ಶ್ಲೋಕ – ೯

ಹಾಗಾದರೆ ಉಳಿದ ಅಷ್ಟೊಂದು ಮಂದಿಯ ಬಗೆಗೆ ಅವನ ಅನಿಸಿಕೆಯೇನು? ಮುಂದಿನ ಶ್ಲೋಕ ಅದನ್ನು ವಿವರಿಸುತ್ತದೆ-

ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ |
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ                    ॥ ೯ ॥

[ಇತರರೂ ಇದ್ದಾರೆ ಬಹಳ ಮಂದಿ ಶೂರರು. ನನಗಾಗಿ ಜೀವ ತೆರಲು ಅಣಿಯಾದವರು. ಬಗೆಬಗೆಯ ಆಯುಧಗಳನೆತ್ತಿ ಹೋರಾಟಕಿಳಿದವರು. ಎಲ್ಲರೂ ಕಾಳಗದಿ ಪಳಗಿದವರು.]

ಮೇಲುನೋಟಕ್ಕೆ ಈ ಮಾತು ತನ್ನ ಕಡೆಯ ವೀರರ ಬಗೆಗೆ ಮೆಚ್ಚಿಗೆಯ ಉದ್ಗಾರ ದಂತಿದೆ. ಆದರೆ ಈ ತನಕದ ಬೆಳವಣಿಗೆಯ ಹಿನ್ನಲೆಯಲ್ಲಿ, ಗ್ರಂಥದ ಒಟ್ಟಂದದಲ್ಲಿ ಈ ಮಾತು ಬೇರೊಂದು ಧ್ವನಿಯಲ್ಲೆ  ಪರ್ಯವಸಾನಗೊಳ್ಳುತ್ತದೆ.

ಈ ಏಳು ಮಂದಿಯೇ ಎಂದಲ್ಲ, ಅನ್ಯೇ ಚ ಬಹವಃ-ಇನ್ನೂ ಇದ್ದಾರೆ ಬಹಳ ಮಂದಿ ಲೆಕ್ಕಕ್ಕೆ. ಹಾಗಂತ ಅವರು ಅಸಮರ್ಥರು ಎಂದೇನೂ ಅಲ್ಲ: ಸರ್ವೇ ಯುದ್ಧ- ವಿಶಾರದಾಃ-ಎಲ್ಲರೂ ಹೋರಾಟದ ಕಲೆಯಲ್ಲಿ ಪರಿಣತರಾದ ಕಲಿಗಳೇ. ನಾನಾ ಶಸ್ತ್ರಪ್ರಹರಣಾಃ-ಕೆಯಲ್ಲಿ ಆಯುಧ ಹಿಡಿದು ಹೋರಾಟಕ್ಕೆ ಹೊರಟಿದ್ದಾರೆ ಎನ್ನುವುದೂ ನಿಜ. ಆದರೆ ಏನು ಉಪಯೋಗ? ತನಗಿದ್ದ ಆಸಕ್ತಿ ಈ ಯುದ್ಧದಲ್ಲಿ ಅವರಿಗಿದೆಯೆ? ಇರುವುದು ಸಾಧ್ಯವೇ? ಯಾವುದೋ ದಾಕ್ಷಿಣ್ಯಕ್ಕೆ ಬಲಿ ಬಿದ್ದು ಬಂದಿದ್ದಾರೆ. ಯಾವುದೋ ಮುಲಾಜಿಗೆ ಹೋರಾಟದ ಕಣಕ್ಕಿಳಿದಿದ್ದಾರೆ. ಅವರು ಮನಃಪೂರ್ವಕವಾಗಿ ತನ್ನ ಪರ ಹೋರಾಡಬಲ್ಲರೆ?

ಯಾವುದೋ ದೇಶಗಳಿಂದ ಬಂದ ಸೇನಾಪಡೆಗಳು. ಬಹಳ ಜನಕ್ಕೆ ಯಾರು ಗೆಲ್ಲ ಬೇಕು-ಯಾರು ಸೋಲಬೇಕು ಎನ್ನುವ ಸಂಗತಿಯೇ ಗೊತ್ತಿಲ್ಲ. ಸೇನಾಪತಿ ಹೇಳಿದ ಕಡೆ ಕತ್ತಿ ಹಿಡಿದು ಸಾಗುವುದಷ್ಟೆ ಅವರ ಕಾಯಕ. ಯಾರು ಸೋತರೂ ಒಂದೆ; ಯಾರು ಗೆದ್ದರೂ ಒಂದೆ.

ಇನ್ನು ಕೆಲವರು ಒಳಗಿಂದೊಳಗೆ ಪಾಂಡವರ ಪಕ್ಷಪಾತಿಗಳೂ ಇರಬೇಕು-ಶಲ್ಯನಂತೆ.

ಇವರೆಲ್ಲ ನಿಜವಾಗಿ ಯುದ್ಧ ಮಾಡಬಲ್ಲರೆ? ಅಥವಾ ಯಾವುದೋ ಆವೇಶದಿಂದ ಯುದ್ಧ ಮಾಡಿದರೂ ಪಾಂಡವರ ಒಗ್ಗಟ್ಟಿನ ಸನ್ನಾಹದ ಮುಂದೆ ನಮ್ಮ ಈ ಗೋಜಲುಗೋಜಲಾದ, ಅರೆಮನಸ್ಸಿನಿಂದಲೆ ರಂಗಕ್ಕಿಳಿದ ವೀರರ ಪಡೆ ವಿಜಯವನ್ನು ಸಾಧಿಸಬಲ್ಲುದೆ? ದುರ್ಯೋಧನನ ಮನಸ್ಸು ‘ಇಲ್ಲ’ ಎಂಬ ಉತ್ತರದ ಕಡೆಗೇ ಒಲಿಯುತ್ತಿದೆ. ಅವನ ಅಂತರಾತ್ಮ ಪ್ರಾರಂಭದಲ್ಲೆ ಅಶುಭದ ಚಿಂತನೆಯಲ್ಲಿ ತೊಡಗಿಬಿಟ್ಟಿದೆ. ಅದಕೆಂದೆ ಅವನ ಉದ್ಗಾರ: ‘ಮದರ್ಥೇ ತ್ಯಕ್ತಜೀವಿತಾಃ’-ನನಗಾಗಿ ಜೀವದ ಹಂಗು ತೊರೆದು ಬಂದವರು.

ಜೀವದ ಪಣವಿಟ್ಟಾದರೂ ನನ್ನ ವಿಜಯಕ್ಕಾಗಿ ಹೋರಾಡುವವರು ಎನ್ನುವುದು ಮೇಲುನೋಟದ ಅರ್ಥವಾದರೂ ದುರ್ಯೋಧನನ ಮನಸ್ಸು ಅನಿಷ್ಟದ ಅರ್ಥವನ್ನೇ ಚಿಂತಿಸುತ್ತದೆ -ಇವರು ನನಗಾಗಿ ಸಾಯಬಂದವರು; ಹೊರತು ನನ್ನನ್ನು ಗೆಲಿಸಬಂದವರಲ್ಲ.

ಪ್ರಾಯಃ ತನ್ನ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗುತ್ತಿವೆ; ತನ್ನ ಎಲ್ಲ ಸನ್ನಾಹಗಳೂ ವ್ಯರ್ಥವಾಗುತ್ತಿವೆ. ಪಾಂಡವರ ವೀರರ ಮುಂದೆ ಜಗತ್ತಿನ ವೀರರೆಲ್ಲ ತನ್ನಿಂದಾಗಿ ಬಲಿಪಶುಗಳಾಗುತ್ತಾರೆ-ತನ್ನ ಕನಸು ಎಂದೂ ನನಸಾಗದೆ ಉಳಿಯುತ್ತದೆ ಎನ್ನುವ ಭಯ, ಪುಕ್ಕು ದುರ್ಯೋಧನನ ಒಳಬಗೆಯ ಒಳಹೊಕ್ಕು  ಸುಪ್ತಪ್ರಜ್ಞೆಯ ಆಳದಲ್ಲಿ  ಹೇಗೆ ಅವನನ್ನು ಕಾಡುತ್ತಿದೆ ಎನ್ನುವುದನ್ನು ಈ ಶ್ಲೋಕ ಅತ್ಯಂತ ಸುಂದರವಾಗಿ ಚಿತ್ರಿಸುತ್ತದೆ

ಅನ್ಯೇ ಚ=ಇತರರೂ (ಇದ್ದಾರೆ), ಬಹವಃ=ಬಹಳ ಮಂದಿ, ಶೂರಾಃ=ಪರಾಕ್ರಮಿಗಳು, ಮದರ್ಥೇ=ನನಗಾಗಿ, ತ್ಯಕ್ತ+ಜೀವಿತಾಃ=ಜೀವ ತೆರುವವರು; ನಾನಾ+ ಶಸ್ತ್ರ+ಪ್ರಹರಣಾಃ=ಬಗೆಬಗೆಯ ಆಯುಧಗಳಿಂದ ಹೋರಾಡ ಬಲ್ಲವರು; ಸರ್ವೇ= ಎಲ್ಲರೂ, ಯುದ್ಧ+ವಿಶಾರದಾಃ=ಯುದ್ಧದಲ್ಲಿ ಪಳಗಿದವರು.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು