ಶ್ಲೋಕ – ೨

ಸೋಲರಿಯದ ಭೀಷ್ಮರಂತಹ ಕುರುವೃದ್ಧರ ಪಾಡೂ ಹೀಗಾದ ಮೇಲೆ ತನ್ನ ಮಕ್ಕಳ ಗೆಲುವಿನ ಬಗ್ಗೆ ಧೃತರಾಷ್ಟ್ರನ ಮನದಲ್ಲಿ ಭರವಸೆ ಕುಸಿಯತೊಡಗಿತು. ಆದರೆ ಇದು ಹೇಗೆ ಸಾಧ್ಯ? ಭೀಷ್ಮರಂಥವರು ಸೋಲುವುದೆಂದರೇನು? ಈ ಹತ್ತು ದಿನಗಳಲ್ಲಿ ನಡೆದದ್ದಾದರೂ ಏನು? ಒಂದೊಂದು ದಿನವೂ ಯಾರು ಗೆದ್ದರು? ಯಾರು ಸೋತರು? ಯುದ್ಧ ಹೇಗೆ ಮೊದಲಾಯಿತು? ಎಲ್ಲವನ್ನೂ ಕುಲಂಕಷವಾಗಿ ತಿಳಿಯುವ ಬಯಕೆ ಧೃತರಾಷ್ಟ್ರನಿಗೆ. ಈ ಹಿನ್ನೆಲೆಯಲ್ಲಿ ಧೃತರಾಷ್ಟ್ರನ ಈ ಪ್ರಶ್ನೆ ಬಂದಿದೆ: ಕಿಮಕುರ್ವತ ಸಂಜಯ.

ಇದು ಬರಿಯ ಯುದ್ಧದ ಜಿಜ್ಞಾಸೆಯಲ್ಲ. ಯುದ್ಧಪ್ರಾಂಭವಾಗುವ ಮುನ್ನ ಎರಡೂ ಕಡೆಯ ಹಿರಿಯರು ಏನು ಮಾಡಿದರು? ಹೇಗೆ ಯುದ್ಧ ಪ್ರಾರಂಭ ವಾಯಿತು? ಎನ್ನುವ ಮೂಲಪ್ರಶ್ನೆಯನ್ನು ಧೃತರಾಷ್ಟ್ರ ಸಂಜಯನ ಮುಂದೆ ಇರಿಸಿದ್ದಾನೆ. ಧೃತರಾಷ್ಟ್ರನ ಭಾವವನ್ನರಿತ ಸಂಜಯ ಅದಕ್ಕೆ ಅನುಗುಣವಾಗಿಯೇ ಯುದ್ಧದ ಪೂರ್ವಭಾವಿಯಾಗಿ ನಡೆದ ಗೀತೋಪದೇಶವನ್ನು ಹದಿನೆಂಟು ಅಧ್ಯಾಯ ಗಳಲ್ಲಿ ವಿವರಿಸಿ ಭೀಷ್ಮಪರ್ವದ ನಲವತ್ತಮೂರನೆ ಅಧ್ಯಾಯದಲ್ಲಿ ಧರ್ಮರಾಜನ ನಿಲುವನ್ನು ವಿವರಿಸಿ ಅನಂತರವೇ ಹೋರಾಟದ ಕಥೆಯನ್ನು ಬಿತ್ತರಿಸುತ್ತಾನೆ. ಇಷ್ಟು ಹಿನ್ನಲೆಯನ್ನು ತಿಳಿದುಕೊಂಡು ನಾವು ಮುಂದಿನ ಶ್ಲೋಕಕ್ಕೆ ಹೋಗೋಣ.

ಸಂಜಯ ಉವಾಚ

ದೃಷ್ಟ್ವಾ ತು ಪಾಂಡವಾನೀಕಂ ವ್ಯೆಢಂ ದುರ್ಯೋಧನಸ್ತದಾ
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್                    ॥ ೨ ॥

[ಸಂಜಯ ಉತ್ತರಿಸಿದನು: ಕಂಡವನೆ ಸಜ್ಜಾಗಿ ನಿಂತ ಪಾಂಡವರ ಸೇನೆಯನು   ಅರಸ ದುರ್ಯೋಧನನಾಗ, ಆಚಾರ್ಯರೆಡೆಗೈದು ನುಡಿಯನಾಡಿದನು.]

ಈ ಪದ್ಯದಲ್ಲಿ ನಾವು ಗಮನಿಸಬೇಕಾದ ಕೆಲವು ಮಹತ್ವದ ಅಂಶಗಳಿವೆ. ದುರ್ಯೋಧನ ಮೊದಲು ಅತಿಯಾಗಿ ಆತ್ಮವಿಶ್ವಾಸದಿಂದ ಯುದ್ಧಕ್ಕೆ ತೊಡಗಿದ್ದ. ಹನ್ನೊಂದು ಅಕ್ಷೋಹಿಣಿ ಸೇನೆ ತಮ್ಮ ಕಡೆಗಿದೆ. ಜಗತ್ತಿನ ಪ್ರಮುಖ ವೀರರೆಲ್ಲ ತಮ್ಮ ಕಡೆಗಿದ್ದಾರೆ. ದ್ರೋಣ-ಭೀಷ್ಮರಂಥವರು ತಮ್ಮ ಕಡೆಗಿದ್ದಾರೆ. ಪಾಂಡವರ ಕಡೆಯಲ್ಲೊ ಬರಿಯ ಏಳು ಅಕ್ಷೋಹಿಣಿ ಸೇನೆ. ಅದರಲ್ಲು ಹೆಚ್ಚಿನವರು ಪಾಂಡವರ ಅನುಬಂಧಿಗಳು. ದಾಕ್ಷಿಣ್ಯಕಾಗಿ ಅವರ ಕಡೆಗೆ ಬಂದು ಸೇರಿದವರು. ಆದ್ದರಿಂದ ಜಯ ನಮಗೆ ಖಚಿತ. ‘ಪಾಣೌ ಫಲಮಿವಾಹಿತಮ್’. ಈ ಸಂಗತಿ ಅಂಗೆಯ ನೆಲ್ಲಿಕಾಯಷ್ಟು  ಸ್ಪಷ್ಟ , ಎಂದು ಅವನು ತಂದೆಯ ಬಳಿಯಲ್ಲೂ ವಾದಿಸಿದ್ದ.

ಇಷ್ಟು ಆತ್ಮವಿಶ್ವಾಸದಿಂದ ಬಂದ ದುರ್ಯೋಧನ ಪಾಂಡವರ ಸಜ್ಜಾದ ಸೇನೆಯ ಒಗ್ಗಟ್ಟಿನ ಸನ್ನಾಹವನ್ನು ಕಂಡು ಒಮ್ಮೆಲೆ ಕುಸಿದ. ಸಂಖ್ಯೆಗಿಂತ ಸಂಘಟನೆಯೇ ಮುಖ್ಯ; ಪಾಂಡವರ ಸಂಘಟನೆಯ ಮುಂದೆ ತಮ್ಮ ಈ ಸಂಖ್ಯಾಬಲ ಗೆದೆಯ ಲಾರದೇನೋ ಎನ್ನುವ ಭಯ ಅವನನ್ನಾವರಿಸಿತು.

ಈ ಎಲ್ಲ ಭಾವನೆಗಳನ್ನೂ ದೃಷ್ಟ್ವಾ ತು’ ಎಂಬ ಎರಡು ಪದಗಳಲ್ಲಿ ತುಂಬಲಾಗಿದೆ. ದೃಷ್ತ್ವಾ ತು’ ಎಂದರೆ ನೋಡಿದ ಮಾತ್ರಕ್ಕೆಯೇ. ಅರ್ಥಾತ್ ಮೊದಲು ಹುಸಿ ಭರವಸೆಯಿಂದ ಬಂದ ದುರ್ಯೋಧನ ಪಾಂಡವರ ಸೇನಾಸನ್ನಾಹವನ್ನು ನೋಡಿದ ಮಾತ್ರಕ್ಕೆಯೇ ಧೆರ್ಯ ಕಳೆದುಕೊಂಡು, ಕಂಗೆಟ್ಟು, ಆಚಾರ್ಯದ್ರೋಣರ ಬಳಿಗೆ ಧಾವಿಸಿದ.

ಇಲ್ಲಿ ದುರ್ಯೋಧನನ ಸಂಶಯಪ್ರಕೃತಿ ಇನ್ನಷ್ಟು ಬೆಳಕಿಗೆ ಬಂದಿದೆ. ಅವನು ನಿಜವಾಗಿ ಸೇನಾಪತಿ ಭೀಷ್ಮರ ಬಳಿ ಹೋಗಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ದ್ರೋಣರ ಬಳಿ ಬಂದ. ಕಾರಣ ಸ್ಪಷ್ಟ: ಅವನಿಗೆ ಭೀಷ್ಮರ ಮೇಲೂ ಸಂಶಯ. ಇವರು ತನ್ನ ಸೇನಾಪತಿಗಳಾದರೂ ಅಂತರಂಗದಲ್ಲಿ ಪಾಂಡವರ ಪಕ್ಷಪಾತಿಗಳು. ಇವರನ್ನು ನಾಯಕ ಸ್ಥಾನದಲ್ಲಿಟ್ಟು ತಾನು ಯುದ್ಧವನ್ನು ಗೆಲ್ಲಬಲ್ಲೆನೇ? ಅವನ ಸುಪ್ತಪ್ರಜ್ಞೆಯಲ್ಲಿದ್ದ ಈ ಹುಳುಕು ಪಾಂಡವರ ಸಜ್ಜಾದ ಸೇನೆಯನ್ನು ಕಂಡಾಗ ಜಾಗೃತವಾಯಿತು. ಅದಕ್ಕೆಂದೆ ಅವನು ಭೀಷ್ಮರ ಬಳಿ ಹೋಗದೇ ದ್ರೋಣರ ಬಳಿ ಬಂದ. ದ್ರೋಣರನ್ನು ಎತ್ತಿಕಟ್ಟಿ ತನ್ನ ಸ್ವಾರ್ಥ ಸಾಧನೆಯ ಕುಹಕವನ್ನು ಹೂಡಿದ.

ಕೊನೆಯ ಚರಣ ದುರ್ಯೋಧನನ ಮನಃಸ್ಥಿತಿಗೆ ಬೆಳಕನ್ನು ಚೆಲ್ಲುತ್ತದೆ: ರಾಜಾ ವಚನಮಬ್ರವೀತ್. ಅವನು ಆಚಾರ್ಯರ ಬಳಿಗೆ ಶಿಷ್ಯನಾಗಿ ಬರಲಿಲ್ಲ. ರಾಜನ ಠೀವಿಯಿಂದ ಬಂದ.

ಸಂಜಯ ಉವಾಚ=ಸಂಜಯ ಉತ್ತರಿಸಿದನು: ರಾಜಾ=ರಾಜತ್ವದ ಠೀವಿಯಿಂದ ಬಂದ, ದುರ್ಯೋಧನಃ= ದುರ್ಯೋಧನನು, ವ್ಯೂಡಂ=ಸಜ್ಜಾಗಿ ವಿನ್ಯಾಸಗೊಂಡ, ಪಾಂಡವ+ಅನೀಕಂ=ಪಾಂಡವರ ಸೇನೆಯನ್ನು, ದೃಷ್ಟ್ವಾ ತು=ಕಂಡವನೇ, (ಕಂಗೆಟ್ಟು) ತದಾ=ಆ ಕ್ಷಣವೆ, ಆಚಾರ್ಯಮ್=ಆಚಾರ್ಯದ್ರೋಣರನ್ನು,  ಉಪ+ಸಂ+ಗಮ್ಯ= ಬಳಿಸಾರಿ, ಅಬ್ರವೀತ್=ಹೇಳಿದನು.

ವಸ್ತುತಃ ದುರ್ಯೋಧನ ಯುವರಾಜ, ರಾಜನಾಗುವ ಕನಸು ಕಂಡವ. ಆ ಕನಸಿನ ಗುಂಗಿನಲ್ಲೇ ಅವನು ಆಚಾರ್ಯದ್ರೋಣರ ಬಳಿ ಮಾತನಾಡುತ್ತಾನೆ. ‘ನಾನು ಶಿಷ್ಯನಾಗಿ ನಿಮ್ಮ ಬಳಿ ಪ್ರಾರ್ಥಿಸುತ್ತಿಲ್ಲ. ರಾಜನಾಗಿ ಆಜ್ಞಾಪಿಸುತ್ತಿದ್ದೇನೆ. ನೀವು ನನ್ನ ಪ್ರಜೆಗಳು. ನನ್ನ ಅನ್ನಕ್ಕೆ ಬಿದ್ದವರು. ನನ್ನ ಆಜ್ಞೆಯನ್ನು ಪಾಲಿಸುವುದು ನಿಮ್ಮ ಕರ್ತವ್ಯ,’ ಎನ್ನುವ ಅವನ ಒಳ ಬಗೆಯ ಧಿಮಾಕಿಗೆ ಈ ನುಡಿ ಕನ್ನಡಿ ಹಿಡಿಯುತ್ತದೆ. ಅವನ ಮುಂದಿನ ಮಾತುಗಳೆಲ್ಲಾ ಅವನ ಮನಸ್ಸಿನ ಕೊಳೆಯ ಪ್ರತಿ ಫಲನಗಳೇ ಆಗಿವೆ.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು