ಯುಗಾದಿ

web yugadi

ಯುಗಾದಿವರ್ಷಾದಿ

ಹಳೆಯ ವರ್ಷ ಕಳೆದು ಹೊಸ ವರ್ಷ ಬರುತ್ತದೆ. ಕೆಲವರಿಗೆ ಮೇಷ ಮಾಸದ ಮೊದಲ ದಿನದಂದು; ಕೆಲವರಿಗೆ ಚೈತ್ರ ಶುದ್ಧ ಪ್ರತಿಪದೆಯಂದು; ಕೆಲವರಿಗೆ ಜನವರಿ ತಿಂಗಳ ಮೊದಲ ತೇದಿಯಂದು.

ಪಶ್ಚಿಮದವರು “ನ್ಯೂ ಈಯರ್ ಡೇ” ಅಂತಾರೆ. ಅರ್ಥ ಆಗುತ್ತದೆ. ಆದರೆ ಪೂರ್ವದವರು, ಅರ್ಥಾತ್ ಪೂರ್ವಿಕರು ‘ಯುಗಾದಿ’ ಅಂತಾರೆ! ಇರುವುದೇ ನಾಕು ಯುಗಗಳು: ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಸದ್ಯ ಕಲಿಯುಗ ಮುಂದುವರಿಯುತ್ತಿದೆ ಎನ್ನುತ್ತಾರೆ ಪಂಚಾಂಗದ ಜ್ಯೋತಿಷಿಗಳು ? ಮತ್ತೆ ಯಾವ ಯುಗದ ಆದಿ? ಮತ್ತೆ ಯಾವುದದು ಪ್ರತಿ ವರುಷವೂ ಬರುವ ಹೊಸ ಯುಗಾದಿ?

ಹಿಂದಿನವರು ಭಾಷೆಯನ್ನು ಬಳಸುತ್ತಿದ್ದ ರೀತಿಯೇ ಚಂದ. ತಮ್ಮ ಸಂಸ್ಕೃತಿಯ ಇತಿಹಾಸವನ್ನು, ತಮ್ಮ ಬದುಕಿನ ನಂಬಿಕೆಗಳನ್ನು ಅವರು ಶಬ್ದಗಳಲ್ಲಿ ತುಂಬಿ ನಮಗೆ ಕೊಟ್ಟರು. ಯುಗಾದಿ ಅಂಥ ಒಂದು ಅಪೂರ್ವವಾದ ಶಬ್ದ.

ಯುಗ ಎಂದರೆ ಜೋಡಿ; ಯುಗ್ಮ. ಬದುಕೇ ಒಂದು ಯುಗ. ಸುಖ-ದುಃಖಗಳ ಜೋಡಿ; ಲಾಭ-ನಷ್ಟಗಳ ಜೋಡಿ; ಸೋಲು-ಗೆಲುವುಗಳ ಜೋಡಿ; ಹಗಲು-ಇರುಳುಗಳ ಜೋಡಿ; ಹುಟ್ಟು-ಸಾವುಗಳ ಜೋಡಿ. ಇದೆಲ್ಲವನ್ನೂ ಅನುಭವಿಸ ಬೇಕಾದ್ದು ಹೆಣ್ಣು-ಗಂಡಿನ ಜೋಡಿ.

ಈ ಜೋಡಿಯ ಮೋಡಿಯೇ ಬದುಕು. ಹಳೆಯ ಮೋಡಿಯನ್ನು ನೆನೆದು ಹೊಸ ಮೋಡಿಗೆ ನಾಂದಿ ಹಾಡುವುದೇ ಯುಗಾದಿ. ಇದನ್ನು ನೆನಪಿಸಲಿಕ್ಕಾಗಿಯೆ ಬೇವು-ಬೆಲ್ಲಗಳ ಜೋಡಿ; ಕಹಿ-ಸಿಹಿ ಮೋಡಿ.

– ಡಾ|| ಬನ್ನಂಜೆ ಗೋವಿಂದಾಚಾರ್ಯ

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು