ಶ್ಲೋಕ – ೧೧

ದುರ್ಯೋಧನನ ಮುಂದಿನ ಉದ್ಗಾರ ಇದಕ್ಕೆ ಅನುಗುಣವಾಗಿಯೇ ಇದೆ.

ದ್ರೋಣರ ಬಳಿ ತನ್ನ ಅಳಲನ್ನು ದೀರ್ಘವಾಗಿ ತೋಡಿಕೊಂಡ ದುರ್ಯೋಧನ ಎಚ್ಚರಿಕೆಯ ನುಡಿಯೊಡನೆ ಮಾತನ್ನು ಹೀಗೆ ಮುಗಿಸುತ್ತಾನೆ

ಅಯನೇಷು ಸರ್ವೇಷು ಯಥಾಭಾಗಮವಸ್ಥಿತಾಃ |
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ                       ೧೧

[ಹಗೆಯ ಪಡೆ ನುಗ್ಗಿಬಹ ಎಲ್ಲ ಕುರುದಾರಿಗಳಲು, ನಿಮನಿಮಗೆ ನಿಯತವಾದೆಡೆಗಳಲಿ ನಿಂತು, ಭೀಷ್ಮರನೆ ಸುತ್ತಲೂ ಕಾಯುತಿರಿ ನೀವೆಲ್ಲರೂ ಸೇರಿ.]

ಅಯನ ಎಂದರೆ ಶತ್ರುಗಳು ಹೊಂಚುಹಾಕಿ ತಮ್ಮ ಸೇನೆಯ ಒಳಕ್ಕೆ ನುಗ್ಗಬಹುದಾದ ಒಳದಾರಿಗಳು. ಆಯಕಟ್ಟಿನ ಪ್ರದೇಶಗಳು ಮತ್ತು ಸೇನೆಯ ಪ್ರಮುಖ ನೆಲೆಗಳು ಕೂಡ. ಪ್ರದೇಶಗಳಲ್ಲಿ

ಆಯಕಟ್ಟಿನ ಸ್ಥಳಗಳಲ್ಲಿ ಯಾರನ್ನು ನಿಲ್ಲಿಸಬೇಕು; ಪ್ರಮುಖ ಸೇನಾನೆಲೆಗಳನ್ನು ಯಾರು ಕಾಯಬೇಕು ಎನ್ನುವ ನಿರ್ಧಾರ ಸೇನಾಪತಿಗಳಾದ ಭೀಷ್ಮರಿಗೆ ಸಂಬಂಧ ಪಟ್ಟದ್ದು. ಆದರೆ ದುರ್ಯೋಧನನಿಗೆ ಅವರ ಮೇಲಿದ್ದ ಭರವಸೆ ಕುಸಿಯ ತೊಡಗಿದೆ. ಅವರು ಸೇನಾಪತಿಗಳಾದದ್ದೆ ತನ್ನ ಕಡೆಯ ದುರಂತ ಎನ್ನುವಂತೆ ಅವನು ಈ ಮೊದಲು ಮಾತನಾಡಿದ್ದಾನೆ. ಅದಕ್ಕೆ ಅನುಗುಣವಾಗಿಯೆ ಇದೆ ಈ ಉಪಸಂಹಾರ.

ಭೀಷ್ಮರ ವಿರುದ್ಧ ದ್ರೋಣರನ್ನು ಎತ್ತಿಕಟ್ಟುವ ಕೆಲಸವನ್ನು ದುರ್ಯೋಧ ನ ಮಾಡುತ್ತಿದ್ದಾನೆ. ಇದರಿಂದ ಇವನು ಇನ್ನಷ್ಟು ದುರಂತವನ್ನು ಆಹ್ವಾನಿಸುತ್ತಿದ್ದಾನೆ ಎನ್ನುವ ಎಚ್ಚರ ಅವನಿಗಿಲ್ಲ.

ಆಯಕಟ್ಟಿನ ಸ್ಥಳಗಳನ್ನು ನೀವೆಲ್ಲ ನೋಡಿಕೊಳ್ಳಿ. ಶತ್ರುಗಳು ಒಳನುಗ್ಗದಂತೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ನೀವೇ ಮಾಡಿಬಿಡಿ. ಭೀಷ್ಮರ ಆಜ್ಞೆಗಾಗಿ ಕಾಯಬೇಡಿ. ಜತೆಗೆ ಪಾಂಡವರ ಪಕ್ಷಪಾತಿಗಳಾದ, ಮುದುಕರಾದ ಭೀಷ್ಮರನ್ನು ಕಣ್ಣಿಟ್ಟು ಕಾಪಾಡುವ ಹೊಣೆಯನ್ನೂ ನಿಮಗೆ ಒಪ್ಪಿಸುತ್ತಿದ್ದೇನೆ-ಎನ್ನುತ್ತಿದ್ದಾನೆ ದುರ್ಯೋಧನ.

ಪಕ್ಕದಲ್ಲೇ ಇದ್ದ ಭೀಷ್ಮರು ಇದನ್ನು ಕೇಳಿಸಿಕೊಳ್ಳುವಂತೆ ಅವರ ವಿರುದ್ಧವಾಗಿ ದ್ರೋಣರ ಮುಂದೆ ಇಂಥ ಮಾತನ್ನಾಡುವ ದುರ್ಯೋಧನನ ಕುಹಕ ಇಲ್ಲಿ ಪರಾಕಾಷ್ಠೆಯನ್ನು ತಲುಪಿದೆ.

ಭವಂತಃ=ನೀವು, ಸರ್ವೇ+ಏವ=ಎಲ್ಲರೂ, ಸರ್ವೇಷು=ಎಲ್ಲಾ, ಅಯನೇಷು+=ಆಯಕಟ್ಟು ಪ್ರದೇಶ  ಗಳಲ್ಲಿ ಕೂಡ, ಯಥಾ+ಭಾಗಂ=ತಕ್ಕಂತೆ ಹಂಚಿಕೊಂಡು, ಅವಸ್ಥಿತಾಃ=ನಿಂತವರಾಗಿ, ಭೀಷ್ಮಮ್+ಏವ= ಭೀಷ್ಮರನ್ನೆ, ಅಭಿರಕ್ಷಂತು ಹಿ= ರಕ್ಷಸಿರಿ.

ಇಲ್ಲಿಗೆ ಗೀತೆಯ ಹನ್ನೊಂದು ಶ್ಲೋಕಗಳು ಮುಗಿದವು. ಹನ್ನೊಂದು ಅಕ್ಷೋಹಿಣೀ ಸೇನೆಯನ್ನು ಕೂಡಿಹಾಕಿ ಯುದ್ಧಕ್ಕೆ ನಿಂತ ದುರ್ಯೋಧನನ ಮತ್ತು ಅವನಪ್ಪ ಧೃತರಾಷ್ಟ್ರನ ಮನಃಸ್ಥಿತಿಯನ್ನು ಚಿತ್ರಿಸುವ ಭಾಗ ಇಲ್ಲಿಗೆ ಮುಗಿಯಿತು. ಮುಂದಿನ ಎಂಟು ಶ್ಲೋಕಗಳಲ್ಲಿ ಎರುಡೂ ಕಡೆಯ ಸೇನೆಯ ಮನಃಸ್ಥಿತಿಯನ್ನು ಚಿತ್ರಿಸಲಾಗಿದೆ. ಅದರ ಅನಂತರ ಅಧ್ಯಾಯದ ಕೊನೆಯ ತನಕ ಅರ್ಜುನನ ಮನೋವಿಜ್ಞಾನದ ವಿಶ್ಲೇಷಣೆ. ಅನಂತರದ ೧೭ ಅಧ್ಯಾಯಗಳಲ್ಲಿ ಶ್ರೀಕೃಷ್ಣನಿಂದ ‘ಸೆಕೋತೆರಪಿ’. ಹೀಗಿದೆ ಗೀತೆಯ ಬೆಳವಣಿಗೆ.

ಮೊದಲ ಈ ಹನ್ನೊಂದು ಶ್ಲೋಕಗಳಿಗೆ ಆಚಾರ್ಯಶಂಕರರಾಗಲಿ, ಆಚಾರ್ಯಮಧ್ವರಾಗಲಿ ಭಾಷ್ಯ ರಚಿಸಿಲ್ಲ. ಹಿನ್ನಲೆ ತಿಳಿದವರಿಗೆ ಈ ಭಾಗ ಸ್ಪಷ್ಟವಾಗಿದೆ ಎಂದು ಅವರು ಭಾಷ್ಯ ರಚಿಸದೆ ಬಿಟ್ಟರು. ಅವತರಣಿಕೆಯಲ್ಲೆ ಈ ಅಧ್ಯಾಯದ ಸಮಗ್ರ ಭಾವವನ್ನು ಕ್ರೋಡೀಕರಿಸಿದ ಅವರು ಕೃಷ್ಣನ ಉಪದೇಶಭಾಗಕ್ಕೆ ಮಾತ್ರವೆ ಭಾಷ್ಯ ರಚಿಸಿದರು. ಆದರೆ ಆಚಾರ್ಯರಾಮಾನುಜರು ಈ ಹನ್ನೊಂದು ಶ್ಲೋಕಗಳ ಒಟ್ಟಂದದ ಅಭಿಪ್ರಾಯವನ್ನು ಹೀಗೆ ಸುಂದರವಾಗಿ ಸಂಗ್ರಹಿಸಿದ್ದಾರೆ-

ಶ್ರೀರಾಮಾನುಜಭಾಷ್ಯ

ಭೀಮಸೇನ ಸ್ವತಃ ತಾನೆ ನಿಂತು ರಕ್ಷಿಸುತ್ತಿರುವ ಪಾಂಡವರ ಸೇನೆಯನ್ನೂ, ಭೀಷ್ಮರಿಂದ ರಕ್ಷಿತವಾದ ತನ್ನ ಸೇನೆಯನ್ನೂ ಪರಿಶೀಲಿಸಿದ ದುರ್ಯೋಧನ, ಪಾಂಡವರ ಸೇನೆ ತಮ್ಮನ್ನು ಗೆಲ್ಲಲು ಸಮರ್ಥವಾಗಿರುವುದನ್ನೂ ತವ್ಮ ಸೇನೆ ಪಾಂಡವರನ್ನು ಸೋಲಿಸಲು ಸಾಕಷ್ಟು ಸಜ್ಜಾಗಿಲ್ಲದಿರುವುದನ್ನೂ ಅಚಾರ್ಯದ್ರೋಣರ ಮುಂದೆ ವಿಜ್ಞಾಪಿಸಿಕೊಂಡು ಒಳಗಿಂದೊಳಗೆ ವಿಷಣ್ಣನಾದನು.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು