ಶ್ಲೋಕ – ೧೦ : ಹನ್ನೊಂದಕ್ಕಿಂತ ಏಳು ದೊಡ್ಡದು

ಹನ್ನೊಂದಕ್ಕಿಂತ ಏಳು ದೊಡ್ಡದು

ಆದರೆ ಮುಂದಿಟ್ಟ ಅಡಿ ಹಿಂದಿಡುವಂತಿಲ್ಲ. ಕಣಕ್ಕೆ ಇಳಿದ ಮೇಲೆ ಇನ್ನು ಯೋಚಿಸಿ ಫಲವಿಲ್ಲ. ಏನಾದರೂ ಮಾಡಿ ಗೆಲ್ಲಲೇಬೇಕು. ಏನಿದ್ದರೂ ೧೧ ಅಕ್ಷೋಹಿಣಿ ತನ್ನ ಬಳಿಯಿಲ್ಲವೇ? ಹೀಗೆ ಏನೆಲ್ಲ ಅತ್ಮಸಮರ್ಥನೆ ಮಾಡಿಕೊಂಡರೂ ದುರ್ಯೋಧನನ ಸುಪ್ತಪ್ರಜ್ಞೆ  ಈ ಹನ್ನೊಂದಕ್ಕಿಂತ ಆ ಏಳೇ ದೊಡ್ಡ ಸಂಖ್ಯೆ ಎಂದು ಒಳಗಿನಿಂದ ಮೊಳಗುತ್ತಿದೆ. ಅದನ್ನು ಅದುಮಿಡಲಾಗದೆ ಅವನು ಆಚಾರ್ಯದ್ರೋಣರ ಮುಂದೆ ತೋಡಿಕೊಳ್ಳುತ್ತಾನೆ-

ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್         ೧೦

[ಸಾಕಾಗದೇನೋ, ಅದರಿಂದ, ಭೀಷ್ಮರ ಕಾಪಿನಲ್ಲಿರುವ ನಮ್ಮ ಪಡೆ. ಸಾಕಾದೀತು ಇದು, ಭೀಮನ ಕಾಪಿನಲ್ಲಿರುವ ಇವರ, ಪಾಂಡವರ ಪಡೆ.]

ತನ್ನ ಒಳಬಗೆಯ ಅನಿಸಿಕೆಗೆ ದುರ್ಯೋಧನ ಇಲ್ಲಿ ಸ್ಪಷ್ಟವಾದ ರೂಪ ಕೊಟ್ಟ. ತಮ್ಮ ಸಂಖ್ಯಾಬಲ ಎಷ್ಟೇ ಇರಲಿ. ಈಗಣ ಪರಿಸ್ಥಿತಿ ನೋಡಿದರೆ-ಗೆಲುವು ತಮ್ಮದಲ್ಲ, ಪಾಂಡವರದ್ದೇ ಎನ್ನುವುದು ನಿಶ್ಚಿತ. ಯದ್ಧದ ಪ್ರಾರಂಭದ ಕ್ಷಣಗಳಲ್ಲಿಯೆ ದುರ್ಯೋಧನನ ಅಂತರಾತ್ಮ ಅವನಿಗೆ ಕಣಿ ಹೇಳಿಬಿಟ್ಟಿದೆ. ತಡೆದುಕೊಳ್ಳಲಾರದೆ ಅವನು ಅದನ್ನು ದ್ರೋಣಾಚಾರ್ಯರ ಮುಂದೆ ತೋಡಿಕೊಂಡುಬಿಡುತ್ತಾನೆ.

ಸಂಪ್ರದಾಯವಾದಿಗಳಾದ ಅನೇಕ ಮಂದಿ ಟೀಕಾಕಾರರಿಗೆ ಈ ಶ್ಲೋಕ ಒಂದು ಸವಾಲಾಗಿ ಪರಿಣಮಿಸಿದೆ. ಮನಃಶಾಸ್ತ್ರದ ಸೂಕ್ಷ್ಮ ಎಳೆಗಳನ್ನು ಈ ಪದ್ಯಗಳು ಸುಂದರವಾಗಿ ತೆರೆದು ತೋರಿದರೂ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಸಂಪೂರ್ಣವಾಗಿ ಸೋತಿದ್ದಾರೆ.

ಆಚಾರ್ಯಶಂಕರರು, ಆಚಾರ್ಯಮಧ್ವರು ಈ ಶ್ಲೋಕಗಳ ಭಾವ ಸ್ಫುಟವಾಗಿದೆ ಎಂದು ವ್ಯಾಖ್ಯಾನ ಬರೆಯದೆ ಬಿಟ್ಟರು. ಆದರೆ ಮುಂದಿನ ವ್ಯಾಖ್ಯಾನಕಾರರು ಕೆಲವರು ಅಷ್ಟು ಎತ್ತರಕ್ಕೆ ಏರಲಾರದೆ ಹೋದರು. ಅವರು ಗೊಂದಲಕ್ಕೊಳಗಾಗಿ ತಪ್ಪು ನಿರ್ಧಾರಕ್ಕೆ ಬಂದರು. ಇಡಿಯ ಶ್ಲೋಕಕ್ಕೆ ತಪ್ಪು ಅರ್ಥ ಬರೆದರು. ಈ ಶ್ಲೋಕದ ಪದಗಳ ಅರ್ಥದ ಸಂದಿಗ್ಧತೆ-ನಿಗೂಢತೆಗಳೂ ಅವರನ್ನು ಗೊಂದಲ ಗೆಡಿಸಿದವು. ಹೀಗಾಗಿ ಗೀತೆಯ ಮೂಲಸ್ಫೂರ್ತಿಗೇ ವಿರುದ್ಧವಾದ ಅರ್ಥವನ್ನು ಅವರು ಬರೆದರು.

ಗೊಂದಲಕ್ಕೊಳಗಾದ ವ್ಯಾಖ್ಯಾನಕಾರರ ವಿವರಣೆಯೇನು, ಅವರ ಅಂಥ ಗೊಂದಲಕ್ಕೆ ಕಾರಣವೇನು ಎನ್ನುವುದನ್ನು ನಾವು ಈಗ ನೋಡೋಣ-

ಪರ್ಯಾಪ್ತ-ಅಪರ್ಯಾಪ್ತ ಎನ್ನುವ ಪದಗಳ ದ್ವಂದ್ವಾರ್ಥವೆ ಅವರ ತಪ್ಪು ನಿರ್ಧಾರಕ್ಕೆ ಮೂಲ ಕಾರಣ. ಪರ್ಯಾಪ್ತ=ಸೀಮಿತ, ಅಪರ್ಯಾಪ್ತ=ಅಸೀಮ, (Abundant), ಎಂಬ ಅರ್ಥವೂ ಬಳಕೆಯಲ್ಲಿದೆ. ಪರ್ಯಾಪ್ತ=ಸಮರ್ಥ (Competant), ಅಪರ್ಯಾಪ್ತ=ಸಾಕಷ್ಟು ಸಮರ್ಥವಲ್ಲದ್ದು ಎನ್ನುವ ಇನ್ನೊಂದು ಅರ್ಥವೂ ಈ ಪದಗಳಿಗಿದೆ.

ಈ ದ್ವಂದ್ವವೆ ವ್ಯಾಖ್ಯಾನಕಾರರನ್ನು ದ್ವಂದ್ವದಲ್ಲಿ ಸಿಲುಕಿಸಿದ್ದು. ಪರ್ಯಾಪ್ತ ಎಂದರೆ ಸೀಮಿತ, ಅಸಮರ್ಥ ಎಂದೂ ಆಗಬಹುದು; ಸಮರ್ಥ ಎಂದೂ ಆಗಬಹುದು. ದಾರಿತಪ್ಪಿದ ವ್ಯಾಖ್ಯಾನಕಾರರು ಮೊದಲನೆಯ ಅರ್ಥವನ್ನು ಅಯ್ದುಕೊಂಡರು. ಅತಿಶಯವಾದ ಆತ್ಮವಿಶ್ವಾಸದಿಂದ ಯುದ್ಧಕ್ಕಿಳಿದ ದುರ್ಯೋಧನನ ಬಾಯಲ್ಲಿ ಈಗ ಸೋಲಿನ, ನಿರಾಶೆಯ ಉದ್ಗಾರ ಬರುವುದು ಶಕ್ಯವಿಲ್ಲ ಎಂದು ಭಾವಿಸಿ ಅವರು ಇಂಥ ಪ್ರಮಾದ ಮಾಡಿದರು.

ಅವರ ಪ್ರಕಾರ ಶ್ಲೋಕದ ಅರ್ಥ ಹೀಗಿದೆ-‘ಭೀಷ್ಮರ ಸೇನಾಪತ್ಯದಲ್ಲಿ ತಮ್ಮ ಬೃಹತ್ ಸೇನೆ ಪಾಂಡವರನ್ನು ಸೋಲಿಸಲು ಸಾಕಷ್ಟು ಸಮರ್ಥವಾಗಿದೆ. ಆದರೆ ಭೀಮನಿಂದ ರಕ್ಷಿತವಾದ ಈ ಪಾಂಡವರ ಸೇನೆ ನಮಗೆ ಎಣೆಯಲ್ಲ; ನಮ್ಮನ್ನು ಎದುರಿಸುವಷ್ಟು ಸಮರ್ಥವಲ್ಲ.’ ಈ ಅರ್ಥ ಇಲ್ಲಿ ಹೊಂದಿಕೆಯಾಗುವುದೇ ಎನ್ನು ವುದನ್ನು ನೋಡೋಣ.

ದ್ರೋಣರ ಬಳಿ ದುರ್ಯೋಧನ ಮಾತನಾಡಿದ ಧಾಟಿಯನ್ನು ನಾವು ನೋಡಿದ್ದೇವೆ. ಅವನು ಪಾಂಡವರ ಕಡೆ ಹನ್ನೊಂದು ಮಂದಿ, ಮತ್ತು ಸಮಷ್ಟಿಯಾಗಿ ಹದಿನೆಂಟು ಮಂದಿ ವೀರರನ್ನು ಉಲ್ಲೇಖಿಸಿದರೆ ತನ್ನ ಕಡೆ ಬರಿಯ ಏಳು ಮಂದಿಯನ್ನು ಉಲ್ಲೇಖಿಸುತ್ತಾನೆ. ಆ ಏಳು ಮಂದಿಯಲ್ಲೂ ಅವನಿಗೆ ಪೂರ್ತಿ ಭರವಸೆ ಇಲ್ಲ ಎನ್ನುವುದು ಅವನ ಮಾತಿನ ಧಾಟಿಯಲ್ಲೆ ಸ್ಫುಟವಾಗುತ್ತದೆ. ಅವನು ವಿಜಯದ ಸಂದೇಹದಿಂದಲೇ ಭಯಗ್ರಸ್ತನಾಗಿಯೆ ಗುರುಗಳ ಬಳಿ ಬಂದವನು. ಭೀಷ್ಮರ ಬಗ್ಗೆ ಸ್ವಲ್ಪ ನಿಗಾ ಇರಲಿ-ಎಂದು ದ್ರೋಣರನ್ನು ಎಚ್ಚರಿಸುವುದು ಅವನ ಉದ್ದೇಶ ವಾಗಿತ್ತು. ಇಷ್ಟೆಲ್ಲ ಬೆಳವಣಿಗೆಯ ಅನಂತರ ಇದ್ದಕ್ಕಿದ್ದಂತೆ ಅವನು ಪಾಂಡವರ ಸೇನೆ ತಮಗೆ ಗಣ್ಯವೇ ಅಲ್ಲ-ತಾವೇ ಗೆಲ್ಲುವವರು ಎಂದು ಹೇಳುವುದು ಈ ಪ್ರಕರಣಕ್ಕೆ ಹೊಂದುವ ಮಾತಲ್ಲ.

ಮುಂದೆಯೂ ಪಾಂಡವರ ಶಂಖನಾದ ಕೇಳಿ ಕೌರವರ ಎದೆ ನಡುಗಿತು ಎನ್ನುವ ಮಾತು ಬರುತ್ತದೆ. ಅದಕ್ಕನುಗುಣವಾಗಿ ದುರ್ಯೋಧನನ ಸಂಶಯ-ಪಿಶಾಚಿಯೆ ಈ ಶ್ಲೋಕದಲ್ಲಿ ಬಹಿರಂಗಗೊಂಡಿದೆ ಎನ್ನುವುದೇ ಸರಿಯಾದ ವಿವರಣೆ.

ಹಿಂದೆ ಪಾಂಡವರ ಸೇನೆಯನ್ನು ‘ಮಹತೀಂ ಚಮೂಂ’-ಬಹು ದೊಡ್ಡ ಸೇನೆ ಎಂದು ದುರ್ಯೋಧನನೇ ಹೇಳಿದ್ದಾನೆ. ಸೇನೆ-ಸೇನಾಪತಿಗಳ ವಿವರ ನೀಡಿದ್ದಾನೆ. ಪಾಂಡವರ ಮಕ್ಕಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾನೆ. ಪ್ರತಿಯಾಗಿ ತನ್ನ ಪಕ್ಷದ ಸೇನೆಯ ಬಗ್ಗೆ ಹೆಗ್ಗಳಿಕೆಯ ಮಾತಿಲ್ಲ; ಸೇನಾಪತಿಯ ಉಲ್ಲೇಖವಿಲ್ಲ; ತನ್ನ ತಮ್ಮಂದಿರ, ಮಕ್ಕಳ ಉಲ್ಲೇಖ ಕೂಡ ಇಲ್ಲ. ಇರುವ ೧೧ ಅಕ್ಷೋಹಿಣಿ ನನಗಾಗಿ ಜೀವ ತೊರೆಯಲು ಬಂದದ್ದು (ತ್ಯಕ್ತಜೀವಿತಾಃ) ಎನ್ನುವ ಮಾತಿನ ಭಂಗಿ ಬೇರೆ.

ಮುಂದೆ ಅವನನ್ನು ಖುಷಿಪಡಿಸಲೆಂದೆ ಭೀಷ್ಮರು ಶಂಖನಾದ-ಸಿಂಹನಾದ ಮಾಡಿದರು ಎಂಬ ಮಾತು ಬರುತ್ತದೆ. ಹಾಗಾದರೆ ಅವನು ಮೊದಲು ನಾಖುಷಿಯಲ್ಲಿ, ಬೇಸರದಿಂದಲೇ ಬಂದಿದ್ದ ಎನ್ನುವ ಮಾತು ಸ್ಪಷ್ಟ ತಾನೆ? ಅವನ ಬೇಸರಕ್ಕೆ ಕಾರಣ ಜಯದ ಬಗ್ಗೆ ಅವನ ಭರವಸೆ ಕುಸಿದದ್ದೆ ಎನ್ನುವುದು ಸ್ಪಷ್ಟ. ಇಷ್ಟೆಲ್ಲ ಪೂರ್ವೋತ್ತರಗಳಿಗೆ ವಿರುದ್ಧವಾಗಿ ಇಲ್ಲಿ ಮಾತ್ರ ಅವನು ಜಯದ ಭರವಸೆಯ ಘೋಷಣೆ ಮಾಡುವುದು ಹೇಗೆ ಸಾಧ್ಯ? ವ್ಯಾಖ್ಯಾನಕಾರರ ಬುದ್ಧಿ ಏಕೆ ಇಷ್ಟು ಮಂಕಾಯಿತು!

ಈ ಶ್ಲೋಕವನ್ನೆ ಸರಿಯಾಗಿ ಗಮನಿಸಿದರೆ ಅವರ ಅರ್ಥ ಎಷ್ಟು ಜೊಳ್ಳು ಎನ್ನುವುದು ಸ್ಫುಟವಾಗುತ್ತದೆ.

ಇಲ್ಲಿ ತನ್ನ ಸೇನೆ ಭೀಷ್ಮಾಭಿರಕ್ಷಿತ ಎಂದರೆ ಪಾಂಡವರ ಸೇನೆ ಭೀಮಾಭಿರಕ್ಷಿತ ಎಂದಿದ್ದಾನೆ. ಇದೇನು ಪ್ರಾಸಕ್ಕಾಗಿ ಬಂದದ್ದಲ್ಲ. ಹಾಗಾದರೆ ಈ ಮಾತಿನ ಉದ್ದೇಶ ವೇನು?

ಭೀಷ್ಮರು ಕೌರವರ ಸೇನೆಯ ನಾಯಕ, ಅದರಿಂದ ಅದು ಭೀಷ್ಮಾಭಿರಕ್ಷಿತ ಎನ್ನುವುದು ಸರಿ. ಅದಕ್ಕೆ ಪ್ರತಿಯಾಗಿ ಇಲ್ಲಿಯೂ ಸೇನಾಪತಿಯಾದ ಧಷ್ಟದ್ಯುಮ್ನನನ್ನು ಉಲ್ಲೇಖಿಸಿ, ಪರ್ಯಾಪ್ತಂ ತ್ವಿದಮೇತೇಷಾಂ ಧಷ್ಟದ್ಯುಮ್ನಾಭಿರಕ್ಷಿತಮ್, ಎನ್ನಬೇಕಿತ್ತಲ್ಲ. ಅದರ ಬದಲು ದುರ್ಯೋಧನ ‘ಭೀಮಾಭಿರಕ್ಷಿತಮ್’ ಎಂದು ಏಕೆ ಹೇಳಿದ? ಈ ಮಾತಿನ ಧ್ವನಿಯನ್ನು ಸರಿಯಾಗಿ ಗ್ರಹಿಸದೆ ಪ್ರಾಚೀನ ಟೀಕಾಕಾರರು ಕೆಲವರು ಬಹು ದೊಡ್ಡ ಪ್ರಮಾದ ಮಾಡಿದರು! ಆನಂದಗಿರಿ, ಮಧುಸೂದನಸರಸ್ವತಿ, ನೀಲಕಂಠರಂಥ ಟೀಕಾಕಾರದಿಗ್ಗಜಗಳೂ ಇಲ್ಲಿ ಮುಗ್ಗರಿಸಿದ್ದು ಅಚ್ಚರಿ ತರುವಂಥ ಸಂಗತಿ.

ಆಚಾರ್ಯರಾಮಾನುಜರು ಮತ್ತು ವೇದಾಂತದೇಶಿಕರು, ಶ್ರೀಧರಸ್ವಾಮಿ, ವಲ್ಲಭಾಚಾರ್ಯರು, ರಾಘವೇಂದ್ರ ಸ್ವಾಮಿ, ವನಮಾಲಿಮಿಶ್ರರಂಥ ಬೆರಳೆಣಿಕೆಯ ಕೆಲವು ಟೀಕಾಕಾರರು ಮಾತ್ರವೇ ಗೀತೆಯ ಹೃದಯವನ್ನು ಸ್ಪರ್ಶಿಸಿ ವಿವರಣೆ ನೀಡಿದ್ದಾರೆ. ಭೀಷ್ಮರಿಗೆ ಪ್ರತಿಯಾಗಿ ಭೀಮನನ್ನು ಉಲ್ಲೇಖಿಸಿದ ಮರ್ಮವನ್ನು ಅವರು ಸರಿಯಾ ಗಿಯೇ ಗುರುತಿಸಿದ್ದಾರೆ.

ಗೀತೆಗೊಂದು ವಿಚಿತ್ರ ಹೆಸರಿನ ಟೀಕೆಯಿದೆ: ಪೈಶಾಚಭಾಷ್ಯ. ಹಿಂದೆ ‘ಮಹಾರಥ’ ಶಬ್ದದ ವಿವರಣೆಯ ಪ್ರಸಂಗದಲ್ಲಿ ಈತನ ಉಲ್ಲೇಖ ಬಂದಿದೆ. ಏಕೆ ಈ ಹೆಸರು ಬಂತೋ! ಅದನ್ನು ಬರೆದವನು ಹನುಮಂತನಂತೆ: ‘ಶ್ರೀಹುನುಮದ್ವಿರಚಿತೇ ಪೈಶಾಚಭಾಷ್ಯೇ’. ಶಂಕರರ ಭಾಷ್ಯವನ್ನು ಅಕ್ಷರಶಃ ಅನುಸರಿಸುವ ಇವನು ತ್ರೇತಾಯುಗದ ಹನುಮಂತನಂತು ಅಲ್ಲ. ಶಾಂಕರಮತಾವಲಂಬಿಯಾದ ಹನುಮಂತಯ್ಯನೋ ಹನುಮಂತರಾಯನೋ ಇರಬೇಕು. ಅಚ್ಚರಿಯೆಂದರೆ ಈತ ಈ ಶ್ಲೋಕಕ್ಕೆ ಅರ್ಥ ಹೇಳುವಾಗ ಉಳಿದ ಶಂಕರ-ಪಂಥದ ಟೀಕಾಕಾರರಿಗಿಂತ ಬೇರೆಯಾಗಿ ನಿಲ್ಲುತ್ತಾನೆ. ನಿಜವಾಗಿ ಶಂಕರರ ಹೃದಯವನ್ನು ಗ್ರಹಿಸಿದವರಂತೆ ಸುಂದರವಾದ ವಿವರಣೆಯನ್ನು ನೀಡುತ್ತಾನೆ-

ತತ್=ತಥಾಭೂತೈರ್ವೀರೈರ್ಯುಕ್ತಮಪಿ, ಭೀಷ್ಮೇಣ ಅಭಿತೋ ರಕ್ಷಿತಮಪಿ, ಅಸ್ಮಾಕಂ ಬಲಂ=ಸೈನ್ಯಮ್, ಅಪರ್ಯಾಪ್ತಮ್=ತೈಃ ಸಹ ಯೋದ್ಧುಮಸಮರ್ಥಂ ಭಾತಿ  ಇದಂ ಏತೇಷಾಮ್=ಪಾಂಡವಾನಾಮ್, ಬಲಂ ಭೀಮೇನ ಅಭಿತೋ ರಕ್ಷಿತಂ ಸತ್ ಪರ್ಯಾಪ್ತಂ ಸಮರ್ಥಂ ಭಾತಿ  ಭೀಷ್ಮಸ್ಯ ಉಭಯಪಕ್ಷಪಾತಿತ್ವಾತ್ ಅಸ್ಮದ್ಬಲಂ ಪಾಂಡವಸೈನ್ಯಂ ಪ್ರತ್ಯಸಮರ್ಥಮ್, ಭೀಮಸ್ಯ ಏಕಪಕ್ಷಪಾತಿತ್ವಾತ್ ಏತತ್ ಬಲಮಸ್ಮದ್ಬಲಂ ಪ್ರತಿ ಸಮರ್ಥಮ್ |

ದುರ್ಯೋಧನನಿಗೆ ಪಾಂಡವರಲ್ಲಿ ಹೆಚ್ಚು ದ್ವೇಷ ಇದ್ದದ್ದು, ಸ್ಪರ್ಧೆ ಇದ್ದದ್ದು ಭೀಮನ ಬಗೆಗೆಯೆ. ಬಾಲ್ಯದಿಂದಲೂ ವಿಷಪಾನಾದಿಗಳಿಂದ ಅವನು ಭೀಮನನ್ನು ಮುಗಿಸಬಯಸಿದ್ದ. ಕೊನೆಗೆ ಅಂತ್ಯಕಾಲದಲ್ಲು ಅವನು ಗದಾಯುದ್ಧ ಬಯಸಿದ್ದು ಭೀಮನ ಜತೆಗೆಯೆ. ಭೀಮನಿಂದ ಮಾತ್ರವೇ ತನ್ನ ಭವಿಷ್ಯತ್ತಿಗೆ ಅಪಾಯ ಎಂದು ಅವನು ಭಾವಿಸಿದ್ದ. ಅದಕ್ಕೆ ಸರಿಯಾಗಿ ಕಾಡಿಗೆ ಹೊರಡುವ ಮುನ್ನ ಭೀಮ ಕೌರವ ಸಂಹಾರದ ಪ್ರತಿಜ್ಞೆ ಮಾಡಿದ್ದ. ದುರ್ಯೋಧನನ ತೊಡೆ ಮುರಿಯುವುದಾಗಿ, ದುಃಶಾಸನನ ನೆತ್ತರು ಕುಡಿಯುವುದಾಗಿ ಪ್ರತಿಜ್ಞೆ ಮಾಡಿದ್ದ. ಮೆತ್ರೇಯ ಋಷಿಯಿಂದಲೂ ಅಂಥ ಒಂದು ಶಾಪ ದುರ್ಯೋಧನನಿಗಿದೆ. ಅವನ ಭಯವೆಲ್ಲ ಭೀಮನಲ್ಲಿ ಕೇಂದ್ರಿತವಾಗಿದೆ. ಪ್ರಪಂಚದ ಗದಾಯುದ್ಧಪಟುಗಳಲ್ಲೇ ಅದ್ವಿತೀಯನಾದ ಕೀಚಕನನ್ನೂ ಕೊಂದಮೇಲಂತು ಅವನ ಭಯ ಮಡುಗಟ್ಟಿದೆ.

ಯುದ್ಧ ಮಾಡದ ಕಷ್ಣನಿಗೆ ಅವನು ಹೆದರಲಿಲ್ಲ. ಗದಾಯುದ್ಧದಲ್ಲಿ ಅರ್ಜುನನ್ನು ತಾನು ಸೋಲಿಸಿಬಿಡಬಲ್ಲೆ  ಎನ್ನುವ ಭಾವನೆ ಅವನದಾಗಿತ್ತು. ಹಾಗಾಗಿ ಪಾಂಡವ ಸೇನೆಯಲ್ಲಿ ಅವನ ಕಣ್ಣು ಕುಕ್ಕುವ ವ್ಯಕ್ತಿ ಭೀಮನೊಬ್ಬನೆ. ವ್ಯವಹಾರದಲ್ಲಿ ಧಷ್ಟ ದ್ಯುಮ್ನ ನಾಯಕನಾದರೂ ದುರ್ಯೋಧನನ ದಷ್ಟಿಯಲ್ಲಿ ಭೀಮನೇ ಆ ಸೇನೆಯ ನೇತಾರ.

ಹೀಗೆ ಒಂದೆಡೆ ಛಲದಂಕಮಲ್ಲನಾದ, ತನ್ನ ಹಠವನ್ನು ಬಿಡದೆ ತೀರಿಸುವ ತಾಕತ್ತುಳ್ಳ ಕಡುವೈರಿಯಾದ ಭೀಮ; ಜಗತ್ತಿನಲ್ಲಿಯೆ ಅಸಮಸಾಹಸಿಯೂ ಗದಾಯುದ್ಧ ನಿಪುಣನೂ ಆದ ಮಹಾವೀರ. ಇನ್ನೊಂದೆಡೆ ಒಳಗಿಂದೊಳಗೆ ಪಾಂಡವರನ್ನು  ಪ್ರೀತಿಸುವ, ಅಂತರಂಗದಲ್ಲಿ ಅವರ ಜಯವನ್ನೇ ಹಾರೈಸುವ, ಮುಪ್ಪಿನಂಗಳದಲ್ಲಿ ನಿಂತಿರುವ ಭೀಷ್ಮ.

ಈ ಇಬ್ಬಗೆಯ ದ್ವಂದ್ವದಲ್ಲಿ ಸಿಕ್ಕಿದ ದುರ್ಯೋಧನ ಯೋಚಿಸುತ್ತಾನೆ. ಭೀಷ್ಮರ ನೇತತ್ವದ ತನ್ನ ಸೇನೆ ಗೆಲ್ಲುವುದುಂಟೇ? ಮಹಾವೀರನಾದ, ಛಲ ಬಿಡದ ಸಾಹಸಿಯಾದ ಭೀಮನ ಬೆಂಬಲವುಳ್ಳ ಪಾಂಡವರ ಸೇನೆ ಸೋಲುವುದು ಸಾಧ್ಯವೆ? ಇದು ದುರ್ಯೋಧನನ ಮನದ ದುಗುಡ.

ಇಲ್ಲಿ ಇನ್ನೂ ಒಂದು ಚಮತ್ಕಾರವಿದೆ. ತನ್ನ ಸೇನೆಯನ್ನು ತತ್ ಬಲಂ=‘ಆ ಸೇನೆ’ ಎಂದು ಪರೋಕ್ಷವಾಗಿ ಉಲ್ಲೇಖಿಸುತ್ತಾನೆ. (ತತ್=ಆದ್ದರಿಂದ, ಪಾಂಡವರಂತೆ ತಮ್ಮಲ್ಲಿ ಒಗ್ಗಟ್ಟಿನ ಸಜ್ಜು ಸಂಘಟನೆ ಇಲ್ಲದೆ ಇರುವುದರಿಂದ ಎನ್ನುವ ಅರ್ಥಾಂತರ ವಂತು ಇದ್ದೇ ಇದೆ.) ಪಾಂಡವರ ಸೇನೆಯನ್ನು ಇದಂ ಬಲಂ=‘ಈ ಸೇನೆ’ ಎಂದು ತೀರ ಸಮೀಪದಲ್ಲಿ ಇರುವಂತೆ ಉಲ್ಲೇಖಿಸುತ್ತಾನೆ. ತನ್ನ ಸೇನೆ ಬಳಿಯಲ್ಲಿದೆ. ಅದನ್ನು ‘ಈ ಸೇನೆ’ ಎನ್ನಬೇಕು. ಪಾಂಡವರ ಸೇನೆ ದೂರದಲ್ಲಿದೆ. ಅದನ್ನು ‘ಆ ಸೇನೆ’ ಎನ್ನಬೇಕು. ಆದರೆ ಶ್ಲೋಕದಲ್ಲಿ ‘ಈ ಸೇನೆ’ ಆ ಸೇನೆಯಾಗಿದೆ ‘ಆ ಸೇನೆ’ ‘ಈ ಸೇನೆ’ಯಾಗಿದೆ. ಈ ಬದಲಾವಣೆಯಿಂದ ಒಂದು ಹೊಸ ಅರ್ಥಧ್ವನಿ ಹೊರಡುತ್ತದೆ.

ತನ್ನ ಬಳಿಯೇ ಇದ್ದ ತನ್ನ ಸೇನೆ ಎಂದೋ ಕೈಮೀರಿ ತನ್ನ ಕೈತಪ್ಪಿಹೋದಂತೆ ದುರ್ಯೋಧನನಿಗೆ ಅನ್ನಿಸತೊಡಗಿದೆ. ಅದಕ್ಕೆಂದೆ ಅದನ್ನು ‘ಆ ಸೇನೆ’ ಎನ್ನುತ್ತಾನೆ. ಪಾಂಡವರ ಸೇನೆ, ದೂರದಲ್ಲಿ ಅವರ ಶಿಬಿರದ ಬಳಿಯಿದ್ದರೂ-ಈಗಾಗಲೇ ಅವನ ಮೇಲೆ ಎರಗಿ ಸುತ್ತುವರಿದಂತೆ ಅವನಿಗೆ ಅನ್ನಿಸತೊಡಗಿದೆ. ಅದಕ್ಕೆಂದೆ ಅದನ್ನು ‘ಈ ಸೇನೆ’ ಎನ್ನುತ್ತಾನೆ. ಹೀಗೆ ದುರ್ಯೋಧನ ಸಂಪೂರ್ಣ ಮನೋರೋಗಿಯಾಗಿ ಪರಿ ವರ್ತನೆಗೊಂಡಿದ್ದಾನೆ-

ತತ್=ಆದ್ದರಿಂದ, ಭೀಷ್ಮ+ಅಭಿರಕ್ಷಿತಮ್=ಭೀಷ್ಮರ ಸೇನಾಪತ್ಯದಿಂದ ರಕ್ಷಿತವಾದ, ಅಸ್ಮಾಕಂ=ನಮ್ಮ, ಬಲಂ=ಸೇನೆ, ಅಪರ್ಯಾಪ್ತಮ್=ಸಾಕಷ್ಟು ಸಜ್ಜಿಲ್ಲದ್ದು, ಏತೇಷಾಂ= ಈ ಪಾಂಡವರ, ಇದಂ=ಈ ಸೇನೆ, ಭೀಮ+ಅಭಿರಕ್ಷಿತಂ=ಭೀಮನಿಂದ ರಕ್ಷಿತವಾಗಿ, ಪರ್ಯಾಪ್ತಮ್=ಗೆದೆಯಲು ಸಾಕಷ್ಟು ಸಜ್ಜಾಗಿದೆ.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು