ಶ್ಲೋಕ – ೭ : ನಮ್ಮವರು ಏಳೇ ಮಂದಿ

ಪಾಂಡವರ ಕಡೆಯ ಮಹಾವೀರರನ್ನು ದ್ರೋಣನ ಬಳಿ ಬಣ್ಣಿಸಿದ ದುರ್ಯೋಧನ ತಮ್ಮ ಕಡೆಯ ವೀರರ ಬಗ್ಗೆ ಪ್ರಸ್ತಾವಿಸಿದ ಬಗೆ ಮುಂದಿನ ಪದ್ಯದಲ್ಲಿ ಬಂದಿದೆ-

ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ
ನಾಯಕಾ ಮಮ ಸೆನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥ ೭ ॥

[ನಮ್ಮ  ಕಡೆಯಲ್ಲಂತು ಯಾರು ಹೆಗ್ಗಳಿಕೆಯವರು, ನನ್ನ ಪಡೆಯನ್ನು ಮುನ್ನಡೆಸುವವರು, ಅವರನ್ನು ಅವಧರಿಸಿ, ಓ ಹಿರಿಯ ಹಾರುವರೆ, ಸನ್ನೆಗಾಗಿ ಅವರನ್ನು ಅರುಹುವೆನು ತಮಗೆ.]

ಇಲ್ಲಿ ದುರ್ಯೋಧನ ದ್ರೋಣರನ್ನು ‘ದ್ವಿಜೋತ್ತಮ’ ಎಂದು ಸಂಬೋಧಿಸುತ್ತಾನೆ. ‘ದ್ವಿಜ’ ಎಂದರೆ ಉಪನಯನ ಸಂಸ್ಕಾರದಿಂದ ಎರಡನೇ ಬಾರಿ ಹುಟ್ಟಿದವನು; ಮರುಜನ್ಮ ಪಡೆದವನು-‘ಮಾತುರಗ್ರೇಭಿಜನನಂ ದ್ವಿತೀಯಂ ವೌಂಜಿಬಂಧ- ನಾತ್’. ಶಾಸ್ತ್ರ-ಸಂಪ್ರದಾಯದಂತೆ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೆಶ್ಯರು ಉಪನಯನಸಂಸ್ಕಾರಕ್ಕೆ ಅರ್ಹರು. ವೇದಾಧ್ಯಯನಕ್ಕೆ ಅಧಿಕಾರಿಗಳು. ಅದರಿಂದ ದ್ವಿಜರು. ಈ ಮೂವರು ದ್ವಿಜರಲ್ಲಿ ಮೊದಲನೆಯವನಾದ ಬ್ರಾಹ್ಮಣ ಉತ್ತಮಾಧಿಕಾರಿ. ಕ್ಷತ್ರಿಯರು ಮತ್ತು ವೆಶ್ಯರು ವೇದಾಧ್ಯಯನಕ್ಕೆ ಮಾತ್ರ ಅಧಿಕಾರಿಗಳಾದರೆ ಬ್ರಾಹ್ಮಣನು ಅಧ್ಯಯನ, ಅಧ್ಯಾಪನ ಎರಡಕ್ಕೂ ಅಧಿಕಾರಿ. ಆದ್ದರಿಂದ ಅವನು ‘ದ್ವಿಜೋತ್ತಮ’ ಎಂದೆನಿಸಿಕೊಳ್ಳುತ್ತಾನೆ.

ಭರದ್ವಾಜ ಮುನಿಯ ಮಕ್ಕಳಾದ, ದೇವಗುರು ಬಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಆಚಾರ್ಯದ್ರೋಣರು ನಿಸ್ಸಂಶಯವಾಗಿಯೂ ದ್ವಿಜೋತ್ತಮರು. ಅವರು ದ್ವಿಜರಲ್ಲಿ ಉತ್ತಮರು ಮಾತ್ರವಲ್ಲ, ಬ್ರಾಹ್ಮಣರಲ್ಲಿಯೂ ಉತ್ತಮ ಬ್ರಾಹ್ಮಣರು. ಆದರೆ ದುರ್ಯೋಧನನ ಈ ಸಂಬೋಧನೆಯಲ್ಲಿ ಗೌರವದ ಜೊತೆಗೆಯೇ ಕೊಂಚ ನಂಜೂ ಬೆರೆತಂತಿದೆ.

ನಾವು ಈ ಹಿಂದೆಯೇ ನೋಡಿದಂತೆ ದ್ವಿಜೋತ್ತಮ ಎಂದರೆ ವೇದದ ಅಧ್ಯಯನ ಅಧ್ಯಾಪನಗಳಲ್ಲಿ ನಿರತನಾದವನು. ಯುದ್ಧದ ಈ ಸಂದರ್ಭದಲ್ಲಿ  ದುರ್ಯೋಧನ ಬೇಕೆಂದೆ ಛೇಡಿಸುವಂತೆ ಈ ಮಾತನ್ನು ಬಳಸುತ್ತಾನೆ. ‘ನೀವು ವೇದ ಓದಿ ಯಜ್ಞ ಯಾಗ ಮಾಡುವ ಮಂದಿ. ನಿಮಗೆ ಯುದ್ಧದ ಕ್ಷಾತ್ರದಲ್ಲಿ ಸಹಜ ಆಸಕ್ತಿ ಹೇಗಾದರೂ ಬಂದೀತು? ನೀವು ನಮ್ಮ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಇಲ್ಲಿ ನಿಂತವರು,’ ಎನ್ನುವ ಭಾವ ಈ ಮಾತಿನಲ್ಲಿದ್ದಂತಿದೆ. ಮುಂದೆ ಇಡಿಯ ಪದ್ಯವೇ ಯುದ್ಧದ ಸಿದ್ಧತೆಯ ಬಗ್ಗೆ ದ್ರೋಣರಂಥವರ ಮುಂಜಾಗರೂಕತೆ ಸಾಲದು ಎನ್ನುವ ಎಚ್ಚರವನ್ನೇ ಧ್ವನಿಸುವುದರಿಂದ ಈ ಸಂಬೋಧನೆಯು ಅನಿವಾರ್ಯವಾಗಿ ಅದಕ್ಕೆ ಅನುಗುಣ ವಾದ ಅರ್ಥಧ್ವನಿಯಲ್ಲಿಯೇ ಪರ್ಯವಸಾನಗೊಳ್ಳುತ್ತದೆ.

ಪದ್ಯದ ಮೊದಲ ಎರುಡು ಪದಗಳು: ‘ಅಸ್ಮಾಕಂ ತು’. ‘ಅಸ್ಮಾಕಂ’ ಎಂದರೆ ನಮ್ಮ ಕಡೆಯವರು. ಇದಕ್ಕೆ ‘ತು’ ಎಂಬ ಅವ್ಯಯಪದವನ್ನು ಸೇರಿಸಿದಾಗ ಇದಕ್ಕೊಂದು ಹೊಸ ಅರ್ಥಧ್ವನಿ ಬರುತ್ತದೆ. ಕನ್ನಡದಲ್ಲಿ ‘ಇನ್ನು ನಮ್ಮವರೋ! ಅವರ ಕಥೆ ಏನು ಹೇಳುವುದು’ ಎನ್ನುವಂತೆ.

ತಮ್ಮ ಕಡೆಯವರಿಗೆ ದುರ್ಯೋಧನ ಎರಡು ವಿಶೇಷಣಗಳನ್ನು ನೀಡುತ್ತಾನೆ. ಒಂದು ‘ವಿಶಿಷ್ಟಾಃ’, ಇನ್ನೊಂದು ‘ಮಮ ಸೆನ್ಯಸ್ಯ ನಾಯಕಾಃ’. ನನ್ನ ಸೆನ್ಯದ ಮುಂಚೂಣಿಯಲ್ಲಿರುವ ಮುಖಂಡರು, ಅದರಲ್ಲೂ ಮುಖ್ಯರಾದವರು ಎಂದು ಈ ಮಾತಿನ ಅರ್ಥ. ಮೇಲುನೋಟಕ್ಕೆ ಈ ಮಾತು ಸಹಜವಾಗಿಯೇ ಇದೆ. ಆದರೆ ಆಳಕ್ಕೆ ಇಳಿದಾಗ ಈ ಮಾತು ಹಲವು ಪದರುಗಳಲ್ಲಿ ಹೊಸ ಅರ್ಥದಲ್ಲಿ ತೆರೆದು ಕೊಳ್ಳುತ್ತದೆ. ಪಾಂಡವರ ಕಡೆಯ ಸಿದ್ಧತೆಯನ್ನು ಹಿಂದೆ ಉಲ್ಲೇಖಿಸಿದಾಗ ‘ಪಾಂಡ ವಾನಾಂ ಚಮೂಂ’ ಪಾಂಡವರ ಸೇನೆ ಎಂದಿದ್ದ. ಇಲ್ಲಿ ‘ಮಮ ಸೆನ್ಯಸ್ಯ ನಾಯಕಾಃ’-ನನ್ನ ಸೇನೆಯ ನಾಯಕರು ಎನ್ನುತ್ತಾನೆ. ಈ ಎರಡು ಪ್ರಯೋಗಗಳಲ್ಲಿರುವ ವ್ಯತ್ಯಾಸದ ಸೂಕ್ಷ್ಮವನ್ನು ಗಮನಿಸಬೇಕು. ಅಲ್ಲಿ ಸಮಷ್ಟಿಯಾಗಿ ಸೇನೆಯನ್ನು ಉಲ್ಲೇಖಿಸಿದರೆ ಇಲ್ಲಿ ಸೇನೆಯ ನಾಯಕರನ್ನು ಮಾತ್ರವೇ ಉಲ್ಲೇಖಿ ಸುತ್ತಾನೆ. ಅಲ್ಲಿ ಪಾಂಡವರೆಲ್ಲರ ಸೇನೆ ಎಂದಿದ್ದರೆ ಇಲ್ಲಿ ತನ್ನ ತಮ್ಮಂದಿರನ್ನು ಯಾರನ್ನೂ ಉಲ್ಲೇಖಿಸದೆ ವ್ಯಷ್ಟಿಯಾಗಿ ‘ನನ್ನ ಸೇನೆ’ ಎನ್ನುತ್ತಾನೆ. ಇಲ್ಲಿ ದುರ್ಯೋಧನನ ಅಹಂಕಾರವೂ ಇದೆ; ಅನಾಥಪ್ರಜ್ಞೆಯೂ ಇದೆ.

ವಾಸ್ತವವಾಗಿ ಅವನು ದ್ರೋಣರಂತಹ ಹಿರಿಯರ ಮುಂದೆ ಮಾತನಾಡುವಾಗ ‘ನಮ್ಮ ಸೇನೆ’ ಎಂದು ಹೇಳಬೇಕಿತ್ತು. ‘ನನ್ನ ಸೇನೆ’ ಎನ್ನುವುದು ತೀರ ಅವಿನಯದ ಮಾತಾಯಿತು. ಇಂತಹ ಅವಿನಯ, ಅಹಂಕಾರ ದುರ್ಯೋಧನನ ಸಹಜ ಗುಣವೇ. ಅದರಿಂದ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಈ ಪದಗಳಿಂದ ಧ್ವನಿತವಾಗುವ ಅನಾಥಪ್ರಜ್ಞೆ ಮಾತ್ರ ಅಸಾಧಾರಣವಾದದ್ದು.

ಅವನು ಎಲ್ಲವನ್ನೂ ಆತ್ಮಕೇಂದ್ರಿತವಾಗಿ ಯೋಚಿಸುತ್ತಿದ್ದಾನೆ. ಅವನಿಗೆ ಯಾರ ಮೇಲೂ ನಂಬಿಕೆಯಿಲ್ಲ. ಈ ನಿರ್ಧಾರದಲ್ಲಿ ಅವನು ಏಕಾಕಿ, ಅಸಹಾಯಕ ಎನ್ನುವಂತೆ ಅವನೀಗ ಗಲಿಬಿಲಿಗೊಂಡಿದ್ದಾನೆ. ತನ್ನ ಹತ್ತಿರದವರಾದರೂ ಕೊನೆಯ ತನಕ ತನ್ನ ನಿಲುವನ್ನು ಸಮರ್ಥಿಸುತ್ತಾರೆ ಎಂದು ಏನು ಭರವಸೆ? ಸಮರ್ಥಿಸಿದರೂ ಅದು ತನ್ನ ದಾಕ್ಷಿಣ್ಯಕ್ಕಾಗಿ. ಹೀಗಾಗಿ ಈ ಜಿದ್ದು, ಈ ಹೋರಾಟ, ಈ ಸೇನೆ ಎಲ್ಲವೂ ತನಗೆ ಮಾತ್ರ ಸಂಬಂಧಪಟ್ಟದ್ದು. ಇದು ಪ್ರೀತಿಯ ನಂಟು ಅಲ್ಲ. ದಾಕ್ಷಿಣ್ಯದ ಗಂಟು. ಯಾವಾಗ ಗಂಟು ಹರಿಯುತ್ತೊ ಹೇಳಲಾಗುವುದಿಲ್ಲ.

ಅದಕ್ಕೆಂದೇ ಅವನು ಸೆನ್ಯವನ್ನು ಬಿಟ್ಟು ಸೆನ್ಯದ ನಾಯಕರನ್ನಷ್ಟೇ ಉಲ್ಲೇಖಿಸು ತ್ತಾನೆ. ಈ ಸೇನೆ ತನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡು ತನಗೆ ನೆರವೀಯಲೆಂದು ಪ್ರೀತಿಯಿಂದ ಬಂದ ಸೇನೆಯ್ಲ. ಬದಲಾಗಿ ತಮ್ಮ ನಾಯಕರ ಆದೇಶಕ್ಕೆ ಬಲಿಬಿದ್ದು ಉಪಾಯವಿಲ್ಲದೆ ನಾಯಕರ ಬೆನ್ನುಹತ್ತಿದ ಬಾಲ. ನಾಯಕರಾದರೂ ತನ್ನ ಮೇಲಿನ ಪ್ರೀತಿಯಿಂದಲೇ ಬಂದಿದ್ದಾರೆಯೇ? ಅದೂ ಖಚಿತವಾಗಿ ಹೇಳು ವಂತಿಲ್ಲ. ಕೆಲವರು ಅನ್ನದ ಋಣಕ್ಕಾಗಿ ನಿಂತಿದ್ದಾರೆ. ಕೆಲವರು ಯಾರು ಯಾರದೋ ದಾಕ್ಷಿಣ್ಯಕ್ಕಾಗಿ ಬಂದಿದ್ದಾರೆ. ಕೆಲವರು ಪಾಂಡವರ ಮೇಲಿನ ಹಗೆಯಿಂದ ಬಂದಿ ದ್ದಾರೆ.

ಈ ಮುಖವನ್ನೇ ಇನ್ನಷ್ಟು ಸ್ಪಷ್ಟೀಕರಿಸುವ ಮಾತು ‘ವಿಶಿಷ್ಟಾಃ’ ಎಂಬುದು. ತನ್ನ ಕಡೆಗೆ ಬಂದ ಅನೇಕ ಕ್ಷತ್ರಿಯರು ಯುದ್ಧಸಾಮರ್ಥ್ಯದಲ್ಲಿ, ಸೇನಾಬಲದಲ್ಲಿ, ತೋಳು ಬಲದಲ್ಲಿ ವಿಶಿಷ್ಟರು, ಹೆಚ್ಚಿನ ಖ್ಯಾತಿ ಪಡೆದವರು ಎನ್ನುವುದು ನಿರ್ವಿವಾದ. ಆದರೂ ಅವರಿಂದ ತನಗೆ ಹೆಚ್ಚಿನ ಉಪಯೋಗ ಬಿದ್ದೀತು ಎನ್ನುವ ಭರವಸೆಯನ್ನು ದುರ್ಯೋಧನ ಈಗಾಗಲೇ ಕಳೆದುಕೊಂಡಿದ್ದಾನೆ. ಅವರು ವಿಶಿಷ್ಟವ್ಯಕ್ತಿಗಳಾಗಿದ್ದೂ ಆಯತಕಾಲದಲ್ಲಿ ತನ್ನ ಉಪಯೋಗಕ್ಕೆ ಬೀಳುತ್ತಿಲ್ಲ ಎನ್ನುವುದೇ ದುರ್ಯೋಧನನ  ಮನಸ್ಸಿನಲ್ಲಿರುವ  ನಿಜವಾದ  ವೈಶಿಷ್ಟ್ಯ. ಈ  ಎಲ್ಲ ಮಾತು  ಮುಂದಿನ  ಶ್ಲೋಕ ದಲ್ಲಿ ಇನ್ನಷ್ಟು ಸ್ಫುಟವಾಗುತ್ತದೆ.

ಅದಕ್ಕೆಂದೆ ದುರ್ಯೋಧನ ದ್ರೋಣರನ್ನು ಎಚ್ಚರಿಸುತ್ತಾನೆ- ‘ತಾನ್ ನಿಬೋಧ’. ‘ಅಂಥ ವಿಶಿಷ್ಟ ಪರಿಸ್ಥಿತಿಯ ನಾಯಕರನ್ನು ನಿಮಗೂ ತಿಳಿಸುತ್ತೇನೆ; ಪರಿಸ್ಥಿತಿಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಿ,’ ಎನ್ನುವುದು ಈ ಮಾತಿನ ಭಾವ. ದ್ರೋಣರಂತಹ ಹೊಣೆ ಗಾರರಾದ ಹಿರಿಯ ನಾಯಕರೂ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿ ಕೊಳ್ಳದೆ ತೀರ ಜಡರಾದ ವೈದಿಕಬ್ರಾಹ್ಮಣರಂತೆ, ಎಚ್ಚರಗೇಡಿಗಳಂತೆ ನಿರಾಳವಾಗಿ ಕೂತಿದ್ದಾರಲ್ಲಾ! ಎಂಥ ದುರ್ದೈವ! ಎಂದು ದುರ್ಯೋಧನ ಒಳಗಿಂದೊಳಗೆಯೇ ಕೊರಗುತ್ತಾನೆ. ಈ ಕೊರಗು ದ್ರೋಣರಿಗೆ ನಾಟುವಷ್ಟು ಸ್ಪಷ್ಟವಾಗಿ ಅವನ ಮಾತಿನಲ್ಲಿ ಮೂಡಿದೆ.

ಪದ್ಯದ ಕೊನೆಯ ಚರಣದಲ್ಲಿ ಈ ಮಾತು ಇನ್ನಷ್ಟು ಸ್ಫುಟವಾಗಿ ಮೂಡಿಬಂದಿದೆ: ಸಂಜ್ಞಾರ್ಥಂ ತಾನ್ ಬ್ರವೀಮಿ ತೇ. ‘ನಮ್ಮ ನಾಯಕರ ಹೆಸರು ನಿಮಗೂ ತಿಳಿದಿರಲಿ ಎಂದು ಹೇಳುತ್ತೇನೆ!’ ಹಾಗಾದರೆ ದುರ್ಯೋಧನನ ಭಾವವೇನು? ತಮ್ಮ ಪಕ್ಷದ ನಾಯಕರ ಹೆಸರೂ ದ್ರೋಣರಿಗೆ ಗೊತ್ತಿಲ್ಲವೆಂದೇ? ವಸ್ತುಸ್ಥಿತಿ ಹಾಗಲ್ಲ. ಸಂಗತಿ ಗೊತ್ತಿದ್ದೂ ದ್ರೋಣರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ದುರ್ಯೋಧನನ ಆಕ್ಷೇಪ. ಈ ಪದ್ಯದ ಒಂದೊಂದು ಪದವೂ ದುರ್ಯೋಧನನ ಈ ನಂಜಿಗೆ ಶ್ರುತಿಗೊಡುತ್ತದೆ.

ದ್ವಿಜೋತ್ತಮ=ಓ ಹಿರಿಯ ಹಾರುವರೆ, ಅಸ್ಮಾಕಂ ತು=ನಮ್ಮವರೋ, ಮಮ=ನನ್ನ, ಸೆನ್ಯಸ್ಯ=ಸೆನ್ಯದ, ನಾಯಕಾಃ=ಮುಂದಾಳುಗಳೆನಿಸಿಕೊಂಡಿರುವವರು, ವಿಶಿಷ್ಟಾಃ= ಹೆಗ್ಗಳಿಕೆಯವರು, ತಾನ್=ಅವರನ್ನು, ನಿಬೋಧ=ಗುರುತಿಸಿರಿ, ತೇ=ನಿಮಗೆ, ಸಂಜ್ಞಾರ್ಥಂ=ಗುರುತಿಗಾಗಿ, ತಾನ್=ಅವರನ್ನು, ಬ್ರವೀಮಿ= ಹೆಸರಿಸುತ್ತೇನೆ.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು