ಶ್ಲೋಕ – ೩

ಧೃತರಾಷ್ಟ್ರನ ಮನಃಸ್ಥಿತಿ ಮತ್ತು ಪುತ್ರವ್ಯಾಮೋಹದ ಸ್ವಾರ್ಥದಿಂದ ಕುರುಡಾದ ಅವನ ವ್ಯಕ್ತಿತ್ವವನ್ನು ಸಮಗ್ರವಾಗಿ ಚಿತ್ರಿಸುವ ಗೀತೆಯ ಪ್ರಥಮ ಶ್ಲೋಕವನ್ನು ನೋಡಿದೆವು. ಅನಂತರದ ಶ್ಲೋಕ ದುರ್ಯೋಧನನ ಮನಃಸ್ಥಿತಿಯನ್ನು ನಮ್ಮ ಮುಂದೆ ತೆರೆದಿಡುವ ಬಗೆಯನ್ನು ಕಂಡೆವು.

ಹೀಗೆ ಸಂಶಯಗ್ರಸ್ತನಾದ ದುರ್ಯೋಧನನ ವಿಕ್ಷಿಪ್ತ ಮನಃಸ್ಥಿಯನ್ನು ಮುಂದಿನ ಒಂಬತ್ತು ಶ್ಲೋಕಗಳು ವಿವರಿಸುತ್ತವೆ. ದುರ್ಯೋಧನನ ಮಾತುಗಳಿಂದಲೆ ಅವನ ಮನಸ್ಸಿನ ಹುಳುಕಿಗೆ ಕನ್ನಡಿ ಹಿಡಿಯುವ ಈ ಶ್ಲೋಕಗಳು ಗೀತೆಯ ಬೆಳವಣಿಗೆಗೆ ಬಲವಾದ ಪಂಚಾಂಗವನ್ನು ಕಟ್ಟುತ್ತವೆ. ಅದರಲ್ಲಿ ಮೊದಲನೆಯ ಶ್ಲೋಕ

ಪಶ್ಯೆತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ
                     ॥ ೩ ॥

[ನೋಡಿರಿ ಆಚಾರ್ಯರೆ, ಈ ಪಾಂಡುವಿನ ಮಕ್ಕಳ ಹಿರಿಯ ಪಡೆಯನ್ನು; ದ್ರುಪದನ ಮಗ, ನಿಮ್ಮ ಚಾಣಾಕ್ಷ ಶಿಷ್ಯನಿಂದ ಸಜ್ಜುಗೊಂಡದ್ದನ್ನು.]

ಈ ಪದ್ಯದ ಒಂದೊಂದು ಪದವೂ ದುರ್ಯೋಧನನ ಭಾವತುಮುಲಗಳನ್ನು ಅರ್ಥಪೂರ್ಣವಾಗಿ ಚಿತ್ರಿಸುತ್ತದೆ. ದುರ್ಯೋಧನ ಪಾಂಡವರ ಸೇನೆಯನ್ನು ‘ಮಹತೀಂ ಚಮೂಮ್’ ಎಂದು ಕರೆಯುತ್ತಾನೆ. ವಾಸ್ತವವಾಗಿ ಸಂಖ್ಯಾಬಲದಲ್ಲಿ ಕೌರವರ ಸೇನೆಯೇ ಮಹತ್ತಾದದ್ದು, ಪಾಂಡವರದ್ದಲ್ಲ. ಆದರೂ ಪಾಂಡವರ ಸೇನೆಯ ಸನ್ನಾಹದ ಅಚ್ಚುಕಟ್ಟನ್ನು, ವ್ಯವಸ್ಥಿತತೆಯನ್ನು ಕಂಡ ದುರ್ಯೋಧನನಿಗೆ ತನ್ನ ಹನ್ನೊಂದು ಅಕ್ಷೋಹಿಣಿಗಿಂತಲೂ ಪಾಂಡವರ ಏಳು ಅಕ್ಷೋಹಿಣಿಯೇ ಮಹತ್ತಾಗಿ ಕಾಣುತ್ತಿದೆ. ಇದು ಅವನ ಮನಃಸ್ಥಿತಿಯ ಗೊಂದಲಗೇಡಿತನಕ್ಕೆ ಹಿಡಿದ ಕೈಗನ್ನಡಿ. ಇನ್ನೊಂದು ಮಹತ್ವದ ವಿಶೇಷಣ ‘ಏತಾಂ’ ಎನ್ನುವುದು. ತೀರ ಸಮೀಪ ದಲ್ಲಿರುವಂತಹದು ಎಂದು ಈ ಪದದ ಅರ್ಥ. ‘ಸಮೀಪತರವರ್ತಿ ಚೆತದೋ ರೂಪಮ್’. ವಾಸ್ತವವಾಗಿ ದುರ್ಯೋಧನನ ಪಕ್ಕದಲ್ಲಿರುವಂತಹದು ತನ್ನ ಸೇನೆಯೆ ಹೊರತು ಪಾಂಡವರ ಸೇನೆಯಲ್ಲ. ಆದರೂ ಅವನಿಗೆ ಪಾಂಡವರ ಸೇನೆ ತನ್ನ ಬಳಿಗೇ ಬಂದು ಬಿಟ್ಟಿದೆ; ತೀರ ಸಮೀಪದಲ್ಲಿ ತನ್ನ ಪಕ್ಕದಲ್ಲೇ ಹೋರಾಟಕ್ಕೆ ಸಜ್ಜಾಗಿ ನಿಂತುಬಿಟ್ಟಿದೆ ಎನ್ನುವ ಮನೋಭ್ರಮೆಯ ಕಾತರ ಈ ಪದದಿಂದ ವ್ಯಕ್ತವಾಗುತ್ತದೆ.

ಅದಕ್ಕೆಂದೆ ಅವನು ಆಚಾರ್ಯರನ್ನು ಎಚ್ಚರಿಸುತ್ತಾನೆ, ‘ಪಶ್ಯ’ (ನೋಡಿ) ಎಂದು. ಹೊಣೆಗಾರಿಕೆಯ ಸ್ಥಾನದಲ್ಲಿರುವ ಹಿರಿಯರಾದ ದ್ರೋಣರಂಥವರೂ ಇದನ್ನು ಗಮನಿಸದೆ ಹೊಣೆಗೇಡಿಗಳಾಗಿ ಕುಳಿತಿದ್ದಾಗ ತಾನು ಇದನ್ನು ಮೊದಲ ಬಾರಿ ಗಮನಿಸಿದೆ ಎನ್ನುವಂತಿದೆ ಅವನ ಉದ್ಗಾರ. ‘ಎಂತಹ ಅಪಾಯ ನಮ್ಮ ಮುಂದಿದೆ. ಏಕೆ ನೀವಾರೂ ಗಮನಿಸುತ್ತಿಲ್ಲ. ಕೊನೆಗೂ ನಾನೇ ಬಂದು ಹೇಳಬೇಕಾಯಿತೇ. ಇನ್ನಾ ದರೂ ಕಣ್ತೆರೆದು ನೋಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ.’ ಎಂದು ಎಚ್ಚರಿಸುವಂತಿದೆ ಅವನ ಮಾತು.

ಅವನ ಈ ಒಳತುಮುಲಕ್ಕೆ, ಈ ಕಾವ್ಯಧ್ವನಿಗೆ ಸುಂದರವಾದ ಪುಷ್ಟಿ ನೀಡುವ ಅಂಶ ‘ಪಾಂಡುಪುತ್ರಾಣಾಮ್ ಆಚಾರ್ಯ’ ಎನ್ನುವ ಸಂಯೋಜನೆ. ದುರ್ಯೋಧನನ ಒಳಬಗೆಯಲ್ಲಿ ತುಂಬಿರುವ ನಂಜೆಲ್ಲ, ಹುಳುಕೆಲ್ಲ ಈ ವಿಶಿಷ್ಟವಾದ ಪದರಚನೆಯಲ್ಲಿ ಪ್ರತಿಬಿಂಬಿತವಾಗುತ್ತದೆ. ವಾಸ್ತವಿಕ ಅನ್ವಯದಲ್ಲಿ ಪಾಂಡು ಪುತ್ರಾಣಾಮ್ ಎನ್ನುವ ಪದವು ‘ಚಮೂಮ್’ ಎನ್ನುವುದರ ಜೊತೆಗೆ ಹೊಂದಿಕೊಳ್ಳುವಂಥದು. ಆದರೆ ಮಧ್ಯದಲ್ಲಿ ಸೇರಿಕೊಂಡ ಆಚಾರ್ಯಪದವು ಒಂದು ಧ್ವನಿಯ ಪ್ರಪಂಚವನ್ನೇ ಸೃಷ್ಟಿಸುತ್ತದೆ: ‘ನೀವು ನಮ್ಮ ಕಡೆಯಲ್ಲಿದ್ದರೂ ನಮ್ಮ ಸೇನೆಯ ಮುಖಂಡ ರಾಗಿದ್ದರೂ ಅಂತರಂಗದಲ್ಲಿ ನೀವು ಪಾಂಡವರ ಆಚಾರ್ಯರೇ ಆಗಿದ್ದೀರಿ. ಏನಿದ್ದರೂ ಅರ್ಜುನನು ನಿಮ್ಮ ಪ್ರೀತಿಯ ಶಿಷ್ಯನಲ್ಲವೆ? ಅದರಿಂದ ನೀವು ನಮ್ಮ ಜೊತೆಗಿದ್ದೂ ಮನಃಪೂರ್ತಿಯಾಗಿ ನಮ್ಮಡನೆ ಸಹಕರಿಸುತ್ತಿಲ್ಲ. ನೀವು ಈಗಲೂ ಕೌರವರ ಆಚಾರ್ಯರಾಗುವ ಬದಲು ಪಾಂಡವರ ಆಚಾರ್ಯರಾಗಿಯೇ ಉಳಿದಂತಿದೆ,’ ಎನ್ನುವುದು ಈ ಮಾತಿನ ಹಿಂದಿರುವ ವ್ಯಂಗ್ಯ: ಪಾಂಡುಪುತ್ರಾಣಾಮಾಚಾರ್ಯ!

ಉತ್ತರಾರ್ಧದಲ್ಲಿ ಪಾಂಡವರ ಸೇನಾಪತಿಯಾದ ಧೃಷ್ಟದ್ಯುಮ್ನನನನ್ನು ಹೆಸರಿಸದೆ ಸಾಕೂತವಾದ ಮೂರು ವಿಶೇಷಣಗಳಿಂದ ಉಲ್ಲೇಖಿಸುತ್ತಾನೆ- ದ್ರುಪದಪುತ್ರೇಣ, ತವ ಶಿಷ್ಯೇಣ, ಧೀಮತಾ. ಪಾಂಡವರ ಸೇನೆಯನ್ನು ಅತ್ಯಂತ ಸಮರ್ಥವಾಗಿ ಸಜ್ಜುಗೊಳಿಸಿದ ಅವರ ಸೇನಾಪತಿ ಮೊದಲನೆಯದಾಗಿ ದ್ರುಪದನ ಮಗ; ಎರಡ ನೆಯದಾಗಿ ದ್ರೋಣಾಚಾರ್ಯರ ಶಿಷ್ಯ; ಮೂರನೆಯದಾಗಿ ಯುದ್ಧದ ತಂತ್ರಗಳ ನೆಲ್ಲ ಬಲ್ಲ ನಿಪುಣ, ಚಾಣಾಕ್ಷ! ಈ ಮೂರು ವಿಶೇಷಣಗಳಿಂದ ದುರ್ಯೋಧನ ತನ್ನ ಅಂತರಂಗದ ಸಂಘರ್ಷವನ್ನು ಬಹಳ ಸ್ಫುಟವಾಗಿ ಹೊರಗೆಡುಹುತ್ತಾನೆ.

ಇವನ ಭಯಕ್ಕೆ ಮೊದಲ ಕಾರಣ ಪಾಂಡವರ ಸೇನಾಪತಿ ದ್ರುಪದನ ಮಗ ಎನ್ನುವುದೇ ಆಗಿದೆ. ದ್ರೋಣರನ್ನು ಕೊಲ್ಲುವಂಥ ಮಗ ತನಗಾಗಬೇಕೆಂದು ಹಂಬಲಿಸಿ ಅದರ ಫಲವಾಗಿ ದ್ರುಪದ ಪಡೆದ ಅಗ್ನಿಪುತ್ರ ಧಷ್ಟದ್ಯುಮ್ನ. ಹೀಗೆ ದ್ರೋಣರನ್ನು ಕೊಲ್ಲಲೆಂದೇ ಹುಟ್ಟಿದ ಧೃಷ್ಟದ್ಯುಮ್ನ ಎದುರುಗಡೆಯ ಸೇನಾನಿ ಆಗಿದ್ದಾನೆ. ಇದು ದುರ್ಯೋಧನನ ತಲೆಗೆಡಿಸಿದ ಮೊದಲನೆಯ ಸಂಗತಿ.

ಎರಡನೆಯ ಸಂಗತಿ, ಅವನು ದ್ರೋಣಾಚಾರ್ಯರ ಶಿಷ್ಯ ಎನ್ನುವುದು. ದ್ರೋಣಾ ಚಾರ್ಯರಿಂದಲೇ ಶಸ್ತ್ರವಿದ್ಯೆಯನ್ನು ಕಲಿತು, ದ್ರೋಣರಿಗೇ ತಿರುಮಂತ್ರ ಹಾಕ ಹೊರಟಿರುವ ಈತನ ಬಗ್ಗೆ ತನ್ನಂತೆಯೇ ದ್ರೋಣರಿಗಾಗಲಿ ತನ್ನ ಪಕ್ಷದ ಇತರರಿ ಗಾಗಲೀ ಏಕೆ ಚಿಂತೆಯಿಲ್ಲ ಎನ್ನುವುದೇ ಅವನ ಮುಖ್ಯ ಚಿಂತೆ.

ಮೂರನೆಯ ಸಂಗತಿ, ಆತ ಧೀಮಂತ  ಎನ್ನುವುದು. ಆತ ಅತಿಚಾಣಾಕ್ಷತೆಯಿಂದ ಸೇನೆಯನ್ನು ಸಜ್ಜುಗೊಳಿಸಿದ್ದಾನೆ! ಇದನ್ನು ಗಮನಿಸಿದರೆ ನಮ್ಮ ಕಡೆಯಲ್ಲಿ ಇಂತಹ ಧೀಮಂತಿಕೆಯ ಬದಲು ದಿವ್ಯ ನಿರ್ಲಕ್ಷ್ಯವೇ ಕಾಣುತ್ತಿದೆ. ಅವರ ಸಂಖ್ಯಾಬಲ ಸಣ್ಣದಾದರೂ ಧೀಮಂತಿಕೆಯ ಬಲ ತಮ್ಮನ್ನು ಮೀರಿಸುವಂತಿದೆ. ಇದು ದುರ್ಯೋಧನನ ಮನಸ್ಸನ್ನು ಕಾಡಿದ ಇನ್ನೊಂದು ಗಂಭೀರಚಿಂತೆ.

ಈ ಸಮಸ್ಯೆಯ ಬಗ್ಗೆ ಇನ್ನಾದರೂ ಗಮನ ಹರಿಸಿ ತುಂಬಾ ಎಚ್ಚರದಿಂದ ವರ್ತಿಸಿರಿ ಎಂದು ದ್ರೋಣರಿಗೆ ಆಜ್ಞಾಪಿಸುವ ಧಾಟಿಯಲ್ಲಿ ದುರ್ಯೋಧನ ಈ ಮಾತ ನ್ನಾಡಿದ್ದಾನೆ-

ಆಚಾರ್ಯ=ಗುರುದ್ರೋಣರೆ, ದ್ರುಪದ+ಪುತ್ರೇಣ=ದ್ರುಪದರಾಜನ  ಮಗನಾದ, ತವ=ನಿಮ್ಮ, ಶಿಷ್ಯೇಣ= ಶಿಷ್ಯನಾದ, ಧೀಮತಾ=ಜಾಣನಾದ ಧೃಷ್ಟದ್ಯುಮ್ನನಿಂದ, ವ್ಯೂಢಾಮ್=ಸಜ್ಜುಗೊಂಡ, ಪಾಂಡು+ ಪುತ್ರಾಣಾಮ್=ಪಾಂಡವರ, ಏತಾಮ್= ಈ, ಮಹತೀಮ್=ದೊಡ್ಡದಾದ, ಚಮೂಮ್= ಸೇನೆಯನ್ನು, ಪಶ್ಯ=ನೋಡಿರಿ.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು