ಶ್ಲೋಕ – ೧೨ : ಭೀಷ್ಮರ ಸಿಂಹನಾದ

ದ್ರೋಣರ ಮುಂದೆ ತನ್ನ ಅಳಲನ್ನು ತೊಡಿಕೊಂಡ ದುರ್ಯೋಧನ ಇದನ್ನು ರಹಸ್ಯವಾಗಿಯೇನು ಮಾಡಿಲ್ಲ. ಪಕ್ಕದಲ್ಲೇ ಭೀಷ್ಮರಿದ್ದಾರೆ. ಅವರಿಗೆ ಕೇಳಿಸು ವಂತೆಯೆ ಇವನು ದ್ರೋಣರ ಬಳಿ ಈ ಮಾತನಾಡಿದ್ದಾನೆ. ಭೀಷ್ಮರಿಗೆ ಹೇಗಾಗಿರಬೇಡ!

ತನ್ನ ಮೊಮ್ಮಗ ದ್ರೋಣರ ಬಳಿ ತನ್ನ ಬಗೆಗೆಯೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾನೆ. ತಾನಾದರೋ ತನ್ನ ವಯಸ್ಸಿನ ಸ್ಥಿತಿಯನ್ನು ಮರೆತು ರಾಜಪೀಠಕ್ಕೆ ಗೌರವ ಕೊಡುವ ಒಂದೇ ಕಾರಣಕ್ಕಾಗಿ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಯುದ್ಧರಂಗದ ನೇತೃತ್ವ ವಹಿಸಿದವರು. ಈ ರಾಜಪೀಠದ ರಕ್ಷೆಗಾಗಿ ತನ್ನ ಆಸೆ-ಆಕಾಂಕ್ಷೆಗಳನ್ನೆಲ್ಲ ಬಲಿಕೊಟ್ಟು  ಸಿಂಹಾಸನ ತ್ಯಾಗಮಾಡಿ ಬ್ರಹ್ಮಚಾರಿಯಾಗಿ ಉಳಿದವರು. ಇಲ್ಲವಾದರೆ ಇಂದು ಭೀಷ್ಮರು ಆ ಸಿಂಹಾಸನದಲ್ಲಿ ಕೂಡಬೇಕಿತ್ತು. ಹೀಗೆ ಕುರುವಂಶದ ಅಭಿವೃದ್ಧಿಗಾಗಿ, ರಾಜಪೀಠದ ಗೌರವಕ್ಕಾಗಿ ಸರ್ವಸ್ವವನ್ನೂ ತ್ಯಾಗಮಡಿದ ಭೀಷ್ಮರ ಬಗೆಗೆ ಅವರ ಮೊಮ್ಮಗನಿಂದಲೇ ಇಂಥ ಚುಚ್ಚುಮಾತು. ಅವರಿಗೆ ಎಂಥ ವೇದನೆಯಾಗಿರಬೇಡ! ಆದರೆ ಈ ಮೂರ್ಖನಿಗೆ ತಾನು ಪ್ರಾಮಾಣಿಕವಾಗಿಯೂ ಈ ಯುದ್ಧದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೇನೆ, ತನ್ನ ಸ್ವಂತದ ಹಿತಾಹಿತಗಳನ್ನು ಮರೆತು ರಾಜಪೀಠದ ನಿರ್ಣಯಕ್ಕೆ ಬದ್ಧನಾಗಿದ್ದೇನೆ-ಎಂದು ಯಾವ ಮಾತಿನಿಂದ ತಿಳಿಯಪಡಿಸುವುದು? ಇದು ಮಾತಿನಿಂದ ಹೇಳುವಂಥದಲ್ಲ. ಅದಕ್ಕಾಗಿ ಭೀಷ್ಮರು ಕ್ರಿಯೆಯ ಮೂಲಕವೆ ತನ್ನ ಸಿದ್ಧತೆಯನ್ನು ಸಾರಿದರು ಎನ್ನುತ್ತದೆ ಮುಂದಿನ ಶ್ಲೋಕ

ತಸ್ಯಸಂಜನಯನ್ ಹರ್ಷಂ ಕುರುವದ್ಧಃ ಪಿತಾಮಹಃ
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್           ॥೧ ೨॥

[ಅವನಿಗೀಯುತ್ತ ಸಂತಸವನು ಕುರುಕುಲದ ಮುದಿಯ ಅಜ್ಜ ಸಿಂಹನಾದವಗೈದು ಗಟ್ಟಿಯಾಗಿ ಶಂಖವನ್ನೂದಿದರು ಕಡುಬೀರದವರು.]

ಈ ಹಿಂದಿನ ೯ ಶ್ಲೋಕಗಳಲ್ಲಿ ದುರ್ಯೋಧನ ವಿಷಾದದ ಪರಾಕಾಷ್ಠೆಯನ್ನು ತೋಡಿಕೊಂಡಿದ್ದ. ಯುದ್ಧಮಾಡಿಯೇ ಸಿದ್ಧ ಎಂದು ಕಾಲು ಕೆದಕಿ ಬಂದವ ಯುದ್ಧ ಪ್ರಾರಂಭವಾಗುತ್ತದೆ ಎನ್ನುವಾಗ ಸೋಲಿನ ಭಯದಿಂದ ತತ್ತರಿಸುತ್ತಿದ್ದಾನೆ. ಭೀಷ್ಮರಾಗಿ ಅವರು ಈ ಬೆಳವಣಿಗೆಯಿಂದ ಒಳಗಿಂದೊಳಗೆ ಸಂತೋಷಪಟ್ಟರೂ ಸೇನಾಪತಿಯಾಗಿ ಅವರು ತನ್ನ ಕರ್ತವ್ಯ ಮಾಡಬೇಕಿತ್ತು. ದುರ್ಯೋಧನನ ವಿಷಾದವನ್ನು ತೊಡೆದು ಹಾಕಿ ಅವನಲ್ಲಿ ಸ್ಫೂರ್ತಿ ತುಂಬಬೇಕಿತ್ತು. ಅದಕ್ಕಾಗಿ ಅವರು ತರುಣರೂ ನಾಚುವಂಥ ಗಂಭೀರಧ್ವನಿಯಲ್ಲಿ ಅಬ್ಬರಿಸಿದರು. ಈ ರಣಗರ್ಜನೆಗೆ ಇಡಿಯ ಸೇನೆ ಮೈಯೆಲ್ಲ ಕಿವಿಯಾಗಿ ಸ್ಫೂರ್ತಿ ತುಂಬಿ ನಿಂತಿತು. ಅವರ ಉಚ್ಚ ಧ್ವನಿಯ ಸಿಂಹನಾದಕ್ಕೆ ಇಡಿಯ ಸೇನೆಯೆ ಸ್ಪಂದಿಸಿತು; ಯುದ್ಧಕ್ಕೆ ಅಣಿಯಾಯಿತು. ಜತೆಗೆ ಶಂಖನಾದ. ಸೇನಾಪತಿ ಶಂಖ ಊದಿದನೆಂದರೆ ಯುದ್ಧಕ್ಕೆ ಅಣಿಯಾಗಿ, ಇನ್ನೇನು ಹೋರಾಟ ಪ್ರಾರಂಭವಾಗಿ ಬಿಡುತ್ತದೆ ಎನ್ನುವ ಸಂಕೇತ. ಅವರ ಸಿಂಹ ನಾದವೂ ಉಚ್ಚವಾದದ್ದು; ಶಂಖನಾದವೂ ಉಚ್ಚವಾದದ್ದು. ಎಂಥ ಸಾಮಾನ್ಯ ಸೆನಿಕನಿಗೂ ವೀರಾವೇಶ ಬರಿಸುವಂಥದು. ಹೀಗೆ ಎರಡೂ ಕಡೆಗೆ ಅನ್ವಯ ವಾಗುವಂತೆ ‘ಉಚ್ಚೆಃ’ ಎಂಬ ಪದವನ್ನು ಮಧ್ಯದಲ್ಲಿ ಪ್ರಯೋಗಿಸಲಾಗಿದೆ: ‘ಸಿಂಹನಾದಂ ವಿನದ್ಯ ಉಚ್ಚೆಃ ಶಂಖಂ ದಧ್ಮೌ’, [ಸಿಂಹನಾದಂ ಉಚ್ಚೆಃ ವಿನದ್ಯ ಶಂಖಂ ಉಚ್ಚೆಃ ದಧ್ಮೌ.]

ಅಪ್ರತಿಮವೀರರಾದ ಭೀಷ್ಮರ ಸಿಂಹನಾದ, ಶಂಖನಾದ, ಎರಡೂ ರಣಹೇಡಿಗಳಲ್ಲಿ ಗೆದೆಯುವ ಹುಮ್ಮಸ್ಸು ತುಂಬಿಸುವ ಗಂಭೀರನಾದ. ಅದಕ್ಕೆಂದೆ ಭೀಷ್ಮರನ್ನು ‘ಪ್ರತಾಪವಾನ್’ ಎಂದು ಉಲ್ಲೇಖಿಸುತ್ತದೆ ಗೀತೆ.

ಮೊದಲು ಅವರ ವಯಸ್ಸಿಗೆ ಸಂಬಂಧಪಟ್ಟ ವಿಶೇಷಣಗಳು ಬಂದಿವೆ: ಕುರುವೃದ್ಧ ಮತ್ತು ಪಿತಾಮಹ.

ಅವರು ಕುರುವಂಶದಲ್ಲೆ ಹಿರಿಯ ವ್ಯಕ್ತಿ, ಅವರಷ್ಟು ವಯಸ್ಸಾದವರು, ಹಿರಿಯರು, ಅನುಭವಿಗಳು ಕುರುವಂಶದಲ್ಲಿ ಇನ್ನೊಬ್ಬರಿಲ್ಲ.

ವಾಸ್ತವವಾಗಿ ಭೀಷ್ಮರಿಗಿಂತಲು ವಯೋವದ್ಧರು ಆ ಸೇನೆಯಲ್ಲಿದ್ದರು. ಬಾಹ್ಲೀಕ ರಾಜ ಶಂತನುವಿನ ಅಣ್ಣ, ಭೀಷ್ಮಾಚಾರ್ಯರ ದೊಡ್ಡಪ್ಪ. ಬಾಹ್ಲೀಕನ ಮಗ ಸೋಮದತ್ತ ಸುಮಾರಾಗಿ ಭೀಷ್ಮಾಚಾರ್ಯರ ವಯಸ್ಸಿನವನೆ. ಸ್ವಲ್ಪ ಹಿರಿಯ ಇದ್ದರೂ ಇರ ಬಹುದು. ಆದರೆ ಅವರು ಯಾರೂ ಈಗ ಕುರುವಂಶದ ಹಿರಿಯರಾಗಿ ಉಳಿದಿಲ್ಲ. ಬಾಹ್ಲೀಕದೇಶದ ರಾಜನಿಗೆ ದತ್ತಕ್ಕೆ ಹೋದದ್ದರಿಂದ ಆತ ಬಾಹ್ಲೀಕನೆಂದೆ ಪ್ರಸಿದ್ಧನಾದ. ಅಥವಾ ಅವನಿಂದ ಆ ದೇಶ ಬಾಹ್ಲೀಕವಾಯಿತು. ಇವನ ಮಗಳು ರೋಹಿಣಿ ವಸುದೇವನ ಪತ್ನಿ; ಬಲರಾಮನ ತಾಯಿ. ಹೀಗಾಗಿ ಭೀಷ್ಮರ ದೊಡ್ಡಪ್ಪ ಕುರುವಂಶದಿಂದ ಕಳಚಿಕೊಂಡು ಬಾಹ್ಲೀಕ ವಂಶಕ್ಕೆ ಸೇರಿಹೋದ. ಸದ್ಯಕ್ಕೆ ಕುರುವಂಶದಲ್ಲಿರುವ ಅತ್ಯಂತ ಹಿರಿಯರೆಂದರೆ ಭೀಷ್ಮರೊಬ್ಬರೆ.

ಬರಿಯ ಹಿರಿಯ ಅಷ್ಟೆ ಅಲ್ಲ. ಕೌರವರಿಗೆ ಅಜ್ಜನಾಗಿ ನಿಂತು, ತಾನು ಹಕ್ಕಿನ ಸಿಂಹಾಸನ ತ್ಯಾಗ ಮಾಡಿ ಇವರನ್ನು ಬೆಳೆಸಿದವರು. ಬರಿಯ ಕೌರವರಿಗಷ್ಟೇ ಅಲ್ಲ; ಇಡಿ ಕುರುವಂಶಕ್ಕೆ ‘ಪಿತಾಮಹ’ನೆನ್ನಿಸಿ, ಎಲ್ಲರಿಗೂ ಅಜ್ಜನಾಗಿ ಪ್ರೀತಿ-ಗೌರವ ಗಳನ್ನು ಗಳಿಸಿಕೊಂಡ ಮಹಾವ್ಯಕ್ತಿ.

ಈ  ಎರಡು  ವಿಶೇಷಣಗಳು ಭೀಷ್ಮರ  ಹಿರಿತನವನ್ನು   ಸಾರುವುದರ ಜೊತೆಗೆಯೇ    ದುರ್ಯೋಧನನ  ಸಣ್ಣತನವನ್ನು ಸ್ಫುಟಗೊಳಿಸುತ್ತದೆ. ಇಂಥ ವಂಶದ ಹಿರಿಯರ ಮುಂದೆ, ತಾನು ಯಾರ ತೊಡೆಯಲ್ಲಿ ಬೆಳೆದನೊ ಅಂಥ ಅಜ್ಜನ ಮುಂದೆ ಮೊಮ್ಮಗನಾದ ದುರ್ಯೋಧನ ಇಂಥ ಧೂರ್ತತನದ ಮಾತನ್ನಾಡಿದ! ಅವನ ಅವಿವೇಕಕ್ಕೆ ಪಾರವೇ ಇಲ್ಲ.

ಇಂಥ ಹಣ್ಣುಹಣ್ಣು  ಮುದುಕ ಎಂದಾಗ ಅವರ ಯುದ್ಧಸಾಮರ್ಥ್ಯದ ಬಗೆಗೆ ಯಾರಿಗಾದರೂ ದುರ್ಯೋಧನನಂತೆಯೆ ಸಂಶಯ ಬರಬಾರದು ಎಂದು ಶ್ಲೋಕದ ಕೊನೆಯಲ್ಲಿ ಅವರನ್ನು ‘ಪ್ರತಾಪವಾನ್’ ಎಂದು ಕರೆಯಲಾಗಿದೆ. ವಯೋ ಮಾನದಲ್ಲಿ ಅವರು ವೃದ್ಧರು ನಿಜ; ಆದರೆ ಅವರ ಪೌರುಷಕ್ಕೆ ಎಂದೂ ಮುಪ್ಪು ಬರಲಿಲ್ಲ. ಆ ಕಾಲದಲ್ಲಿ ಅವರನ್ನು ಎದುರಿಸಿ ಗೆದ್ದೇನೆಂಬ ಅದಟು ಯಾವ ತರುಣನಿಗೂ ಇರಲಿಲ್ಲ. ಅವರು ಯೋಗಬಲದಿಂದ ಜರೆಯನ್ನು ಗೆದ್ದ ಅಪ್ರತಿಮ ವೀರ. ಅವರ ಪ್ರತಾಪಕ್ಕೆ ಅವರ ಪ್ರತಾಪ ಮಾತ್ರವೇ ಸಾಟಿ. ‘ಪ್ರತಾಪವಾನ್’ ಎಂಬ ಪದಕ್ಕೆ ಇಷ್ಟು ಅರ್ಥಗಳನ್ನು ಧ್ವನಿಸುವ ಶಕ್ತಿ ಇದೆ: ಪ್ರತಾಪವಾನ್=ಅತಿಶಯವಾದ ಪ್ರತಾಪ ಉಳ್ಳವನು; ಎಂದೂ ಅಳಿಯದ ಪ್ರತಾಪಉಳ್ಳವನು; ಆ ಕಾಲದ ವೀರರೆಲ್ಲ ಹಾಡಿ ಹೊಗಳಿದ ಭಾರಿ ಪ್ರತಾಪ ಉಳ್ಳವನು.

ಆದರೂ ದುರ್ಯೋಧನನಿಗೆ ಈ ಅಜ್ಜನ ಪ್ರಾಮಾಣಿಕತೆಯ ಬಗೆಗೆ ನಂಬಿಕೆಯಿಲ್ಲ. ಭೀಷ್ಮರನ್ನು ಸೇನಾಪತಿಯ ಪಟ್ಟದಲ್ಲಿ ಕೂಡಿಸಿಯೂ ಅವನು ದ್ರೋಣರ ಬಳಿ ವಿಷಾದವನ್ನು ತೋಡಿಕೊಳ್ಳುತ್ತಿದ್ದಾನೆ. ಈ ಹುಡುಗನಿಗೆ ಭೀಷ್ಮರಿಗೆ ಅವನು ಹುಡುಗನಾದರೂ ಆಗ ಅವನ ವಯಸ್ಸು 71ಶ್ರಿ. ಉತ್ಸಾಹ ತುಂಬುವುದು ಸೇನಾಪತಿಯಾಗಿ ತನ್ನ ಕರ್ತವ್ಯ: ತಸ್ಯ ಸಂಜನಯನ್ ಹರ್ಷಂ. ಅದಕ್ಕಾಗಿ ಅವರ ಸಿಂಹನಾದ ಮತ್ತು ಶಂಖನಾದ.

ಕುರು+ವೃದ್ಧಃ=ಕುರುವಂಶದ ಹಿರಿಯರಾದ, ಪ್ರತಾಪವಾನ್=ಮಹಾಪ್ರತಾಪಶಾಲಿ ಯಾದ, ಪಿತಾಮಹಃ= ಅಜ್ಜ ಭೀಷ್ಮಾಚಾರ್ಯರು, ತಸ್ಯ=ಆ ದುರ್ಯೋಧನನಿಗೆ, ಹರ್ಷಂ=ಸಂತಸವನ್ನು, ಸಂಜನಯನ್= ಉಂಟುಮಾಡುತ್ತಾ, ಉಚ್ಚೆಃ=ಗಟ್ಟಿಯಾಗಿ, ಸಿಂಹ+ನಾದಂ=ಸಿಂಹದಂಥ ಗರ್ಜನೆಯನ್ನು, ವಿನದ್ಯ=ಗೆದು, ಉಚ್ಚೆಃ=ಗಟ್ಟಿ ಯಾಗಿ, ಶಂಖಂ=ಶಂಖವನ್ನು, ದಧ್ಮೌ=ಊದಿದರು.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು