ಶ್ಲೋಕ – ೧೩

ಈ ವೀರನಾದದಿಂದ ದುರ್ಯೋಧನನಲ್ಲಿ ಉತ್ಸಾಹ ತುಂಬಿತೋ ಇಲ್ಲವೋ ಗೊತ್ತಿಲ್ಲ. ಆದರೆ ಕೌರವರ ಸೇನೆಯ ಉತ್ಸಾಹ ತುಂಬಿ ಅದು ಯುದ್ಧಕ್ಕೆ ಸಜ್ಜಾಯಿತು ಎನ್ನುತ್ತದೆ ಮುಂದಿನ ಶ್ಲೋಕ-

ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋಭವತ್ ॥ ೧೩॥

[ಬಳಿಕ ಶಂಖಗಳು, ಭೇರಿಗಳು, ತಮಟೆ-ಡೋಲು-ರಣಕಹಳೆಗಳು ಒಡನೆ ಮಾರ್ಮೊಳಗಿದವು. ಆ ಸದ್ದು  ಗದ್ದಲದ ಗೂಡಾಯಿತು.]

ಸೇನಾಪತಿಯ ನಿರ್ದೇಶನಕ್ಕೆ ಇಡಿಯ ಸೇನೆ ಪ್ರತಿಕ್ರಿಯಿಸಿದ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಭೀಷ್ಮರ ಶಂಖಧ್ವನಿಯನ್ನು ಆಲಿಸಿದ ಉಪವಿಭಾಗದ ಮುಖಂ ಡರು, ಅಕ್ಷೋಹಿಣೀಪತಿಗಳು ತಮ್ಮ ಶಂಖವನ್ನೂ ಊದಿ ತಾವು ಸಜ್ಜಾಗಿರುವುದನ್ನು ಸೇನಾಪತಿ ಭೀಷ್ಮರಿಗೆ ತಿಳಿಯಪಡಿಸಿದರು. ಹಾಗೆಯೇ ತಮ್ಮ ಸೈನಿಕರು ಸಜ್ಜಾ ಗಿರುವಂತೆ ಆದೇಶ ಕಳಿಸಲು ತಮ್ಮ ಕೆಳಗಿನ ಸೇನಾನಾಯಕರಿಗೆ ಸಂದೇಶ ಮುಟ್ಟಿಸಿದರು: ತತಃ ಶಂಖಾಶ್ಚ.

ಅನಂತರ ಸೇನೆಯ ಒಂದೊಂದು ವಿಭಾಗದಲ್ಲು ಈ ಸುದ್ದಿ ಮುಟ್ಟಿಸಲು ಸೇನೆಯ ಹರವಿನುದ್ದಕ್ಕು ಅಲ್ಲಲ್ಲಿ ನಿಲ್ಲಿಸಿದ ಭೇರಿಗಳು ಬಾರಿಸಲ್ಪಟ್ಟವು. ಭೇರಿ ಎಂದರೆ ಕೋಟೆ-ಕೊತ್ತಳಗಳಲ್ಲಿ ಸಂದೇಶಗಳ ಸಂಕೇತಕ್ಕಾಗಿ ಇರಿಸುವ ದೊಡ್ಡ ಗಾತ್ರದ ನಗಾರಿ.

ಭೇರಿಯ ಸದ್ದು ಕಿವಿಗೆ ಬಿದ್ದಾಗ ಶಿಬಿರದಲ್ಲಿ ಅಲ್ಲಿ ಇಲ್ಲಿ ಇದ್ದ ಸೈನಿಕರೆಲ್ಲ ಮುಂದಿನ ಆದೇಶಕ್ಕೆ ಅಣಿಯಾಗಿ ನಿಂತರು. ಕವಚ ತೊಟ್ಟು ಶಸ್ತ್ರಪಾಣಿಗಳಾಗಿ ಸಜ್ಜಾಗಿ.

ಅಷ್ಟರಲ್ಲಿ ಪಣವದ ಸದ್ದು ಕೇಳಿಸಿತು. ಪಣವ ಎಂದರೆ ಪ್ರಾಯಃ ತಮಟೆ. ಯಾವುದಾದರೂ ಸಂದೇಶವನ್ನು ಮುಟ್ಟಿಸುವ ಮೊದಲು ಜನರ ಗಮನವನ್ನು ಅತ್ತ ಹರಿಸಲು ಬಾರಿಸುವ ಚರ್ಮವಾದ್ಯವೇ ತಮಟೆ. ಹಿಂದೆ ರಾಜಾಜ್ಞೆಯನ್ನು ಜನರಿಗೆ ಮುಟ್ಟಿಸಲು ಇದೇ ವಿಧಾನವನ್ನು ಅನುಸರಿಸುತ್ತಿದ್ದರು. ತಮಟೆಯ ಸದ್ದು ಕೇಳಿ ಜನರು ಬೀದಿಯಲ್ಲಿ  ನೆರೆಯುತ್ತಿದ್ದರು. ಅನಂತರ ಸಂದೇಶವನ್ನು ರಾಜಸೇವಕ ಓದುತ್ತಿದ್ದ. ಈ ವಾದ್ಯವನ್ನೆ ಟಾಂಟಾಂ ಎನ್ನುತ್ತಾರೆ. ಅದಕೆಂದೆ ಇಂಥ ಸಂದೇಶವನ್ನು ಬೀದಿಯಲ್ಲಿ ಬಿತ್ತರಿಸುವುದಕ್ಕೆ ಟಾಂಟಾಂ ಮಾಡುವುದು ಎನ್ನುವ ಮಾತು ಬಳಕೆಯಲ್ಲಿ ಬಂತು. ಕೆಲವರ ಪ್ರಕಾರ ಪಣವ ಎಂದರೆ ಡೋಲು.

ತಮಟೆಯ ಸದ್ದು ಕಿವಿಗೆ ಬಿದ್ದಾಗ ಸೈನಿಕರೆಲ್ಲ ಮುಂದಿನ ನಿರ್ದೇಶನಕ್ಕಾಗಿ ಮೈಯೆಲ್ಲ ಕಿವಿಯಾಗಿ ಸೆಟೆದು ನಿಂತರು. ಪೂರ್ವನಿರ್ಧಾರದಂತೆ ಸೇನಾವ್ಯೆಹದ ಯಾವ ಭಾಗದಲ್ಲಿ ಯಾರು ಹೇಗೆ ನಿಲ್ಲಬೇಕು ಎನ್ನುವ ಸಂದೇಶವೂ ತಲುಪಿತು. ಅದರಂತೆ ಸೈನಿಕರು ಯುದ್ಧದ ಕೇಂದ್ರಬಿಂದುವಿನತ್ತ, ಮುಂಚೂಣಿಯ ಪ್ರದೇಶಕ್ಕೆ ನಡೆಯ ತೊಡಗಿದರು. ಅವರ ನಡೆಯ ತಾಳಕ್ಕೆ ತಕ್ಕಂತೆ ಆನಕಗಳು ಬಾರಿಸಲ್ಪಟ್ಟವು.

ಮಾರ್ಚ್‌ಫಾಸ್ಟ್ ಮಾಡುವಾಗ ಅದಕ್ಕೆ ತಕ್ಕಂತೆ ಬ್ಯಾಂಡ್ ಬಾರಿಸುತ್ತಾರಲ್ಲ, ಹಾಗೆಯೇ ಇದು. ಶಂಖ-ಭೇರಿ-ಪಣವಗಳು ಮಾರ್ಚಿಂಗ್ ಆರ್ಡರುಗಳು ಇದ್ದಂತೆ. ಆನಕ ನಡೆಯ ತಾಳವನ್ನು ಪ್ರಚೋದಿಸುವ ಹಿಮ್ಮೇಳ ವಾದ್ಯ. ಆನಕ ಎಂದರೆ ಒಂದೇ ಕಡೆಯಲ್ಲಿ  ಢಂ-ಢಂ ಎಂದು ಬಾರಿಸುತ್ತ ಸೈನಿಕರ ಲಯಬದ್ಧ ನಡೆಗೆ ಮಾರ್ಗದರ್ಶನ ನೀಡುವ ಬಹತ್‌ಗಾತ್ರದ ಚರ್ಮವಾದ್ಯ. ಕೆಲವರ ಅಭಿ ಪ್ರಾಯಾದಂತೆ ಆನಕ ಎಂದರೆ ಮದ್ದಳೆ.

ಈ ಮಾಲಿಕೆಯಲ್ಲಿ ಕೊನೆಯದಾಗಿ ಬಂದ ವಾದ್ಯ ಗೋಮುಖ.  ಕೊಂಬು ಅಥವ ಕಹಳೆಯೇ ಗೋಮುಖ. ಸೇನೆಯ ಪಥಚಲನ ಮುಗಿದು ಹೋರಾಟಕ್ಕೆ ನುಗ್ಗುವ ಸನ್ನಾಹವೇ ಕೊಂಬು-ಕಹಳೆ.

ಐದೇ ಎಂದಲ್ಲ. ಎಲ್ಲ ರಣವಾದ್ಯಗಳೂ. ಮಾಂಗಲಿಕವಾಗಿ ಐದರ ಉಲ್ಲೇಖ.

ಹೀಗೆ ಹೆಜ್ಜೆಹೆಜ್ಜೆಯಾಗಿ ಕೌರವಸೇನೆಯ ಯುದ್ಧಸಿದ್ಧತೆಯನ್ನು ಈ ಪದ್ಯದಲ್ಲಿ ಬಂದ ವಾದ್ಯಗಳ ಕ್ರಮ ವ್ಯವಸ್ಥಿತವಾಗಿ ಸೂಚಿಸುತ್ತದೆ. ನೂರಾರು ಶಂಖಗಳು, ಭೇರಿಗಳು, ಪಣವ, ಆನಕ, ಗೋಮುಖಗಳು ಒಂದರ ಮೇಲೊಂದರಂತೆ ಮೊಳಗತೊಡಗಿದಾಗ ಇಡಿಯ ವಾತಾವರಣ ಎಂಥ ಗದ್ದಲದಲ್ಲಿ ಮುಳುಗಿತು ಎನ್ನುವುದನ್ನು ನಾಲ್ಕನೆಯ ಚರಣ ಚಿತ್ರಿಸುತ್ತದೆ: ಸ ಶಬ್ದಸ್ತುಮುಲೋಭವತ್.

ಆ ಧ್ವನಿ ತುಮುಲಧ್ವನಿಯಾಗಿ ದಿಗ್‌ದಿಗಂತಗಳನ್ನು ವ್ಯಾಪಿಸಿತು. ಈ ತುಮುಲ ಧ್ವನಿಗೆ ಎರಡು ಉದ್ದೇಶವಿದೆ: ಒಂದು, ತಮ್ಮ ಸೇನೆಯನ್ನು ಹುರಿದುಂಬಿಸುವುದು; ಎರಡು, ಎದುರಾಳಿಗಳನ್ನು ಎದೆಗೆಡಿಸುವುದು.

ತತಃ=ಭೀಷ್ಮರ ಶಂಖನಾದದ ಅನಂತರ, ಸಹಸಾ+ಏವ=ಒಡನೆಯೆ, ಶಂಖಾಃ= ಇತರ ದಳವಾಯಿಗಳ ಶಂಖಗಳು, ಚ=ಮತ್ತು, ಪಣವ+ಆನಕ+ಗೋಮುಖಾಃ= ತಮಟೆ, ಲಯಬದ್ಧವಾಗಿ ಬಾರಿಸುವ ಪಟಹ, ಕಹಳೆಗಳು, ಅಭ್ಯಹನ್ಯಂತ= ಬಾರಿಸಲ್ಪಟ್ಟವು, ಸಃ=ಆ, ಶಬ್ದಃ=ಸದ್ದು, ತುಮುಲಃ=ಕಿವಿಗಡಚಿಕ್ಕುವಂಥದು, ಅಭವತ್= ಆಯಿತು.

*      *      *

ಭೀಷ್ಮರು ತನ್ನ ಶಂಖನಾದದ ಮೂಲಕ ದುರ್ಯೋಧನನನ್ನು ಸಂತೈಸಲು ಪ್ರಯತ್ನಿಸಿದರು. ತಮ್ಮ ಸೇನೆಗೆ ಯುದ್ಧ ಸಿದ್ಧತೆಯ ಸಂಕೇತ ನೀಡಿದರು. ಜತೆಗೆಯೆ ಪಾಂಡವರ ಸೇನೆಗೆ, ‘ನಾವು ಸಿದ್ಧ. ನಿಮ್ಮ ಪ್ರತ್ಯುತ್ತರ ಬಂದ ಕ್ಷಣದಲ್ಲೆ ಯುದ್ಧಕ್ಕೆ ನಾಂದಿ’, ಎಂದು ಸೂಚಿಸಿದರು. ಇದಕ್ಕೆ ಪಾಂಡವರ ಪ್ರತಿಕ್ರಿಯೆಯೇನು ಎನ್ನುವು ದನ್ನು ಗೀತೆಯ ಮುಂದಿನ ಶ್ಲೋಕಗಳು ವಿವರಿಸುತ್ತವೆ.

ಗೀತೆಯ ಈ ಎರಡು ಶ್ಲೋಕಗಳ ಭಾವವನ್ನು ಶ್ರೀರಾಮಾನುಜರು ಹೀಗೆ ಸಂಗ್ರ ಹಿಸಿದ್ದಾರೆ-

ಶ್ರೀರಾಮಾನುಜಭಾಷ್ಯ

ದುರ್ಯೋಧನನ ವಿಷಾದವನ್ನು ಗುರುತಿಸಿದ ಭೀಷ್ಮರು ಅವನಿಗೆ ಹರ್ಷ ಬರಿಸಲು ಸಿಂಹನಾದವನ್ನೂ, ಶಂಖಧ್ವನಿಯನ್ನೂ ಮಾಡಿದರು ಮತ್ತು ಶಂಖ-ಭೇರೀ ನಿನಾದಗಳಿಂದ ವಿಜಯ ಸೂಚಕವಾದ ಧ್ವನಿಯನ್ನು ಮಾಡಿಸಿದರು.

*      *      *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು