನ್ನು ಹದಿನಾಕು ವರುಷಗಳ ಕಾಲ ಶಬರಿಯಂತೆ ಕಾದ ತರುಣಿ  ಸತ್ಯಭಾಮಾ ಇವರ ತಾಯಿ. ಇವರೀರ್ವರ ದಾಂಪತ್ಯದ ಫಲವಾಗಿ ಹುಟ್ಟಿದ್ದು ಎಂಟು ಮಕ್ಕಳು. ಆದರೆ ಉಳಿದವರು ಇಬ್ಬರು. ಮೊದಲ ಮಗು ರಾಮ. ಕೊನೆಯ ಕೂಸು ಗೋವಿಂದ.  ೨೦ ವರ್ಷಗಳ ಅಂತರ. ರಾಮಲಕ್ಷ್ಮಣರಂತೆ ಅನ್ಯೋನ್ಯತೆ ಅವರ ದೊಡ್ಡ ಸಂಪತ್ತು.

“ಬಾಲ ಮುಕುಂದ” ನ ದರ್ಶನ

ಆಗ ಬಾಲ ಗೋವಿಂದರ ವಯಸ್ಸು ಮೂರು . ಒಂದು ದಿನ ಬೆಳಗಿನ ಜಾವ ಹಾಲು ನಿದ್ದೆ. ತಾಯ ಮಡಿಲಲ್ಲಿ ಮಲಗಿದ. ತಾಯಿ ಹಾಡುತಿದ್ದ ಹಾಡನ್ನು ಕಣ್ಮುಚ್ಚಿ ಸವಿಯುತ್ತ: ‘ ಶ್ರೀ ಹರಿ ಧ್ಯನದೊಳಿದ್ದೆ ನಾನು, ಯಾತಕೆ ಎಬ್ಬಿಸಿದೆ’. ಪಡಸಾಲೆಯ ನಡುವಿನ ಆಗಸವನ್ನು ದಿಟ್ಟಿಸಿ ನೋಡುತ್ತಿತು ಮಗು. ಆಸರೆ ಇಲ್ಲದೆ ಬೆಳಕಿನ ಪರದೆ ಮೂಡಿತ್ತು. ನಸುನಗೆಯ ಮುಕುಂದ ಹೂ ಹಿಡಿದು ನಿಂತಿದ್ದ. ತೊಡೆಯಲಿದ್ದ ಹುಡುಗ ಚಕಿತನಾಗಿ. ಬಿಟ್ಟ ಕಂಗಳ ಮಿಟುಕಿಸದೆ, ಕೈದೋರಿ ನುಡಿದ –

“ಅಮ್ಮಾ ! ಅಲ್ಲಿ ನೋಡು…”  ತಾಯಿಗೆ ಏನು ಕಾಣಿಸಲಿಲ್ಲ “ಏನು ಮಗು ! ಏನಿದೆ ಅಲ್ಲಿ  … “ ಎಂದಳು ಮುಗ್ಧೆ ಮಾತೆ.

ಕಾಣದ ಕಂಗಳಿಗೆ ವಿವರಿಸಿದರೆ ತಿಳಿಯದೆಂದು ಮಗು ಸುಮ್ಮನಾಯಿತು. ಅಚ್ಚಳಿಯದೆ ಹುದುಗಿದ್ದನ್ನು ನೆನೆದು ಆ ಮಗು ಇಂದೂ ಕಣ್ಣೀರು ಸುರಿಸುತ್ತದೆ .

ಸೋತು ಗೆದ್ದ”

ಆದಿ -ಉಡುಪಿಯ ಶಾಲೆಯಲ್ಲಿ ಹೊರಗಿನ ಓದು ಮೊದಲಾಯ್ತು. ನಾಕನೆಯ ವಯಸ್ಸಿಗೆ ವಿಷ್ಣು ಸಹಸ್ರನಾಮವನ್ನು ಸ್ವಚ್ಛವಾಗಿ ನುಡಿಯುವಂತೆ ಮಾಡಿದ್ದು ದೊಡ್ಡಪ್ಪ ಶ್ರೀನಿವಾಸ ಆಚಾರ್ಯರು, ಎಳೆಯದರಲ್ಲೇ “ತತ್ವ ಬೀಜ” ಸಂಸ್ಕಾರಗೊಂಡಿತು. ಶಾಲೆಯಲ್ಲಿ ಮೊದಲು ಸೇರಿದ್ದೇ ನಾಕನೆಯ ಇಯತ್ತೆಗೆ . ಅಲ್ಲಿಂದ ೬ನೆಯ ಇಯತ್ತೆಗೆ ನೆಗೆತ .

ಆರನೆಯ ತರಗತಿ ಮುಗಿಯಿತು. ಸಂಸ್ಕೃತದಲ್ಲೇ ಮುಳುಗುವ ಬಯಕೆಯಾಯಿತು. ಕೊಡಂಗಳ ಅನಂತರಾಮ ಉಪಾಧ್ಯಾಯರಲ್ಲಿ “ರಾಮೋದಂತ ಪಾಠ “ ಹುಟ್ಟುಕವಿಯ ತಳಹದಿಯಂತಾಯ್ತು. ಪಾಠದ ಜತೆಗೇ ರಾಮೋದಂತಕ್ಕೆ ಒಂದು ಸಂಸ್ಕೃತ ವ್ಯಾಖ್ಯಾನವನ್ನೂ ಬರೆದಿದ್ದರು ಬನ್ನಂಜೆ. ಇಸ್ಕಾನಿನ ರುವಾರಿಗಳಾಗಿದ್ದ ಶ್ರೀ ಅಭಯಚರಣದಾಸ ಪ್ರಭುಪಾದರಿಗೆ ಪಾಠ ಹೇಳಿದ ಶ್ರೀ ವಿಠ್ಠಲಾಚಾರ್ಯರೇ ಆರಂಭಿಕ ಶಾಸ್ತ್ರಭಾಗಗಳ ಗುರುಗಳಾದರು.  ವೈದಿಕ ಪರಿಸರದಲ್ಲಿ ನ್ಯಾಯಶಾಸ್ತ್ರಕ್ಕಿದ್ದ ಬೆಲೆ ಹುಡುಗನನ್ನು ಅತ್ತ ಸೆಳೆಯಿತು. ಸ್ವತಃ ತಂದೆ “ತರ್ಕಕೇಸರಿ” ಬಿರುದಾಂಕಿತರು. ಉಡುಪಿ ಅಷ್ಟಮಠದ ಹಲವು ಶ್ರೀಪಾದರಿಗೆ ಪಾಠ ಮಾಡುತ್ತಿದ್ದ ಅವರಿಗೆ ಎಲ್ಲಿಲ್ಲದ ಮನ್ನಣೆ. ಎಲ್ಲರನ್ನು ಎದ್ದು ನಿಲ್ಲಿಸುವ ತರ್ಕದ ಬಲ ತನಗೂ ಬೇಕೆಂದು ಬಾಲಕನಿಗೆ ಅನ್ನಿಸಿತು. ತರ್ಕ ಕಲಿಕೆಗಾಗಿ ಪ್ರವೇಶ ಪರೀಕ್ಷೆಗೆ ಕುಳಿತ. ತೇರ್ಗಡೆಯಾದರೂ ಕಾಲೇಜಿನ ಪ್ರವೇಶಕ್ಕೆ ಬೇಕಾದ ೪೦ ಅಂಕಗಳು ಸಿಗಲಿಲ್ಲ. ಮರಳಿ ಮಾಡಿದ ಪ್ರಯತ್ನವೂ ಫಲ ನೀಡಲಿಲ್ಲ. ಇವನ ಟಿಪ್ಪಣಿ ಓದಿದ್ದ ಸಹಪಾಠಿಗಳೆಲ್ಲ ಕಾಲೇಜಿಗೆ ಸೇರ್ಪಡೆಗೊಂಡರು.

“ನಾಲ್ಕರಲ್ಲಿ ಎರಡನ್ನು ಆರಿಸಿ ಬರೆಯಿರಿ; ಪುಟ ಮೀರದಂತೆ ಉತ್ತರಿಸಿ; ಮೂರು ಘಂಟೆ ಮಾತ್ರ ಸಮಯಾವಕಾಶಗಳೆಂಬ ಬೇಲಿಗಳಿಗೆ ಒಗ್ಗದ ಈ ಹುಡುಗನಿಗೆ ಇದು ಆತ್ಮ ವಿಸ್ತರಕ್ಕೆ ತೊಡಕೆನಿಸಿತು. ಹಿಂಗೈ ಮುಗಿದು ಹೊರಟವರು ಮತ್ತೆ ಪಾಠಶಾಲೆಯ ಮುಖ ನೋಡಲಿಲ್ಲ. ಇನ್ನು ಪಾಠಶಾಲೆಯ ಮೆಟ್ಟಿಲು ಹತ್ತುವುದಿದ್ದರೆ, ಪಾಠ ಹೇಳುವವರಿಗೆ ಹೇಳಲು ಮಾತ್ರ ಎಂಬ ಗಟ್ಟಿ ತೀರ್ಮಾನ ಮಡುಗಟ್ಟಿತು. ಹುಡುಗನಲಿದ್ದ ಓದಿನ ಹಸಿವಿಗೆ ಕೈಸಿಕ್ಕ ಹೊತ್ತಗೆಗಳೆಲ್ಲ ಬಲಿಯಾಗ ಬಯಸಿದವು. ಹೊತ್ತು ನಿಂತಿತು ನಿದ್ದೆ ಸೋತಿತು. ಹೊಟ್ಟೆ ಬೆನ್ನಿಗಂಟಿತು. ಗೋಮೇಧ ಸಾಂಗವಾಗಿ ಮುಂದುವರೆಯಿತು. ಓದಿಗಾಗಿನ ಓದಿಗೆ ಮಾತ್ರ ಈ ಬಗೆಯ ಗೆಲುವು ಸಾಧ್ಯ. ಓದುತ್ತಾ “ನಿರುದ್ಯೋಗಿ”ಯಾಗಿ ಬದುಕುವ ಆಸೆ ಮೊಳೆಯಿತು. ಇಂಥಾ ಕೋರಿಕೆಗೆ ಬೆರಗಾಗಿ ಅಸ್ತು ದೇವತೆಗಳು ನೀರೆರೆದು ಬೆಳೆಸಿದರು.

 ವೇಷ ಕಳಚಿತು “

ಸಂಪ್ರದಾಯದ ಆವೇಶ ಕಳಚುವ ಛಲ ಮೊಳೆತದ್ದು ಹದಿಮೂರರಲ್ಲಿ. ತಿಳಿದು ಮಾಡುವ ಜಾಣತನದ ದೀಕ್ಷೆ ತೊಟ್ಟಿತು. ಪ್ರಶ್ನೆಗಳು ತೂರಿಬಂದವು. ತಿಳಿದುಕೊಂಡವರು ಎಂದುಕೊಂಡವರು ಜಾರಿಕೊಂಡರು.  ಕೆಲವರು ಕೊಟ್ಟ ಉತ್ತರ ಸೋರಿಹೋಯಿತು. ತಂದೆಯೆ  ಇವನ ತಿಳಿವಿನ ತುಡಿತಕ್ಕೆ ಬೆರಗಾದರು. ತನ್ನನ್ನೇ ಕಾಡಬಂದ ಹುಡುಗನಿಗೆ ಬದುಕಿನ ತಿರುವು ನೀಡುವ ಮೂಲಮಂತ್ರವನ್ನು ಕೊಟ್ಟರು. “ಪ್ರಶ್ನೆ ಮೂಡಿದಲ್ಲೇ ಉತ್ತರವಿದೆ, ಹುಡುಕು” … ‘ಹಿಂದಿನದನ್ನು ಪ್ರಶ್ನಿಸುವುದು ಎಂದರೇನು ‘ ಎಂಬುದಕ್ಕೆ ಹುಡುಗನ ಉತ್ತರ  “ಏನು ಎಂದರೆ ಏನು ? ಪ್ರಶ್ನೆ ಮಾಡಿದ್ದೇ ತಪ್ಪೇ ?”  ಯುವಕ ಒಳಮುಖಿಯಾದ….

ತಪಸ್ಸು”

ಪಂಚಾಗ್ನಿ ವಿದ್ಯೆಯಂತೆ ಸುತ್ತಲೂ ಪುಸ್ತಕ ಹರಡಿಕೊಂಡು ಒಳಗಣ್ಣು ತೆರೆದು ತಪಗೈದು, ಶಂಕರ-ರಾಮಾನುಜ -ಮಧ್ವ -ಜೈನ-ಬೌದ್ಧ -ಜೀಸಸ್-ಪೈಗಂಬರ್ ಮೊದಲಾದ ದಾರ್ಶನಿಕರ ಮಾತುಗಳಿಗೆ ಕಿವಿಯಾದ. ಸಾಯಣ -ವೆಂಕಟಮಾಧವ -ಷಡ್ ಗುರುಶಿಷ್ಯ-ಉವಟ -ಯಾಸ್ಕ ಮೊದಲಾದ, ವೇದ-ವೇದಾಂಗ ವಿದ್ವಾಂಸರ ವಿವರಣೆಗಳ ಮೇಲೆ ಕಣ್ಣಾಡಿಸಿದ.  ಜಾನ್ ವುಡ್ರೋಫ್ – ರೇಮಂಡ್ ಮೂಡಿ – ಮ್ಯಾಕ್ಸ್ ಮುಲ್ಲರ್ – ಫ್ರಿಡ್ಜಾಫ್ ಕಾಪ್ರ -ಅಲೆಕ್ಸಿಸ್ ಕಾರೆಲ್ -ವೆಲಿಕೋವ್ ಸ್ಕಿ ಮೊದಲಾದ ವಿದೇಶೀಯರ ವಿದ್ವತ್ತೆಯನ್ನೂ ಸಾಣೆ ಹಿಡಿದ. ಕಾಣಾದ -ಪಾಣಿನೀಯ -ಗದಾಧರ -ಜಗದೀಶರ ನ್ಯಾಯಶಾಸ್ತ್ರದ ಎಲ್ಲೆಯ ಮಿತಿ ಹುಡುಕಿದ . ಕಾವ್ಯ- ನಾಟಕ ಹರವುಗಳಲ್ಲಿ ಹರಿದಾಡಿದ. ಋಷಿಗಳ – ವಿಜ್ಞಾನಿಗಳ ಚಿಂತನೆಗಳಲ್ಲಿ ಇಳಿದು ಆಳ ಅಳೆದ. ಮೂರು ನಾಲ್ಕು ಜನರನ್ನೊಳಗೊಂಡ ಗೆಳೆಯರ ಗುಂಪು ಚಿಂತಕರ ಚಾವಡಿಯಾಗಿ ರೂಪುಗೊಂಡಿತ್ತು. ನೋವು -ನಲಿವು -ಕೋಪ -ಹಾಸ್ಯ ಎಲ್ಲವೂ ಸಂಸ್ಕೃತಮಯ. ತುಂಡು ಮೇಜಿನ ಪರಿಷತ್ತಿನಲ್ಲಿ ವಿಮರ್ಶೆ -ಚರ್ಚೆ -ಹಾಸ್ಯ ಚಟಾಕಿಗಳು, ಕವನ ಗೋಷ್ಠಿಗಳು ನಡೆಯುತ್ತಲೇ ಇದ್ದವು. ಭಾಷೆ ಬರದವರಿಗೂ ಈ ವೃಂದದಿಂದ ಮೋಜು ಸಿಗುತ್ತಿತ್ತು.

ಹಿರಿಯರ ಬೆಂಬಲ″

ಮನೆಗೆ ಮಗನ ಬಗ್ಗೆ ದೂರು ಬರತೊಡಗಿದ್ದವು. ಮಾಣಿ ನಾಸ್ತಿಕನಾಗುತ್ತಿದ್ದಾನೆ.  ಹಾದಿ ತಪ್ಪುತ್ತಿದ್ದಾನೆ, ಸಿನೇಮಾದ ಗೀಳು ಹಿಡಿದಿದೆ. ತಿಂಡಿ – ತೀರ್ಥಗಳ ಖಯಾಲಿ ಬೆಳೆದಿದೆ. ಸಂಪ್ರದಾಯಗಳನ್ನೇ ಪ್ರಶ್ನಿಸುತ್ತಿದ್ದಾನೆ. ಹೀಗೆ ನೂರಾರು ಅಪವಾದಗಳ ಗೋಪುರ ಮನೆಯಂಗಳದಲ್ಲಿ ಮುಗಿಲು ಮುಟ್ಟಿತ್ತು. ತಾಯಿ, ತಂದೆಯಲ್ಲಿ ಈ ಅಪವಾದಗಳನ್ನ ಪ್ರಸ್ತಾಪಿಸಿದರೆ – “ಹುಡುಗ ಬೆಳೆಯುತ್ತಿದ್ದಾನೆ, ಬೆಳೆಯಗೊಡು ಏನೂ ಆಗದು” ಎನ್ನುತ್ತಿದ್ದರು ತಂದೆ …. ಅಣ್ಣ ರಾಮ, ತಮ್ಮನನ್ನು ಬರೆಯಲು ಪ್ರೇರೇಪಿಸಿದ , ಮಾತುಗಳಿಗೆ ವೇದಿಕೆಯಾದ …

ಮುಂದೆ ಮಾಗಲು ಸಿದ್ಧವಾಗಿದ್ದ ಹಣ್ಣಿಗೆ ಶಾಖವಾದವರು ಪಲಿಮಾರು ಶ್ರೀಪಾದರಾದ ಶ್ರೀ ವಿದ್ಯಾಮಾನ್ಯತೀರ್ಥರು. ತಾತ್ಪರ್ಯ ಚಂದ್ರಿಕೆಯಂಥ ಪ್ರಬುದ್ಧಗ್ರಂಥಗಳನ್ನು ಗುರುಗಳ ಮುಂದೆ ತಾವೇ ಅನುವಾದಿಸಿ ಸೈ ಎನಿಸಿಕೊಂಡರು. ತಾನು ಪಾಠ ಕೇಳುವ ಮುನ್ನವೇ ನ್ಯಾಯಸುಧೆಯ ಸವಿಯನ್ನು ಜಿಜ್ಞಾಸುಗಳಿಗೆ ಉಣಿಸಿದ್ದರು. ಒಳಗಿದ್ದ ಬೆಳಕು ಹೊರ ಪಸರಿಸಲು ‘ಮಂಗಳ’ಗಳು ನೆಪವಾದವು. ದೇಶಾದ್ಯಂತ ಓಡಾಡುವ ಮಾನವತಾ ವಾದಿಗಳಾದ ಪೇಜಾವರ ಶ್ರೀಗಳೂ ಕೆಲವು ತಿಂಗಳು ಇವರ ಅಧ್ಯಯನದ ಬಿಸುಪಿಗೆ ಒರೆಯಾದರು. ವೇದ-ಪುರಾಣ-ಇತಿಹಾಸ -ಉಪನಿಷತ್ತುಗಳ ಚಿಂತನೆ ನಡೆಸುತ್ತಿದ್ದರೆ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರು ಮೈಯೆಲ್ಲಾ ಕಿವಿಯಾಗಿ ಕುಳಿತಿರುತ್ತಿದ್ದರು, ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಸಾಂಪ್ರದಾಯಿಕತೆ, ಮಡಿವಂತಿಕೆ, ಆಗದವರ ಚಾಡಿ ಮಾತುಗಳು, ಮಠದ ದಾರಿದ್ರ್ಯ ಯಾವುದೂ ಇವರ ನಡುವಿನ ಸಂಬಂಧವನ್ನು ಹಳಸಗೊಡಲಿಲ್ಲ. “ಎಳೆಯದರಲ್ಲೇ ಸತ್ಯ ಹೇಳುವ ನಿನ್ನ ಛಾತಿ ಮೆಚ್ಚಿದ್ದೇನೆ” ಎಂದು ಬೆನ್ನು ತಟ್ಟಿದವರು ಕಾಣಿಯೂರು ಮಠದ ಅವಧೂತ ಯತಿಗಳಾಗಿದ್ದ ಶ್ರೀ ವಿದ್ಯಾಸಮುದ್ರ ತೀರ್ಥರು

ದಾಂಪತ್ಯ ಗೀತದಲಿ ತಾನು ಪಲ್ಲವಿಯಾದರು, ಅಹಲ್ಯಾ ಅನುಪಲ್ಲವಿಯಾದರು. ಆರು ನುಡಿಗಳು ಮಾರ್ನುಡಿದವು, ಸಂಬಂಧಗಳ ಹೊರೆ ಹೆಗಲಿಗೇರಿದರೂ ಅಧ್ಯಯನದ ಕೃಷಿಯ ನೊಗ ಕೆಳಗಿಳಿಸಲಿಲ್ಲ. ಹಲವಾರು ಪತ್ರಿಕೆಗಳ, ಸಾಹಿತಿಗಳ ಒಡನಾಟ ಓದಿಗೆ ಮೆರುಗು ನೀಡಿತು. ಕೇಳಲೇಬೇಕೆಂದು ಬಯಸುವ ನಾಲ್ಕೇ ಕಿವಿಗಳಿದ್ದರೂ ಹೇಳಬೇಕಾದ್ದನ್ನು ಉಳಿಸುತ್ತಿರಲಿಲ್ಲ. ಮಠದ ಸಭಾ ಕಾರ್ಯಕ್ರಮದ ನಿರ್ವಹಣೆಗೆ, ಬಂದ ಜಿಜ್ಞಾಸುಗಳ ಗೊಂದಲಗಳಿಗೆ ಉತ್ತರ ನೀಡುವುದಕ್ಕೆ ಕೆಲ ಹೊತ್ತು ಮೀಸಲಾಗಿಟ್ಟಿದ್ದರು. ಶಾಸ್ತ್ರೀಯ ಚರ್ಚೆಗಳಲ್ಲಿ ಇವರ ತೂಕವೇ ಬೇರೆ ಎಂದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ವಿದೇಶಗಳಿಂದ ಹುಡುಕಿಕೊಂಡು ಬಂದವರು ಇವರ ಶಿಷ್ಯರಾದರು. ಆ ಕಾಲದ ಎಲ್ಲಾ ಗ್ರಂಥಾಲಯಗಳ ಪುಸ್ತಕಗಳ ಪರಿವಿಡಿಯಾಗಿದ್ದರು. ಎಲ್ಲ ಅಪೂರ್ವ ತಾಳೆಗರಿಗಳ ತಿರುವಿಹಾಕಿ ಧೂಳು ಬಿಡಿಸಿದ್ದರು.  ತಾಳೆಗರಿಯ ಓದು ಎಂಬುದೇ ದೊಡ್ಡ ತಪಸ್ಸು. ಅದು ಅವರ ಬದುಕಿನ ಸಾಹಸವಾಗಿಯೂ ಮಾರ್ಪಟ್ಟಿತು.

“ಸರ್ವಮೂಲದ ಶುದ್ಧ ಪಾಠವೆಂಬ ಮಹಾಸಾಹಸ”

ಪಲಿಮಾರು ಅಂಥ ಶ್ರೀಮಂತ ಮಠವೇನಲ್ಲ. ಆದರೂ ವಿದ್ಯಾಪಕ್ಷಪಾತಿಯಾಗಿ ದಾನ-ಧರ್ಮಗಳಿಗೆ ಎಂದೂ ಕೊರತೆಯಾಗಿಲ್ಲ, ಕಾರಣ ಪೀಠದ ಮೇಲಿದ್ದ ತಾಳೆಗರಿಯ ಪೆಟ್ಟಿಗೆ. ೧೩ನೇ ಶತಮಾನದಲ್ಲಿ ಬರೆಯಲ್ಪಟ್ಟ ಗ್ರಂಥ ಅದರಲ್ಲಿತ್ತು. ಆಚಾರ್ಯಮಧ್ವರ ಕೃತಿಗಳನ್ನು ಅವರ ಪ್ರಥಮ ಶಿಷ್ಯರಾದ ಶ್ರೀ ಹೃಷಿಕೇಶತೀರ್ಥರೇ ಬರೆದಿಟ್ಟ ಅತ್ಯಪೂರ್ವ ಹಸ್ತಪ್ರತಿ ಅದು “ಶ್ರೀಕರ” ಎಂಬ ನಂಬಿಕೆಯೂ ಬಲವಾಗಿತ್ತು. ಆಗ ಅದು ಓದುವ ಸ್ಥಿತಿಯಲ್ಲಿರಲಿಲ್ಲ.  ಹರಿದು, ಕೆಲವೆಡೆ ಒಂದಕ್ಕೊಂದು ಅಂಟಿಕೊಂಡು ಓದುವುದು ದುಸ್ತರವಾಗಿತ್ತು. ಆದರೆ ಬನ್ನಂಜೆಯವರ ಹಸಿವಿಗೆ ಅವೆಲ್ಲ ತೊಂದರೆ ಎನಿಸಲಿಲ್ಲ.  ಶ್ರೀರಘುವಲ್ಲಭ ತೀರ್ಥರು ಆಗಣ ಪಲಿಮಾರು ಮಠದೀಶರಾದ  ಇಂಗಿತಜ್ಞರು ಹಲವು ಕಾಲ ಆಚಾರ್ಯರ ವಿದ್ಯಾ ಶಿಷ್ಯರೂ ಆಗಿದ್ದರು. ಅವರು ಯಾರ ಮಾತಿಗೂ ಮಣೆ ಹಾಕದ ಕಾರಣ ತಾಳ ಪ್ರತಿ ಸಂಶೋಧನೆಗಾಗಿ ಬನ್ನಂಜೆಯವರ ಮನೆ ಸೇರಿತು. ಅದಕ್ಕೆ ಬೇಕಾದ ಬೇರೆ ಸಹಾಯಗಳೂ ಕಾಲಕ್ಕೆ ಒದಗಿದವು.

ಚಿಮಣಿ ದೀಪ : ಸುತ್ತಲೂ ಬಿಡಿಸಿದ ತಾಳೆಗರಿಗಳು

ಕಣ್ಣು ಕೀಲಿಸಿದರೂ ಕೆಲವೊಮ್ಮೆ ತಿಳಿಯದ ಬರಿಗೆರೆಗಳು. ಕಣ್ಣಿವೆ ನೊಂದು, ಗೋಣು ಬಾಗಿ, ಬೆನ್ನು ಮುರಿದರೂ ಛಲ ಬಿಡಲಿಲ್ಲ. ಹಗಲು-ಇರುಳು ತುಳುಲಿಪಿಯ ಹೃಷೀಕೇಶತೀರ್ಥರ ಬರವಣಿಗೆಯ ಜೊತೆಗೆ ಇನ್ನು ಮೂರ್ನಾಕು ತಾಳಪತ್ರಗಳ ತುಲನೆ ಮಾಡುವುದು, ಈಗ ಮುದ್ರಣಗೊಂಡಿರುವ ಬೇರೆ ಬೇರೆ ಪ್ರಕಾಶನದ ಸರ್ವಮೂಲ ಪುಸ್ತಕಗಳನ್ನು ಶೋಧಿಸುವುದು, ಪಾಠ ಸಂದೇಹ ನಿವಾರಣೆಗೆ ವ್ಯಾಖ್ಯಾನವನ್ನು ಪರಿಶೀಲಿಸುವುದು ಹೀಗೆ ಸಾಗಿತು ಸಂಶೋದನಕಾರ್ಯ. ಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮದ ಫಲವಾಗಿ ಆಚಾರ್ಯಮಧ್ವರ ಕೃತಿಗಳ ಮೂಲಪಾಠ ಮೊದಲ ಬಾರಿಗೆ ೨೫೦೦ ಪುಟಗಳ ೫ ಸಂಪುಟಗಳಾಗಿ ಬಿಡುಗಡೆಗೊಂಡವು. ಗದುಗಿನ ನಾರಾಯಣ ರಾವ್, ಮುದ್ರಣದ ವೆಚ್ಚ ಹೊತ್ತ ಪುಣ್ಯಶಾಲಿಗಳು. ಈ ಅಪೂರ್ವಗ್ರಂಥ ಪ್ರಚಾರವಾಗದೆ ಹೋಗಿದ್ದರೆ ಅಶುದ್ಧ ಪಾಠಗಳೇ ಶ್ರದ್ಧಾ ಸ್ಥಾನಗಳಾಗಿರುತ್ತಿದ್ದವು. ಅದರ ಕಮಟು ಇನ್ನೂ ಇಳಿದಿಲ್ಲ. ಪಾಠಶುದ್ಧಿ – ಅರ್ಥಶುದ್ಧಿ – ವೈದಿಕ ಸಂಸ್ಕೃತದ ಹರವು – ಲೋಕ ಸಂಸ್ಕೃತದ ಚಲುವು – ಪುರಾಣೇತಿಹಾಸಗಳನ್ನು ಅರ್ಥೈಸಬೇಕಾದ ಕ್ರಮ ಮೊದಲಾದ ಸಂಶೋಧನೆಯ ಹೊಸ ಮುಖಗಳು ಸತ್ಯದ ದಾರಿಯಲ್ಲಿ ಸಾಗಬಯಸುವವರಿಗೆ ಕೈಮರವಾಗಿ ನಿಂತವು. ಮತ್ತೊಮ್ಮೆ ಅಷ್ಟೂ ತಾಡವಾಲೆ ಪ್ರತಿಗಳನ್ನು ಜೋಡಿಸಿ ಸ್ಕ್ಯಾನ್ ಮಾಡಿ ರಕ್ಷಿಸಿಟ್ಟರು. ಲಿಪಿ ಓದಬಲ್ಲ ಗಟ್ಟಿಗರು ಇಂದೂ ತಮ್ಮ ಸಂದೇಹ ಪರಿಹರಿಸಿಕೊಳ್ಳಬಲ್ಲರು. ಆಮೇಲಿನ ತಾಡವಾಲೆ ಪ್ರತಿ ಅಥವಾ ಕಾಗದಗಳನ್ನೇ ಪ್ರಮಾಣೀಕರಿಸುವ ಮಂದಿಗೇ ಸಂಶೋಧನೆಯ ನಿಯಮಗಳೇ ತಿಳಿದಿಲ್ಲ ಎಂದು ಸುಮ್ಮನಾಗುವುದೊಳಿತು.  ಸರ್ವಮೂಲದ ಮೂಲ ಪಾಠದ ನಿಯಮಗಳೇ ಸಂಶೋಧನೆಯ ಹಲವು ಸಾಹಸಗಳನ್ನು, ಪಟ್ಟ ತೊಂದರೆಗಳನ್ನು ಅವರಿಂದಲೇ ಕೇಳುವಾಗ ಹೃದಯ ಕರಗದೆ ಇರದು. ಗ್ರಂಥಗಳ, ಗ್ರಂಥಾಲಯಗಳ, ಹೆಚ್ಚಿನ ಧೂಳು ಅಂಟಿಸಿಕೊಂಡ ಬನ್ನಂಜೆ ಟೀಕೆಗಳ ಅಂಟಿಸಿಕೊಳ್ಳಲಿಲ್ಲ . “ನ ವಿಕ್ರಿಯಾ ವಿಶ್ವಸುಹೃತ್ ಸಖಸ್ಯ “

ವೈದಿಕನ ಲೌಕಿಕ”

ಮಧ್ವ ರಾಮಾಯಣದ ಕನ್ನಡದ ಅನುವಾದವನ್ನೋದಿ ‘ಡಿ ವಿ ಜಿ’ ಯವರು ಪತ್ರದ ಮೂಲಕ “ಬನ್ನಂಜೆ ! ನಿಮ್ಮನ್ನು ಕಾಣಬೇಕು” … ಎಂಬ ಬಯಕೆ ವ್ಯಕ್ತಪಡಿಸಿದ್ದರು. “ತನ್ನ ಪದ್ಯಗಳಿಗೆ ಬನ್ನಂಜೆ ಅರ್ಥ ಹೇಳುತ್ತಾನೆ. ತನ್ನ ಸ್ಥಾನವನ್ನು ಬನ್ನಂಜೆ ತುಂಬುತ್ತಾನೆ “ ಎಂಬುದು ಶಬ್ದಗಾರುಡಿಗ ‘ಬೇಂದ್ರೆ’ಯವರಿಂದ ಬಂದ ಪ್ರಶಸ್ತಿ … ಬೆಳ್ಳಿ ಮೀಸೆಯ ಮಗು- “ಮಂಜೇಶ್ವರ ಗೋವಿಂದ ಪೈ” ಗಳು ಬನ್ನಂಜೆಯವರ ಪ್ರತಿಭೆಗೆ ಮನಸೋತು ಹರಸಿದ್ದರು ಅನೇಕ ಕವಿಗೋಷ್ಠಿಗಳಲ್ಲಿ ಸಹಭಾಗಿಗಳಾಗಿದ್ದ ಗೋಪಾಲ ಕೃಷ್ಣ ಅಡಿಗರು ಬನ್ನಂಜೆಯವರ ಕವನಗಳನ್ನು ತುಂಬಾ ಮೆಚ್ಚಿಕೊಂಡಿದ್ದರು. ಬನ್ನಂಜೆಯವರ ಭಾಣಭಟ್ಟನ ಕಾದಂಬರಿಯ ನೋಡಿ ಆ ಕನ್ನಡಕ್ಕೆ ಮುಗ್ಧರಾಗಿದ್ದರು ಪು.ತಿ.ನರಸಿಂಹಾಚಾರ್ಯರು. ವಿದ್ಯಾ ಪ್ರೇಮಿಗಳಾಗಿದ್ದ ಎಲ್ಲ ಸಾಹಿತಿಗಳ, ಕವಿಗಳ ಒಡನಾಟ ಬನ್ನಂಜೆಯವರಿಗಿತ್ತು. ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ವಿಭಾಗದ ಸಂಪಾದಕರಾಗಿದ್ದಾಗ ಎಷ್ಟೋ ಯುವ ಪ್ರತಿಭೆಗಳನ್ನು ಹುರಿದುಂಬಿಸಿದರು.       ಉದಯವಾಣಿಯಲ್ಲಿ ಮೊದಲ ಲೇಖನ ಪ್ರಕಟವಾದ ಹಲವು ಮಂದಿ ಈಗ ಕನ್ನಡದ ಖ್ಯಾತ ಲೇಖಕರಾಗಿದ್ದಾರೆ.

“ಕಿಷ್ಕಿಂಧಾ ಕಾಂಡ” ಎಂಬ ಅಂಕಣದ ಮೂಲಕ ವರ್ತಮಾನ ಕಾಲದ ರಾಜಕೀಯ, ಸಾಮಾಜಿಕ, ಓರೆ ಕೋರೆಗಳನ್ನು ಕುಟುಕಿದರು. ಹಲವು ಪತ್ರಿಕೆಗಳಲ್ಲಿ ಆಚಾರ್ಯರ ಕವನ, ಲೇಖನಗಳು ಪ್ರಕಟಗೊಂಡವು. ಕವನ ಸಂಕಲನಗಳು, ಕೆಲವು ನಾಟಕ-ಕಾವ್ಯಗಳ ಅನುವಾದಗಳೂ ಮುದ್ರಣಗೊಂಡವು…                                                                                                                                                         ಪತ್ರಿಕೋದ್ಯಮದ ಜೊತೆಗೆ ಸಿನಿಮಾ ಕ್ಷೇತ್ರವೂ ಬನ್ನಂಜೆಯವರ ಬಗ್ಗೆ ಮಾತಾಡಿತು. ಇವರ ಸಾಹಿತ್ಯದ ‘ಶಂಕರಾಚಾರ್ಯ’ ಮತ್ತು ‘ಭಗವದ್ಗೀತೆ’ ವಿಶ್ವದಲ್ಲೇ ಸಂಸ್ಕೃತದ ಮೊದಲ ಮತ್ತು ಎರಡನೆಯ ಚಿತ್ರವಾಗಿ ಮೂಡಿಬಂದವು . ಆ ಚಿತ್ರಗಳ ಸಂಸ್ಕೃತ ಸಾಹಿತ್ಯ ಇಂದಿಗೂ ಮನನೀಯ. ‘ಮಧ್ವಾಚಾರ್ಯ’ ಸಿನೇಮಾ ಕನ್ನಡ ನಾಡಿನ ಆಚಾರ್ಯ ಪುರುಷನಿಗೆ ಸಂದ ಗೌರವ.   ತೋಟಗಾರಿಕೆ, ಚಿತ್ರಕಲೆ, ಸಿನೆಮಾ, ಕಥೆ-ಕವನ-ಕಾದಂಬರಿ, ವಿಮರ್ಶೆ, ಪಾಠ-ಪ್ರವಚನ ಎಲ್ಲದರಲ್ಲೂ ತೊಡಗಿಸಿಕೊಂಡು ತನ್ನನ್ನು ತಾನು ರೂಪಿಸಿಕೊಂಡರು. ಹೀಗೆ ಜೀವನದಲ್ಲಿ ಬಂದವುಗಳನ್ನೇ ಆಯ್ದುಕೊಳ್ಳುತ್ತಾ ಸಾಗಿದರು. ತಮ್ಮ ಮಕ್ಕಳಿಗೂ ಆಯ್ಕೆಯ ಸ್ವಾತಂತ್ರ್ಯ ನೀಡಿ ಬೆಳೆಸಿದರು. ೬೦-೭೦ ವರ್ಷಗಳ ನಿರಂತರ ಮಥನ, ಬಹಳಷ್ಟು ವಿಷವನ್ನುಗುಳಿದೆ. ಆದರೂ ಜಗ್ಗದೆ ನಂಜುಂಡರಾದರು…  ಸೋಲಲಿಲ್ಲ. ಸಿದ್ಧಿಯನ್ನು ಪ್ರಸಿದ್ಧಿಗಾಗಿ ಬಳಸಲಿಲ್ಲ, ಇನ್ನೂ ಮಥಿಸುತ್ತಲೇ ಇದ್ದಾರೆ.  ಸತ್ಯ ಕಹಿಯಾಗಿಯೇ ತೆರೆದುಕೊಳ್ಳುತ್ತದೆ. ಅದನ್ನು ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ, ಹಚ್ಚಿಕೊಂಡಿದ್ದಾರೆ, ಬೇಕೆಂದವರಲ್ಲಿ ಹಂಚಿಕೊಂಡಿದ್ದಾರೆ.

ಬದಲಾವಣೆಯ ಬಿರುಗಾಳಿ”

‘ಪತ್ರಿಕೋದ್ಯಮದ ಸಂಪರ್ಕದಿಂದ ಕನ್ನಡ ಚೆನ್ನಾಗಿ ಬರಬಹುದು, ಸಂಸ್ಕೃತದ ಪರಿಚಯ ಚೂರು ಇರಬಹುದು. ಮೋಡಿ ಮಾಡಿ ಮಾತಾಡುವ ಕಲೆ ಕರಗತವಾಗಿದೆ ಎಂದ ಮಾತ್ರಕ್ಕೆ ಶಾಸ್ತ್ರ ಚಿಂತನೆಗೆ ಬನ್ನಂಜೆ ಹಕ್ಕುದಾರನಲ್ಲ’ ಎಂಬ ಹಗುರ ಭಾವನೆ ಪಂಡಿತವಲಯದಲ್ಲಿತ್ತು . ಶ್ರೀಮಧ್ವವಿಜಯ ವ್ಯಾಖ್ಯಾನ ಸತ್ವಯುತವಾದ ಪರಿಶಿಷ್ಟದೊಡನೆ ಮುದ್ರಣಗೊಂಡಿತು. ಸಜ್ಜನ ಪಂಡಿತರ ಮನದಲ್ಲಿ ಬನ್ನಂಜೆಯವರ ಪಾಂಡಿತ್ಯದ ಭಾರ ಹೆಚ್ಚಿತು. “ಉಪನಿಷಚ್ಚಂದ್ರಿಕಾ” ಬಿಡುಗಡೆಯಾದಾಗ ಉದಾಸೀನರೂ ಎಚ್ಚೆತ್ತುಕೊಂಡರು. “ತಾತ್ಪರ್ಯನಿರ್ಣಯ ಭಾವಚಂದ್ರಿಕೆ” ಪ್ರಕಟವಾದಾಗ ವಿರೋಧಿಗಳೂ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ವಿರೋಧಿಸಿದರು. ವೇಷ-ಭೂಷಣಗಳಿಂದಲೇ ವಿದ್ವತ್ತನ್ನು ಲೆಕ್ಕಿಸುವವರಿಗೆ ಬನ್ನಂಜೆ ನುಂಗಲಾರದ ತುತ್ತಾದರು. ಗುಟ್ಟಿನಲ್ಲೇ ಬನ್ನಂಜೆ ವ್ಯಾಖ್ಯಾನಗಳನ್ನೋದಿ ತಮ್ಮ ಪಾಠ-ಪ್ರವಚನಗಳಲ್ಲಿ ರೂಢಿಸಿಕೊಂಡರು. ಹೊಸತಲೆಮಾರು ಶಾಸ್ತ್ರದ ಸರಳ ವಿವರಣೆಗಾಗಿ ಆಚಾರ್ಯರನ್ನು ಮೆಚ್ಚಿತು. ಪ್ರಶ್ನೆಗಳಿಗೆ ಉತ್ತರ ಸಿಗದೆ ಕಂಗಾಲಾಗಿದ್ದ ಸಾತ್ವಿಕ ಚಿಂತಕರಿಗೆ ಬದುಕಿನಲ್ಲಿ ಆಶಾವಾದ ಹುಟ್ಟಿತು. ತಮ್ಮ ಜಗಳಗಂಟ ತನದಿಂದ ಮತಕ್ಕೆ ಅಂಟಿಸಿದ ಕೀರ್ತಿಯನ್ನು ತೊಳೆದುಕೊಳ್ಳಲು ಇನ್ನೂ ಹೊಡೆದಾಡುತ್ತಲೇ  ಇರುವ ಸ್ಥಿತಿ ನಿರ್ಮಾಣವಾಗಿದೆ. ಈ ನೋವನ್ನೆ ಬನ್ನಂಜೆಯವರು ತಮ್ಮ ಉಪನ್ಯಾಸಗಳಲ್ಲಿ ಹೊರಹಾಕುತ್ತಾರೆ. ಶಾಸ್ತ್ರಕ್ಕೆ ಅಪಚಾರವಾಗುವುದು ತಿಳಿದವರಿಂದಲೇ ಹೊರತು ಸಾಮಾನ್ಯರಿಂದಲ್ಲ. ಎಂದೂ ವೈಯಕ್ತಿಕ ವಿಷಯಗಳನ್ನು ಆಚಾರ್ಯರು ಪ್ರಸ್ತಾಪಿಸುವುದಿಲ್ಲ. ನಿಲುವುಗಳಲ್ಲಿರುವ ತೊಂದರೆಗಳನ್ನು ತೋರಿಸಿ ತಪ್ಪು ಎನ್ನುತ್ತಾರೆ. ಘಟ್ಟದ ಮೇಲೆ-ಕೆಳಗೆ, ಭಾಷೆ, ದೇಶ, ವೇಷ, ಆವೇಶದ ಯಾವ ಬೇಲಿಗೂ ಸಿಲುಕದೆ ವ್ಯಾಸರನ್ನು ಮಧ್ವರನ್ನು ಮುಂದಿಟ್ಟುಕೊಂಡು ಶಾಸ್ತ್ರಾಧಾರಿತವಾಗಿಯೇ ವಿಷಯಗಳನ್ನು ಮಂಡಿಸಿರುತ್ತಾರೆ.

ಮೊದಲು ಹೇಳಿದ್ದಕ್ಕಿಂತ ಕಾಲ ಕ್ರಮದಲ್ಲಿ ಸರಿಯಾದ ಬದಲಾವಣೆಯನ್ನು ಒಪ್ಪುವುದು ಪ್ರಾಮಾಣಿಕ ಸಂಶೋಧಕನ ಉತ್ತಮ ಗುಣ. ಮೊದಲು ತಿಳಿಯದೆ ಒಪ್ಪಿದ ತಪ್ಪನ್ನೆ ಸಂಪ್ರದಾಯದ ಹೆಸರಿನಲ್ಲಿ ಸಮರ್ಥಿಸುವುದು ಕೇವಲ ಶ್ರದ್ಧಾ ಜಾಡ್ಯವಾಗುತ್ತದೆ.  ಉಪನ್ಯಾಸಗಳಲ್ಲಿನ ಖಾರವಾದ ಪ್ರತಿಕ್ರಿಯೆ ಓದಿನ ಮದದಿಂದಲ್ಲ. ವಿಷಯ ನಿಷ್ಠರಾಗಿ ಕಾರಣಗಳೊಂದಿಗೆ ಸತ್ಯವನ್ನು ಬರಹ ಕಲೆ ಮತ್ತು ಉಪನ್ಯಾಸಗಳ ಮೂಲಕ ಹಲವು ಬಾರಿ ಪ್ರಕಟಪಡಿಸಿದ್ದಾರೆ. ಕೆಲವರು ಜಿದ್ದು – ಪ್ರತಿಷ್ಠೆಗಳಿಗೆ ಬಲಿಯಾಗಿ ಬದುಕನ್ನೆ ಬಲಿಕೊಡುತ್ತಾರೆ. ಉಳಿದವರನ್ನೂ ಬಲಿಯಾಗಿಸುವ ಪ್ರವೃತ್ತಿಗೆ ನೊಂದು ಮೂಡಿದ ಮಾತು ಕಠಿಣವಾಗಿರುತ್ತದೆ. ಈ ಎಚ್ಚರ ಇದ್ದಾಗ ಬನ್ನಂಜೆಯವರು ಹೆಚ್ಚು ತೆರೆದು ಕೊಳ್ಳುತ್ತಾರೆ….

ಹುಲಿ ಪ್ರೀತಿ”

ವಿದ್ವದ್ ವ್ಯಾಘ್ರಗಳನ್ನು ಮಣಿಸಿದ ಬನ್ನಂಜೆಯವರು ವನ್ಯವ್ಯಾಘ್ರದ ಪ್ರೀತಿಗೆ ಸೋತುಹೋಗಿದ್ದರು. ಉಡುಪಿಯ ಮನೆಯಲ್ಲಿ ಹುಲಿಮರಿಯೊಂದನ್ನು ಸಾಕಿದ್ದರು. ಅದು ಬೆಳೆದಂತೆ ಮನೆಮಂದಿಯೊಂದಿಗೆ ಹೊಂದಿಕೊಂಡಿತ್ತು, ಆಡಿಕೊಂಡಿತ್ತು. ಹುಲಿ ಬೆಳೆದು ನಿಂತಾಗ ಎಷ್ಟಾದರೂ ಅಪಾಯವೆಂದು. ಗೆಳೆಯರೊಬ್ಬರ ಸಹಾಯದಿಂದ ಪುತ್ತೂರಿನ ಮನೆಯಲ್ಲಿ ಬಿಟ್ಟುಬರಲಾಯಿತು. ಬಿಟ್ಟು ಬಂದವರು ಬಹಳ ದಿನ ಸಿಗಲಿಲ್ಲ . ಅವರು ಮತ್ತೆ ಸಿಕ್ಕಿದರು. ಆದರೆ ಹುಲಿ ಪ್ರಾಣದೊಡನಿರಲಿಲ್ಲ. ಪ್ರೀತಿಸಿದ ಯಜಮಾನನೇ ತೊರೆದನೆಂಬ ನೋವಿಗೆ ಆಹಾರ ತೊರೆಯಿತು, ಬದುಕುಳಿಯಲಿಲ್ಲ. ಪ್ರಾಣಿ ಕ್ರೂರವಾದರೂ ಅದರ ಪ್ರೀತಿ ನಿಷ್ಕಲ್ಮಷವೆಂಬುದನ್ನು ಅರಿತ ಬನ್ನಂಜೆ ಕಣ್ಣೀರಿನಲ್ಲಿ ಬೆಂದರು……

ಹೀಗೆಯೇ ಮನೆಗೆ ತಾನಾಗಿ ಬಂದು ಸೇರಿದ ನವಿಲುಗಳು, ಅಳಿಲುಗಳು, ನಾಯಿ, ಬೆಕ್ಕು, ಎಲ್ಲದಕ್ಕೂ ಆಸರೆಯಾದದ್ದು ಅವರು ಸರ್ವಭೂತ ಹಿತೇರತರು ಎಂದು ಪರಿಚಯಿಸುತ್ತದೆ…

ಹಾವಿನೊಂದಿಗೆ ಟೆಲಿಪತಿ”

ಮನುಷ್ಯನಿಗೆ, ಪ್ರಕೃತಿಗೆ ಉಪಕಾರವಾದ ಮರ-ಗಿಡ-ಪ್ರಾಣಿಗಳಲ್ಲಿ ದೇವರನ್ನು ಕಾಣುವುದು ಭಾರತೀಯ ಸಂಸ್ಕೃತಿ. ಅಶ್ವತ್ಥ, ನೆಲ್ಲಿ, ತುಳಸಿ, ಗೋವು, ಹಾವು ಮೊದಲಾದವು ಈ ಕಾರಣದಿಂದಲೇ ಗೌರವಕ್ಕೆ ಪಾತ್ರ. ಹಾವು ಕಿವಿಗಳಿಲ್ಲದಿದ್ದರೂ ಮನಸ್ತರಂಗಗಳನ್ನೋದುವ ವಿಶಿಷ್ಟ ಜೀವಿ. ಹಲವು ಪ್ರಯೋಗಗಳ ಮೂಲಕ ಈ ಸತ್ಯವನ್ನು ಅನುಭವಿಸಿದವರು ಬನ್ನಂಜೆಯವರು.

ಅದೊಂದು ದಿನ ದೊಡ್ಡ ನಾಗರ ಹಾವು ಹಟ್ಟಿ ಯ ಪಕ್ಕದ ಕೋಣೆಯ ಹುಲ್ಲಿನ ಮೆದೆಯಲ್ಲಿ ಸೇರಿಕೊಂಡಿತು. ಮನೆಯೊಡತಿ ಆಕಳ ಹಾಲು ಕರೆಯಬೇಕು. ಮೇವು-ಹಿಂಡಿ ಹಾಕಬೇಕು. ಒಳ ಹೋಗಲು ಭಯ.  ಕಛೇರಿಗೆ ಹೊರಡುತ್ತಿದ್ದ ಆಚಾರ್ಯರಿಗೆ ವಿಷಯ ತಿಳಿಯಿತು. ಹಾವನ್ನು ಹೊರಗೆ ಕಳುಹಿಸಿಯೇ ಮನೆ ಬಿಡುವೆನೆಂದು ಭರವಸೆ ಇತ್ತರು. ಹಟ್ಟಿಯ ಬಾಗಿಲಲ್ಲಿ ನಿಂತರು .. ಮನದಲ್ಲಿಯೇ ಸಂದೇಶ ಕಳುಹಿಸಿದರು…

“ಸರ್ಪಾಪಸರ್ಪ ಭದ್ರಂತೇ ಗಚ್ಛಸರ್ಪ ಮಹಾವಿಷ  !

ಜನಮೇಜಯಸ್ಯ ಯಜ್ಞಾಂತೇ ಆಸ್ತೀಕ ವಚನಂ ಸ್ಮರ !!”

ಹುಲ್ಲಿನ ಮೆದೆಯಿಂದ ಹೊರಬಂತು, ನೆಲ ತೊಳೆದ ನೀರು ಹೊರ ಹೋಗುವ ತೂಬಿನ ಬಳಿ ಸಾಗಿತು. ಸಗಣಿ ನೀರು ದಾಟಲಾರದೆ ಮರಳಿ ಮೆದೆ ಹೊಕ್ಕಿತು. ಆಚಾರ್ಯರು ಆಗ ಶ್ಲೋಕ ಪಾದವನ್ನು ಕೊಂಚ ಬದಲಿಸಿದರು –

“ಗಚ್ಛ ಸರ್ಪ ಯಥಾಗತಮ್”… “ಬಂದ ದಾರಿಯಲ್ಲಿ ಮರಳು” ಎಂದೊಡನೆ ಹಾವು ಬಂದಂತೆ ದಾರಿ ಬದಲಿಸಿ ಬಂದ ದಾರಿಯಲ್ಲೆ ತೋಟ ಸೇರಿತು. ಇಂಥ ಹಾವಿ ನೊಡನಾಟದ ಅನುಭವಗಳು ಬಹಳ ಇವೆ. ಬಹಳ ದೂರದಲ್ಲಿರುವ ಹಾವಿಗೂ ಸಂದೇಶ ಮುಟ್ಟಿಸಬಹುದೆಂಬ ಆಚಾರ್ಯರ ಪ್ರಯೋಗವನ್ನು ಬಹಳ ಹಿಂದೆ ಪತ್ರಿಕೆಯೂ ಪ್ರಕಟಿಸಿತ್ತು… ಮನೆಯ ತೋಟದಲ್ಲಿ ಹಲವುಬಾರಿ ಹಾವು ಕಂಡಿದ್ದರೂ ಎಂದೂ ತೊಂದರೆ ಎಸಗಿಲ್ಲ. ಮನೆಗೆ ರಕ್ಷಣೆ ಎಂಬಂತೆ ಹಾವುಗಳು ಬೇಲಿಗಳಲ್ಲಿದ್ದು ತೋಟ ಕಾಯುತ್ತವೆ.  ಪರಿಸರದ ಸಮತೋಲನೆಗೆ ಪ್ರಕೃತಿ ನೀಡಿದ ದೊಡ್ಡ ಕೊಡುಗೆ ಹಾವುಗಳು ಎಂಬುದನ್ನು ನಾವು ಮನಗಾಣಬೇಕು….

“ನಾಯಿ ನಿಷ್ಠೆ “

ಮಂಗಳೂರಿನ ಪುರಭವನ.  ಭಾರತ ಪ್ರವಚನ ಸರಣಿ. ಟಿಕೇಟು ಪಡೆದು ಜನ ಜಮಾಯಿಸುತ್ತಿದ್ದ ಅಪರೂಪದ ಘಟನೆ. ದಿನವೂ ನಾಯಿಯೊಂದು ಉಪನ್ಯಾಸ ಕೇಳಲುಬರುತಿತ್ತು.ಎಲ್ಲರಿಗಿಂದಲು ಮೊದಲು ಬಂದು ಮೊದಲ ಸಾಲಿನ ಕುರ್ಚಿಯ ಅಡಿಯಲ್ಲಿ ಕುಳಿತಿರುತ್ತಿತ್ತು. ಸದ್ದಿಲ್ಲ. ಮೊದಲ ದಿನಗಳಲ್ಲಿ ಅದರ ಸುದ್ದಿಯೂ ತಿಳಿದಿರಲಿಲ್ಲ. ಆಮೇಲೆ ಆಯೋಜಕರ ಗಮನಕ್ಕೆ ಬಂತು. ಕುತೂಹಲ ಹುಟ್ಟಿತು. ಯಜಮಾನ ಇರಲಿಲ್ಲ. ಎಲ್ಲರೂ ಹೊರಟ ಬಳಿಕ ನಿಧಾನ ಏಕಾಂಗಿಯಾಗಿ ಹೊರ ನಡೆಯಿತು. ನಾಲ್ಕಾರು ಕಿ.ಮೀ ದೂರದಿಂದ ಬರುತ್ತಿದೆ ಎಂದು ತಿಳಿಯಿತು. ದುರದೃಷ್ಟಕ್ಕೆ ಹುಚ್ಚು ನಾಯಿ ಕಡಿತಕ್ಕೆ ಬಲಿಯಾಯ್ತು. ಯಾರಿಗೂ ಕಡಿಯದೆ ಪ್ರವಚನ ಮುಗಿತಾಯದ ಕೆಲದಿನ ಮೊದಲೇ ವೇದಿಕೆಯ ಎದುರಿನಲ್ಲೇ ಪ್ರಾಣ ಬಿಟ್ಟಿತು. ಆಚಾರ್ಯರೂ ಮರುಗಿದರು.

“ನಂದಿದ ನಂದ್ಯಾಲಕ್ಕೆ ಬೆಳಕು”

ಆಚಾರ್ಯರು, ಪವಾಡಗಳಲ್ಲಿ ನಂಬಿಕೆ ಇಟ್ಟವರಲ್ಲ. ಪ್ರಕೃತಿಯ ನಿಯಮದಂತೆಯೇ ಎಲ್ಲವೂ ನಡೆಯುತ್ತದೆ ಎಂದು ಸಾರಿ ಹೇಳುತ್ತಾರೆ. ಕೆಲವೊಮ್ಮೆ ಅದರ ಲೆಕ್ಕಾಚಾರದ ಭಾಗವಾಗಿ ನಮ್ಮನ್ನು ಬಳಸಿಕೊಳ್ಳುತ್ತದೆ. ನಡೆಯ ಬೇಕಾದ ಘಟನೆಗೆ ಮಂತ್ರ-ತಂತ್ರ-ನಂಬಿಕೆಗಳು ಇಂಬಾಗುತ್ತವೆ. ನಾವು ಅದನ್ನು ಪವಾಡ ಎನ್ನುವೆವು ಅಷ್ಟೆ.
ಆಂಧ್ರದ ಮಹಾ ನಂದಿಕ್ಷೇತ್ರ ನಂದ್ಯಾಲ. ಅಲ್ಲಿರುವ ಶೋಭಾ ಲಾಡ್ಜ್ ನ ಮಾಲಿಕರು ಆಚಾರ್ಯರ ಭಕ್ತರು. ಶಿಷ್ಯರು ಕೂಡ. ಅಷ್ಟ ಮಠದ ಎಲ್ಲ ಯತಿಗಳಿಗೂ ಇವರ ಮನೆ ದೂರದ ಪ್ರಯಾಣದ ನಡುವಿನ ಅರವಂಟಿಗೆ. ಆದರ ಆತಿಥ್ಯಗಳಿಗೆ ಹೆಸರಾದ ಮನೆ  ಹಾಗಾಗಿ ವರ್ಷದಲ್ಲಿ ಒಂದೆರಡುಬಾರಿ ೧೦-೧೫ ದಿನಗಳ ಕಾಲ ಅಲ್ಲಿ ಆಚಾರ್ಯರ ಪಾಠ ನಡೆಯುತ್ತಿತ್ತು. ಬೆಳಗ್ಗೆ ಸಂಜೆ ಎರಡೋ ಹೊತ್ತು ಉಪನಿಷತ್ತುಗಳ ರಸದೌತಣ. ಬಹಳ ವರ್ಷಗಳಿಂದ ಈ ಜ್ನಾನಯಜ್ಞ ನಡೆಯುತ್ತಲೇ ಇತ್ತು. ೨೦೦೭ ಜುಲೈ ನಂದ್ಯಾಲದಲ್ಲಿ ಜೋರು ಮಳೆ. ಆಗಸದ ನೀರೂಟೆ ಒಡೆದು ನಂದ್ಯಾಲದೆಡೆಗೆ ಹರಿದ ಅನುಭವ. ಕರೆಂಟ್-ಕೇಬಲ್-ಫೋನ್-ನೀರು ಎಲ್ಲ ಸಂಪರ್ಕಗಳೂ ಮೂರನೇ ದಿನ ಮಾಯವಾದವು. ಮತ್ತೂ ಮೂರುದಿನ ಜಡಿಮಳೆಯ ಸೂಚನೆ ಇತ್ತು. ಪೆಟ್ರೋಲು-ಡೀಸೆಲ್-ಬ್ಯಾಟರಿ ಹೀಗೆ ಬೆಳಕಿನ ಎಲ್ಲ ಮೂಲಗಳು ಸಿಗದಾಯಿತು. ಶಾಲೆಗೇ ಹೋದ ಮಕ್ಕಳು, ಕಛೇರಿಗೆ ತೆರಳಿದ ನಾಗರಿಕರು, ಕೆಲಸಕ್ಕೆ ತೆರಳಿದ ಕಾರ್ಮಿಕರು ತಾವಿದ್ದ ಕಟ್ಟಡದ ಒಂದನೆ ಎರಡನೇ ಮಹಡಿಗಳಲ್ಲೇ ಬಂದಿಯಾದರು. ಅಂಗಡಿಗಳಿಂದ ತೇಲಿಬಂದ ಆಹಾರ ಪದಾರ್ಥಗಳೇ ಬಂಧಿಗಳ ಹೊಟ್ಟೆ ತುಂಬಿಸಿತು. ರಾಯರ ಮನೆ ಊರಭಾಗದಲ್ಲಿ ಸ್ವಲ್ಪ ಎತ್ತರದಲ್ಲಿತ್ತು. ಊರ ಹೊರಭಾಗದಲ್ಲಿ ಹರಿಯುತ್ತಿದ್ದ ನದಿಯು ಊರೊಳಗೆ ನುಗ್ಗ ತೊಡಗಿತು. ರಾಯರ ಅತಿಥಿಗೃಹದಲ್ಲಿ ಕೆಲಸಕ್ಕಿದ್ದ ಆಳುಗಳ ಮನೆ ನೀರಿನಿಂದಾವೃತವಾಗಿತ್ತು. ಅತಿಥಿಗೃಹದ ಕೆಳಮನೆಯಲ್ಲಿದ್ದ ದವಸವೆಲ್ಲ ನೀರುಪಾಲಾಯ್ತು. ಮೊದಲ ಮಹಡಿಯ ವಸ್ತುಗಳೂ ನೀರಿನಿಂದ ಹೊರತರಲು ಸಹಕರಿಸುತ್ತಿದ್ದ ಆಳುಗಳ ಮನೆಯ ಆಕ್ರಂದಕ್ಕೆ ಸ್ಪಂದಿಸುವ ದಾರಿಯ ಕಾಣದಾಯ್ತು. ರಾತ್ರಿ ರಾಯರು ಆಚಾರ್ಯರಿದ್ದ ಕತ್ತಲೆಯ ಕೋಣೆಗೆ ಬಂದರು. “ನನ್ನ ನೋವನ್ನು ನುಂಗಿಕೊಂಡರೂ ಆಳುಗಳಿಗೆ ಒದಗಿದ ತೊಂದರೆಯನ್ನು ಪರಿಹರಿಸಲಾಗುತ್ತಿಲ್ಲ. ಮಡದಿ-ಮಕ್ಕಳೇ ಸಂಪತ್ತು ಅವರಿಗೆ. ಏನಾಗಿದೆ?ಹೇಗಿದ್ದಾರೆ? ಏಂದು ತಿಳಿಯಲೂ ಸಾಧ್ಯವಾಗದ ಸ್ಥಿತಿ. ದಾರಿತೋಚುತ್ತಿಲ್ಲ” ಎಂದು  ತೋಡಿಕೊಂಡರು. ಎಲ್ಲರೂ ಸೇರಿ ಪ್ರಾರ್ಥಿಸೋಣ ಎಂದರು, ಆಚಾರ್ಯರು.
ನಾಲ್ಮೊಗ ಹಾಡಿದ ಭಾಗವತದ ಸ್ತುತಿಯನ್ನು ಹೇಳಿಕೊಟ್ಟರು. ಅರ್ಥವನ್ನೂ ವಿವರಿಸಿದರು.

ವಿಶ್ವಸ್ಯಯಃ ಸ್ಥಿತಿಲಯೋದ್ಭವ ಹೇತುರಾದ್ಯೋ
ಯೋಗೇ ಶ್ವರೈರಪಿ ದುರ ತ್ಯಯ ಯೋಗಮಾರ್ಗಃ ।
ಕ್ಷೇಮಂ ವಿಧಾಸ್ಯತಿ ಸನೋ ಭಗವಾಂಸ್ತ್ರ್ಯಧೀಶಃ
ತತ್ರಾಸ್ಮದೀಯ ವಿಮೃಶೇನ ಕಿಯಾನಿಹಾರ್ಥಃ ।।

“ಈ ಜಗದ ಹುಟ್ಟು-ಇರುವು-ಸಾವುಗಳಿಗೆ ಕಾರಣನಾದವನು ಎಲ್ಲದಕ್ಕಿಂತ ಮೊದಲಿದ್ದವನು. ನಮ್ಮ ವಿಮರ್ಶೆಗಳಿಂದ ಏನು ಪ್ರಯೋಜನ ? ಅವನೇ ನಮ್ಮನ್ನು ರಕ್ಷಿಸಬೇಕು.”

ಆಚಾರ್ಯರು, ಶಿಷ್ಯರು ಮತ್ತು ಮನೆಯವರು ಎಲ್ಲ ಸೇರಿ ಪೂರ್ಣ ತೊಡಗಿಕೊಂಡು ಜಪಿಸಿದೆವು. ಕಣ್ಣ ಮುಂದಿದ್ದ ಅನಾಹುತ ಪ್ರಾರ್ಥನೆಗೆ ಆರ್ತತೆ ತುಂಬಿತ್ತು. ರಾತ್ರಿಯೆಲ್ಲ ಕಳೆಯಿತು. ಬೆಳಗು ಮೂಡುವ ಮುನ್ನ ಮಳೆ ನಿಂತಿತ್ತು. ನೀರು ಇಳಿದಿತ್ತು. ನದಿ ಹರಿಯುತ್ತಿದ್ದ ಆ ಭಾಗದ ಅಣೆಕಟ್ಟಿನ ಬಾಗಿಲನ್ನು ಜಿಲ್ಲಾಧಿಕಾರಿಗಳು ತೆರೆಸಿದ್ದರು. ಹಾವುಗಳು ಕಾಗೆಗಳು ಗುಬ್ಬಚ್ಚಿಗಳು ನಾಯಿ-ಬೆಕ್ಕುಗಳು ಅಳಿಲುಗಳು ಅಲ್ಲಲ್ಲಿ ದಾರಿಯಲ್ಲಿ ಅರೆಜೀವವಾಗಿ ಬಿದ್ದಿದ್ದವು. ಸಾವಿರಾರು ಜೀವಗಳು ಉಳಿದಿದ್ದವು. ಪ್ರಾರ್ಥನೆಗೆ ಪ್ರಕೃತಿ ಸ್ಪಂದಿಸಿತ್ತು.

“ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ”

“ಹತ್ತು ಹಲವು ಮುಖಗಳು”

ಪ್ರಾಣೋಪಾಸಕರಾದ ಆಚಾರ್ಯರು ನಿರಂತರ ಧನ್ವಂತರಿ ಜಾಪಿಗಳು. ಕೈಯಿಂದ ಜಿನುಗುವ ಪ್ರಾಣಶಕ್ತಿಯಿಂದ ಸಾವಿರಾರು ಜನರ ರೋಗ ಪರಿಹರಿಸಿದ್ದಾರೆ. ಕಣ್ಣು ಬರಿಸಿದ್ದಾರೆ. ಉಳುಕು ತೆಗೆದಿದ್ದಾರೆ. ಇದು ಎಲ್ಲರಿಗೂ ಸಾಧ್ಯವೆಂಬ ಸರಳ ವಿಜ್ಞಾನವನ್ನೂ ಉಪನ್ಯಾಸಗಳಲ್ಲಿ ವಿವರಿಸಿದ್ದಾರೆ.. ಕರ ದೇವರು ಕೊಟ್ಟ ದೊಡ್ಡ ವರ. ಉಪಯೋಗಿಸಿಕೊಳ್ಳಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. “ಯೆ ತತ್ ಪೂಜಾಕರೌ ಕರೌ” “ಅಯಂ ಮೇ ಹಸ್ತೌ ಭಗವಾನ್”
ವಿಷ್ಣುಸಹಸ್ರನಾಮದ ಪಾರಾಯಣಕ್ಕೆ ಬನ್ನಂಜೆಯವರು ಬಹಳ ಮಹತ್ವ ನೇಡುತ್ತಾರೆ. ಕಾರಣ, ಅದರ  ಬಗ್ಗೆ ಆಚಾರ್ಯರು ಕೊಟ್ಟ ಒತ್ತು “ವೈಷ್ಣವಂ ವಿಷ್ಣು ಗೀತಾ ಚ ಜ್ಞೇಯಂ ಪಾಠ್ಯಂ ಚ ತದ್ವಯಮ್”. ಈ ಸಹಸ್ರನಾಮ ಪಠನದಿಂದ ಹತ್ತಿರದಲ್ಲಿರುವವರ, ದೂರದಲ್ಲಿರುವವರ ಉಲ್ಬಣಾವಸ್ಥೆಯ  ರೋಗಗಳನ್ನೂ ಪರಿಹರಿಸಬಹುದೆಂದು ಪ್ರಯೋಗಗಳ ಮೂಲಕ ತೋರಿಸಿಕೊಟ್ಟಿದ್ದಾರೆ. “ಜ್ವರಾನ್ ಸರ್ವಾನ್ ವ್ಯಪೋಹತಿ” ಎಂದು ಚರಕ ಮುನಿಯೂ ಮುದ್ರೆಯೊತ್ತಿದ್ದಾರೆ. ಈ ಸಹಸ್ರನಾಮಕ್ಕೆ ದೇಹದ  ೭೨೦೦೦ ನಾಡಿಗಳ ಶುದ್ಧೀಕರಿಸುವ ಶಕ್ತಿ ಇದೆ. ಸಾವಿರದ ಸಾವಿರ ರೂಪಗಳನ್ನು, ಈ ಸ್ತೋತ್ರ ಪ್ರತಿಪಾದಿಸುತ್ತದೆ. ಮೂಗಿದ್ದವರೆಲ್ಲ ಪ್ರಾಣಾಯಾಮ ಮಾಡಬಹುದಾದಂತೆ ನಾಲಿಗೆ ಇದ್ದವರೆಲ್ಲ ಈ ಸ್ತೋತ್ರ ನುಡಿಯಬಹುದೆಂಬುದು ಆಚಾರ್ಯರ ಖಚಿತ ನಿರ್ಧಾರ. ನಾಮೋಚ್ಚಾರಣೆಯಿಂದ ಎಂದು ಕೆಡುಕಾಗದು. ದೇವರು ಪ್ರೀತಿಸಬೇಕಾದ ವಸ್ತು, ಪ್ರೀತಿಸು ಎಂದು  ಬೆಳಕುಚೆಲ್ಲುತ್ತಾರೆ. “ನ ದೇವತೋಷಣಂ ವೃಥಾ”.

ಆಚಾರ್ಯರಿಗೆ ತೋಟಗಾರಿಕೆಯೂ ಬಹಳ ಆಸಕ್ತಿಕರ ಸಂಗತಿ. ಮನೆಗೆ ಬಂದಾಗ ಮನೆಯವರಲ್ಲಿ ಮರಗಿಡಗಳ ಕುರಿತಾಗಿ ಕೇಳುವ ಪ್ರಶ್ನೆ “ಮಕ್ಕಳು ಹೇಗಿದ್ದಾರೆ?”ಎಂದು. ಬಿತ್ತಿ ನೆಟ್ಟ ಗಿಡ ಚಿಗುರೊಡೆದಾಗ, ಹೂ ಬಿಟ್ಟಾಗ, ಹಣ್ಣುಗಳಿಂದ ಮರ ತುಂಬಿಕೊಂಡಾಗ ಮಗುವಾಗಿ ಸಂಭ್ರಮಿಸುತ್ತಾರೆ. ಹಂಚಿಮೈಮರೆಯುತ್ತಾರೆ. ವೇದಾತಿಗಳೆನಿಸಿಕೊಂಡವರು ಪ್ರಕೃತಿಯ ಜೊತೆ, ಲೋಕದ ಜೊತೆ ಜಡರಾಗಿರುತ್ತಾರೆ ಎಂಬ ಮಾತಿಗೆ ಆಚಾರ್ಯರು ಅಪವಾದ. ಲೌಕಿಕರ ಜೊತೆ ಪರಮಲೌಕಿಕರಾಗಿಯೇ ಪಾರಮಾರ್ಥಿಕತೆಯ ತುದಿಯಲ್ಲಿ ನಿಂತಿರುತ್ತಾರೆ.

“ವೃಕ್ಷೋ ರಕ್ಷತಿ ರಕ್ಷಿತಃ “

೭೫ ರ ಆಸು ಪಾಸಿನಲ್ಲಿ ನಡೆದ ಭೀಕರವಾದ ಅಪಘಾತ ಎದುರು ಬಡಿದವರ ಜೀವ ಉಳಿಸಿತು. ಆದರೆ ಎಡಚರಾದ ಆಚಾರ್ಯರ ಕೈ ಬಲವನ್ನು ಕುಸಿಯಿತು. ತಿಂಗಳುಗಟ್ಟಲೆ ಬರೆಯಲಾಗಲಿಲ್ಲ. ಸೋಲೊಪ್ಪಲಿಲ್ಲ. ಬಲಗೈಯಲ್ಲೇ ಬರವಣಿಗೆ ಮುಂದು ವರೆಸಿದರು. ಹೆಚ್ಚು ಸಾಧ್ಯವಾಗದೆ ಸುಮ್ಮನೆ ಕೂಡುವ ಸಮಯದಲ್ಲಿ ಆಚಾರ್ಯ ಮಧ್ವರ ಕಾಲದಲ್ಲಿ ರಚನೆಗೊಂಡ ಪದ್ಯಗಳನ್ನು  ಹಾಡುವಂತೆ ಮಗಳನ್ನು ಶಿಷ್ಯರನ್ನು ಪ್ರೇರೇಪಿಸಿದರು. ತಾನೂ ಕುಳಿತು ನೊಂದಕೈಯಿಂದಲೆ ತಾಳ ತಟ್ಟಿದರು. ಗುರುರಾಜ ಮಾರ್ಪಳಿಯವರು ರಾಗ ಸಂಯೋಜಿಸಿದರು. ಹಾಡುಗಳು ಸಿದ್ಧಗೊಂಡವು. ಮನೆಮನೆಗಳಲ್ಲಿ ಹಾಡುಗಳಿಗೆ ಬೇಡಿಕೆ ಬಂತು. ಗುಂಪಿನೊಂದಿಗೆ ಕರೆದ ಮನೆಗೆ ತೆರಳಿ ಹಾಡುವ ಪರಿಪಾಠ ಬೆಳೆಯಿತು.  ಸೀಡಿರೂಪವನ್ನೂ ತಾಳಿತು. ಬಹಳ ಹಿಂದೆ ತಿಂಗಳುಗಟ್ಟಲೆ ಬೆನ್ನು ನೋವಿನಿಂದ ಮಲಗಿದ್ದ ಕಾಲದಲ್ಲೇ ಆನಂದತೀರ್ಥರ ಭಕ್ತಿಗೀತೆಗಳು ಕನ್ನಡ ರೂಪಾಂತರಗೊಂಡವು. ನೋವಿನಿಂದ ಬಿಡುಗಡೆ ಹೊಂದಿದರು ಎಂಬುದನ್ನೂ ಸ್ಮರಿಸಬಹುದು. “ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ”

“ಆವಾಸೇ ವಾ ಪ್ರವಾಸೇ ವಾ ಸರ್ವಾವಸ್ಥಾಂಗತೋ ಜಪೇತ್”

“ಸುಮ್ಮನೆ ನಿಂತಾಗ, ಕುಳಿತಿರುವಾಗ, ಅಥವಾ ಪ್ರಯಾಣದಲ್ಲಿ ಎಲ್ಲ ಕಾಲದಲ್ಲೂ ನಾಮಸ್ಮರಣೆ ಮಾಡುತ್ತಿರಬೇಕು.” ಇದು ದೇವರ ಎಚ್ಚರ ಎಂದಿಗೂ ತಪ್ಪದಿರಲಿ ಎಂದು ಹಿರಿಕರು ಕೊಟ್ಟ ಅಪ್ಪಣೆ. ಪ್ರಯಾಣದ  ಹೊತ್ತು ಊರು  ಹಿಂಸರಿಯುತ್ತಿದ್ದರೆ ಪಂಚಸ್ತುತಿ, ಸಹಸ್ರನಾಮ, ಗುರುಸ್ತೋತ್ರಗಳ  ಪರಾಯಣ ಜಪ ಬಿಡದೆ ಮುಂದುವರಿಯುತ್ತಿರುತ್ತದೆ. ಮೊದಲು ಪುಂಡರೀಕಾಕ್ಷನ ನೆನೆದು, ಇರುವ ಸ್ಥಿತಿಯಲ್ಲೇಜಪಿಸುತ್ತಾರೆ. ನೀರಿನ ಜಳಕ ಹೊರಮೈಯನ್ನು ತೊಳೆಯುತ್ತದೆ. ಆದರೆ ಪುಂಡರೀಕಾಕ್ಷಾಯ ನಮಃ ಎಂಬ ಮಂತ್ರಸ್ನಾನ ಹೊರ-ಒಳ ಮೈ-ಮನ ಎಲ್ಲವನ್ನೂ ಶುಚಿಗೊಳಿಸುತ್ತದೆ. ಇದನ್ನು ತಿಳಿದು ಜಪಿಸಿದವರು ಶುಚಿಯಾಗುತ್ತಾರೆ. ಕಾಲ-ಸ್ಥಳ-ಅವಸ್ಥೆ-ದೋಷಗಳ ಲೆಕ್ಕ ಹಾಕುತ್ತ ಕುಳಿತರೆ ನಮ್ಮ ಕಾಲ ಮುಗಿದಿರುತ್ತದೆ. ಹೀಗೆ ದೊಡ್ಡವರು ನಡೆಯಿಂದಲು ನಮಗೆ ಬೇಕಾದ್ದನ್ನು ನುಡಿಯುತ್ತಲೇ ಇರುತ್ತಾರೆ. ಕೇಳುವ ಕಿವಿ ಬೇಕಷ್ಟೆ. “ವಾಗ್ಯತಃ ಸರ್ವದಾ ಜಪೇತ್”.

ಮಾತಿನ ಮಣೆಯೇರಿ ಸಂವತ್ಸರ ಚಕ್ರವೋಂದನ್ನೇ ಕಳೆದಿದ್ದಾರೆ ಆಚಾರ್ಯರು. ಇದುವರೆಗೂ ಪುಸ್ತಕ, ಬಿಡಿಚೇಟಿಯನ್ನೂ ಹಿಡಿದವರಲ್ಲ. ಬೇಕೆಂದಂತೆ ಶಾರದೆ ನಲಿಯುತ್ತಾಳೆ. ವಿಷಯಗಳ ಪುಂಖಾನುಪುಂಖತೆಗೆ ಎಂಥವರೂ  ಮಾರು ಹೋಗುತ್ತಾರೆ. ಹಾಗೆಂದು ಐತಿಹಾಸಿಕತೆಗಾಗಲಿ, ವಸ್ತುನಿಷ್ಠೆ ನಂಬಿಕೆಗಾಗಲಿ ಆಚಾರ್ಯರ ಮಾತು ತೊಂದರೆಯೊಡ್ಡುವುದಿಲ್ಲ. ತಮ್ಮವರೇ ತಪ್ಪು ಹೇಳಿದ್ದರೂ ಒಪ್ಪಿಕೊಳ್ಳುವುದಿಲ್ಲ. ಅವರ ಹೊಂದಾಣಿಕೆ ಎಂದಿದ್ದರೂ ಸತ್ಯದ ಜೊತೆಗೆ ಮಾತ್ರ.

ಸಿಂಹಮಾಸದ ಕೃಷ್ಣ ಅಷ್ಟಮಿಯಂದೇ ಕೃಷ್ಣನ ಹುಟ್ಟು ಹಬ್ಬದ ಆಚರಣೆ ಸರಿ, ಕನಕನಿಗೊಲಿದ ಕೃಷ್ಣ ತಿರುಗಿಲ್ಲ, ಈಗಿರುವ ಯಾವ ಲಿಪಿಯೂ ಸಂಸ್ಕೃತದ್ದಲ್ಲ (ಕೆಲವರಿಗೆ ಈ ಮಾತು ಇನ್ನೂ ಅರ್ಥವಾಗಿಲ್ಲ), ಗಣಪತಿಯ ಹುಟ್ಟು ಶಿವನಿಂದಲೇ, ಕೃಷ್ಣನೇ ಶ್ರೀನಿವಾಸ ಮತ್ತು ವಿಠ್ಠಲ ಹೊರತು ಬೇರೆ ಅವತಾರವಲ್ಲ, ಸಂಖ್ಯ ಕೂಡ ಭೇದದಂತೆ ದ್ವಿನಿಷ್ಠವಲ್ಲ, ಓಂಕಾರ ಸೂತ್ರಾವಯವವಲ್ಲ, ಸಂಸ್ಕೃತದ ಪ್ರತಿಪದವೂ ನಿರ್ವಚನದಿಂದ ಕೂಡಿದೆ, ಸಾಧುಶಬ್ದಗಳಲ್ಲಿ ಎರಡು ವಿಧ; ಪಾಣಿನೀಯ ಮತ್ತು ಅಪಾಣಿನೀಯ, ಪದಪಾಠ ಅಪೌರುಷೇಯವಲ್ಲ, ಆಯಾ ಕ್ಷೇತ್ರದ ವ್ಯಾಕರಣವನ್ನು ಕಲಿತು ಮುರಿಯುವುದೇ ಕ್ರಿಯಾಶೀಲತೆ, ವೃತ್ತಿಜ್ಞಾನಕ್ಕೆ ಅಳಿವಿಲ್ಲ, ಪ್ರಾಚೀನರಿಗೂ ವಿಜ್ಞಾನದ ಮೂಲಭೂತ ಸಂಗತಿಗಳ ಪ್ರವೇಶಿಕೆ ಇತ್ತು, ಭಾರತೀಯ ಸಂಸ್ಕೃತಿಯ ಸಾರವನ್ನು ಯಥಾವತ್ತಾಗಿ ಪರಿಚಯಿಸುವ ಶಕ್ತಿ ಆಂಗ್ಲಭಾಷೆಗೆ ಇಲ್ಲ; ಇದರಿಂದ ಅನರ್ಥವೇ ಆಗಿದೆ, ಮಹಾಭಾರತ ಒಬ್ಬನೇ ವ್ಯಾಸನಿಂದ ರಚನೆಗೊಂಡದ್ದು, ಮಹಾಭಾರತವನ್ನು ಗಣಪತಿ ಬರೆದಿಲ್ಲ, ಮೊದಲಾದ ಸಂಗತಿಗಳನ್ನು ಆಚಾರ್ಯರು ದೃಢವಾಗಿ ಪ್ರತಿಪಾದಿಸುತ್ತಾರೆ. ಆಚಾರ್ಯರದ್ದು ರಾಜಿ ಇಲ್ಲದ ಹಾದಿ : ವ್ಯವಸಾಯಾತ್ಮಿಕಾ ಬುದ್ಧಿರೇಕೇಹ…..

ಪ್ರಾಣಾಗ್ನಿಸೂತ್ರ, ಪ್ರತನ ಪ್ರಯೋಗ ಮೀಮಾಂಸೆಗಳ ಸೂತ್ರಗಳನ್ನು ರಚಿಸಿ ಸೂತ್ರಕಾರರಾದರು. ಅವುಗಳಿಗೆ ಭಾಷ್ಯಗಳ ನೀಡಿ ಭಾಷ್ಯಕಾರರೂ ಆದರು. ತಾತ್ಪರ್ಯ ನಿರ್ಣಯ, ಮೊದಲಾದ ಪ್ರಮುಖ ಕೃತಿಗಳಿಗೆ ವ್ಯಾಖ್ಯಾನವನ್ನೂ ಕೊಟ್ಟರು. ಟಿಪ್ಪಣಿ ತಾತ್ಪರ್ಯ ಬರೆಯುವ ಮೂಲಕ ಶಾಸ್ತ್ರಪರಂಪರೆಯನ್ನು ಜೀವಂತವಾಗಿರಿಸಿದರು. ಅನುವಾದಗಳ ಮೂಲಕ ಸಂಸ್ಕೃತದ ಹೂರಣವನ್ನು ಕನ್ನಡದಲ್ಲಿ ಬಡಿಸಿದರು. ರುಚಿಯಾದ ಕವನಗಳ ಮೂಲಕ ವೇದಾಂತದ ಸ್ಪರ್ಶದೊಂದಿಗೆ ರಸಿಕರ ಮನಗೆದ್ದರು. ವಿಮರ್ಶೆ ಲೇಖನಗಳ ಮೂಲಕ ಬರವಣಿಗೆಯ ಹೊಸ ಹಾದಿ ತುಳಿದರು. ದಾರಿಯಾದರು. ಗುರಿಯಾದರು. “ಪ್ರಜಾತಂತುಂ ಮಾವ್ಯವಚ್ಛೇತ್ಸೀ:”

ಪದ್ಮಶ್ರೀ, ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ, ಗೌರವ ಡಾಕ್ಟರೇಟ್ ಮೊದಲಾದ ನೂರಾರು ಪ್ರಶಸ್ತಿಗಳು ಬನ್ನಂಜೆಯವರನ್ನು ಅರಸಿ ಬಂದವು. ಪ್ರಶಸ್ತಿ ಬಾರದಾಗ ಬಾಗಲಿಲ್ಲ, ಬಂದಾಗ ಬೀಗಲಿಲ್ಲ. ಜರೆದಾಗ ಜಾರಲಿಲ್ಲ. ಹೊಗಳಿದಾಗ ಜಿಗಿಯಲಿಲ್ಲ. ಅಪಮಾನಗೈದ ತಿಳಿಗೇಡಿ ಅಹಂಕಾರಿಗಳಿಗೆ ಔದಾಸೀನ್ಯದ ಮದ್ದರೆದರು. ಟೀಕೆಗಳಲ್ಲಿ ವಾಸ್ತವವಿದ್ದರೆ ಆತ್ಮವಿಮರ್ಶೆ. ಇಲ್ಲದಿದ್ದರೆ ನಗುವಿನೊಡನೆ ಮೌನಕ್ಕೆ ಶರಣಾಗುವುದು. ಕೆಸರಿಗೆ ಕಲ್ಲೆಸೆವ ದಡ್ಡತನವನ್ನು ಬಿಟ್ಟಷ್ಟು ಕ್ಷೇಮ ಅಲ್ಲವೇ?  “ಸ್ಥಿತಧೀರ್ಮುನಿರುಚ್ಯತೆ”.

“ಸತತಂ ಕೀರ್ತಯಂತೋ ಮಾಂ” ಎಂಬ ಶ್ಲೋಕಕ್ಕೆ ಶಿಷ್ಯೆಯಾಗಿ ಬಂದವಳು ತನಗೆ ಮೂಡಿದ ಚಿಂತನೆಯನ್ನು ಬಿತ್ತರಿಸಿದಳು. “ತತ ಎಂದರೆ ತಂತಿವಾದ್ಯ ವೀಣೆ, ನಾರದರಂತೆ ವೀಣೆ ಹಿಡಿದು ಹಾಡುವವರ ಒಳಿತನ್ನು ತಾನು ನೋಡುವೆ ಎಂದು ಅರ್ಥೈಸಬಹುದಲ್ಲ”. ಆಗ ಬನ್ನಂಜೆಯವರು ಆಕೆಯ ಅರ್ಥವನ್ನು ಬಹು ಮೆಚ್ಚಿದರು. ಹೊಸ ಅರ್ಥ ಹೊಳಿದ ಗುರುವೆಂದು ಕೊಂಡಾಡಿದರು. ಪಾಠಗಳಲ್ಲೂ “ನೀವು ಪ್ರಶ್ನೆ ಹಾಕಿದಷ್ಟು ನಾನು ಚಿಂತನೆಗೆ ತೊಡಗುವುದಾಗುತ್ತದೆ” ಎಂದು ಸೌಜನ್ಯ ತೋರುತ್ತಾರೆ. “ವಾರೀವ ಸಂತೋ ಹಿ ಗುಣಾಂಶ ತೋಷಿಣಃ”

ಮಾಸ್ತಿ ಮಂದಿರದಲ್ಲಿ ‘ವಾಲ್ಮೀಕಿ ಕಂಡ ರಾಮಾಯಣ’  ಪುಸ್ತಕ ಬಿಡುಗಡೆ. ಪುಸ್ತಕ ಬಿಡುಗಡೆ ಮಾಡಲು ಯಾರನ್ನೂ ಕರೆದಿರಲಿಲ್ಲ. ಆದರೆ ಕರೆಯದೆ ಬಂದ ನಿಜವಾದ ‘ಅತಿಥಿ’ ವೇದಿಕೆ ಏರಿತ್ತು. ಹನುಮನ ರೂಪದಲ್ಲಿ ಬಂದ ರಾಮಭಕ್ತ ಕೋತಿ ಪುಸ್ತಕ ಬಿಡಿಸಿತು. ಕೊಟ್ಟ ಹಣ್ಣು ತಿಂದಿತು. ದಾಂಧಲೆ ಮಾಡದೆ ನೆರೆದಿದ್ದ ಭಕ್ತರನ್ನು ಭಾವುಕಲೋಕಕ್ಕೆ ಕರೆದೊಯ್ದಿತು. ಇಂದಿಗೂ ಇದರ ವೀಡಿಯೊ ಮುದ್ರಣ ಯೂಟ್ಯೂಬ್ ನಲ್ಲಿ ದೊರೆಯುತ್ತದೆ. “ಸ ಕಾರಣಂ ಕಾರಣಸ್ತತೋಪಿ”

ಆಚಾರ್ಯರು ತನ್ನನ್ನು ತೋಡಿಕೊಂಡ ಕವಿತೆಯ ಸಾಲು ಬಲು ಸುಂದರ. ಮಾರ್ಗದರ್ಶಿಯೂ ಹೌದು.

“ಹೆಣ್ಣನ್ನು ಗೆದ್ದೆ, ಹೆಣ್ಣು ವೇದಾಂತವಾಯಿತು

ವೇದಾಂತವನು ಗೆದ್ದೆ ವೇದಾಂತ ಹೆಣ್ಣಾಯಿತು ।

ಗೆದ್ದಲು ಹಿಡಿದ ಪುಸ್ತಕದ ಒಳಪುಟದಂತೆ

ನನ್ನತನ ಒಳಗೊಳಗೆ ಮಣ್ಣಾಯಿತು ।।”

ಬಾಳುವೆಯ ಪ್ರತಿ ಹೆಜ್ಜೆಯೂ ಪಾಠದ ಮೆಟ್ಟಿಲುಗಳು. ಅಧ್ಯಾತ್ಮ ತೊಟ್ಟಿಲುಗಳು. ಬೆಸೆದುಕೊಳ್ಳುತ್ತ ಹೋಗುವ ಹೊಸ ಹೊಸ ಸಂಬಂಧಗಳು ಕಸೂತಿಯ ಚಿತ್ತಾರಗಳು. ಹೀಗೆ ಹುತ್ತಗಟ್ಟಿದ ಆಚಾರ್ಯರ ಚಿತ್ತ ಕೆತ್ತಿ ಕಡೆದು ನಿಲ್ಲಿಸಿದ್ದು ವಾಣೀ ವಿಭವವನ್ನು. ಪಕ್ಷಿನೋಟವೆ ಪಾಕ್ಷಿಕ ಪರೀಕ್ಷೆಯ ಪಠ್ಯದಷ್ಟಾಯಿತು.

೨೫೦೦೦ ಗಂಟೆಗಳಷ್ಟು ಕಾಲದ ಬನ್ನಂಜೆಯವರ ಮಾತಿನ ಮುದ್ರಿಕೆ ಸಂಗ್ರಹವಾಗಿದೆ. ಇದು ಯಾಂತ್ರಿಕ ಜಗತ್ತು ಕಣ್ ಬಿಟ್ಟ ಬಳಿಕದ ಸೊತ್ತು. ಅದಕ್ಕೂ ಮೊದಲಿದ್ದು ಯಾರಿಗೆ ಗೊತ್ತು? ಈ ಉಳಿದಿರುವುದು ಕೇವಲ ಅಂಶದಿಂದ ಹತ್ತು. ಬರಹಗಳು, ಮಾತುಗಳು, ಚಿತ್ರಗಳು ಕಳೆದದ್ದು ಎಷ್ಟೋ.. ಉಳಿದದ್ದು ಇಷ್ಟು.ಇದೇ ನೂರು ಬದುಕಿಗಾಗುವಷ್ಟು. ಮತ್ತೆ ಮತ್ತೆ ಸಿಗಲಿ ಇವರ ಜೊತೆಗೆ ಹುಟ್ಟು. ಆಚಾರ್ಯರು ಬಾಲ್ಯದಲ್ಲಿ ಒಳ್ಳೆಯ ಚಿತ್ರಕಾರರೂ ಆಗಿದ್ದರು. ವೇದಾಂತದ ಏಕಾಂತ ಅಧ್ಯಯನಕ್ಕಾಗಿ ಅದಕ್ಕು ತಿಲಾಂಜಲಿಯಿತ್ತರು.

“ಭದ್ರಂ ನೋ ಅಪಿವಾತಯ ಮನಃ”

ಶಿಸ್ತು, ಸಮಯಪಾಲನೆ, ನಾಜೂಕುತನ, ನಿರಾಡಂಬರತೆ, ಎಚ್ಚರ, ಆಳವಾದ ಚಿಂತನ, ಅಗಾಧವಾದ ನೆನಪಿನಶಕ್ತಿ, ಜೀವನಾಸಕ್ತಿ, ಕುತೂಹಲ, ತಿಳಿವು, ಭಕ್ತಿ, ವೈಚಾರಿಕತೆ, ರಸಿಕತೆ ಇವೆಲ್ಲ ಒಂದಾಗಿ ಮೂರ್ತವಾದರೆ ಅದು ಬನ್ನಂಜೆಯಾಗುತ್ತದೆ.

ಬನ್ನಂಜೆ ಗೋವಿಂದಾಚಾರ್ಯ ಎನ್ನುವ ಪದ ಈಗ ಕೇವಲ ನಾಮಸೂಚಕವಾಗಿ ಉಳಿದಿಲ್ಲ . ಭಾಷ್ಯ , ವ್ಯಾಖ್ಯೆ ಟೀಕೆಗಳಿಂದ ವಿವರಿಸಿದಷ್ಟು ಮುಗಿಯದ ಪ್ರಜ್ಞಾಸೂತ್ರ . ವಾಕ್ ತತ್ವವನ್ನು ಜೀರ್ಣಿಸಿಕೊಳ್ಳಲು ಜಪಿಸಬೇಕಾದ , ಕಿವಿಯಲ್ಲಿ ಮತ್ತೆ ಮತ್ತೆ ನಿನದಿಸುವ ಅಷ್ಟಕ್ಷರಸೂತ್ರ . ” ಬನ್ನಂಜೆ ಗೋವಿಂದಾಚಾರ್ಯ “

“ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ”

पदवाक्यप्रमाणज्ञं महवरातं तपोनिधिम् |

गोविन्दपण्डितं वन्दे गोविन्दपदतल्लजम्  ||

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು