ಶ್ಲೋಕ – ೪, ೫, ೬ : ದುರ್ಯೋಧನನ ಕಳವಳ

ದುರ್ಯೋಧನ ಪಾಂಡವರ ಸೇನೆಯನ್ನು ಕಂಡು ಭಯಗ್ರಸ್ತನಾದ ಎನ್ನುವ ಮಾತನ್ನು ಈ ಹಿಂದೆ ನೋಡಿದ್ದೇವೆ. ಮುಂದಿನ ಮೂರು ಶ್ಲೋಕಗಳು ಅದನ್ನೇ ವಿವರಿಸುತ್ತವೆ

ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ     ॥ ೪॥

ಧಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ  ವೀರ್ಯವಾನ್ |
ಪುರುಜಿತ್ ಕುಂತಿಭೋಜಶ್ಚ  ಶೆವ್ಯಶ್ಚ ನರಪುಂಗವಃ ॥ ೫॥

ಯುಧಾಮನ್ಯುಶ್ಚ  ವಿಕ್ರಾಂತ ಉತ್ತಮೋಜಾಶ್ಚ ವೀರ್ಯವಾನ್ |
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ     ॥ ೬ ॥

[ಇಲ್ಲಿರುವ ಇವರೆಲ್ಲ ಹಗೆಗಳನು ಮಣಿಸಬಲ್ಲವರು; ಹಿರಿಯ ಬಿಲ್ಲೋಜರು; ಭೀಮಾರ್ಜುನರಿಗೆ ಸಾಟಿಯಾದವರು ಹೋರಾಟದಲ್ಲಿ: ಸಾತ್ಯಕಿಯು, ವಿರಾಟ ಕೂಡ, ದ್ರುಪದ ಕೂಡ ಹಿರಿಯ ತೇರಾಳು. ಧೃಷ್ಟಕೇತು, ಚೇಕಿತಾನ, ಕಾಶಿಯರಸು ಕೂಡ ಹಿರಿಯ ಬೀರದವನು. ಪುರುಜಿತ್ತು, ಕುಂತಿಭೋಜ, ಶಿವಿದೇಶದರಸನೂ ಕೂಡ ಕಟ್ಟಾಳು ಗೂಳಿ ಯಂತೆ. ಗೆದಯಬಲ್ಲವನು ಯುಧಾಮನ್ಯು ಕೂಡ. ಮಣಿಸಬಲ್ಲವನು ಉತ್ತಮೋಜ ಕೂಡ. ಸುಭದ್ರೆಯ ಮಗ ಮತ್ತು ದ್ರೌಪದಿಯ ಮಕ್ಕಳು ಎಲ್ಲರೂ-ಎಲ್ಲರೂ ಹಿರಿಯ ತೇರಾಳುಗಳು.]

ಈ ಶ್ಲೋಕದಲ್ಲಿ ದುರ್ಯೋಧನನು ಉಲ್ಲೇಖಿಸಿರುವ ವ್ಯಕ್ತಿಗಳು ಮತ್ತು ವ್ಯಕ್ತಿಗಳ ಸಂಖ್ಯೆ ಎರಡೂ ತುಂಬ ಅರ್ಥಪೂರ್ಣ. ಮೊದಲು ಸಂಖ್ಯೆಯ ಬಗೆಗೆ ನೋಡೋಣ. ಪಾಂಡವರ ಮಕ್ಕಳು ಬಿಟ್ಟರೆ ಹೊರಗಿನಿಂದ ಬಂದ ವೀರರಲ್ಲಿ ಹನ್ನೊಂದು ಮಂದಿಯ ಹೆಸರನ್ನು ದುರ್ಯೋಧನ ಉಲ್ಲೇಖಿಸುತ್ತಾನೆ. ಇದು ಗಮ ನಾರ್ಹವಾದ ಸಂಖ್ಯೆ.   ಮುಂದೆ ತಮ್ಮ ಕಡೆಯ ವೀರರ ಹೆಸರನ್ನು ಹೇಳುವಾಗ ದುರ್ಯೋಧನ ಏಳೇ ಮಂದಿಯ ಹೆಸರನ್ನು ಉಲ್ಲೇಖಿಸುತ್ತಾನೆ. ದುರ್ಯೋಧನನ ಸೇನೆಯಲ್ಲಿ ಹನ್ನೊಂದು ಅಕ್ಷೋಹಿಣಿ. ಆದರೆ ಅವನು ಉಲ್ಲೇಖಿಸುವುದು ಏಳು ಮಂದಿಯನ್ನು. ಪಾಂಡವರ ಸೇನೆಯಲ್ಲಿ ಏಳು ಅಕ್ಷೋಹಿಣಿ. ಆದರೆ ಆ ಕಡೆಯಲ್ಲಿ ಹನ್ನೊಂದು ಮಂದಿ ಮುಖಂಡರನ್ನು ದುರ್ಯೋಧನ ಗುರುತಿಸುತ್ತಾನೆ. ವಾಸ್ತವವಾಗಿ ತಮ್ಮ ಕಡೆಯಲ್ಲಿ ಒಬ್ಬೊಬ್ಬ ಅಕ್ಷೋಹಿಣಿ ಪತಿಯಂತೆ ಹನ್ನೊಂದು ಮಂದಿ ಯನ್ನೂ ಪಾಂಡವರ ಕಡೆಯಲ್ಲಿ ಏಳು ಮಂದಿಯನ್ನೂ ಹೇಳಬೇಕಾಗಿತ್ತು. ಆದರೆ ದುರ್ಯೋಧನನ ಲೆಕ್ಕಾಚಾರ ತಿರುವು-ಮುರುವು ಆಗಿದೆ. ಹನ್ನೊಂದು ಇದ್ದಲ್ಲಿ ಏಳು, ಏಳು ಇದ್ದಲ್ಲಿ ಹನ್ನೊಂದು. ಈ ಏಳು ಹನ್ನೊಂದೇ ಅವನ ದುರಂತಕ್ಕೆ ಕಾರಣ ವಾಯಿತು.

ತಮ್ಮ ಕಡೆಯಲ್ಲಿ ಹನ್ನೊಂದು ಅಕ್ಷೋಹಿಣಿ ಇದ್ದರೂ ಏಳು ಮಂದಿಗಿಂತ ಹೆಚ್ಚು ವೀರರನ್ನು ಗುರುತಿಸುವುದು ಅವನಿಗೆ ಅಸಾಧ್ಯವಾಯಿತು. ಪಾಂಡವರಲ್ಲಿ ಏಳೇ ಅಕ್ಷೋಹಿಣಿ ಇದ್ದರೂ ಅಲ್ಲಿ ಹನ್ನೊಂದು ಮಂದಿ ಮುಖಂಡರು ಅವನ ಕಣ್ಣಿಗೆ ಬಿದ್ದರು.

ಇನ್ನೂ ಒಂದು ರೀತಿಯಿಂದ ಈ ಸಂಖ್ಯೆಯ ಚಮತ್ಕಾರವನ್ನು ಇಲ್ಲಿ ಗುರುತಿಸ ಬಹುದು. ಪಾಂಡವರ ಕಡೆಯ ಈ ಹನ್ನೊಂದರ ಜೊತೆಗೆ ಸೇನಾಪತಿಯಾದ ಧೃಷ್ಟದ್ಯುಮ್ನ, ಸುಭದ್ರೆಯ ಮಗ ಅಭಿಮನ್ಯು ಮತ್ತು ದ್ರೌಪದಿಯ ಐದು ಮಕ್ಕಳನ್ನು ಸೇರಿಸಿದರೆ ಆ ಕಡೆಯಲ್ಲಿ ಹದಿನೆಂಟು ಮಂದಿ ವೀರರನ್ನು ಹೇಳಿ ದಂತಾಯಿತು. ಹದಿನೆಂಟು ಅನ್ನುವುದು ಜಯದ ಸಂಕೇತ. (=ಎಂಟು, = ಒಂದು) ಈ ಕಡೆ ಹನ್ನೊಂದು ಆ ಕಡೆ ಏಳು ಅಕ್ಷೋಹಿಣಿ ಹಂಚಿಹೋಗಿದ್ದರೂ ದುರ್ಯೋಧನನ ಲೆಕ್ಕಾಚಾರದಂತೆ ಎಲ್ಲಾ ಹದಿನೆಂಟು ಮಂದಿ ವೀರರೂ ಪಾಂಡ ವರ ಕಡೆಯೇ ಜಮಾಯಿಸಿದ್ದಾರೆ. ಅದರಿಂದ ಜಯ ಅವರಿಗೆ ಕಟ್ಟಿಟ್ಟದ್ದು ಎನ್ನುವ ಸೂಚನೆ ಈ ಮಾತಿನಲ್ಲಿದೆ.

ಇನ್ನು ಪಾಂಡವರ ಬಗ್ಗೆ ಉಲ್ಲೇಖಿಸಿದ ವಿಶೇಷಣಗಳನ್ನು ನೋಡೋಣ. ಅವನು ಒಟ್ಟಂದದಲ್ಲಿ ಮೂರು ವಿಶೇಷಣಗಳಿಂದ ಪಾಂಡವರ ಪಕ್ಷದ ವೀರರನ್ನು ಪ್ರಶಂಸಿಸುತ್ತಾನೆ: ಎಲ್ಲರೂ ಶೂರರು, ಮಹೇಷ್ವಾಸರು ಮತ್ತು ಭೀಮಾರ್ಜುನ ಸಮರು.

ಶೂರರು ಎಂದರೆ ಯುದ್ಧದಲ್ಲಿ ಬೆನ್ನು ತೋರಿಸದೆ ನಾಯಕಸ್ಥಾನದಲ್ಲಿ ನಿಂತು ಹೋರಾಡಬಲ್ಲವರು. ಸಂಸ್ಕತದಲ್ಲಿ  ಸಿಂಹಕ್ಕೂ ‘ಶೂರ’ ಎಂಬ ಹೆಸರಿದೆ. ಸಿಂಹ ಗಾತ್ರದಲ್ಲಿಯೂ ಬಲದಲ್ಲಿಯೂ ತನಗಿಂತ ಹಿರಿದಾದ ಆನೆಯನ್ನು ಕೂಡ ಮಣಿಸ ಬಲ್ಲ ಜಾಣ; ಕಾಡಿನ ರಾಜ. ಅದಕ್ಕೆಂದೆ ಅದು ಶೂರ. ಈ ಪಾಂಡವರ ಕಡೆಯ ಶೂರರೂ ಹಾಗೆಯೆ, ಆನೆಯಂತೆ ಸೊಕ್ಕಿದ ತಮ್ಮ ಕಡೆಯವರಲ್ಲಿ ಸಿಂಹದಂತೆ ತಂತ್ರಗಾರಿಕೆಯಿಂದ ಮಣಿಸಬಲ್ಲ ಜಾಣರು ಎನ್ನುವ ಧ್ವನಿ ಈ ವಿಶೇಷಣದಲ್ಲಿದೆ.

ಎರಡನೆಯ ವಿಶೇಷಣ: ಮಹೇಷ್ವಾಸಾಃ. ಈ ಪದದ ಅರ್ಥ ಹಿರಿಯ ಬಿಲ್ಲೋಜರು, ಬಿಲ್ಲುಗಾರಿಕೆಯಲ್ಲಿ ಸಾಟಿಯಿಲ್ಲದ ವೀರರು ಎಂದು. ಬಿಲ್ಲು ವಿದ್ಯೆಯ ಆಚಾರ್ಯ ಪುರುಷರಾದ ಭೀಷ್ಮ-ದ್ರೋಣರಿಗೂ ಇಂಥ ವಿಶೇಷಣವನ್ನು ಬಳಸದ ದುರ್ಯೋಧನ ಪಾಂಡವರ ಸೇನೆಯ ಪ್ರತಿಯೊಬ್ಬರೂ ಮಹೇಷ್ವಾಸರು ಎನ್ನುತ್ತಿದ್ದಾನೆ. ಅವನ ಒಡಲೊಳಗೆ ಹೊಕ್ಕು ಕಾಡುತ್ತಿರುವ ಪುಕ್ಕು ಎಷ್ಟು ಗಾಢವಾದದ್ದು ಎನ್ನುವುದು ಇದರಿಂದ ಸ್ಫುಟವಾಗುತ್ತದೆ.

ಎಲ್ಲಕ್ಕಿಂತ ಮಹತ್ವದ ವಿಶೇಷಣ: ಭೀಮಾರ್ಜುನಸಮಾ ಯುಧಿ. ಎಲ್ಲರೂ ಯುದ್ಧ ದಲ್ಲಿ ಭೀಮಾರ್ಜುನರಿಗೆ ಸಮಾನರು! ವಾಸ್ತವವಾಗಿ ಈ ಎರಡೂ ಸೇನೆಯಲ್ಲಿ ಭೀಮಾರ್ಜುನರಿಗೆ ಸಮಾನರಾದವರು ಭೀಮಾರ್ಜುನರು ಮಾತ್ರ. ಆದರೆ ದುರ್ಯೋಧನನ ಗೊಂದಲಗೆಟ್ಟ ಮನಸ್ಸಿಗೆ ಆ ಕಡೆಯ ಎಲ್ಲರೂ ಭೀಮಾರ್ಜುನ ರಂತೆ ಕಾಣಿಸತೊಡಗಿದ್ದಾರೆ. ಇದು ಅವನ ಭಯದ ಪರಾಕಾಷ್ಠೆ!

ಹಿಂದಿನ ಹಿನ್ನೆಲೆಯನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಸೇನಾಸನ್ನಾಹ ನಡೆಸುವಾಗ ಭೀಮಾರ್ಜುನರ ವಿರೋಧ ಬೇಡವೆಂದು ದುರ್ಯೋಧನನಿಗೆ ಹಿರಿಯರೆಲ್ಲಾ ತಿಳಿಹೇಳಿದಾಗ ಆತ ಅದನ್ನು ಒಪ್ಪಲಿಲ್ಲ. ಜಗತ್ತಿನ ಪ್ರಮುಖ ಸೈನ್ಯವೆಲ್ಲಾ  ನನ್ನ ಕಡೆ ಇರುವಾಗ ಭೀಮಾರ್ಜುನರು ಯಾವ ಲೆಕ್ಕ? ಎಂದು ಅವರ ಮುಂದೆ ಸವಾಲೆಸದಿದ್ದ. ಬಾಯಿಯಲ್ಲಿ ಎಷ್ಟು ಬಡಾಯಿ ಕೊಚ್ಚಿದರೂ ಅವನಿಗೆ ಭೀಮಾರ್ಜುನರು ಸಿಂಹಸ್ವಪ್ನವಾಗಿದ್ದರು ಎನ್ನುವ ಮಾತು ಈಗ ಬಯಲಿಗೆ ಬಂತು. ಅವನ ಸುಪ್ತ  ಪ್ರಜ್ಞೆಯಲ್ಲಿದ್ದ ಭಯ ಅವನಿಗರಿವಿಲ್ಲದಂತೆಯೇ ವ್ಯಕ್ತವಾಗಿ ಬಾಯಲ್ಲಿ ಮೂಡಿ ಬಂತು. ಈಗಲೂ ಅವನು ಇಷ್ಟು ಕಂಗೆಟ್ಟಿದ್ದಾನೆ: ಭೀಮಾರ್ಜುನರು ಮಾತ್ರವೇ ಅಲ್ಲ; ಪಾಂಡವರ ಪಕ್ಷದಲ್ಲಿರುವ ಪ್ರತಿಯೊಬ್ಬರೂ ಅವನಿಗೆ ಭೀಮಾರ್ಜುನರಂತೆ ಕಾಣುತ್ತಿದ್ದಾರೆ. ಎಂಥ ಶೋಚನೀಯ ಪರಿಸ್ಥಿತಿ! ಈಗ ನಿಜವಾಗಿಯೂ ದುರ್ಯೋ ಧನನನ್ನು ಮನೋವಿಜ್ಞಾನಿಯ ಬಳಿ ಚಿಕಿತ್ಸೆಗೆ ಕಳುಹಿಸಬೇಕು. ಅವನಿಗೆ ತುರ್ತಾಗಿ ಸೆಕೋತೆರಪಿಯ ಅಗತ್ಯವಿದೆ. ಆದರೆ ಏನು ಮಾಡೋಣ! ಮನೋವೆದ್ಯನಾದ ಶ್ರೀಕಷ್ಣ, ಜಗತ್ತಿನ ಮೊದಲ ಸೈಕಿಯಾಟ್ರಿಸ್ಟ್ ಪಾಂಡವರ ಬಳಿ ಇದ್ದಾನೆ. ಇವನ ಮನೋರೋಗಕ್ಕೆ ಮದ್ದೇ ಇಲ್ಲ.

ದುರ್ಯೋಧನ ಉಲ್ಲೇಖಿಸಿದ ಪಾಂಡವರ ಪಕ್ಷದ ವೀರರ ವಿವರವನ್ನು ಮುಂದೆ ನೋಡೋಣ. ಅವನು ಉಲ್ಲೇಖಿಸಿದ ಮೊದಲ ವ್ಯಕ್ತಿ ಯುಯುಧಾನ. ಯಾದವ ವೀರನಾದ ಸಾತ್ಯಕಿಯೇ ಯುಯುಧಾನ. ಅವನು ಸತ್ಯಕನ ಮಗ. ಅದರಿಂದ ಸಾತ್ಯಕಿ. ಶಿನಿಯ ಮೊಮ್ಮಗ. ಅದರಿಂದ ಶೆನೇಯ. ಯುಯುಧಾನ ಎನ್ನುವುದು ಅವನ ನಾಮಕರಣದ ಹೆಸರು. ಈ ಸಾತ್ಯಕಿ ಕಷ್ಣನ ಪರಮ ಮಿತ್ರ, ಪಟ್ಟ ಶಿಷ್ಯ. ಅದಕ್ಕೆಂದೇ ದುರ್ಯೋಧನನಿಗೆ ಅವನ ಮೇಲೆ ವಿಶೇಷ ಆಗ್ರಹ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಹಿನ್ನೆಲೆಯುಂಟು. ಧುರ್ಯೋಧನ ಬಲ ರಾಮನ ಪ್ರೀತಿಯ ಶಿಷ್ಯ. ಆ ಪ್ರೀತಿಯ ಬಲದಿಂದಲೇ ಅವನು ಬಲರಾಮನನ್ನು  ಪುಸಲಾಯಿಸಿ ಸುಭದ್ರೆಯನ್ನು ಮದುವೆಯಾಗಲು ಬಯಸಿದ್ದ. ಬಲರಾಮ ಅದಕ್ಕೆ ಒಪ್ಪಿಯೂ ಇದ್ದ. ಕಷ್ಣನ ಕಾರಸ್ಥಾನದಿಂದ ಈ ಮದುವೆ ತಪ್ಪಿ ಹೋಗದಿರುತ್ತಿದ್ದರೆ ಸುಭದ್ರೆಯ ಸಂಬಂಧಕ್ಕಾಗಿಯಾದರೂ ಕಷ್ಣ ತಟಸ್ಥನಾಗುತ್ತಿದ್ದನೇನೋ. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಯಿತೇನೋ ಎನ್ನುವ ವಿಷಾದ ಇಲ್ಲಿ ಸ್ಫುಟವಾಗಿದೆ.

ಸಾತ್ಯಕಿಯ ಹೆಸರನ್ನು ಉಲ್ಲೇಖಿಸುವಾಗ ದುರ್ಯೋಧನನ ಮನಸ್ಸಿನಲ್ಲಿ ಇನ್ನೊಂದು ಘಟನೆಯೂ ಹಾದುಹೋಗಿರಬೇಕು. ಯುದ್ಧ ಪ್ರಾರಂಭವಾಗುವ ಮುನ್ನ ದುರ್ಯೋಧನ ಗುರು ಬಲರಾಮನ ಬಳಿ ಬಂದು ಯುದ್ಧದಲ್ಲಿ ನನಗೆ ಸಹಾಯ ಮಾಡಬೇಕೆಂದು ಕೇಳಿಕೊಂಡ. ಬಲರಾಮನಿಗೆ ನಿಜಕ್ಕೂ ದುರ್ಯೋಧನನ ಮೇಲೆ ಪ್ರೀತಿಯಿತ್ತು. ಏನಿದ್ದರೂ ತನ್ನ ಪಟ್ಟ ಶಿಷ್ಯನಲ್ಲವೆ? ದುರ್ಯೋಧನನ ಮಗಳು ಲಕ್ಷಣೆಯನ್ನೆ ಕೃಷ್ಣನ ಮಗ ಸಾಂಬ ಮದುವೆಯಾಗಿದ್ದನಲ್ಲವೆ? ಹೀಗೆ  ಶಿಷ್ಯನೂ ಸಂಬಂಧಿಯೂ ಆದ ದುರ್ಯೋ ಧನನನ್ನು ವಿರೋಧಿಸುವುದು ಬಲರಾಮನ ಮನಸ್ಸಿಗೆ ಇಷ್ಟವಾಗಿರಲಿಲ್ಲ. ಮನಸ್ಸು ಒಪ್ಪಲಿಲ್ಲ. ದುರ್ಯೋಧನನೂ ಇದನ್ನೇ ನಿರೀಕ್ಷಿಸಿ ಬಂದಿದ್ದ. ಒಂದು ವೇಳೆ ಈ ಬಾಂಧವ್ಯಕ್ಕೆ ಕಟ್ಟು ಬಿದ್ದು ಬಲರಾಮ ದುರ್ಯೋಧನನಿಗೆ ತನ್ನ ಬೆಂಬಲವನ್ನು ಘೋಷಿಸಿದ್ದರೆ, ಅವನ ಮಾತಿಗೆ ವಿರುದ್ಧವಾಗಿ ಕೃಷ್ಣನಾಗಲೀ, ಯಾದವ ವೀರರಾಗಲೀ ಪಾಂಡವರ ಕಡೆಗೆ ಹೋಗುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ದುರ್ಯೋಧನನ ದುರ್ದೈವ ದೊಡ್ಡದು. ಬಲರಾಮ ತಟಸ್ಥನಾಗಿ ನಿಂತುಬಿಟ್ಟ. ‘ಇಬ್ಬರೂ ನನ್ನ ಸಂಬಂಧಿಕರು. ಆದ್ದರಿಂದ ನಾನು ಯಾವ ಕಡೆಗೂ ಇಲ್ಲ. ಯಾದವರು ತಮಗೆ ಯಾವ ಪಕ್ಷ ಹಿತವೋ ಆ ಪಕ್ಷ ಸೇರಿಕೊಳ್ಳಲಿ. ನಾನಂತು ಮಧ್ಯೆ ಪ್ರವೇಶಿಸುವುದಿಲ್ಲ,’ ಎಂದು ಸಾರಿಬಿಟ್ಟ. ಪರಿಣಾಮವಾಗಿ ಯುಯುಧಾನ ಮತ್ತು ಚೇಕಿತಾನ ಪಾಂಡವರ ಕಡೆಗೆ ಹೋದರು. ಕೃತವರ್ಮ ತನ್ನ ಬೆನ್ನಿಗೆ ನಿಂತ. ಆದರೆ ಕೃತವರ್ಮ ತನ್ನತ್ತ ಬಂದರೂ ದುರ್ಯೋಧನನಿಗೆ ದೊಡ್ಡ ಸಂಗತಿಯಾಗಿ ಕಾಣಲಿಲ್ಲ. ಇವರಿಬ್ಬರೂ ತನ್ನ ಕೆತಪ್ಪಿ ಆ ಕಡೆ ಹೋದದ್ದು ದೊಡ್ಡ ಸಂಗತಿಯಾಯಿತು. ಅದಕೆಂದೇ ಇಡಿಯ ಯಾದವಸೇನೆಯ ಪ್ರತಿನಿಧಿಯಾಗಿ ಸಾತ್ಯಕಿಯ ಹೆಸರನ್ನು ಮೊದಲು ಉಲ್ಲೇಖಿಸುತ್ತಾನೆ.

ದುರ್ಯೋಧನ ಉಲ್ಲೇಖಿಸುವ ಎರಡನೆಯ ವ್ಯಕ್ತಿ ವಿರಾಟ. ಈತನೂ ತಮ್ಮ ಪಕ್ಷಕ್ಕೆ ಬರಬೇಕಾಗಿದ್ದು ವಿಧಿಯ ದುರ್ವಿಲಾಸದಿಂದ ಪಾಂಡವರ ಪಕ್ಷಕ್ಕೆ ಸೇರಿಕೊಂಡ. ಆದ್ದರಿಂದ ತನಗೆ ಅನ್ಯಾಯವಾಯಿತು ಎನ್ನುವ ವೇದನೆಯನ್ನು ದುರ್ಯೋಧನ ಇಲ್ಲಿ ಸೂಚಿಸುತ್ತಾನೆ.

ಈ ಮಾತು ಸ್ಫುಟವಾಗಬೇಕಾದರೆ ವಿರಾಟನ ಪೂರ್ವ-ಇತಿಹಾಸವನ್ನು ಪರಿಶೀಲಿಸಬೇಕು. ವಿರಾಟ ಕೀಚಕನ ಸೋದರಿ ಸುದೇಷ್ಣೆಯ ಗಂಡ. ಕೀಚಕನೇನಾದರೂ ಈಗ ಬದುಕಿದ್ದರೆ ವಿರಾಟ ಪಾಂಡವರ ಕಡೆಗೆ ಹೋಗುವ ಸಂಭವವೇ ಇರಲಿಲ್ಲ. ಸ್ವತಃ ಕೀಚಕನೇ ವಿರಾಟಸೇನೆಯ ಮುಂಚೂಣಿಯಲ್ಲಿ ನಿಂತು ಕೌರವರ ಕಡೆಗೆ ಬಂದು ಹೋರಾಡುತಿದ್ದ.

ಭೀಮಸೇನ, ಬಲರಾಮ, ಶಲ್ಯ ಈ ಮೂವರನ್ನು ಬಿಟ್ಟರೆ ಗದಾಯುದ್ಧದಲ್ಲಿ ಕೀಚಕನಿಗೆ ಸಾಟಿಯಾದವರು ಆ ಕಾಲದಲ್ಲಿ ಇನ್ನೊಬ್ಬರಿರಲಿಲ್ಲ. ಅಂಥ ಕೀಚಕನ ಸಾವು ಭೀಮನ ಕೈಯಲ್ಲೇ ಆಗಬೇಕೇ? ಅದೂ ಅಜ್ಞಾತವಾಸದ ಮುಕ್ತಾಯದ ಹಂತ ದಲ್ಲಿ? ಕೀಚಕನ ಸಾವು ಅವನ ದುರ್ದೈವವಷ್ಟೇ ಅಲ್ಲ; ದುರ್ಯೋಧನನ ದುರ್ದೈವವೂ ಆಯಿತು. ಪರಿಣಾಮವಾಗಿ ತನ್ನ ಕಡೆಗೆ ಬರಬೇಕಿದ್ದ ವಿರಾಟದೇಶದ ಒಂದು ಅಕ್ಷೋಹಿಣಿ ಸೇನೆ ಅನ್ಯಾಯವಾಗಿ ಪಾಂಡವರ ಪಾಲಿಗೆ ಸಂದಿತು. ಇಷ್ಟೆಲ್ಲ ವೇದನೆಯನ್ನು ಬಗೆಯಲ್ಲಿ ತುಂಬಿಕೊಂಡು ದುರ್ಯೋಧನ ದ್ರೋಣರ ಮುಂದೆ ಹೇಳುತ್ತಾನೆ: ವಿರಾಟಶ್ಚ. ವಿರಾಟ ಕೂಡ ನಮ್ಮ ಕೈತಪ್ಪಿಹೋದ. ಕೀಚಕ ಸತ್ತದ್ದು ಮಾತ್ರವಲ್ಲ; ವಿರಾಟನ ಮಗಳು ಉತ್ತರೆ ಅಭಿಮನ್ಯುವಿನ ಪತ್ನಿಯಾಗಿ ಪಾಂಡವರ ಸೊಸೆಯಾಗಿ ಅವರ ಮನೆ ತುಂಬಿದಳು. ಹೆಣ್ಣಿನ ಜೊತೆಗೆ ಒಂದು ಅಕ್ಷೋಹಿಣಿ ಸೇನೆಯೂ ಅವರದಾಯಿತು. ಅದಕ್ಕಾಗಿ ದುರ್ಯೋಧನ ತನ್ನ ದುರ್ದೈವವನ್ನೇ ಈ ಮೂಲಕ ಹಳಿದುಕೊಂಡಂತಿದೆ.

ಮೂರನೆಯ ಹೆಸರು ದ್ರುಪದ. ಈತನು ಪಾಂಡವರ ಸಂಬಂಧವಾಗುವ ಮೊದಲು, ಪಾಂಡವರು ಇನ್ನೂ ಚಿಕ್ಕ ಮಕ್ಕಳಾಗಿದ್ದಾಗ ಕಷ್ಣನ ವಿರುದ್ಧವಾಗಿ ಹೋರಾಟಕ್ಕಿಳಿದ ಜರಾಸಂಧನಿಗೆ ಸೆನ್ಯದ ನೆರವನ್ನಿತ್ತವನು. ಆದರೆ ಈಗ ಅದೇ ದ್ರುಪದ ಕೃಷ್ಣನ ಪಕ್ಷದಲ್ಲಿ ನಿಂತು ತಮ್ಮನ್ನು ವಿರೋಧಿಸುತ್ತಿದ್ದಾನೆ; ತನ್ನ ಇಡಿಯ ಸೇನೆಯ ಜೊತೆಗೆ; ತನ್ನ ವೀರರಾದ ಮಕ್ಕಳ ಜೊತೆಗೆ. ಒಬ್ಬ ಮಗ ಧೃಷ್ಟದ್ಯುಮ್ನನಂತೂ ಪಂಡವರ ಸೇನಾಪತಿಯೇ ಆಗಿಬಿಟ್ಟಿದ್ದಾನೆ. ಇದಕ್ಕೆ ಮುಖ್ಯ ಕಾರಣ ದ್ರೌಪದಿ ಪಾಂಡವರ ಕೈಹಿಡಿದದ್ದು.

ವಾಸ್ತವವಾಗಿ ದ್ರೌಪದಿ ತನ್ನ ಮಡದಿಯಾಗಬೇಕೆಂದು ದುರ್ಯೋಧನ ಬಯಸಿದ್ದ. ಅದಕ್ಕಾಗಿ ಮತ್ಸ್ಯಭೇದದ ಪಣವನ್ನು ಗೆದೆಯಲು ಕರ್ಣನ ನೆರವನ್ನೂ ಬಯಸಿದ್ದ. ಕರ್ಣ ಲಕ್ಷ್ಯಭೇದ ಮಾಡಲೂ ಬಹುದಿತ್ತು. ಆಗ ದ್ರೌಪದಿ ತನ್ನವಳೇ ಆಗಿ ಬಿಡುತ್ತಿದ್ದಳು. ಹಾಗಾಗಿದ್ದರೆ ದ್ರುಪದನ ಸೇನೆ ತನ್ನ ಕಡೆಗೆಯೇ ಬರಬೇಕಾಗಿತ್ತಲ್ಲವೆ?

ಆದರೆ ಇಲ್ಲಿಯೂ ವಿಧಿ ತನ್ನ ವಿರುದ್ಧವಾಗಿ ಸಂಚು ಹೂಡಿತು. ಕರ್ಣ ಮತ್ಸ್ಯಭೇದದಲ್ಲಿ ಸ್ವಲ್ಪದರಲ್ಲೆ ವಿಫಲನಾದ. ದ್ರೌಪದಿಯ ಮಾಲೆ ಪಾಂಡವರ ಕೊರಳಿಗೆ ಬಿತ್ತು. ಹಾಗಾಗಿ ತಾನು ಪಾಂಚಾಲ-ಸೇನೆಯಿಂದ ವಂಚಿತನಾದೆ ಎಂಬ ಭಾವನೆಯಿಂದ ದುರ್ಯೋಧನ ನುಡಿದ: ದ್ರುಪದಶ್ಚ. ದ್ರುಪದನೂ ಕೈತಪ್ಪುವಂತೆ ವಿಧಿ ಹೂಟ ಹೂಡಿತು. ಈ ಶ್ಲೋಕದ ಕೊನೆಯಲ್ಲಿ ಬಂದ ‘ಮಹಾರಥಃ’ ಎಂಬ ವಿಶೇಷಣ ಇಲ್ಲಿ ಉಲ್ಲೇಖಗೊಂಡ ಮೂವರಿಗೂ ಅನ್ವಯಿಸುವಂಥದು. ಮಹಾರಥನಾದ ಸಾತ್ಯಕಿ, ಮಹಾರಥನಾದ ವಿರಾಟ ಮತ್ತು ಮಹಾ ರಥನಾದ ದ್ರುಪದ. ಮಹಾರಥನ ಲಕ್ಷಣವನ್ನು ಪ್ರಾಚೀನರು ಹೀಗೆ ನಿರೂಪಿಸುತ್ತಾರೆ

ಏಕೋ ದಶಸಹಸ್ರಾಣಿ ಯೋಧಯೇದ್ ಯಸ್ತು ಧನ್ವಿನಾಮ್ |
ಅಸ್ತ್ರಶಸ್ತ್ರಪ್ರವೀಣಶ್ಚ ವಿಜ್ಞೇಯಃ ಸ ಮಹಾರಥಃ ॥

(ಶಸ್ತ್ರಶಾಸ್ತ್ರಪ್ರವೀಣಶ್ಚ  ಎನ್ನುವುದು ಪಾಠಾಂತರ.)

ಅಮಿತಾನ್ ಯೋಧಯೇದ್ ಯಸ್ತು ಸಂಪ್ರೋಕ್ತೋತಿರಥಸ್ತು ಸಃ |
ರಥೀ ಚೈಕೇನ ಯೋ ಯೋದ್ಧಾ  ತನ್ನೂನೋರ್ಧರಥಃ ಸ್ಮೃತಃ ॥

[ಹತ್ತುಸಾವಿರ ಮಂದಿ ಬಿಲ್ಲಾಳುಗಳನ್ನು ಏಕಾಕಿಯಾಗಿ ಹೋರಾಡಬಲ್ಲವನನ್ನು  ಅಸ್ತ್ರ-ಶಸ್ತ್ರಗಳಲ್ಲಿ ಪರಿಣತನಾದವನನ್ನು  ಮಹಾರಥ ಎನ್ನುತ್ತಾರೆ. ಎಣೆಯಿರದಷ್ಟು ಮಂದಿಯನ್ನು ಎದುರಿಸಬಲ್ಲವನು ಅತಿರಥ. ಒಬ್ಬ ರಥಿಕನ ಜತೆ ಹೋರಬಲ್ಲವನು ರಥಿಕ. ಅಷ್ಟೂ ತಾಕತ್ತಿರದವನು ಅರ್ಧರಥ.]

ಈ ಮಾತಿನ ನಿರ್ವಚನ ಹೇಗೆ? ಮಹತ್ತಾದ ರಥ ಉಳ್ಳವನು ಮಹಾರಥ. [ಮಹಾನ್ ರಥೋ ಯಸ್ಯ ಸಃ=ಮಹಾರಥಃ] ಇದು ಮೇಲುನೋಟಕ್ಕೆ ಕಾಣುವ ಅರ್ಥ. ಆದರೆ ಹೀಗೆ ನಿರ್ವಚನ ಮಾಡಿದರೆ ಹಿರಿಮೆಯಲ್ಲ ರಥಕ್ಕೆ ಸೇರುತ್ತದೆ; ರಥಿಕನಿಗಲ್ಲ. ಅದರಿಂದ ಇಲ್ಲಿ ರಥ=ರಥಿಕ. ಮಹತ್ತಾದ ರಥಿಕ ಮಹಾರಥ. [ಮಾಹಾಂಶ್ಚಾಸೌ ರಥಶ್ಚ=ಮಹಾರಥಃ] ಎಲ್ಲವನ್ನು ಮೀರಿನಿಂತ ರಥಿಕ ಅತಿರಥ. [ಅತಿಶಯಿತೋ ರಥಃ=ಅತಿರಥಃ] ಒಬ್ಬ ರಥಿಕನೊಡನೆ ಮಾತ್ರ ಹೋರಬಲ್ಲ ರಥಿಕ ಬರಿಯ ರಥಿ. [ಏಕಃ ರಥಃ ಅಸ್ಯ ಪ್ರತಿಯೋದ್ಧ ತ್ವೇನ ಅಸ್ತೀತಿ=ರಥೀ] ಅಂಥ ಒಬ್ಬ [ರಥಿಕ]ನಿಗಿಂತಲು ಕಮ್ಮಿಯವನು ಅರ್ಧರಥ. [ರಥಸ್ಯ ಅರ್ಧಃ=ಅರ್ಧರಥಃ].

ಪೈಶಾಚಭಾಷ್ಯದ ಹನುಮಂತ ಮಹಾರಥಶಬ್ದಕ್ಕೊಂದು ಹೊಸ ಅರ್ಥ ಹೇಳುತ್ತಾನೆ: ‘ಮಹಾಯ ಯುದ್ಧೋತ್ಸವಾಯ ಆ ಸಮಂತಾತ್ ರಥಾಃ ಶಸ್ತ್ರಾಸ್ತ್ರ ಪ್ರಭೂತಾಃ ಯೇಷಾಂ ತೇ ಮಹಾರಥಾಃ ’ (ಈ ನಿರ್ವಚನದಂತೆ ‘ಮಹ+ಆ+ರಥ’ ಈ ಮೂರು ಪದಗಳು ಸೇರಿ ‘ಮಹಾರಥ’ ಆಯಿತು: ಮಹಾಯ=ಯದ್ಧದ ಸಂಭ್ರಮಕ್ಕೋಸ್ಕರ, =ಸುತ್ತಲೂ, ರಥಾಃ=ಶಸ್ತ್ರಾಸ್ತ್ರಗಳುಸ ತುಂಬಿದ ರಥಗಳು ಯಾರನ್ನು ಮುತ್ತಿವೆಯೋ ಅವನು ಮಹಾರಥ.) ಏನೋ ಎಳೆದು ತಂದಂತಿದೆ. ಇದು ಶಬ್ದದ ಸಹಜ ಅರ್ಥ ಎಂದೆನಿಸುವುದಿಲ್ಲ.

ದುರ್ಯೋಧನ ಹೆಸರಿಸುವ ನಾಕನೇ ವ್ಯಕ್ತಿ ‘ದೃಷ್ಟಕೇತು’. ಈತ ಶಿಶುಪಾಲನ ಮಗ. ಶಿಶುಪಾಲ ಬದುಕಿದ್ದರೆ ಯಾವ ಕಾಲಕ್ಕಾದರೂ ಅವನು ಪಾಂಡವರ ಕಡೆಗೆ ಹೋಗುವುದು ಸಾಧ್ಯವಿತ್ತೆ? ಆದರೆ ಅಂಥ ಶಿಶುಪಾಲ, ಜರಾಸಂಧನ ಅಂತರಂಗ ಶಿಷ್ಯನಾಗಿದ್ದ ಶಿಶುಪಾಲ, ರಾಜಸೂಯದ ಅಗ್ರಪೂಜೆಯಲ್ಲಿ ಕೃಷ್ಣನ ಕೈಯಲ್ಲೇ ಸಾವನ್ನಪ್ಪಿದ. ಅವನ ಮಗನಾದ ಧೃಷ್ಟಕೇತುವೋ ತನ್ನ ತಂದೆಯನ್ನು ಕೊಂದ ಕೃಷ್ಣನ ಕಡೆಗೇ ನಿಂತು ತಿಳಿಗೇಡಿತನದಿಂದ ತನ್ನನ್ನು ವಿರೋಧಿಸುತ್ತಿದ್ದಾನೆ ಎನ್ನುವುದು ದುರ್ಯೋಧನನ ಕೊರಗು.

ಧರ್ಮರಾಜನನ್ನು ತನ್ನ ಕಡೆಗೆ ಸೆಳೆದುಕೊಳ್ಳಬೇಕೆಂದು ಶಿಶುಪಾಲ ತನ್ನ ಮಗಳು ದೇವಕಿಯನ್ನು ಧರ್ಮ ರಾಜನಿಗೆ ಕೊಟ್ಟು ಮದುವೆ ಮಾಡಿದ್ದ. ಆ ಬಾಂಧವ್ಯದ ಪರಿಣಾಮ ಈಗಂತೂ ವಿಪರೀತವೇ ಆಯಿತು. ತನ್ನ ಸೋದರಿಯ ಗಂಡ ಎನ್ನುವ ಕಾರಣಕ್ಕಾಗಿ ಧರ್ಮರಾಜನನ್ನೇ ಧೃಷ್ಟಕೇತು ಬೆಂಬಲಿಸುವಂತಾಯಿತು.

ದುರ್ಯೋಧನ ಉಲ್ಲೇಖಿಸಿದ ಐದನೆಯ ವ್ಯಕ್ತಿ: ‘ಚೇಕಿತಾನ’. ಈತನು ಸಾತ್ಯಕಿ ಯಂತೆಯೇ ಕೃಷ್ಣನ ಪಕ್ಷಪಾತಿಯಾದ ಒಬ್ಬ ಯಾದವವೀರ; ಸಾತ್ಯಕಿಯ ಸಮವಯಸ್ಕ. ಸಾತ್ಯಕಿಯೂ ಇವನೂ ಒಂದೇ ದಿನ ಹುಟ್ಟಿದವರು. ಸಾತ್ಯಕಿಯ ಹಿನ್ನೆಲೆಯಲ್ಲಿ ಹೇಳಿದ ಮಾತೇ ಇವನಿಗೂ ಅನ್ವಯವಾಗುತ್ತದೆ.

ವಿರಾಟ ಅಭಿಮನ್ಯುವಿಗೆ ಹೆಣ್ಣು ಕೊಟ್ಟದ್ದಕ್ಕಾಗಿ ಪಾಂಡವರ ಕಡೆಗೆ ಬಂದ. ದ್ರುಪದನಿಗಂತೂ ಪಾಂಡವರು ಅಳಿಯಂದಿರೇ ಆದರು. ಧೃಷ್ಟಕೇತು ತನ್ನ ಸೋದರಿಯ ಸಂಬಂಧಕ್ಕಾಗಿ ಪಾಂಡವರ ಕಡೆಗೆ ಹೋದ. ಈ ಯುಯುಧಾನ ಮತ್ತು ಚೇಕಿತಾನರು ಯದುವೀರನಾದ ವಸುದೇವನ ತಂಗಿ ಕುಂತಿಯ ಮಕ್ಕಳು ಪಾಂಡವರು ಎನ್ನುವುದಕ್ಕಾಗಿ, ಯದುವಂಶದ ಹೆಣ್ಣು ಸುಭದ್ರೆ ಅರ್ಜುನನ ಮಡದಿ ಎನ್ನುವುದ ಕ್ಕಾಗಿ, ಪಾಂಡವರ ಕಡೆಗೆ ಹೋದರು. ಎಲ್ಲರೂ ಪಾಂಡವರ ಸಂಬಂಧವನ್ನು ಗಮನಿಸಿದರೇ ಹೊರತು ತನ್ನ ಸಂಬಂಧವನ್ನು ಗಮನಿಸಲಿಲ್ಲ. ದುರ್ಯೋಧನ ತನ್ನ ಈ ಕೊರಗಿಗೆ ನಿದರ್ಶನವಾಗಿ ಮುಂದಿನ ಹೆಸರನ್ನು ಉಲ್ಲೇಖಿಸುತ್ತಾನೆ: ಕಾಶಿರಾಜಶ್ಚ ವೀರ್ಯವಾನ್.

ಈ ಕಾಶಿರಾಜನ ಹಿನ್ನೆಲೆಯನ್ನು ಗಮನಿಸಿದರೆ ದುರ್ಯೋಧನ ಏಕೆ ಇಷ್ಟು ಆತಂಕ ಪೂರ್ಣವಾಗಿ ಕಾಶಿರಾಜನ ಹೆಸರನ್ನು ಉಲ್ಲೇಖಿಸುತ್ತಾನೆ ಎಂಬುದು ಸ್ಫುಟವಾಗುತ್ತದೆ. ಅವನ ತಳ್ಳಂಕಕ್ಕೆ ಬಹಳ ಮಹತ್ವದ ಕಾರಣಗಳುಂಟು. ಕಾಶಿರಾಜನ ಮಗಳು ಕಾಳಿಯನ್ನು ಭೀಮಸೇನ ಮದುವೆಯಾಗಿದ್ದ. ಸಹಜವಾಗಿಯೇ ಅವನು ತನ್ನ ಅಳಿಯನಾದ ಭೀಮಸೇನನ ಪಕ್ಷಕ್ಕೆ ಹೋದ ಎಂದು ಸಮಾಧಾನಪಟ್ಟುಕೊಳ್ಳುವುದು ದುರ್ಯೋಧನನಿಗೆ ಸಾಧ್ಯವಿಲ್ಲ. ಏಕೆಂದರೆ ದುರ್ಯೋಧನನೂ ಕಾಶಿರಾಜನ ಮಗಳನ್ನೇ ಮದುವೆಯಾಗಿದ್ದ. ಏಕಕಾಲದಲ್ಲಿ ಕಾಶಿಯಲ್ಲಿ ಇಬ್ಬರು ರಾಜರು ಇರುವುದು ಅಸಾಧ್ಯವಾದ್ದರಿಂದ ಭೀಮಸೇನನ ಮಾವನಾದ ಕಾಶಿರಾಜನೇ ದುರ್ಯೋ ಧನನ ಮಾವನೂ ಇರಬೇಕು. ಅಥವಾ ಈ ಕಾಶಿರಾಜ ಆತನ ಮಗನಿರಬಹುದು! ಹೀಗೆ ಸಂಬಂಧದಲ್ಲಿ ಇಬ್ಬರೂ ಸಮಾನರಾದರೂ ಕಾಶಿರಾಜ ತನ್ನನ್ನು ಬಿಟ್ಟು ಭೀಮಸೇನನ ಕಡೆಗೆ ಏಕೆ ಹೋದ? ಒಂದು ವೇಳೆ ಬಲರಾಮನಂತೆ ಎರುಡು ಕಡೆಗೂ ಬೆಂಬಲವೀಯದೆ ಕಾಶಿರಾಜ ತಟಸ್ಥನಾಗಿ ನಿಂತಿದ್ದರೆ ದುರ್ಯೋಧನನಿಗೆ ಅರ್ಥವಾಗುತ್ತಿತ್ತು. ಆದರೆ ಈತ ತಾನು ಬಂಧುವೇ ಅಲ್ಲ ಎನ್ನುವಂತೆ ಭೀಮಸೇನನ ಕಡೆಗೆ ನಿಂತುಬಿಟ್ಟನಲ್ಲಾ! ಇದು ದುರ್ಯೋಧನನ ತಳ್ಳಂಕಕ್ಕೆ ಮುಖ್ಯ ಕಾರಣ.

ಈ ಶ್ಲೋಕಾರ್ಧದ ಕೊನೆಯಲ್ಲಿ ಬರುವ ‘ವೀರ್ಯವಾನ್’ ಎನ್ನುವ ವಿಶೇಷಣ ಹಿಂದಿನಂತೆಯೇ ಇಲ್ಲಿ ಬಂದ ಮೂವರಿಗೂ ಅನ್ವಯವಾಗುವಂಥದು. ಮಹಾ ವೀರನಾದ ಧಷ್ಟಕೇತು, ಮಹಾವೀರನಾದ ಚೇಕಿತಾನ ಮತ್ತು ಮಹಾವೀರನಾದ ಕಾಶಿರಾಜ.

ಸಾಮಾನ್ಯವಾಗಿ ಮೂವರಿಗೂ ಅನ್ವಯವಾಗುವ ಈ ವಿಶೇಷಣವನ್ನು ವಿಶೇಷವಾಗಿ ಕಾಶಿರಾಜನಿಗೇ ಅನ್ವಯಿಸುವುದರಲ್ಲೂ ಒಂದು ಔಚಿತ್ಯ ಉಂಟು. ಕಾಶಿಯ ರಾಜರು ಮಹಾವೀರರೆಂದು ವೇದಕಾಲ ದಿಂದಲೂ ಪ್ರಸಿದ್ಧರಾದವರು. ಬಹದಾರಣ್ಯಕೋಪನಿಷತ್ತು ಕಾಶಿರಾಜರ ಪರಾಕ್ರಮವನ್ನು ಹೀಗೆ ಉಲ್ಲೇಖಿಸುತ್ತದೆ

ಯಥಾ ಕಾಶ್ಯೋ ವಾ ವೆದೇಹೋ ವೋಗ್ರಪುತ್ರ ಉಜ್ಜ್ಯಂ ಧನುರಧಿಜ್ಯಂ ಕತ್ವಾ ದ್ವೌ ಬಾಣವಂತೌ ಸಪತ್ನಾತಿವ್ಯಾಧಿನೌ ಹಸ್ತೇ ಕತ್ವೋಪೋತ್ತಿಷ್ಠೇತ್……’

ಕಾಶಿರಾಜರು ಆನುವಂಶಿಕವಾಗಿ ಹಿರಿಯ ಬಿಲ್ಗಾರರಾಗಿದ್ದರು; ಶತ್ರುಗಳ ಎದೆಗೆಡಿಸುವ ಪರಾಕ್ರಮದಿಂದ ಇಡಿಯ ದೇಶದಲ್ಲೇ ವಿಖ್ಯಾತರಾಗಿದ್ದರು ಎನ್ನುವುದು ಈ ಮಾತಿನಿಂದ ಸ್ಫುಟವಾಗುತ್ತದೆ. ಗೀತೆ ಕೂಡ ಮುಂದೆ ಕಾಶಿರಾಜನನ್ನು ಉಲ್ಲೇಖಿಸುವಾಗ ‘ಕಾಶ್ಯಶ್ಚ ಪರಮೇಷ್ವಾಸಃ’ ಎಂದು ಉಲ್ಲೇಖಿಸಿರುವುದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.

ಅನಂತರದ ಎರಡು ಹೆಸರುಗಳು ‘ಪುರುಜಿತ್’ ಮತ್ತು ‘ಕುಂತಿಭೋಜ’. ಇವರು ಕುಂತಿಯ ಸೋದರರು. ಕುಂತಿಭೋಜ ದೇಶದ ರಾಜಪುತ್ರರು. ಯದುವಂಶದಲ್ಲಿ ವಸುದೇವನ ತಂಗಿಯಾಗಿ ಹುಟ್ಟಿದ ಪೃಥೆ ಕುಂತಿಭೋಜದ ರಾಜನಿಗೆ ದತ್ತಕ್ಕೆ ಹೋಗಿ ಕುಂತಿಯಾದಳು. ಈ ಸಂಬಂಧದ ನೆಪದಿಂದ ಈ ಇಬ್ಬರು ರಾಜ ಕುಮಾರರು ತಮ್ಮ ಸೋದರಿಯ ಮಕ್ಕಳ ಪಕ್ಷದಲ್ಲಿ ನಿಂತು ಹೋರಾಡಬಂದಿದ್ದಾರೆ.

ಒಂದು ತಪ್ಪು ಕಲ್ಪನೆ

ಕೆಲವರು ಹೇಳುತ್ತಾರೆ ‘ಪುರುಜಿತ್ ಕುಂತಿಭೋಜಶ್ಚ’ ಎಂದರೆ ‘ಕುಂತಿಭೋಜದ  ದೊರೆಯಾದ ಪುರುಜಿತ್’ ಎಂದರ್ಥ ಹೊರತು, ‘ಪುರುಜಿತ್ ಮತ್ತು ಕುಂತಿ ಭೋಜ’ ಎಂದಲ್ಲ. ಹಾಗಾಗಿ ಇಲ್ಲಿ ಉಲ್ಲೇಖಗೊಂಡಿರುವವನು ಒಬ್ಬನೆ; ಇಬ್ಬರಲ್ಲ ಎಂದು. ಅವರು ತಮ್ಮ ವಾದಕ್ಕೆ ಪುರಾವೆಯಾಗಿ ಮಹಾಭಾರತದ ಈ ಶ್ಲೋಕವನ್ನು ಉಲ್ಲೇಖಿಸುತ್ತಾರೆ

ಪುರುಜಿತ್ ಕುಂತಿಭೋಜಶ್ಚ ಮಹೇಷ್ವಾಸೋ ಮಹಾಬಲಃ
ಮಾತುಲೋ ಭೀಮಸೇನಸ್ಯ ಸ ಚ ಮೇತಿರಥೋ ಮತಃ ॥
          (ಉದ್ಯೋ.ಪ.೧೭೨.೨)

ಮೇಲು ನೋಟಕ್ಕೆ ಅವರ ವಾದ ಸರಿಯೆನ್ನಿಸಿಬಿಡುತ್ತದೆ. ಆದರೆ ಇಲ್ಲಿ ಸಮಗ್ರ ದರ್ಶನದ ಕೊರತೆಯಿದೆ. ಇಡಿಯ ಮಹಾಭಾರತವನ್ನು ಗಮನಿಸಿದಾಗ ಸಂಗತಿ ಬೇರೆಯೇ ಆಗಿಬಿಡುತ್ತದೆ.

ಕುಂತಿಭೋಜ ಎನ್ನುವುದು ಒಂದು ಪ್ರಾಚೀನರಾಜ್ಯ. ದೇಶದ ಹೆಸರಿನಿಂದಲೇ ರಾಜರನ್ನು ಕರೆಯುವುದು ಹಿಂದಿನ ಕಾಲದ ರೂಢಿ. ಈಗಲೂ ಪ್ರಖ್ಯಾತವ್ಯಕ್ತಿಯನ್ನು ಅವನು ಹುಟ್ಟಿದ ಊರಿನ ಹೆಸರಿನಿಂದಲೇ ಕರೆಯುವುದಿಲ್ಲವೇ-ಹಾಗೆ. ಸಾಲ್ವ ದೇಶದ ರಾಜ ಸಾಲ್ವ. ಕುಂತಿಭೋಜದ ರಾಜ ಕುಂತಿಭೋಜ.

ಕುಂತಿಯ ಮೊದಲ ಹೆಸರು ಪೃಥೆ. ವಸುದೇವನ ತಂದೆ ಶೂರಸೇನನ ಹಿರಿಯ ಮಗಳು. ವಸುದೇವನಿಗೂ ಅಕ್ಕ. ಆಗ ಕುಂತಿಭೋಜದ ರಾಜನಗಿದ್ದವ ಶೂರಸೇನನ ಸೋದರತ್ತೆಯ ಮಗ. ಆಪ್ತಮಿತ್ರ ಕೂಡ. ಶೂರಸೇನ ತನ್ನ ಮಗಳು ಪೃಥೆಯನ್ನು ಮಕ್ಕಳಿರದ ಕುಂತಿಭೋಜನಿಗೆ ದತ್ತು ಕೊಟ್ಟ. ಅದರಿಂದ ಪೃಥೆ ಕುಂತಿಭೋಜ ದೇಶದ ರಾಜಕುಮಾರಿಯಾದಳು; ಕುಂತಿಯಾದಳು. ಈ ಕಥೆ ಮಹಾಭಾರತದಲ್ಲಿ ಬಂದಿದೆ

ಶೂರೋ ನಾಮ ಯದುಶ್ರೇಷ್ಠೋ ವಸುದೇವಪಿತಾಭವತ್ |
ತಸ್ಯ ಕನ್ಯಾ ಪೃಥಾ ನಾಮ ರೂಪೇಣಾಸದೃಶೀ ಭುವಿ ॥

ಪೈತೃಷ್ವಸೇಯಾಯ ತತಃ ಸೋನಪತ್ಯಾಯ ವೈ ತದಾ |
ಉಗ್ರಾಯಾಗ್ರೇ ಪ್ರತಿಜ್ಞಾಯ ಸ್ವಸ್ಯಾಪತ್ಯಂ ಚ ವೀರ್ಯವಾನ್ ॥

ಅಗ್ರಜಾತೇತಿ ತಾಂ ಕನ್ಯಾಮುಗ್ರಾನುಗ್ರಹಕಾಂಕ್ಷಯಾ |
ಅದದಾತ್ ಕುಂತಿಭೋಜಾಯ ಶೂರೋ ಗೋಪತಯೇ ಸುತಾಮ್ ॥
 (ಆದಿಪ.68.129-31)

[ಶೂರನೆಂಬ ಯಾದವವೀರ ವಸುದೇವನ ತಂದೆ. ಅವನ ಮಗಳು ಪೃಥೆಯನ್ನು ವವಳು, ಭೂಮಿಯಲ್ಲೆ ಸಾಟಿಯಿಲ್ಲದ ರೂಪಸಿ. ಶೂರನ ಸೋದರತ್ತೆಯ ಮಗ (ಸೋದರಳಿಯ) ಉಗ್ರನಿಗೆ ಮಕ್ಕಳಿರಲಿಲ್ಲ. ಆಗ ಅವನಿಗೆ ತನ್ನ ಮೊದಲ ಮಗುವನ್ನು  ದತ್ತು ಕೊಡುವುದಾಗಿ ವೀರನಾದ ಶೂರಸೇನ ಮಾತು ಕೊಟ್ಟ. ಮತ್ತು ಕೊಟ್ಟ ಮಾತಿನಂತೆ, ಉಗ್ರನ ಹಿತವನ್ನು ಬಯಸಿ, ಗೋವುಗಳಿಂದ ಸಮೃದ್ಧವಾದ ಕುಂತಿಭೋಜದ ಅರಸನಾದ ಅವನಿಗೆ, ತನಗೆ ಮೊದಲು ಹುಟ್ಟಿದ ಹೆಣ್ಣು ಮಗುವನ್ನು ದತ್ತು ನೀಡಿದ.]

ಮೇಲಿನ ಶ್ಲೋಕಗಳಲ್ಲಿ ಹಲವಾರು ಪಾಠಾಂತರಗಳಿವೆ. ಅತ್ಯಂತ-ಪ್ರಾಚೀನವಾದ ದಾಕ್ಷಿಣಾತ್ಯ ಪಾಠವನ್ನು ನಾನಿಲ್ಲಿ ಬಳಸಿಕೊಂಡಿದ್ದೇನೆ. ಇದರಿಂದ ತಿಳಯುವ ಸಂಗತಿ ಇಷ್ಟು: ಪೃಥೆಯನ್ನು ದತ್ತು ಪಡೆದ ಕುಂತಿಭೋಜದ ರಾಜನ ಹೆಸರು ‘ಉಗ್ರ’ ಎಂದು. (ಒಂದು ಪ್ರಾಚೀನ ಪಾಠದಲ್ಲಿ ಮಾತ್ರ ಈ ಪದದ ಬಳಕೆಯಾಗಿದೆ.) ಮತ್ತು ಪೃಥೆ ಶೂರಸೇನನ ಮಕ್ಕಳಲ್ಲಿ ಮೊದಲಿನವಳು-ಎಂದು.

ಹೀಗೆ ಕುಂತಿಭೋಜ ಉಗ್ರ ಶೂರಸೇನನ ಹಿರಿಮಗಳನ್ನು ದತ್ತಕ್ಕೆ ಪಡೆದ: ದಶರಥನ ಮಗಳು ಶಾಂತೆಯನ್ನು ಅಂಗರಾಜ ರೋಮಪಾದ ಪಡೆದಂತೆ. ತನಗೆ ಗಂಡುಮಕ್ಕಳಿರದಿದ್ದರೂ ಈ ಮಗಳ ಗಂಡನೆ ತನ್ನ ಉತ್ತರಾಧಿಕಾರಿಯಾಗಬಹುದು ಎನ್ನುವುದು ಅವನ ಅಪೇಕ್ಷೆಯಾಗಿತ್ತು.

ಆದರೆ ವಿಧಿಯ ವ್ಯವಸ್ಥೆ ಬೇರೆಯೇ ಇತ್ತು. ಪೃಥೆಯನ್ನು ದತ್ತು ಪಡೆದ ಮೇಲೆ ಅವನಿಗೆ ಇಬ್ಬರು ಗಂಡುಮಕ್ಕಳಾದರು. ತಂದೆಯ ಅನಂತರ ಅವನ ಮೊದಲ ಮಗನೇ ಕುಂತಿಭೋಜದ ರಾಜನಾದ. ಹಾಗಾಗಿ ಅವನೂ ಕುಂತಿಭೋಜನಾದ. ಉತ್ತರದ ಒಂದು ಪಾಠದಂತೆ ಇವನ ಹೆಸರು ‘ಶತಾನೀಕ’: ‘ಕುಂತಿಭೋಜಃ ಶತಾನೀಕಃ’(ಭೀಷ್ಮಪ.೨೫.೧೧). ಆದರೆ ಭಾರತದ ದಾಕ್ಷಿಣಾತ್ಯಪಾಠದಂತೆ ಆ ಇಡಿಯ ಪ್ರಸಂಗವೆ ಪ್ರಕ್ಷಿಪ್ತ. ಹಾಗಾಗಿ ಅವನ ಹೆಸರು ಅನಿಶ್ಚಿತ. ಅವನ ತಮ್ಮನೇ ಪುರುಜಿತ್. ಇಬ್ಬರೂ ಕುಂತಿಯ ತಮ್ಮಂದಿರು.

ಮಹಾಭಾರತಯುದ್ಧದ ಕಾಲದಲ್ಲಿ ಪ್ರಾಯಃ ಕುಂತಿಯ ತಂದೆ ಬದುಕಿರಲಿಲ್ಲ. ಅವನ ಹಿರಿಮಗನೇ ಪಟ್ಟವನ್ನೇರಿ ಕುಂತಿಭೋಜನಾದ. ಇವನು ತನ್ನ ತಮ್ಮನಾದ ಪುರುಜಿತ್ತಿನ ಜತೆ ಭಾರತಯುದ್ಧದಲ್ಲಿ ಭಾಗವಹಿಸಿದ್ದ ಮತ್ತು ಇಬ್ಬರೂ ಸೋದರರು ಅಲ್ಲೆ ಅಸು ನೀಗಿದರು-

ಪುರುಜಿತ್ ಕುಂತಿಭೋಜಶ್ಚ ಮಾತುಲೌ ಸವ್ಯಸಾಚಿನಃ |
ಸಂಗ್ರಾಮನಿರ್ಜಿತಾನ್ ಲೋಕಾನ್ ಗಮಿತೌ ದ್ರೋಣಸಾಯಕೈಃ
॥  (ಕರ್ಣಪ.೬.೩೩)

[ಅರ್ಜುನನ ಸೋದರಮಾವಂದಿರಾದ ಪುರುಜಿತ್ತು ಮತ್ತು ಕುಂತಿಭೋಜ ದ್ರೋಣರ ಬಾಣಗಳಿಂದ ಪುಣ್ಯಲೋಕಗಳನ್ನು ಪಡೆದರು.]

ಇದರಿಂದ ‘ಕುಂತಿಭೋಜನಾದ ಪುರುಜಿತ್ತು’ ಎಂದು ಅರ್ಥ ಮಾಡುವವರು ಮಹಾಭಾರತದ ಸಮಗ್ರದರ್ಶನವಿಲ್ಲದೆ ದಾರಿ ತಪ್ಪಿದ್ದಾರೆ ಎನ್ನವುದು ಸ್ಪಷ್ಟ.

ಹಾಗಾದರೆ ಅವರು ಉದ್ಧರಿಸಿದ ಭೀಷ್ಮಪರ್ವದ ಮಾತಿಗೆ ಏನು ಗತಿ? ನನಗೊಂದು ಗುಮಾನಿ. ಪ್ರಾಯಃ ಅದರ ಶುದ್ಧಪಾಠ ಹೀಗೆ ಇದ್ದಿರಬಹದು.

ಪುರುಜಿತ್ ಕುಂತಿಭೋಜಶ್ಚ ಮಹೇಷ್ವಾಸೌ ಮಹಾಬಲೌ |
ಮಾತುಲೌ ಭೀಮಸೇನಸ್ಯ ತೌ ಚ ಮೇತಿರಥೌ ಮತೌ ॥

ಈಗ ಉಪಲಬ್ಧವಾದ ಪಾಠವೇ ಮೂಲಪಾಠ ಹೌದಾದರೂ ಚಿಂತಿಲ್ಲ. ಮೇಲೆ ಉದ್ಧರಿಸಿದ ನಿರವಕಾಶ ವಚನಗಳಿಗೆ ಅನುಗುಣವಾಗಿ ಸಾವಕಾಶವಾದ ಈ ಮಾತಿಗೆ ಅರ್ಥ ಹಚ್ಚಬೇಕು. ಅದರಿಂದ ಈ ಪದ್ಯ ಏಕವಾಕ್ಯ ಅಲ್ಲ. ಎರಡು ವಾಕ್ಯಗಳ ಸಂಯೋಜನೆ

ಭೀಮಸೇನಸ್ಯ ಮಾತುಲಃ ಪುರುಜಿತ್ ಮಹೇಷ್ವಾಸೋ ಮಹಾಬಲಃ ಸ ಮೇತಿರಥೋ ಮತಃ  ಮಹೇ ಷ್ವಾಸೋ ಮಹಾಬಲಃ ಕುಂತಿಭೋಜಶ್ಚ  ಭೀಮಸೇನಸ್ಯ ಮಾತುಲಃ  ಸ ಚ ಮೇತಿರಥೋ ಮತಃ 

[ಭೀಮಸೇನನ ಸೋದರಮಾವನಾದ ಪುರುಜಿತ್ ಮಹಾವೀರನಾದ ಬಿಲ್ಲೋಜ. ಅವನು ನನ್ನ ಲೆಕ್ಕದಲ್ಲಿ ಅತಿರಥನೆ. ಕುಂತಿಭೋಜ ಕೂಡ ಮಹಾವೀರನಾದ ಬಿಲ್ಲೋಜನೆ. ಭೀಮಸೇನನ ಮಾವನಾದ ಅವನೂ ನನ್ನ ಲೆಕ್ಕದಲ್ಲಿ ಅತಿರಥನೆ.]

ಹೀಗೆ ಭಿನ್ನವಾಕ್ಯವಾಗಿ ಅನ್ವಯಿಸಿದರೆ ಯಾವ ವಿರೋಧವೂ ಇಲ್ಲದೆ ಎಲ್ಲವೂ ಸುಸಂಗತವಾಯಿತು. ಅದರಿಂದ ಪುರುಜಿತ್ ಮತ್ತು ಕುಂತಿಭೋಜ ಸೋದರರು ಮತ್ತು ಕುಂತಿಯ ತಮ್ಮಂದಿರು ಎನ್ನವ ವಿವರಣೆಯೇ ಸಾಧುವಾದದ್ದು.

*        *        *

ಹೀಗೆ ಸಂಬಂಧದ ಅನುಬಂಧದಿಂದ ಪಾಂಡವರ ಕಡೆ ಏಳು ಅಕ್ಷೋಹಿಣಿ ಸೇನೆ ಒಟ್ಟಾಯಿತು. ಎಲ್ಲರೂ ಪಾಂಡವರ ಮೇಲಿನ ಅಭಿಮಾನದಿಂದ ಪಾಂಡವರನ್ನು ಗೆಲಿಸಲೆಂದೇ ವೀರಾವೇಶದಿಂದ ಬಂದವರು. ತನ್ನ ಕಡೆಯಲ್ಲಿ ಹನ್ನೊಂದು ಅಕ್ಷೋ ಹಿಣಿ ಇದ್ದರೇನು? ಯಾರೂ ತನ್ನ ಮೇಲಿನ ಪ್ರೀತಿಯಿಂದ ಬಂದವರಲ್ಲ. ದಾಕ್ಷಿಣ್ಯ ಕ್ಕಾಗಿ, ಅನ್ನದ ಋಣಕ್ಕಾಗಿ ಬಂದವರು. ಈ ಬಲಿಷ್ಠವಾದ ಏಳನ್ನು ಈ ದಾಕ್ಷಿಣ್ಯದ ಹನ್ನೊಂದು ಸೋಲಿಸಬಲ್ಲುದೆ? ಇದು ದುರ್ಯೋಧನನ ವಿಷಾದಕ್ಕೆ ಕಾರಣ.

ಈ ಶ್ಲೋಕದ ಕೊನೆಯಲ್ಲಿ ಬಂದ ಒಂಭತ್ತನೆಯ ವ್ಯಕ್ತಿ: ‘ಶೆವ್ಯಶ್ಚ ನರಪುಂಗವಃ’ ಪರೋಪಕಾರಕ್ಕಾಗಿ ತನ್ನ ಮೈಯ ಮಾಂಸವನ್ನೇ ಕಿತ್ತುಕೊಟ್ಟ ಮಹಾನುಭಾವ ಶಿವಿಯ ವಂಶದಲ್ಲಿ ಬಂದ ಪುರುಷಶ್ರೇಷ್ಠನಾದ ಶಿವಿದೇಶದ ರಾಜ.

ಇದು ಪ್ರಾಚೀನ ಪಾಠದಂತೆ. ಅರ್ವಾಚೀನರು ಶಿಬಿದೇಶದ ರಾಜ ಶೆಬ್ಯ ಎನ್ನುತ್ತಾರೆ. ವಕಾರಕ್ಕೆ ಬಕಾರ. ಬವಯೋರಭೇದಃ.

ಈ ಹೆಸರಿನ ಹಿಂದೆಯೂ ಒಂದು ಇತಿಹಾಸ ಉಂಟು. ಕೋಟಿಕಾಶ್ಯ ಎಂಬವನೊಬ್ಬ ಶಿವಿದೇಶದ ರಾಜಕುಮಾರನಿದ್ದ. ಈತ ಶಿವಿದೇಶದ ರಾಜ ಸುರಥನ ಮಗ; ದುರ್ಯೋಧನನ ತಂಗಿ ದುಃಶಲೆಯ ಗಂಡ ಜಯದ್ರಥನ ಆಪ್ತಮಿತ್ರನಾಗಿದ್ದ. ಒಂದು ವರ್ಷದ ಕೆಳಗೆ ಪಾಂಡವರು ವನವಾಸದಲ್ಲಿ ಇದ್ದಾಗ ಈ ಜಯದ್ರಥನೂ ಕೋಟಿಕಾಶ್ಯನೂ ಸೇರಿ ದ್ರೌಪದಿಯನ್ನು ಅಪಹರಿಸಿದ್ದರು. ಮುಂದೆ ಪಾಂಡವರ ಕೈಯಲ್ಲಿ ಸಿಕ್ಕಿಬಿದ್ದು ಕೋಟಿಕಾಶ್ಯ ಜೀವತೆತ್ತ. ಜಯದ್ರಥ ಹೇಗೋ ಬದುಕಿಬಂದ. ಈ ದುರಂತ ಸಂಭವಿಸದೆ ಇರುತ್ತಿದ್ದರೆ, ಕೋಟಿಕಾಶ್ಯ ಇಂದು ಬದುಕಿ ಉಳಿದಿದ್ದರೆ ಸಿಂಧುನರೇಶ ಜಯದ್ರಥನ ಸೇನೆಯ ಜೊತೆಗೆ ಶಿವಿದೇಶದ ಸೇನೆಯೂ ತನ್ನ ಕಡೆಗೆ ಬರಬೇಕಾಗಿತ್ತಲ್ಲವೆ?

(ತನ್ನ ತಂತ್ರದಿಂದಾಗಿ ಪಾಂಡವರ ಬಂಧುಗಳಲ್ಲಿ ತಪ್ಪಿಹೋದವನು ಪ್ರಾಯಃ ಶಲ್ಯನೊಬ್ಬನೇ. ಇಲ್ಲವಾದರೆ ಏಳು, ಹನ್ನೊಂದರ ಬದಲು ಆರು, ಹನ್ನೊಂದು ಆಗಿಬಿಡುತ್ತಿತ್ತು. ಆದರೂ ದೈಹಿಕವಾಗಿ ಶಲ್ಯ ತಮ್ಮ ಕಡೆಗಿದ್ದರೂ ಮಾನಸಿಕವಾಗಿ ಅವನು ಎಷ್ಟು ತಮ್ಮ ಕಡೆಯವನೋ ಹೇಳಬರುವಂತಿಲ್ಲ.)

ಈ ಪದ್ಯದ ಕೊನೆಯಲ್ಲಿ ಬಂದ ‘ನರಪುಂಗವಃ’ ಎಂಬ ವಿಶೇಷಣ ವಿಶೇಷತಃ ಶಿವಿ ರಾಜನಿಗೆ ಅನ್ವಯಿಸು ವಂಥದಾದರೂ ಒಟ್ಟಂದದಲ್ಲಿ ಪುರುಜಿತ್ ಮತ್ತು ಕುಂತಿ ಭೋಜನಿಗೂ ಅನ್ವಯವಾಗುವಂಥದು.

ಮುಂದಿನ ಶ್ಲೋಕದಲ್ಲಿ ಬಂದ ಹತ್ತನೆಯ ಮತ್ತು ಹನ್ನೊಂದನೆಯ ವೀರರು- ಯುಧಾಮನ್ಯು ಮತ್ತು ಉತ್ತಮೋಜಸ್. (ಈಗ ಪ್ರಚಲಿತವಾಗಿರುವ ಪಾಠ ಉತ್ತಮೌಜಸ್) ಇವರಿಬ್ಬರೂ ದ್ರುಪದನ ಮಕ್ಕಳು. ಧಷ್ಟದ್ಯುಮ್ನನ ಸೋದರರು. ದ್ರೌಪದಿಯಿಂದಾಗಿ ಇವರೂ ಆ ಕಡೆಗೆ ಸೇರುವುದು ಅನಿವಾರ್ಯವಾಯಿತು ಎನ್ನುವ ಹಿನ್ನಲೆಯನ್ನು ಈ ಮೊದಲೇ ನೊಡಿದ್ದೇವೆ.

ದುರ್ಯೋಧನನಿಗೆ ದ್ರುಪದನ ಮೇಲೆ ವಿಶೇಷ ಕಣ್ಣಿತ್ತು. ಅದಕ್ಕೇ ಅವನ ಮೂರು ಮಕ್ಕಳನ್ನೂ ಉಲೇಖಿಸಿದ್ದಾನೆ. ದ್ರುಪದನಿಗೆ ಮೂವರೇ ಮಕ್ಕಳೇನೂ ಅಲ್ಲ. ಆದರೆ ಅವರಲ್ಲಿ ಪ್ರಮುಖರಾದವರು ಮೂವರು. ಧೃಷ್ಟದ್ಯುಮ್ನ, ಯುಧಾಮನ್ಯು ಮತ್ತು ಉತ್ತಮೋಜಸ್. ಧೃಷ್ಟದ್ಯುಮ್ನನಂತೂ ಸೇನಾಪತಿಯಾಗಿ ಮೊದಲೇ ಉಲ್ಲೇಖಗೊಂಡಿದ್ದಾನೆ. ಉಳಿದ ಇಬ್ಬರು ಈ ಶ್ಲೋಕದಲ್ಲಿ ಉಲ್ಲೇಖಿತರಾಗಿದ್ದಾರೆ. ಬರಿಯ ದ್ರುಪದನ ಮಕ್ಕಳೆಂದೇ ಇವರು ಉಲ್ಲೇಖಗೊಂಡಿಲ್ಲ; ಬದಲಾಗಿ ಸ್ವಂತ ಪರಾಕ್ರಮ ದಿಂದಲೇ ಇವರು ಅಪಾಯಕಾರಿ ವ್ಯಕ್ತಿಗಳು ಎನ್ನುವ ತನ್ನ ಅಭಿಪ್ರಾಯವನ್ನು  ವ್ಯಕ್ತಪಡಿ ಸುವುದಕ್ಕಾಗಿಯೇ ದುರ್ಯೋಧನ ಇವರಿಬ್ಬರಿಗೂ ಪ್ರತ್ಯೇಕವಾಗಿ ಎರಡು ವಿಶೇಷಣಗಳನ್ನು ನೀಡಿದ್ದಾನೆ. ವಿಕ್ರಾಂತನಾದ ಯುಧಾಮನ್ಯು ಮತ್ತು ವೀರ್ಯ ವಂತನಾದ ಉತ್ತಮೋಜಸ್. ಇಬ್ಬರೂ ಮಹಾವಿಕ್ರಮಶಾಲಿಗಳು, ಮಹಾವೀರರು. ಅದರಿಂದ ಒಂದೇ ಕುಟುಂಬಕ್ಕೆ ಸೇರಿದ್ದರೂ ಪ್ರತ್ಯೇಕವಾಗಿ ಉಲ್ಲೇಖಕ್ಕೆ ಅರ್ಹರು ಎಂದು ದುರ್ಯೋಧನ ಭಾವಿಸಿದ.

ಹೀಗೆ ಹನ್ನೊಂದು ಮಂದಿ ಮಹಾವೀರರನ್ನು ಪಾಂಡವರ ಸೇನೆಯಲ್ಲಿ ಗುರುತಿಸಿದ ದುರ್ಯೋಧನ ಎಳೆಯರಾದ ಪಾಂಡವರ ಮಕ್ಕಳ ಬಗ್ಗೆ ತನ್ನ ಭಯವನ್ನು ಮುಂದಿನ ಮಾತಿನಲ್ಲಿ ವ್ಯಕ್ತಪಡಿಸುತ್ತಾನೆ- ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ.

ಸುಭದ್ರೆಯ ಮಗ ಅಭಿಮನ್ಯು ಮತ್ತು ದ್ರೌಪದಿಯ ಐವರು ಮಕ್ಕಳು. ವಯಸ್ಸಿನಲ್ಲಿ ಎಳೆಯರಾದರೂ ಅವರು ಯಾವ ಮಹಾರಥರಿಗೂ ಕಮ್ಮಿ ಇಲ್ಲ. ಆದ್ದರಿಂದ ಅವರ ಬಗ್ಗೆಯೂ ನಾವು ಅಲಕ್ಷ್ಯ ಮಾಡುವಂತಿಲ್ಲ ಎನ್ನುವ ಭಯವನ್ನು ದುರ್ಯೋಧನ ಇಲ್ಲಿ ವ್ಯಕ್ತಪಡಿಸಿದ್ದಾನೆ.

ಸುಭದ್ರೆಯ ಮಗ ಅಭಿಮನ್ಯು ಸುಮಾರು ಹದಿನಾರರ ಹರೆಯದವ. ಇನ್ನು ದ್ರೌಪದಿಯ ಪಂಚಪುತ್ರರಲ್ಲಿ ಧರ್ಮರಾಜನ ಮಗ ಪ್ರತಿವಿಂಧ್ಯ ಹದಿನೆಂಟರ ಅಂಚಿನಲ್ಲಿ ಇರುವವ. ಭೀಮಸೇನನ ಮಗ ಸುತಸೋಮ ಹದಿನೇಳರ ಹುಡುಗ. ಅರ್ಜುನನ ಮಗ ಶ್ರುತಕೀರ್ತಿ ಅಭಿಮನ್ಯುವಿಗಿಂತ ಕಿರಿಯವ. ಅವನ ವಯಸ್ಸೂ ಸುಮಾರು ಹದಿನಾರೆ. ನಕುಲನ ಮಗ ಶತಾನೀಕ ಮತ್ತು ಸಹದೇವನ ಮಗ ಶ್ರುತಕರ್ಮ ಹದಿನೈದು-ಹದಿನಾಕರ ವಯಸ್ಸಿನ ಎಳೆಯರು.

ಹೀಗೆ ಪಾಂಡವರ ಕಡೆಯ ಎಳೆಯ ಹುಡುಗರನ್ನೂ ಮಹಾರಥರು ಎಂದು, ತಮ್ಮ ಹನ್ನೊಂದು ಅಕ್ಷೋಹಿಣಿ ಸೇನೆಯನ್ನು ಎದುರಿಸಬಲ್ಲ  ವೀರರು ಎಂದು ಉಲ್ಲೇಖಿ ಸುವ ದುರ್ಯೋಧನನ ಬಗೆಯಾಳದ ಗಾಬರಿ ನಿಜಕ್ಕೂ ಗಾಬರಿ ಬರಿಸುವಂಥದು. ಪಾಂಡವರ ಕಡೆಯ ಒಬ್ಬೊಬ್ಬ ವೀರನೂ, ಅವನು ಎಷ್ಟು ಸಣ್ಣವನೇ ಇರಲಿ ದುರ್ಯೋಧನನ ಕಣ್ಣಿಗೆ ಭೀಮಾರ್ಜುನರಂತೆ ಕಾಣತೊಡಗಿದ್ದಾರೆ ಎನ್ನುವುದಕ್ಕೆ ಬೇರೆ ನಿದರ್ಶನ ಬೇಡ. ದುರ್ಯೋಧನನ ವಿಷಾದ ಈ ಮಾತಿನಲ್ಲಿ  ಮುಗಿಲನ್ನು  ಮುಟ್ಟಿದೆ.

ಈ ಪದ್ಯದಲ್ಲಿ ಬಂದ ‘ಸರ್ವ ಏವ’ (ಎ್ಲರೂ) ಎನ್ನುವ ಮಾತಿನಲ್ಲಿ ಇನ್ನೂ ಒಂದು ಧ್ವನಿ ಇದೆ. ಇಲ್ಲಿ ಹೇಳಿದ ಎಲ್ಲರೂ ಮಾತ್ರವೇಅಲ್ಲ, ತಾನು ಹೇಳಿದ, ಹೇಳದ ಎಲ್ಲರೂ ಮಹಾವೀರರೆ. ಪಾಂಡವರ ಸೇನೆಯಲ್ಲಿ ಮಹಾವೀರನಲ್ಲದವ ಒಬ್ಬನೂ ಇಲ್ಲ ಎನ್ನುವಂತೆ ದುರ್ಯೋಧನ ಈ ಮಾತನ್ನಾಡಿದ್ದಾನೆ.

ಈ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥೆಸಬಹುದು. ಅಭಿಮನ್ಯು, ಪಂಚ ದ್ರೌಪದೇಯರು ಮಾತ್ರವೇ ಅಲ್ಲ, ಪಾಂಡವರ ಉಳಿದ ಮಕ್ಕಳೂ ಎಲ್ಲರೂ ಮಹಾ ರಥರೇ. ಯಾರನ್ನೂ ಅಲಕ್ಷಿಸುವಂತಿಲ್ಲ ಎನ್ನುವ ಭಾವವೂ ಈ ಮಾತನ್ನಾಡುವಾಗ ದುರ್ಯೋಧನನ ಮನಸ್ಸಿನಲ್ಲಿ ಸುಳಿದುಹೋಗಿರಬೇಕು. ಸೌಭದ್ರ, ದ್ರೌಪದೇಯರ ಜೊತೆಗೆ ‘ಎಲ್ಲರೂ’ ಎಂದಾಗ ಪ್ರಾಯಃ ದುರ್ಯೋಧನನ ಮನಸ್ಸಿನಲ್ಲಿ  ಮುಖ್ಯವಾಗಿ ಸುಳಿದ ಹೆಸರುಗಳಿವು ಭೀಮಸೇನನ ಮಕ್ಕಳಾದ ಶರ್ವತ್ರಾತ, ಸರ್ವೋತ್ತುಂಗ ಮತ್ತು ಘಟೋತ್ಕಚ; ಘಟೋತ್ಕಚನ ಮಗನಾದ ನಿಷ್ಟ್ಯ; ಅರ್ಜುನನ ಮಗನಾದ ಇರಾವಂತ. ಹೀಗೆಯೆ ಇವರೆಲ್ಲರೂ: ಸರ್ವ ಏವ ಮಹಾರಥಾಃ.

ಇಲ್ಲಿ ‘ಮಹಾರಥ’ರೆಂದರೆ ಬರಿಯ ಮಹಾರಥರಷ್ಟೇ ಅಲ್ಲ. ಅತಿರಥರೂ ಆಗ ಬಹುದು. ಎಲ್ಲರೂ ಅತಿರಥ-ಮಹಾರಥರೆ. ಒಬ್ಬನೂ ರಥಿಕ ಅಥವಾ ಅರ್ಧ ರಥನಿಲ್ಲ ಎನ್ನುವುದು ದುರ್ಯೋಧನನ ದುಗಡ. ಮಧುಸೂದನಸರಸ್ವತಿ ಈ  ಮಾತನ್ನು ಹೇಳುತ್ತಾರೆ: ಸರ್ವ ಏವ ಮಹಾರಥಾಃ=ಸರ್ವೇಪಿ ಮಹಾರಥಾ ಏವ  ನೈಕೋಪಿ ರಥೋರ್ಧರಥೋ ವಾ  ಮಹಾರಥಾ ಇತ್ಯತಿರಥಸ್ಯಾಪ್ಯುಪಲಕ್ಷಣಮ್

ಪಾಂಡವರ ಮಕ್ಕಳನ್ನು ಹೀಗೆ ಬಿಡಿಬಿಡಿಯಾಗಿ ಉಲ್ಲೇಖಿಸುವ ದುರ್ಯೋಧನ ತನ್ನ ಸೇನೆಯ ಪ್ರಮುಖರನ್ನು ಪರಿಗಣಿಸುವಾಗ ತಾವು ನೂರು ಮಂದಿ ಸೋದರರ ಮಕ್ಕಳಲ್ಲಿ ಒಬ್ಬನನ್ನೂ ಉಲ್ಲೇಖಿಸದಿರುವುದು ಗಮನಾರ್ಹ. ಹೀಗೆ ಈ ಮೂರು ಶ್ಲೋಕಗಳು ದುರ್ಯೋಧನನ ಮನಃಸ್ಥಿತಿಗೆ ಹಿಡಿದ ಕೆಗನ್ನಡಿಯಂತಿವೆ-

ಅತ್ರ=ಈ ಪಾಂಡವ ಸೇನೆಯಲ್ಲಿ (ಇರುವವರು), ಶೂರಾಃ=ಶೂರರು, ಮಹೇ-ಷ್ವಾಸಾಃ=ಹಿರಿಯ ಬಿಲ್ಗಾರರು, ಯುಧಿ=ಹೋರಾಟದಲ್ಲಿ, ಭೀಮ+ಅರ್ಜುನ+ ಸಮಾಃ=ಭೀಮನಿಗೆ, ಅರ್ಜುನನಿಗೆ ಸಾಟಿಯಾಗಿ ರುವವರು; ಯುಯುಧಾನಃ= ಸಾತ್ಯಕಿಯು, ವಿರಾಟಃ+ಚ=ವಿರಾಟ ಕೂಡ, ದ್ರುಪದಃ+ಚ=ದ್ರುಪದ ಕೂಡ, ಮಹಾರಥಃ=ಮಹಾರಥನು, ಧಷ್ಟಕೇತುಃ=ಶಿಶುಪಾಲನ ಮಗನಾದ ಧೃಷ್ಟಕೇತು, ಚೇಕಿತಾನಃ=ಯದುಕುಲದ ಚೇಕಿತಾನ, ಕಾಶಿರಾಜಃ+ಚ=ಕಾಶಿರಾಜ ಕೂಡ, ವೀರ್ಯವಾನ್=ಮಹಾವೀರನು, ಪುರುಜಿತ್=ಕುಂತಿಯ ಸೋದರ ಪುರುಜಿತ್, ಕುಂತಿಭೋಜಃ+ಚ=ಅವನ ಸೋದರನಾದ ಕುಂತಿಭೋಜ ಕೂಡ, ಶೆವ್ಯಃ+ಚ= ಶಿವಿದೇಶದ ರಾಜ ಕೂಡ, ನರ+ಪುಂಗವಃ=ನರಶ್ರೇಷ್ಠನು, ವಿಕ್ರಾಂತಃ=ಪರಾಕ್ರಮಿಯಾದ, ಯುಧಾಮನ್ಯುಃ+ ಚ=ದ್ರುಪದನ ಮಗನಾದ ಯುಧಾಮನ್ಯು ಕೂಡ, ವೀರ್ಯವಾನ್=ಮಹಾವೀರನಾದ, ಉತ್ತಮೋಜಾಃ+ ಚ=ಉತ್ತಮೋಜಸ್ ಕೂಡ, ಸೌಭದ್ರಃ=ಸುಭದ್ರೆಯ ಮಗ ಅಭಿಮನ್ಯು, ದ್ರೌಪದೇಯಾಃ+ಚ=ದ್ರೌಪದಿಯ ಐವರು ಮಕ್ಕಳು ಕೂಡ, (ಹೀಗೆ) ಸರ್ವೇ=ಎಲ್ಲರೂ, ಮಹಾ+ರಥಾಃ+ಏವ= ಮಹಾರಥರೆ.

*        *        *

_____________________________________________

.’ಶೈಬ್ಯಶ್ಚ’ ಎನ್ನುವುದು ಪ್ರಚಲಿತಪಾಠ. ‘ಶೈವ್ಯಶ್ಚ’ ಎನ್ನುವುದು ಪ್ರಾಚಿನಪಾಠ.

೨. ‘ಉತ್ತಮೌಜಾಶ್ಚ’ ಎನ್ನುವುದು ಪ್ರಚಲಿತಪಾಠ. ‘ಉತ್ತಮೋಜಾಶ್ಚ’ ಎನ್ನುವುದು ಪ್ರಾಚಿನಪಾಠ. ಉತ್ತಮ + ಓಜಸ್ = ಉತ್ತಮೋಜಸ್ (ಪರರೂಪ) ಎನ್ನುವುದು ಪ್ರಾಚಿನಪಾಠ

 

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು