ಶ್ಲೋಕ – ೮

ಮುಂದಿನ ಶ್ಲೋಕದಲ್ಲಿ ದುರ್ಯೋಧನನು ತನ್ನ ಕಡೆಯ ಪ್ರಮುಖರನ್ನು ಉಲ್ಲೇಖಿ ಸುತ್ತಾನೆ-

ಭವಾನ್ ಭೀಷ್ಮಶ್ಚ  ಕರ್ಣಶ್ಚ ಕೃಪಶ್ಚ  ಸಮಿತಿಂಜಯಃ |
ಅಶ್ವತ್ಥಾಮಾ ವಿಕರ್ಣಶ್ಚ  ಸೌಮದತ್ತಿಸ್ತಥೆವಚ                        ॥ ೮ ॥

[ತಾವು, ಭೀಷ್ಮರು ಕೂಡ, ಕರ್ಣ ಕೂಡ, ಕದನ ಗೆದೆಯಬಲ್ಲ  ಕೃಪಾಚಾರ್ಯ ಕೂಡ, ಅಶ್ವತ್ಥಾಮ ಮತ್ತು ವಿಕರ್ಣ, ಹಾಗಯೇ ಸೋಮದತ್ತನ ತನಯ ಭೂರಿಶ್ರವಸ್ಸು ಕೂಡ.]

ಪಾಂಡವರ ಪಕ್ಷದಲ್ಲಿ ಹನ್ನೊಂದು ಮಂದಿ ಮತ್ತು ಸಮಷ್ಟಿಯಾಗಿ ೧೮ ಮಂದಿ ವೀರರನ್ನು ಹೇಳಿದ ದುರ್ಯೋಧನ ತನ್ನ ಕಡೆಯ ಏಳೇ ಮಂದಿಯನ್ನು ಉಲ್ಲೇಖಿಸುತ್ತಾನೆ. ಅದರಲ್ಲೂ ಹೆಚ್ಚಿನವರು ತನ್ನ  ಬಳಿಯಲ್ಲಿಯೇ ಇರುವವರು. ಇತರರಾಜ್ಯಗಳಿಂದ ಸೇನಾಸನ್ನದ್ಧರಾಗಿ ಬಂದವರಲ್ಲ. ಪಾಂಡವರ ಮಕ್ಕಳನ್ನು ಪ್ರತಿಯೊಬ್ಬರನ್ನೂ ಮಹಾರಥರೆಂದು ಉಲ್ಲೇಖಿಸಿದ ದುರ್ಯೋಧನ ತನ್ನ ಮಕ್ಕಳ ಬಗ್ಗೆ, ವೀರರಾದ ಸೋದರರು ದುಃಶಾಸನಾದಿಗಳ ಬಗ್ಗೆ ಚಕಾರವೆತ್ತದೆ ದಿವ್ಯನಿರ್ಲಕ್ಷ್ಯವನ್ನು ತೋರ್ಪಡಿಸುತ್ತಾನೆ. ಅಷ್ಟು ಮಂದಿ ಸೋದರರು ಮತ್ತು ಮಕ್ಕಳು ಇದ್ದರೂ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಅನಾದರದಿಂದ ಅವರನ್ನು ಕಡೆಗಣಿಸಿ ಉಲ್ಲೇಖಿಸದೆ ಬಿಡುತ್ತಾನೆ. ದುರ್ಯೋಧನನ ಮಾನಸಿಕತುಮುಲವನ್ನು ಗುರುತಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವದ ಸಂಗತಿಯಾಗುತ್ತದೆ.

ಅವನು ಉಲ್ಲೇಖಿಸಿದ ಏಳು ಮಂದಿಯಾದರೂ ಎಂಥವರು, ಅವರ ಬಗ್ಗೆ ಅವನ ಮನಸ್ಸಿನಲ್ಲಿರುವ ಭಾವ ಎಂಥದು ಎನ್ನುವುದು ಅವನು ಹೆಸರಿಸಿದ ರೀತಿಯನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ಮೊದಲನೆಯದಾಗಿ ಅವನು ಹೆಸರಿಸಿದ ಒಟ್ಟು ಏಳುಮಂದಿಯಲ್ಲಿ ಮೂವರು ಕ್ಷತ್ರಿಯರಲ್ಲ. ಬ್ರಾಹ್ಮಣರು: ದ್ರೋಣಾಚಾರ್ಯರು, ದ್ರೋಣಪುತ್ರನಾದ ಅಶ್ವತ್ಥಾಮ ಮತ್ತು ದ್ರೋಣರ ಭಾವನಂಟನಾದ ಕೃಪಾಚಾರ್ಯರು. ಒಂದೇ ಕುಟುಂಬಕ್ಕೆ ಸೇರಿದ ಈ ಬ್ರಾಹ್ಮಣರು ಯುದ್ಧವಿದ್ಯೆಯಲ್ಲಿ ಪರಿಣತರಾದರೂ ಯುದ್ಧ ಅವರ ಸಹಜಧರ್ಮವಲ್ಲ. ಮೂವರೂ ದುರ್ಯೋಧನನ ಆಶ್ರಯದಲ್ಲಿ ಬದುಕಿದವರು. ಅವನ ಆಸರೆಯ ಹಂಗಿಗಾಗಿ ಯುದ್ಧಕ್ಕೆ ನಿಂತವರು. ಆದ್ದರಿಂದಲೇ ಅವರಿಂದ ಪ್ರಾಮಾಣಿಕವಾಗಿ ತಾನು ವಿಜಯವನ್ನು ನಿರೀಕ್ಷಿಸುವಂತಿಲ್ಲ. ಇದು ದುರ್ಯೋ ಧನನ ಮನಸ್ಸಿನಲ್ಲಿ ಇರುವ ಭಾವ.

ಈ ಮಾತನ್ನು ಇನಷ್ಟು ಸ್ಫುಟಪಡಿಸಲು ಒಬ್ಬೊಬ್ಬರದ್ದೇ ಹಿನ್ನೆಲೆಯನ್ನು ನೋಡೋಣ. ಮೊದಲನೆಯ ಹೆಸರು ದ್ರೋಣಾಚಾರ್ಯರದ್ದು. ಇವರು ಪ್ರಾರಂಭದಿಂದಲೇ ಪಾಂಡವರ ಪಕ್ಷಪಾತಿಗಳು. ಅರ್ಜುನನನ್ನು ಬಿಲ್ಗಾರರಲ್ಲಿ ಅಗ್ರಗಣ್ಯನಾಗಿ ಮಾಡಲು ಪಣತೊಟ್ಟವರು. ಹಾಗೆ ಮಾಡಿದವರು ಕೂಡ. ಇಂಥವರು ಅರ್ಜುನನಿಗೆ ವಿರುದ್ಧವಾಗಿ, ಪಾಂಡವರ ವಿರುದ್ಧವಾಗಿ ಯುದ್ಧ ಮಾಡಿ ನಮಗೆ ವಿಜಯ ತಂದುಕೊಡು ವುದು ಹೌದೇ? ಅದರಲ್ಲು  ಈ ಬ್ರಾಹ್ಮಣ ಶತಮಾನಗಳನ್ನು ಕಂಡ ಹಣ್ಣುಹಣ್ಣು ಮುದುಕ ಬೇರೆ.

ಎರಡನೆಯ ಹೆಸರು ಕೃಪಾಚಾರ್ಯರದ್ದು. ಇವರೂ ಕೂಡ ದ್ರೋಣಾಚಾರ್ಯರಿಗಾಗಿ, ತನ್ನ ಸೋದರಿ ಕೃಪಿಯ ಸ್ನೇಹಕ್ಕಾಗಿ ಈ ಕಡೆಗೆ ನಿಂತವರು. ಅಂತರಂಗದಲ್ಲಿ ಪಾಂಡವರ ಪಕ್ಷಪಾತಿಗಳು. ಸಮಯ ಬಂದಾಗೆಲ್ಲ ಧೃತರಾಷ್ಟ್ರನ ಬಳಿ ಪಾಂಡವರ ಪರವಾಗಿ ವಾದ ಮಾಡಿದವರು. ಹೀಗೆ ಇವರೂ ಒಳಗಿಂದೊಳಗೆ ಪಾಂಡವರ ಗೆಲುವನ್ನು ಬಯಸುವ, ಪಾಂಡವರ ಗೆಲುವಿನಿಂದ ಖುಷಿಪಡುವ ಮುದಿ ಬ್ರಾಹ್ಮಣ.

ಮೂರನೆಯ ಹೆಸರು ಅಶ್ವತ್ಥಾಮನದು. ಇವನು ಪಾಂಡವರ ಪಕ್ಷಪಾತಿಯೇನೂ ಅಲ್ಲ. ಪಾಂಡವರನ್ನೂ ಕಷ್ಣನನ್ನೂ ಸ್ಪರ್ಧೆಯಿಂದ ದ್ವೇಷಿಸುತ್ತಿದ್ದವನು. ಆದರೂ ಇವನದು ಸಹಜವಾದ ಕ್ಷಾತ್ರವಲ್ಲ. ಏನಿದ್ದರೂ ಇವನು ಚಪಲಬುದ್ಧಿಯ ಬ್ರಾಹ್ಮಣ. ಇವನ ಚಪಲಬುದ್ಧಿಗೆ ರೋಸಿಹೋದ ತಂದೆಯಿಂದಲೇ ಪರಿತ್ಯಕ್ತನಾದವನು.  ಯುದ್ಧರಂಗದಲ್ಲಿ ನೆತ್ತರ ಕೋಡಿಯನ್ನು ಕಂಡು ಒಳಗಿನ ಬ್ರಾಹ್ಮಶಕ್ತಿ ಜಾಗತವಾಗಿ ನಡು ನೀರಿನಲ್ಲಿ ಕೆಬಿಟ್ಟು ಹೊರಟುಹೋದರೂ ಹೋದನೇ. ದುರ್ಯೋಧನ ಅಶ್ವತ್ಥಾಮನನ್ನು ಎಂದೂ ತನ್ನ ಅಂತರಂಗಕೂಟದಲ್ಲಿ  ಸೇರಿಸಿಕೊಂಡವನಲ್ಲ. ಈಗ ಈ ಯುದ್ಧದ ನಿರ್ಣಾಯಕ ಪರಿಸ್ಥಿತಿಯಲ್ಲಿ ಈ ಮೂರು ಮಂದಿ ಬ್ರಾಹ್ಮಣರನ್ನೇ ತಾನು ನಂಬಬೇಕಾಯಿತಲ್ಲಾ! ತನ್ನ ಮನಸ್ಸಿನ ಈ ಹುಳುಕನ್ನು ದ್ರೋಣಾ ಚಾರ್ಯರಿಗೆ ನಾಟುವಷ್ಟು ಸ್ಪಷ್ಟವಾದ ಧ್ವನಿಯಲ್ಲಿ ದುರ್ಯೋಧನ ಈ ಶ್ಲೋಕದಲ್ಲಿ ವ್ಯಕ್ತಪಡಿಸಿದ್ದಾನೆ.

ಇನ್ನುಳಿದ ನಾಲ್ವರು ಕ್ಷತ್ರಿಯರಲ್ಲಿ ಮೊದಲನೆಯ ಹೆಸರು ಭೀಷ್ಮರದ್ದು. ಇವರು ಆ ಯುದ್ಧದಲ್ಲಿ ಪಾಲುಗೊಂಡ ವೀರರಲ್ಲೇ ಹಿರಿಯ ವಯೋವದ್ಧರು, ಬಾಹ್ಲೀಕ ರಾಜನನ್ನೊಬ್ಬನನ್ನುಳಿದು. ಇವರು ಮನೆಯಜ್ಜ, ಮನೆತನದ ದಾಕ್ಷಿಣ್ಯಕ್ಕಾಗಿ ಧೃತರಾಷ್ಟ್ರನ ಮೋರೆ ನೋಡಿ ತನ್ನ ಕಡೆಗೆ ನಿಂತವರು. ಪಾಂಡವರಿಗೆ ರಾಜ್ಯ ಕೊಡದಿದ್ದರೆ ಕುರುವಂಶ ಮಣ್ಣುಮುಕ್ಕಿ ಹೋಗುತ್ತದೆ ಎಂದು ಧೃತರಾಷ್ಟ್ರನ ಬಳಿ ವಾದಿಸಿದವರು. ಅಂತರಂಗದಲ್ಲಿ ತನ್ನನ್ನೂ ಕರ್ಣನನ್ನೂ ದ್ವೇಷಿಸುವವರು. ಪಾಂಡವರನ್ನು ಹೃದಯ ದಾಳದಿಂದ ಪ್ರೀತಿಸುವವರು. ಅವರನ್ನೇ ಸೇನಾಪತಿಪಟ್ಟದಲ್ಲಿ ಕೂಡಿಸಿ ದುರ್ಯೋಧನ ಪಾಂಡವರ ವಿರುದ್ಧ ಯುದ್ಧ ಮಾಡಬೇಕಾಗಿದೆ. ಅವನ ದುರ್ದೈವ ದೊಡ್ಡದು. ಹೀಗೆ ತನ್ನನ್ನೇ ಹಳಿದುಕೊಳ್ಳುವಂತಿದೆ ಅವನ ‘ಭೀಷ್ಮಶ್ಚ’ ಅನ್ನುವ ಈ ಉದ್ಗಾರ.

ಎರಡನೆಯ ಹೆಸರು ಕರ್ಣನದ್ದು: ‘ಕರ್ಣಶ್ಚ’. ವಾಸ್ತವವಾಗಿ ಕರ್ಣ ಪಾಂಡವರ ಬದ್ಧದ್ವೇಷಿ. ದುರ್ಯೋಧನನ ಅಂತರಂಗ ಮಿತ್ರ. ಕೌರವರ ಕ್ಷೇಮಚಿಂತನೆಗಾಗಿ ತನ್ನ ಬದುಕನ್ನೇ ಧಾರೆ ಎರೆದವನು. ದುರ್ಯೋಧನನ ಎಲ್ಲ ಷಡ್ಯಂತ್ರಗಳಲ್ಲಿ ಆಪ್ತ ಸಲಹೆ ಗಾರನಾಗಿದ್ದವನು. ದುರ್ಯೋಧನನ ವಿಜಯವನ್ನು ಪ್ರಾಮಾಣಿಕವಾಗಿ ಬಯಸಿದವನು. ಕೊನೆಯ ಕ್ಷಣದ ತನಕವೂ ದುರ್ಯೋಧನನ ಜೊತೆಗೆ ನಿಂತು ಹೋರಾಡಿದ ವನು. ಆದರೂ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುವ ಈ ಸಂದರ್ಭದಲ್ಲಿ ತೀರಾ ವಿಚಿತ್ರವೆನ್ನುವಂತೆ ದುರ್ಯೋಧನ ಕರ್ಣನ ಹೆಸರನ್ನು ಉಲ್ಲೇಖಿಸುತ್ತಾನೆ. ಇದಕ್ಕೆ ಪ್ರಬಲವಾದ ಕಾರಣವುಂಟು. ಪರಿಸ್ಥಿತಿಯ ಹಿನ್ನೆಲೆಯನ್ನು ತಿಳಿದಾಗ ಈ ಮಾತು ಸ್ಫುಟವಾಗುತ್ತದೆ.

ಯುದ್ಧ ಪ್ರಾರಂಭವಾಗುವ ಮುನ್ನ ಒಂದು ಘಟನೆ ನಡೆದಿತ್ತು. ಭೀಷ್ಮಾಚಾರ್ಯರಿಗೆ ಸೇನಾಪತಿ ಪದವನ್ನೊಪ್ಪಿಸಿದ ಸಂದರ್ಭದಲ್ಲಿ ಅವರು ತಮ್ಮ ಕಡೆಯ ವೀರರ ಹೆಸರನ್ನು ಉಲ್ಲೇಖಿಸುತ್ತಾ ಬುದ್ಧಿಪೂರ್ವಕವಾಗಿ ಕರ್ಣನ ಹೆಸರನ್ನು ಬಿಟ್ಟುಬಿಡುತ್ತಾರೆ. ಕರ್ಣ ಇದನ್ನು ನೆನಪಿಸಿಕೊಟ್ಟಾಗ, ‘ನಾನು ನಿನ್ನನ್ನು ಮಹಾವೀರನೆಂದು ಪರಿಗಣಿಸುವುದಿಲ್ಲ, ಅದಕ್ಕೆಂದೇ ನಿನ್ನ ಹೆಸರನ್ನು ಉಲ್ಲೇಖಿಸಲಿಲ್ಲ,’ ಎಂದು ಬಿಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಕರ್ಣ ಭೀಷ್ಮರು ಸೇನಾಪತಿಯಾಗಿರುವಷ್ಟು ಕಾಲ ತಾನು ಬಿಲ್ಲು ಹಿಡಿದು ಯುದ್ಧ ಮಾಡುವುದಿಲ್ಲ  ಎಂದು ಪ್ರತಿಜ್ಞೆ  ಮಾಡಿದ. ‘ಕರ್ಣಶ್ಚ’ ಎಂದು ಹೇಳುವಾಗ ದುರ್ಯೋಧನನ ಮನಸ್ಸಿನಲ್ಲಿ ಕಾಡುತ್ತಿದ್ದ ಘಟನೆಯಿದು. ಯಾರು ತನ್ನ ಕಡೆಗೆ ಪ್ರಾಮಾಣಿಕವಾಗಿ ನಿಂತು ಹೋರಾಡ ಬಲ್ಲನೋ, ಇದ್ದ ಅಂಥ ಒಬ್ಬನೂ ಶಸ್ತ್ರಸನ್ಯಾಸ ಮಾಡಿದ್ದಾನೆ. ಇದ್ದೂ ಇಲ್ಲದಂತಾಗಿದ್ದಾನೆ. ಯಾರು ಹೋರಾಟಕ್ಕಾಗಿ ಮುಂಚೂಣಿ ಯಲ್ಲಿ ನಿಂತಿದ್ದಾರೋ ಅವರೆಲ್ಲಾ ಒಳಗಿಂದೊಳಗೆ ಪಾಂಡವ ಪಕ್ಷಪಾತಿಗಳು. ಒಂದು ಬಗೆಯ ಅಂತರಂಗ ಶತ್ರುಗಳು. ತನ್ನ ಒಳಬಗೆಯ ಈ ಧ್ವನಿಯನ್ನು ಸ್ಫುಟಪಡಿಸುವುದಕ್ಕಾಗಿಯೇ ದುರ್ಯೋಧನ ‘ಭೀಷ್ಮಶ್ಚ ಕರ್ಣಶ್ಚ’ ಎಂದು ಭೀಷ್ಮಕರ್ಣರನ್ನು ಜತೆಜತೆಗೆಯೆ ಉಲ್ಲೇಖಿಸುತ್ತಾನೆ, ಹಾವೂ ಮುಂಗುಸಿಯೂ ಎಂದಂತೆ; ಇಲಿಯೂ ಬೆಕ್ಕೂ ಎಂದಂತೆ: ಭೀಷ್ಮರೂ ಕರ್ಣನೂ.

ಮೂರನೆಯ ಹೆಸರು ವಿಕರ್ಣನದ್ದು. ಈ ವಿಕರ್ಣ ದುರ್ಯೋಧನನ ೯೯ ಮಂದಿ ತಮ್ಮಂದಿರಲ್ಲಿ ಒಬ್ಬ. ದುಃಶಾಸನನಂತಹ ಪ್ರಮುಖರ ಹೆಸರನ್ನು ಉಲ್ಲೇಖಿಸದೆ ಇವನೊಬ್ಬನ ಹೆಸರನ್ನೇ ಈ ಸಂದರ್ಭದಲ್ಲಿ ದುರ್ಯೋಧನ ನೆನಪಿಸಿಕೊಳ್ಳುವುದಕ್ಕೆ ಒಂದು ವಿಶಿಷ್ಟವಾದ ಕಾರಣವುಂಟು. ದ್ರೌಪದಿಯ ವಸ್ತ್ರಾಪಹಾರದ ಸಮಯದಲ್ಲಿ ಎಲ್ಲ ತಮ್ಮಂದಿರೂ ತನ್ನ ನೆರವಿಗೆ ನಿಂತಾಗ ಇವನೊಬ್ಬನೇ ಸೊಬಗುತನದ ಸೋಗು ಹಾಕಿ ಅದನ್ನು ವಿರೋಧಿಸಿದವನು. ‘ಅತ್ತಿಗೆಯನ್ನು ಸಭೆಯಲ್ಲಿ ಅವಮಾನಗೊಳಿಸುವುದು ತಪ್ಪು’, ಎಂದು ಘೋಷಿಸಿ ಮುದುಕರಿಂದ ಬೆನ್ನು ಚಪ್ಪರಿಸಿಕೊಂಡ ಸೋಗಲಾಡಿ. ಇಂಥವನನ್ನು ನಂಬುವುದು ಹೇಗೆ? ಈಗಲೂ ಸೋದರರಾದ ಪಾಂಡವರ ವಿರುದ್ಧ ಯುದ್ಧ ಹೂಡುವುದು ತಪ್ಪು ಎಂದು ಸೋಗುಹಾಕಿ ಕೆಕೊಟ್ಟರೂ ಕೊಟ್ಟನೇ.

ತಮ್ಮಂದಿರಲ್ಲಿ ಪ್ರಮುಖರಾದ ಯಾರ ಹೆಸರನ್ನೂ ಹೇಳದೆ ವಿಕರ್ಣನೊಬ್ಬನನ್ನೇ ಈ ಸಂದರ್ಭದಲ್ಲಿ ಗುರುತಿಸುವ ದುರ್ಯೋಧನನ ಹೃಹದಯದ ಭಾವನೆ ಸುಸ್ಪಷ್ಟ.

ದುರ್ಯೋಧನ ಕೊನೆಯದಾಗಿ ಉಲ್ಲೇಖಿಸಿದ ಏಳನೇ ವ್ಯಕ್ತಿ ಸೌಮದತ್ತಿ- ಸೌಮದತ್ತಿಸ್ತಥೆವ ಚ. ಸೌಮದತ್ತಿಯ ಕಥೆಯೂ ಅಷ್ಟೇ ಎನ್ನುತ್ತಾನೆ ಈ ಉದ್ಗಾರದ ಮೂಲಕ. ಶಂತನುವಿನ ಸೋದರ ಬಾಹ್ಲೀಕ. ಅವನ ಮಗ ಸೋಮದತ್ತ. ಸೋಮ ದತ್ತನಿಗೆ ಮೂವರು ಮಕ್ಕಳು ಭೂರಿ, ಭೂರಿಶ್ರವಸ್ ಮತ್ತು ಶಲ. ಇವರಲ್ಲಿ ನಡುವಿನವನಾದ ಭೂರಿಶ್ರವಸ್ ಹೆಚ್ಚಿನ ವೀರನಾಗಿ ಸೌಮದತ್ತಿ ಎಂದು ಖ್ಯಾತ ನಾದವನು. ಭೀಷ್ಮಾಚಾರ್ಯರಿಗೆ ಪುತ್ರಸ್ಥಾನೀಯನಾದವನು. ಮೂಲತಃ ಬಾಹ್ಲೀಕ ದೇಶದವ.  ಈತನಿಗೆ ಕೌರವರ ಜೊತೆಗೆ ಯಾವ ಆತ್ಮೀಯ ಬಂಧವೂ ಇಲ್ಲ. ಕೇವಲ ಭೀಷ್ಮರ ಮೇಲಿನ ಪ್ರೀತಿಯಿಂದ ತನ್ನ ಕಡೆಗೆ ಬಂದವನು. ಅಷ್ಟೇ ಅಲ್ಲದೆ ಬಾಹ್ಲೀಕನ ಮಗಳು ರೋಹಿಣಿ ವಸುದೇವನ ಮಡದಿ. ಬಲರಾಮನ ತಾಯಿ. ಈ ಸಂಬಂಧ ದಿಂದ ಈತನೂ, ಈತನ ಕಡೆಯವರೆಲ್ಲರೂ ಅಂತತಃ ಕಷ್ಣಪಕ್ಷಪಾತಿಗಳು ಮತ್ತು ಪಾಂಡವಪಕ್ಷಪಾತಿಗಳು. ಅದಕ್ಕೆಂದೇ ದುರ್ಯೋಧನ ಸೌಮದತ್ತಿಯ ಕಥೆಯೂ ಅಷ್ಟೇ ಎಂದು ನಿರ್ವೇದದಿಂದ ಉಲ್ಲೇಖಿಸುತ್ತಾನೆ.

ಇಲ್ಲಿ ಕೃಪಾಚಾರ್ಯರಿಗೆ ‘ಸಮಿತಿಂಜಯಃ’ ಎಂಬ ವಿಶೇಷಣವನ್ನೂ ನೀಡಲಾಗಿದೆ. ಯುದ್ಧದಲ್ಲಿ ಗೆಲ್ಲಬಲ್ಲವನು ಎಂದು ಇದರ ಅರ್ಥ. ಇದು ಕೇವಲ ಕೃಪಾಚಾರ್ಯ್ರಿಗೆ ಮಾತ್ರವೇ ವಿಶೇಷಣವಾಗಿ ಬಂದದ್ದಲ್ಲ. ಏಳೂ ಮಂದಿಗೆ ಒಟ್ಟಿಗೆ ಅನ್ವಯವಾಗುವಂತೆ ನಡುವಿನಲ್ಲಿ ಈ ವಿಶೇಷಣವನ್ನು ಸೇರಿಸಲಾಗಿದೆ. ಇದು ದುರ್ಯೋಧನನ ಇನ್ನೊಂದು ನಂಜುಮಾತು. ಇಂಥ ಮಂದಿಯೆಲ್ಲ ತನ್ನನ್ನು ಯುದ್ಧದಲ್ಲಿ ಗೆಲ್ಲಿಸಬೇಕಾಗಿದೆ. ಇವರನ್ನು ನಂಬಿ ತಾನು ಪಾಂಡವರ ವಿರುದ್ಧ ಯುದ್ಧ ಮಾಡಬೇಕಾಗಿದೆ. ಇದೊಂದು ನುಂಗಲಾರದ ತುತ್ತು ಎನ್ನುವುದು ದುರ್ಯೋಧನನ ಅಂತರಂಗ.

ಭವಾನ್=ಆಚಾರ್ಯರಾದ ನೀವು, ಭೀಷ್ಮಃ+ಚ=ಸೇನಾಪತಿಗಳಾದ ಭೀಷ್ಮರು ಕೂಡ, ಕರ್ಣಃ+ಚ=ಕರ್ಣ ಕೂಡ, ಸಮಿತಿಂ+ಜಯಃ=ಯುದ್ಧದಲ್ಲಿ ಗೆದೆಯಬಲ್ಲ, ಕೃಪಃ+ಚ=ಕೃಪಾಚಾರ್ಯರು ಕೂಡ, ಅಶ್ವತ್ಥಾಮಾ=ದ್ರೋಣಪುತ್ರ ಅಶ್ವತ್ಥಾಮನು, ವಿಕರ್ಣಃ+ಚ=ವಿಕರ್ಣ ಕೂಡ, ತಥೆವ=ಹಾಗೆಯೆ, ಸೌಮದತ್ತಿಃ+ಚ=ಸೋಮ ದತ್ತನ ಮಗ ಭೂರಿಶ್ರವಸ್ ಕೂಡ.

ಕೆಲವರು ‘ತಥೆವಚ’ದ ಧ್ವನಿಯ ಸ್ವಾರಸ್ಯವನ್ನರಿಯದೆ ‘ಸೌಮದತ್ತಿರ್ಜಯದ್ರಥಃ’ ಎಂದು ಪಠಿಸುತ್ತಾರೆ. ಇದು ಅಪಪಾಠ. ಗೀತೆಯ ನ್ಯೂಮರಾಲಜಿಗೂ ಹೊಂದದ, ಸೈಕಾಲಜಿಗೂ ಒಗ್ಗದ ಅಶುದ್ಧಪಾಠ.ಇನ್ನು ಕೆಲವರು ‘ಸಿಂಧುರಾಜಸ್ತಥೈವ ಚ’ ಎಂಬ ಪಾಠವನ್ನು ಬಳಸುತ್ತಾರೆ. ಸಿಂಧುರಾಜ ಎಂದರೆ ಜಯದ್ರಥ. ಇದೂ ಇಲ್ಲಿ ಹೊಂದಿಕೆಯಾಗುವುದಿಲ್ಲ. ದುರ್ಯೋಧನನ ಮನಃಶಾಸ್ತ್ರೀಯ  ವಿವರಣೆಗೆ ಒಪ್ಪಿಗೆ ಯಾಗುವುದಿಲ್ಲ.

ದುರ್ಯೋಧನನ ಕಡೆಯಲ್ಲಿ ೧೧ ಅಕ್ಷೋಹಿಣಿ ಬಹತ್ ಸೇನೆಯಿದೆ. ೯೯ ಮಂದಿ ತಮ್ಮಂದಿರಿದ್ದಾರೆ. ಆದರೆ ತನ್ನ ಪರವಾಗಿ ಹೋರಾಡುವವರು ಯಾರು ಎಂದು ಲೆಕ್ಕ ತೆಗೆಯುವಾಗ ಅವನಿಗೆ ನೆನಪಾದದ್ದು ಏಳೇ ಮಂದಿ! ಪಾಪ, ದುರ್ಯೋಧನನ ಪರಿಸ್ಥಿತಿ ಎಂಥ ಶೋಚನೀಯ.

*        *        *

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು